
ಕಾನೂನಾತ್ಮಕ ಕ್ರಮಗಳು ಸಮಾಜದ ಅಪರಾಧಿಕ ಮನಸ್ಥಿತಿಯನ್ನು ಸರಿಪಡಿಸಲಾರವು
ನಾ ದಿವಾಕರ
ಯಾವುದೇ ಸಮಾಜವು ಅಪರಾಧ ಮುಕ್ತವಾಗಿರುವ ನಿದರ್ಶನಗಳು ಇತಿಹಾಸದಲ್ಲಿ ದೊರೆಯುವುದು ಕಷ್ಟ. ಅಪರಾಧ ಎಂಬ ವಿಶಾಲ ಕಲ್ಪನೆಯನ್ನು ವಿಂಗಡಿಸಿ ನೋಡಿದಾಗ ಸಾಮಾಜಿಕ, ಧಾರ್ಮಿಕ, ಲೈಂಗಿಕ, ಸಾಂಸ್ಕೃತಿಕ, ಜಾತೀಯ, ಆರ್ಥಿಕ ಹೀಗೆ ಹಲವು ಮಗ್ಗುಲುಗಳು ಕಂಡುಬರುತ್ತವೆ. ಈ ಪ್ರತಿಯೊಂದು ಮಗ್ಗುಲಲ್ಲೂ ಸಂಭವಿಸುವ ಅಪರಾಧಗಳು ಭಿನ್ನ ಕಾರಣಗಳಿಗಾಗಿ, ಭಿನ್ನ ರೀತಿಯಲ್ಲಿ ಕಾಣುತ್ತವೆ. ಆಡಳಿತ ವ್ಯವಸ್ಥೆಗಳು , ವಿಶೇಷವಾಗಿ ಕಾನೂನು ಪಾಲಕ ಸಂಸ್ಥೆಗಳು ಈ ಅಪರಾಧಗಳನ್ನು ʼ ಸಮಾಜಘಾತುಕ ʼ ಎಂಬ ವಿಶಾಲ ಪರಿಕಲ್ಪನೆಯಲ್ಲಿ ನಿರ್ವಚಿಸುತ್ತವೆ. ಹಾಗಾಗಿಯೇ ಪ್ರತಿಬಂಧಕ ನೀತಿಗಳು, ನಿಯಂತ್ರಣಾಧಿಕಾರ, ಮುನ್ನೆಚ್ಚರಿಕೆಯ ಕ್ರಮಗಳು ಸಾಮಾನ್ಯವಾಗಿ ಜಾರಿಯಲ್ಲಿರುತ್ತವೆ.
ಭಾರತದಲ್ಲಷ್ಟೇ ಅಲ್ಲದ ಜಗತ್ತಿನ ಎಲ್ಲ ದೇಶಗಳಲ್ಲೂ ಗಮನಿಸಬಹುದಾದ ಸಮಾನ ಎಳೆ ಎಂದರೆ, ಅಪರಾಧ ಅಥವಾ ಅಪರಾಧಿಗಳನ್ನು, ಸಮಾಜಕ್ಕೆ ಘಾತುಕವಾದ, ಆರೋಗ್ಯಕರ ವಾತಾವರಣಕ್ಕೆ ಭಂಗ ತರುವಂತಹ, ಸಾಮಾನ್ಯ ಜನಜೀವನಕ್ಕೆ ಕಂಟಕಪ್ರಾಯವಾದ ಕಾನೂನು ಬಾಹಿರ ಚಟುವಟಿಕೆಗಳು ಎಂದೇ ವ್ಯಾಖ್ಯಾನಿಸಲಾಗುತ್ತದೆ. ಹಾಗಾಗಿಯೇ ಆಳುವ ಸರ್ಕಾರಗಳು ತಮ್ಮ ಸಾಂವಿಧಾನಿಕ ನಿಯಂತ್ರಣ ಸಂಸ್ಥೆಗಳನ್ನು ಬಳಸಿಕೊಂಡೇ, ಅಪರಾಧಿಕ ಜಗತ್ತನ್ನು ನಿಯಂತ್ರಿಸುವ ನೀತಿಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿರುತ್ತವೆ. ಕಾನೂನು ವ್ಯಾಪ್ತಿಯಲ್ಲೇ ಜಾರಿಯಲ್ಲಿರುವ ಕಾಯ್ದೆಗಳ ಮೂಲಕ, ಅಪರಾಧಗಳಲ್ಲಿ ತೊಡಗುವ ವ್ಯಕ್ತಿಗಳನ್ನು ಬಂಧಿಸುವ ಅಥವಾ ಶಿಕ್ಷೆಗೊಳಪಡಿಸುವ ಒಂದು ವಿಧಾನವನ್ನು ಅನುಸರಿಸಲಾಗುತ್ತದೆ.

ದೂರಗಾಮಿ ದೃಷ್ಟಿಯ ಕೊರತೆ
ಈ ಉಪಕ್ರಮಗಳನ್ನೂ ಮೀರಿ ಯೋಚಿಸುವಂತಹ ಒಂದು ಚುನಾಯಿತ ಸರ್ಕಾರವಾಗಲೀ , ಆಡಳಿತ ವ್ಯವಸ್ಥೆಯಾಗಲೀ ಅಥವಾ ಅಧಿಕಾರಶಾಹಿಯಾಗಲೀ ಕಾಣಲಾಗುವುದಿಲ್ಲ. ʼಅಪರಾಧ ನಿಯಂತ್ರಣ ʼ ಎನ್ನುವುದು ಆಳ್ವಿಕೆಯ ಸಂದರ್ಭದಲ್ಲಿ ಒಂದು ಮಾಪಕವಾಗಿ ಪರಿಣಮಿಸುವುದರಿಂದ, ರಾಜಕೀಯ ಪಕ್ಷಗಳು ತಮ್ಮ ಆಳ್ವಿಕೆಯ ಅವಧಿಯಲ್ಲಿ ನಿಯಂತ್ರಣಾಧಿಕಾರವನ್ನೇ ಪ್ರಧಾನವಾಗಿ ಪರಿಗಣಿಸಿ, ಗುರುತಿಸಬಹುದಾದ ಅಪರಾಧಗಳಿಗೆ ಶಿಕ್ಷೆ ವಿಧಿಸುತ್ತಲೇ, ಅಪರಾಧಿಗಳನ್ನು ಸಮಾಜಘಾತುಕ ಚಟುವಟಿಕೆಗಳಿಂದ ದೂರ ಇರಿಸಲು ಪ್ರಯತ್ನಿಸುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸೆರೆವಾಸ ಅನುಭವಿಸುವ ಅಪರಾಧಿಗಳನ್ನು ಸುಧಾರಿಸುವ ಪ್ರಯತ್ನಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಭಾರತದಲ್ಲಿ ಇದು ಯಶಸ್ವಿಯಾಗಿರುವುದೂ ವಾಸ್ತವ. ಸುಧಾರಿತ ಖೈದಿಗಳು ಹೊಸ ಜೀವನ ಆರಂಭಿಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಸ್ವಾಗತಾರ್ಹವೂ ಹೌದು.
ಆದರೆ ಈ ಕಾನೂನಾತ್ಮಕ ಉಪಕ್ರಮಗಳು ಸಮಾಜದಲ್ಲಿ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆಯೇ ? ಈ ಜಟಿಲ ಪ್ರಶ್ನೆಗೆ ಇಲ್ಲ ಎನ್ನುವುದೊಂದೇ ಉತ್ತರವಾಗಿದೆ. ಏಕೆಂದರೆ ಸಮಾಜದ ಅಭ್ಯುದಯದ ಹಾದಿಯಲ್ಲಿ, ಪ್ರಗತಿ ಅಥವಾ ಅಭಿವೃದ್ಧಿಯ ಪಥದಲ್ಲಿ, ಜನಸಾಮಾನ್ಯರ ಜೀವನ ಕ್ರಮ ಮತ್ತು ಅದಕ್ಕೆ ಪೂರಕವಾದ ಚಟುವಟಿಕೆಗಳು ಬದಲಾಗುತ್ತಾ ಹೋದಂತೆಲ್ಲಾ, ಹೊಸತಾದ ಸಾಂಸ್ಕೃತಿಕ ಚಿಂತನೆಗಳು, ಜಾತಿ ಧರ್ಮಗಳ ಸಂಹಿತೆಗಳು, ಸಾಮಾಜಿಕ ಅಭ್ಯಾಸ/ಹವ್ಯಾಸಗಳು ಅನಾವರಣವಾಗುತ್ತಾ ಹೋಗುತ್ತವೆ. ಈ ಮನ್ವಂತರದ ಹಾದಿಯಲ್ಲಿ ಸಮಾಜದ ಸಾಂಪ್ರದಾಯಿಕ ಚಿಂತನೆಗಳು ಹಾಗೂ ಪ್ರಾಚೀನ ನಂಬಿಕೆಗಳು ಮೇಲುಗೈ ಸಾಧಿಸಿದಂತೆಲ್ಲಾ, ಮನುಕುಲ ದಾಟಿ ಬಂದಂತಹ ನಡವಳಿಕೆಗಳೂ ಮರುಹುಟ್ಟು ಪಡೆಯಲಾರಂಭಿಸುತ್ತವೆ. ಭಾರತದಂತಹ ಸಾಂಪ್ರದಾಯಿಕ , ಶ್ರೇಣಿ ಪೀಡಿತ ಸಮಾಜದಲ್ಲಿ ಆರ್ಥಿಕ ಅಸಮಾನತೆಗಳು ಹೆಚ್ಚಾದಂತೆಲ್ಲಾ ಸಾಮಾಜಿಕ ವ್ಯತ್ಯಯಗಳೂ ಉಲ್ಬಣಿಸುತ್ತಲೇ ಹೋಗುತ್ತವೆ. ಈ ವಾತಾವರಣದಲ್ಲಿ ದೌರ್ಜನ್ಯ, ತಾರತಮ್ಯಗಳು ಹೆಚ್ಚಾಗುವುದು ಸಹಜವೇ ಆಗಿರುತ್ತದೆ.
ಪ್ರಾಚೀನ ಮೌಲ್ಯಗಳ ನವೀಕರಣ
ಎಲ್ಲ ಸಮಾಜಗಳಲ್ಲೂ ಜೀವಂತಿಕೆಯಿಂದಿರುವ ಸಾಂಪ್ರದಾಯಿಕತೆ, ಕರ್ಮಠ ಧಾರ್ಮಿಕ ಮೌಲ್ಯಗಳು, ಸಮಾಜವನ್ನು ಬೌದ್ಧಿಕವಾಗಿ ಹಿಂದಕ್ಕೆ ಕರೆದೊಯ್ಯುವ ಪ್ರಾಚೀನ ಜೀವನಾದರ್ಶಗಳು, ಇಲ್ಲಿ ಉಗಮಿಸುವ ಅಪರಾಧಿಕ ಜಗತ್ತಿನ ಆಧಾರವಾಗುತ್ತವೆ. ಉದಾಹರಣೆಗೆ ಪಿತೃಪ್ರಧಾನ ಮೌಲ್ಯಗಳು ಮಹಿಳಾ ದೌರ್ಜನ್ಯಗಳನ್ನು, ಲಿಂಗತ್ವ ತಾರತಮ್ಯಗಳನ್ನು ಮಾನ್ಯ ಮಾಡಿದರೆ, ಜಾತಿ ವ್ಯವಸ್ಥೆಯ ಮೌಲ್ಯಗಳು ಅಸಮಾನತೆ-ಮೇಲು ಕೀಳುಗಳನ್ನು ಸಮ್ಮಾನಿಸುತ್ತವೆ. ಊಳಿಗಮಾನ್ಯತೆಯು ಸಾಮಾಜಿಕ ಬಹಿಷ್ಕಾರ-ಮರ್ಯಾದೆಗೇಡು ಹತ್ಯೆಗಳನ್ನು ಪ್ರಚೋದಿಸುತ್ತದೆ. ಅಸ್ಪೃಶ್ಯತೆಯಂತಹ ಹೀನ ಆಚರಣೆಯೂ ಸಾರ್ವತ್ರಿಕ ಸಮ್ಮತಿ ಪಡೆಯುತ್ತವೆ. ಸಮಾಜವನ್ನು ಮತ-ಧರ್ಮಗಳ ನೆಲೆಯಲ್ಲಿ, ಜಾತಿ-ಲಿಂಗತ್ವಗಳ ಚೌಕಟ್ಟಿನಲ್ಲಿ ವಿಭಜಿಸಿ, ವಿಂಗಡಿಸಿ, ವರ್ಗೀಕರಣಕ್ಕೊಳಪಡಿಸುವ ಆಕರಗಳಾಗಿ ಸಮಾಜವನ್ನು ತಳಮಟ್ಟದವರೆಗೂ ಪ್ರಭಾವಿಸುತ್ತವೆ.
ವರ್ತಮಾನದ ಭಾರತ ಇಂತಹ ಒಂದು ಸಂದಿಗ್ಧತೆಯ ನಡುವೆಯೇ ಅಪರಾಧಿಕ ಜಗತ್ತಿನ ಜಟಿಲ ಸವಾಲುಗಳನ್ನೂ ಎದುರಿಸುತ್ತಿದೆ. 77 ವರ್ಷಗಳ ಸಂವಿಧಾನಬದ್ಧ-ಪ್ರಜಾಸತ್ತಾತ್ಮಕ ಆಳ್ವಿಕೆಯಲ್ಲಿ ಎಲ್ಲ ರೀತಿಯ ಅಪರಾಧಗಳನ್ನೂ ಕೊನೆಗಾಣಿಸುವ ಭ್ರಮೆ ಅತಿ ಎನಿಸಿದರೂ, ಮಹಿಳಾ ದೌರ್ಜನ್ಯ, ಅತ್ಯಾಚಾರ, ಭ್ರೂಣ ಹತ್ಯೆ, ಅಸ್ಪೃಶ್ಯತೆ, ಜಾತಿ ದೌರ್ಜನ್ಯ ಮತ್ತು ಕೋಮು-ಮತೀಯ ದ್ವೇಷದ ಹಿಂಸಾತ್ಮಕ ಅಪರಾಧಗಳನ್ನು, ನಿರ್ಮೂಲ ಮಾಡಬಹುದಿತ್ತು. ಚುನಾಯಿತ ಸರ್ಕಾರಗಳಿಗೆ ಈ ಅಪರಾಧಗಳನ್ನು ನಿಯಂತ್ರಿಸುವ ಹಾದಿಯಲ್ಲಿ ನಾಗರಿಕ ಸಮಾಜವನ್ನು (Civil Society) ಮತ್ತು ಅದನ್ನು ಪ್ರತಿನಿಧಿಸುವ ಸಂಘ-ಸಂಸ್ಥೆಗಳನ್ನು ಒಳಗೊಳ್ಳುವ ಔದಾತ್ಯ ಇದ್ದಿದ್ದರೆ ಬಹುಶಃ ಇದು ಸಾಧ್ಯವಾಗಬಹುದಿತ್ತು. ಅಪರಾಧ-ಅಪರಾಧಿಯನ್ನು ವ್ಯಕ್ತಿ-ಸಮುದಾಯದ ನೆಲೆಯಲ್ಲಿ ನೋಡುವ ಮತ್ತು ಶಿಕ್ಷೆ-ಅಪರಾಧಗಳಿಂದಾಚೆಗೆ ನೋಡದಿರುವ ಸರ್ಕಾರಗಳ ಧೋರಣೆಯೇ ಈ ಒಳಗೊಳ್ಳುವಿಕೆಗೆ (Inclusiveness) ಅಡ್ಡಿಯಾಗಿರುವುದನ್ನು ಆರಂಭದಿಂದಲೂ ಗುರುತಿಸಬಹುದು.

ಅಪರಾಧ ಜಗತ್ತಿನ ಆಳ-ವ್ಯಾಪ್ತಿ
ʼ ಅಪರಾಧ ʼ ಎಂದು ಭಾವಿಸಲಾಗುವ ವಿಶಾಲ ಹಂದರದ ಸಮಾಜಘಾತುಕತೆ ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ ಅಥವಾ ನಿರ್ವಾತದಿಂದ ಉಗಮಿಸುವುದಿಲ್ಲ. ಎಲ್ಲ ಅಪರಾಧಗಳ ನಮೂನೆಗಳಿಗೂ ಒಂದು ಸಾಮಾಜಿಕ ತಳಹದಿ, ಸಾಂಸ್ಕೃತಿಕ ಪ್ರೇರಣೆ, ಜಾತಿ-ಧರ್ಮಗಳ ಪ್ರಭಾವ ಮತ್ತು ಆರ್ಥಿಕ ಕಾರಣಗಳು ಇರುತ್ತವೆ. ನಮ್ಮ ಸರ್ಕಾರಗಳು ಕಾಣುವ ಹಾಗೆ ಅಪರಾಧ/ಅಪರಾಧಿಯನ್ನು ಕಾನೂನಿನ ದೃಷ್ಟಿಯಿಂದಲೇ ನೋಡಿದಾಗ, ಈ ಮೂಲ ಆಕರಗಳ ಕಡೆಗೆ ಗಮನ ಹರಿಸುವುದು ಸಾಧ್ಯವೇ ಇಲ್ಲ. ಶಿಕ್ಷೆ ಮತ್ತು ದಂಡನೆಯೇ ಅಂತಿಮ ಎನಿಸಿದಾಗ, ಅಪರಾಧಗಳಿಗೆ ಈಡಾಗುವವರು, ನೊಂದವರು-ಸಂತ್ರಸ್ತರು ಸಂತೃಪ್ತರಾಗುತ್ತಾರೆ, ದುಷ್ಕೃತ್ಯಗಳನ್ನು ಎಸಗುವವರು-ಕೊಂದವರು ತಮ್ಮ ಭವಿಷ್ಯದ ಬದುಕನ್ನೇ ಹಾಳುಮಾಡಿಕೊಳ್ಳುತ್ತಾರೆ.
ಅಪರಾಧಿಕ ಜಗತ್ತನ್ನು ಸಮಗ್ರ ದೃಷ್ಟಿಯಲ್ಲಿ ನೋಡಿದಾಗ ಅಲ್ಲಿ ವಿದ್ಯಾವಂತರು, ಅನಕ್ಷರಸ್ಥರು, ಉನ್ನತ ಶಿಕ್ಷಣ ಪಡೆದವರು, ಸಾಮಾಜಿಕವಾಗಿ ಆರ್ಥಿಕವಾಗಿ ಮೇಲ್ ಚಲನೆ ಪಡೆದಿರುವವರು, ಅಧಿಕಾರದಲ್ಲಿರುವವರು, ಅಧ್ಯಾತ್ಮ ಮತ್ತು ಧರ್ಮವನ್ನು ಪ್ರತಿನಿಧಿಸುವವರು, ಕಡೆಯದಾಗಿ ಚುನಾಯಿತ ಜನಪ್ರತಿನಿಧಿಗಳೂ ನಮಗೆ ಕಾಣುತ್ತಾರೆ. ಇದು ಅಚ್ಚರಿಯ ಅಂಶವೇನಲ್ಲ, ಏಕೆಂದರೆ ಈ ವ್ಯಕ್ತಿಗಳೂ ಸಹ ಇದೇ ಸಮಾಜದ ಉತ್ಪನ್ನಗಳೇ ಆಗಿರುತ್ತಾರೆ. ಅದೇ ಮೌಲ್ಯಗಳ ಪ್ರಭಾವಕ್ಕೊಳಗಾಗಿರುತ್ತಾರೆ. ಈ ವ್ಯಕ್ತಿಗತ ಅಪರಾಧಿ ಮನೋಭಾವ ಸಂಘಟಿತ ಸ್ವರೂಪ ಪಡೆದಾಗ, ಮಾಫಿಯಾಗಳು, ಮೂಲಭೂತವಾದಿ ಸಂಘಟನೆಗಳು, ಮತಾಂಧ ಗುಂಪುಗಳು, ರೌಡಿ/ಗೂಂಡಾ ಪಡೆಗಳು ಹುಟ್ಟಿಕೊಳ್ಳುತ್ತವೆ. ಕೋಮುವಾದ, ಮತೀಯವಾದ ಉಲ್ಬಣಿಸುತ್ತಿರುವ ಭಾರತದಂತಹ ಸಮಾಜಗಳಲ್ಲಿ, ಸುಶಿಕ್ಷಿತ ನಗರವಾಸಿ ನಾಗರಿಕರೂ ಸಹ ವೈಯುಕ್ತಿಕ ನೆಲೆಯಲ್ಲಿ ಅಸ್ಮಿತೆ-ತತ್ವ-ಸಿದ್ದಾಂತಗಳಿಗೆ ಬದ್ಧರಾಗಿ, ಇವುಗಳಿಗೆ ಮೌನ ಸಮ್ಮತಿ ವ್ಯಕ್ತಪಡಿಸುತ್ತಿರುವಾಗ, ಅಪರಾಧಿಕ ಜಗತ್ತು ವಿಸ್ತರಿಸುತ್ತದೆಯೇ ಹೊರತು, ಕೊನೆಗಾಣುವುದಿಲ್ಲ.
ಚುನಾಯಿತ ಸರ್ಕಾರ, ಕಾನೂನು ಪಾಲನೆಯ ವ್ಯವಸ್ಥೆ ಮತ್ತು ಸ್ಥಳೀಯ ಆಳ್ವಿಕೆಯ ಸಂಸ್ಥೆಗಳು ಅನುಸರಿಸುವ ಕಾನೂನಾತ್ಮಕ ನೀತಿಗಳು, ಈ ಅಪರಾಧಿಕ ಜಗತ್ತಿನಲ್ಲಿ ಸೃಷ್ಟಿಯಾಗಿ, ಸಮಾಜಕ್ಕೆ ಉಪಟಳಕಾರಿಗಳಾಗಿ, ಜೀವ ಕಂಟಕರವಾಗಿ, ದೌರ್ಜನ್ಯಗಳ ಕೇಂದ್ರಗಳಾಗಿ ಅಂತಿಮವಾಗಿ ನಿಯಂತ್ರಿಸಲ್ಪಡುವ ವ್ಯಕ್ತಿ/ಗುಂಪು/ಸಂಘಟನೆಗಳನ್ನು ನಿರ್ಬಂಧಿಸಲು ಉಪಯುಕ್ತವಾಗುತ್ತವೆ. ಅಪರಾಧಗಳು ಸಂಭವಿಸಿದ ಮೇಲೆ ಸಂತ್ರಸ್ತರಿಗೆ ನೆರವಾಗುವ ಸಹಾಯಕ ಕೇಂದ್ರಗಳಾಗಿ ಆಡಳಿತ ವಲಯವು ಕಾರ್ಯನಿರ್ವಹಿಸುತ್ತದೆ. ಆದರೆ ಈ ಅಪರಾಧಗಳು, ವಿಶೇಷವಾಗಿ ಮಹಿಳಾ-ಜಾತಿ ದೌರ್ಜನ್ಯಗಳು ಮತ್ತು ಮತೀಯ-ಕೋಮು ದಾಳಿಗಳು, ವೈಯುಕ್ತಿಕ ವೈಷಮ್ಯ-ವೈರತ್ವಗಳಿಂದ ಉದ್ಭವಿಸುವ ಹಿಂಸಾತ್ಮಕ ಕೃತ್ಯಗಳು ಸಂಭವಿಸುವುದು ತಾತ್ವಿಕ ನೆಲೆಗಟ್ಟಿನಲ್ಲಿ, ಸಾಂಸ್ಥಿಕ ಚೌಕಟ್ಟುಗಳಲ್ಲಿ ಹಾಗೂ ಸಾಮುದಾಯಿಕ ಗೋಡೆಗಳ ನಡುವೆ ಎನ್ನುವುದನ್ನು ಗುರುತಿಸಬೇಕಿದೆ.
ಸಮಾಜಘಾತುಕತೆಯ ತಳಪಾಯ
ಇಲ್ಲಿ ಸಂಭವಿಸುವ ಪ್ರತಿಯೊಂದು ಅತ್ಯಾಚಾರ-ಕೊಲೆ ಇತ್ಯಾದಿ ಕೃತ್ಯಗಳಿಗೂ ಸಾಮಾಜಿಕ-ಸಾಂಸ್ಕೃತಿಕ ಭೂಮಿಕೆ ಇರುತ್ತದೆ. ಪಿತೃಪ್ರಧಾನತೆ, ಊಳಿಗಮಾನ್ಯತೆ, ಯಜಮಾನಿಕೆಯ ಸಂಸ್ಕೃತಿ, ಮತದ್ವೇಷ, ಜಾತಿ ಶ್ರೇಣಿಯ ಮೇಲು-ಕೀಳುಗಳು ಹಾಗೂ ವರ್ತಮಾನದಲ್ಲೂ ಸಕ್ರಿಯವಾಗಿರುವ ಈ ಮೌಲ್ಯಗಳನ್ನು ಉತ್ತೇಜಿಸುವ, ಉದ್ಧೀಪನಗೊಳಿಸುವ ಮತ್ತು ಪೋಷಿಸುವ ಸಾಂಘಿಕ/ಸಾಂಸ್ಥಿಕ ಚೌಕಟ್ಟುಗಳು ಈ ಭೂಮಿಕೆಯ ಕೇಂದ್ರ ಆವಾಸ ಸ್ಥಾನವಾಗಿರುತ್ತವೆ. ಈ ಅಪರಾಧಿಕ ಜಗತ್ತಿನಲ್ಲಿ ಭಾಗಿಯಾಗುವವರು ಬಹುತೇಕವಾಗಿ ಯುವಜನರೇ ಆಗಿರುತ್ತಾರೆ, ಫಲಾನುಭವಿಗಳು ನಾಯಕತ್ವದಲ್ಲಿ ಕಾಣುತ್ತಾರೆ. ಕರಾವಳಿಯ ಹಿಂಸಾತ್ಮಕ ದ್ವೇಷಾಸೂಯೆಗಳ ಕೃತ್ಯಗಳಲ್ಲಿ, ಕೋಲಾರದಿಂದ ಬೀದರ್‌ವರೆಗೆ ವರದಿಯಾಗುತ್ತಿರುವ ಜಾತಿ ದೌರ್ಜನ್ಯಗಳಲ್ಲಿ ಈ ಒಂದು ಮಾದರಿಯನ್ನು ಗುರುತಿಸಬಹುದು.

ಇದರಿಂದಾಚೆಗೂ ಸಹ, ಯಾವುದೇ ಸಾಂಘಿಕ ಉತ್ತೇಜನ ಇಲ್ಲದೆಯೂ ನಡೆಯುವ ಅತ್ಯಾಚಾರ-ಹತ್ಯೆ ಇನ್ನಿತರ ದೌರ್ಜನ್ಯಗಳು ಸಂಭವಿಸುತ್ತಿರುತ್ತವೆ. ಇಲ್ಲಿಯೂ ಸಹ ಭಾಗಿಯಾಗುವವರು ಯುವ ಸಮಾಜಕ್ಕೆ ಸೇರಿರುತ್ತಾರೆ. 20 ರಿಂದ 30 ವಯೋಮಾನದ ಯುವಕರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾತಕ ಕೃತ್ಯಗಳಲ್ಲಿ ಕಂಡುಬರುವುದನ್ನು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅತ್ಯಾಚಾರ-ಹತ್ಯೆಯ ಪ್ರಕರಣದಲ್ಲೂ ಗುರುತಿಸಬಹುದು. ಕೊಲ್ಕತ್ತಾ, ಒಡಿಷಾ, ಉತ್ತರಪ್ರದೇಶ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ಹೀಗೆ ಎಲ್ಲ ರಾಜ್ಯಗಳಲ್ಲೂ ಕಾಣಬಹುದಾದ ಮಹಿಳಾ ದೌರ್ಜನ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಾಂಘಿಕ ಪ್ರೇರಣೆಗಿಂತಲೂ ಹೆಚ್ಚಾಗಿ ಸಾಂಸ್ಥಿಕವಾಗಿ ಉತ್ತೇಜಿಸಲ್ಪಡುವ ಅಥವಾ ಸಮ್ಮಾನಿಸಲ್ಪಡುವ ಪ್ರಾಚೀನ ಸಮಾಜದ ಮೌಲ್ಯಗಳೇ ಮೂಲ ಕಾರಣವಾಗಿರುವುದನ್ನು ಸುಲಭವಾಗಿ ಗುರುತಿಸಬಹುದು.
ಕಳ್ಳತನ, ದರೋಡೆ, ಲೂಟಿ, ರಿಯಲ್ ಎಸ್ಟೇಟ್ ಮಾಫಿಯಾ ಮುಂತಾದ ಚಟುವಟಿಕೆಗಳಿಗೆ ಆರ್ಥಿಕ ಕಾರಣಗಳಿದ್ದರೆ, ಅತ್ಯಾಚಾರ, ಕೊಲೆ, ದ್ವೇಷಾಸೂಯೆಯ ಹಿಂಸಾತ್ಮಕ ದಾಳಿ, ಜಾತಿ ವ್ಯವಸ್ಥೆಯ ಶೋಷಣೆಗಳಿಗೆ ಕಾರಣವನ್ನು ನಮ್ಮ ಸಮಾಜದಲ್ಲಿ ಬೇರೂರಿರುವ ಪ್ರಾಚೀನ-ಮಧ್ಯಕಾಲೀನ ಯುಗದ ಸಾಮಾಜಿಕ ಮೌಲ್ಯಗಳಲ್ಲಿ ಗುರುತಿಸಬಹುದು. ಕಾನೂನು ಪಾಲಕ ಅಥವಾ ಚುನಾಯಿತ ಆಡಳಿತ ಸಂಸ್ಥೆಗಳಿಗೆ ಮೊದಲನೆಯ ಮಾದರಿಯಲ್ಲಿ ಅಪರಾಧಿಗಳನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಆದರೆ ಎರಡನೆ ಮಾದರಿಯಲ್ಲಿ ಅಪರಾಧಗಳು ಅಗೋಚರ ಶಕ್ತಿಗಳ ಅಥವಾ ಅವ್ಯಕ್ತ ಚಿಂತನೆಗಳ ಪ್ರಚೋದನೆಯಿಂದ ನಡೆಯುವುದರಿಂದ , ಮೂಲ ಕಾರಣ ಅಥವಾ ಕಾರಣಕರ್ತರನ್ನು ಗುರುತಿಸುವುದು ಕಷ್ಟವಾಗುತ್ತದೆ.

ಇಂತಹ ಹೀನ ಕೃತ್ಯ ಎಸಗುವ ಅಮಾಯಕರನ್ನು ಕ್ಷಣ ಮಾತ್ರದಲ್ಲಿ ಬಂಧಿಸುವ ಸಾಧ್ಯತೆಗಳಿರುತ್ತವೆ, ಅದರೆ ಅಧ್ಯಾತ್ಮ, ಧರ್ಮ , ರಾಜಕೀಯ ಮತ್ತು ಮಾರುಕಟ್ಟೆಯ ಪ್ರಭಾವಿ ವಲಯದ ಅಪರಾಧಿಗಳನ್ನು ಬಂಧಿಸುವುದು ದುಸ್ತರವಾಗುತ್ತದೆ. ಇಲ್ಲಿನ ಶಂಕಿತರಿಗೆ ಸಮಾಜದ ಒಂದು ವರ್ಗವೇ ಒತ್ತಾಸೆಯಾಗಿ ನಿಲ್ಲುತ್ತದೆ, ರಾಜಕೀಯ ಪಕ್ಷಗಳು ರಕ್ಷಾ ಕವಚಗಳಾಗುತ್ತವೆ, ಸಾಂಸ್ಕೃತಿಕ ಕೇಂದ್ರಗಳು ಭದ್ರಕೋಟೆಗಳಾಗುತ್ತವೆ. ಇಂತಹ ನಿದರ್ಶನಗಳನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಈ ಅಪರಾಧಿಕ ಜಗತ್ತನ್ನು ಸರಿಪಡಿಸುವ ಅಥವಾ ಸರಿದಾರಿಗೆ ತರುವ ಜವಾಬ್ದಾರಿ, ವಿಶಾಲ ಸಮಾಜದ ಮೇಲಿರುತ್ತದೆ. ʼ ನಮ್ಮವರು ʼ ಎಂಬ ಕಾರಣಕ್ಕಾಗಿ ಎಂತಹ ಹೀನ ಅಪರಾಧಗಳನ್ನೂ ಸಮರ್ಥಿಸುವ ಒಂದು ಚಿಂತನೆ ಆವರಿಸಿರುವ ಸಮಾಜದಲ್ಲಿ, ಅಪರಾಧಗಳು ಸಮ್ಮತವೆನಿಸಿ, ಅಪರಾಧಿಗಳು ಸುಸಂಸ್ಕೃತರೆನಿಸಿ ಸನ್ಮಾನಿಸಲ್ಪಡುವ ಒಂದು ನಿದರ್ಶನವನ್ನೂ ಕಂಡಿದ್ದೇವೆ.
ಸಮಾಜಕಂಟಕ ಮನಸ್ಥಿತಿ-ಪರಿಣಾಮ
ಈ ದೃಷ್ಟಿಯಿಂದ ಸಮಾಜಘಾತುಕತೆ ಅಥವಾ ಸಮಾಜ ಕಂಟಕ ಅಪರಾಧಗಳ ಆವರಣವನ್ನು ವಿಸ್ತರಿಸಿ ನೋಡುವ ಅವಶ್ಯಕತೆ ಇದೆ. ʼ ನಮ್ಮ ಸರ್ಕಾರ ಅಪರಾಧಗಳನ್ನು ಹತ್ತಿಕ್ಕುತ್ತದೆ, ಅಪರಾಧಿಗಳ ಹೆಡೆಮುರಿಕಟ್ಟಿ ನಿಯಂತ್ರಿಸಲಾಗುತ್ತದೆ ʼ ಎಂಬ ಆಡಳಿತಾತ್ಮಕ ಘೋಷಣೆಗಳು ಸಮಾಜದ ಹಿತವಲಯಗಳಿಗೆ ಅಪ್ಯಾಯಮಾನವಾಗಿ ಕಾಣುತ್ತವೆ. ಏಕೆಂದರೆ ಈ ವಲಯದ ವರ್ಗ ಹಿತಾಸಕ್ತಿಗಳಿಗೆ ಅಪಾಯ ಕಡಿಮೆಯಾಗುತ್ತದೆ. ಆದರೆ ಇದರಿಂದಾಚೆಗೂ ಒಂದು ಸಮಾಜ ಇರುವುದನ್ನು ಗಮನಿಸಿದಾಗ ದುರ್ಬಲ ವರ್ಗಗಳು, ಮಹಿಳೆಯರು, ಹೆಣ್ಣು ಮಕ್ಕಳು, ತಳಸ್ತರದ ಜಾತಿ ಸಮುದಾಯಗಳು ಕಾನೂನು ನಿರ್ಬಂಧ ಮತ್ತು ಪ್ರತಿಬಂಧಕ ಉಪಕ್ರಮಗಳ ಹೊರತಾಗಿಯೂ ನಿರಂತರ ದೌರ್ಜನ್ಯ ಹಿಂಸೆ ಎದುರಿಸುತ್ತಿರುವುದು ಕಣ್ಣಿಗೆ ರಾಚುತ್ತದೆ. ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ದುಡಿಮೆ, ಬಾಲ್ಯ ವೈಧವ್ಯ, ಬಾಲ್ಯ ವಿವಾಹ, ಲಿಂಗಾನುಪಾತದ ಕುಸಿತ, ಬಾಲ್ಯ ಗರ್ಭಿಣಿಯರ ಸಮಸ್ಯೆಗಳನ್ನೂ ಒಳಗೊಂಡು ನೋಡಿದಾಗ, ಈ ದೌರ್ಜನ್ಯಗಳ ಆಳ ಮತ್ತು ವ್ಯಾಪ್ತಿ ಇನ್ನೂ ಹೆಚ್ಚಾಗುತ್ತಲೇ ಹೋಗುತ್ತದೆ.
ʼ ಅಪರಾಧ ಮುಕ್ತ ಸಮಾಜ ʼ ಎಂಬ ಆಡಳಿತಾತ್ಮಕ ಘೋಷಣೆಗೂ, ʼಸಮಾಜವನ್ನು ಅಪರಾಧಿಕ ಮನಸ್ಥಿತಿಯಿಂದ ಬಿಡುಗಡೆ ಮಾಡುವ ʼ ಔದಾತ್ಯಕ್ಕೂ ಇರುವ ವ್ಯತ್ಯಾಸವನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ. ಇತ್ತೀಚೆಗೆ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರೌಡಿ ಪ್ರತಿಬಂಧಕ ದಳ ರಚಿಸಿರುವುದು, ಕರಾವಳಿಯಲ್ಲಿ ರಾಜ್ಯ ಸರ್ಕಾರ ಕೋಮು ನಿಯಂತ್ರಣ ದಳ ರೂಪಿಸಿರುವುದು, ಸಂಭಾವ್ಯ ಅಪರಾಧಗಳನ್ನು ತಡೆಗಟ್ಟುವಲ್ಲಿ ಕೊಂಚ ಮಟ್ಟಿಗೆ ನೆರವಾಗುತ್ತದೆ. ಆದರೆ ಈ ದುಷ್ಕೃತ್ಯಗಳಿಂದಾಚೆ ಇರುವ ಅಪರಾಧಿಕ ಜಗತ್ತನ್ನು ಈ ಆಡಳಿತ ನೀತಿಗಳು ನಿವಾರಿಸಬಹುದೇ ? ಪೊಲೀಸ್ ಕಣ್ಗಾವಲು, ರಾತ್ರಿ ಪಾಳಿಯ ಪೊಲೀಸ್ ಬೀಟ್ ವ್ಯವಸ್ಥೆ, ಸಿಸಿ ಕ್ಯಾಮರಾಗಳು ಈ ಎಲ್ಲ ರಕ್ಷಾ ವಿಧಾನಗಳ ಹೊರತಾಗಿಯೂ, ಭದ್ರವಾಗಿ ಬೇರೂರಿರುವ (Entrenched ) ಸಂರಕ್ಷಿತ ಸ್ಥಾವರಗಳ ನಾಲ್ಕು ಗೋಡೆಗಳ ನಡುವೆ, ಕುಟುಂಬಗಳಲ್ಲಿ ನಡೆಯುವ ಅತ್ಯಾಚಾರ ಮತ್ತು ಅಸ್ಪೃಶ್ಯತೆಯಂತಹ ಅಪರಾಧಗಳನ್ನು ತಡೆಗಟ್ಟುವುದು ಹೇಗೆ ?
ನಾಗರಿಕ ಸಮಾಜದ ಪಾತ್ರ
ಇಲ್ಲಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಗಳು ನಾಗರಿಕ ಸಮಾಜ (civil society) ವಹಿಸಬಹುದಾದ ಪಾತ್ರದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಈ ಸಮಾಜದ ಭಾಗವಾಗಿ ಸೌಹಾರ್ದಯುತ, ಆರೋಗ್ಯಕರ ಸಮಾಜವನ್ನು ಕಟ್ಟಲು ಅಹರ್ನಿಶಿ ಶ್ರಮಿಸುತ್ತಿರುವ ವ್ಯಕ್ತಿ/ಸಂಘಟನೆಗಳನ್ನು ಒಳಗೊಳ್ಳುವ ಮೂಲಕ, ತಳಮಟ್ಟದಿಂದಲೇ ಜನಸಾಮಾನ್ಯರ ನಡುವೆ ಸಮಾಜಘಾತುಕ ಮನಸ್ಥಿತಿಯ ಬಗ್ಗೆ, ಲಿಂಗತ್ವ ಸೂಕ್ಷ್ಮತೆ, ಸಂವೇದನೆಯ ಬಗ್ಗೆ, ಜಾತಿ ಶ್ರೇಷ್ಠತೆಯ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿಯ ಪ್ರಯತ್ನಗಳು ನಡೆಯಬೇಕಿದೆ. ಈ ನಾಗರಿಕ ಸಮಾಜದ ಸಂಘಟನೆಗಳು (Civil Society Organisations/Groups) ತಮ್ಮ ಸೀಮಿತ ಚೌಕಟ್ಟುಗಳೊಳಗೆ ಈ ಕೆಲಸಗಳನ್ನು ಮಾಡುತ್ತಲೇ ಬಂದಿವೆ. ಇವುಗಳನ್ನು ಒಳಗೊಳ್ಳುವ ಮೂಲಕ ರಾಜಕೀಯೇತರವಾದ, ತತ್ವ ಸಿದ್ಧಾಂತಗಳಿಂದ ಹೊರತಾದ , ವಿಶಾಲ ದೃಷ್ಟಿಕೋನದ ನಾಗರಿಕ ಗುಂಪುಗಳನ್ನು ಆಡಳಿತ ವ್ಯವಸ್ಥೆಗಳು ರೂಪಿಸಬೇಕಿದೆ.

ಮಿಲೆನಿಯಂ ಸಮಾಜ ಎನ್ನಲಾಗುವ 20-30ರ ವಯೋಮಾನದ ಒಂದು ಸಮಾಜ, ಜೀವನಾದರ್ಶದ ಮಾದರಿ ಐಕನ್ (Icon) ಗಳಿಲ್ಲದೆ ಹಾದಿ ತಪ್ಪುತ್ತಿರುವ ಹೊತ್ತಿನಲ್ಲಿ ಈ ಪ್ರಯತ್ನಗಳು ಅತ್ಯವಶ್ಯವಾಗಿವೆ. ಅಧಿಕಾರ ರಾಜಕಾರಣ, ಮಾಧ್ಯಮ ವಲಯ, ಜನಪ್ರತಿನಿಧಿಗಳ ಸಮೂಹ ಇವೆಲ್ಲವೂ ಈ ಪ್ರಯತ್ನಗಳಿಗೆ ವಿಮುಖವಾಗಿರುವುದರಿಂದ, ಸಾಮಾಜಿಕ ನ್ಯಾಯದ ಸಾಂವಿಧಾನಿಕ ಜಪ ಮಾಡುವ ಆಡಳಿತ ವ್ಯವಸ್ಥೆ ಹೊಸ ಮಾರ್ಗಗಳ ಮೂಲಕ, ನವೀನ ಮಾದರಿಗಳನ್ನು ಸೃಷ್ಟಿಸಬೇಕಿದೆ. ಆಗ ಮೈಸೂರಿನ ಹೃದಯ ಭಾಗದಲ್ಲಿ 9 ವರ್ಷದ ಹೆಣ್ಣು ಕೂಸು ಅತ್ಯಾಚಾರ-ಹತ್ಯೆಗೀಡಾಗುವ ಸಂಭವಗಳು ಕಡಿಮೆಯಾಗಬಹುದು. ಕ್ರಮೇಣವಾಗಿ, ಯುವ ಜನಾಂಗದಲ್ಲಿ ಸೌಹಾರ್ದತೆ, ಸಮನ್ವಯ, ಸಹಜೀವನ ಮತ್ತು ಸಹಾನುಭೂತಿಯ ಮೊದಲಾದ ಉದಾತ್ತ ಚಿಂತನೆಗಳು ಸ್ಪಷ್ಟರೂಪ ಪಡೆದುಕೊಳ್ಳುತ್ತವೆ. ಇದು ಭವಿಷ್ಯದ ದೃಷ್ಟಿಯಿಂದ ಆಗಲೇಬೇಕಿರುವ ಕೆಲಸ. ಹಾಗೆಯೇ ಇದನ್ನು ಆಗುಮಾಡುವ ಜವಾಬ್ದಾರಿ ಇರುವುದು ಹಿರಿಯ, ಸಾಂವಿಧಾನಿಕ ಫಲಾನುಭವಿ ಹಿರಿಯ ತಲೆಮಾರಿನ ಮೇಲೆ.
ಸರ್ಕಾರ, ಸಮಾಜ ಮತ್ತು ಆಡಳಿತ ವ್ಯವಸ್ಥೆ, ಈ ದೃಷ್ಟಿಯಲ್ಲಿ ಯೋಚನೆ ಮಾಡುವಂತಾದರೆ ಕುವೆಂಪು ಅವರ ಆಶಯದ ʼ ಸರ್ವಜನಾಂಗದ ಶಾಂತಿಯ ತೋಟ ʼ ದಲ್ಲಿ ವಿಶ್ವಮಾನವತೆಯ ಕುಸುಮಗಳನ್ನು ಅರಳಿಸಬಹುದು.
-೦-೦-೦-೦-















