ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಭಾರತ ವನತೆಯರ ತಂಡ 4 ರನ್ ಗಳಿಂದ ಅತಿಥೇಯ ಇಂಗ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿ ಕಾಮನ್ ವೆಲ್ತ್ ಕ್ರೀಡಾಕೂಟದ ಟಿ-20 ಕ್ರಿಕೆಟ್ ನಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.
ಬರ್ಮಿಂಗ್ ಹ್ಯಾಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ ತಂಡದ ಪರ ನಾಯಕ ನ್ಯಾಟ್ ಸ್ಕೀವಿರ್ (41 ರನ್, 43 ಎಸೆತ, 2 ಬೌಂಡರಿ, 1 ಸಿಕ್ಸರ್), ಡೆನ್ನಿ ವ್ಯಾಟ್ (35), ಆಮಿ ಜೊನ್ಸ್ (31) ಹೋರಾಟ ನಡೆಸಿದರು.

ಸ್ಮೃತಿ ಮಂದಾನ ನೆರವು!
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಸ್ಮೃತಿ ಮಂದಾನ ಬೃಹತ್ ಮೊತ್ತ ಪೇರಿಸಲು ನೆರವಾದರು. ಸ್ಮೃತಿ ಮಂದಾನ 32 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 62 ರನ್ ಬಾರಿಸಿದರು. ಅಲ್ಲದೇ ಮೊದಲ ವಿಕೆಟ್ ಗೆ 7.5 ಓವರ್ ಗಳಲ್ಲಿ 76 ರನ್ ಜೊತೆಯಾಟ ನಿಭಾಯಿಸಿದರು.
ಫ್ರೇಯಾ ಕ್ಯಾಂಪ್ ದಾಳಿಗೆ ತತ್ತರಿಸಿ ಭಾರತ ಕೆಲವು ವಿಕೆಟ್ ಕಳೆದುಕೊಂಡರೂ ಜೆಮಿಯಾ ರೋಡ್ರಿಗಜ್ ಮತ್ತು ದೀಪ್ತಿ ಶರ್ಮ ತಂಡದ ಮೊತ್ತ 150ರ ಗಡಿ ದಾಟುವಂತೆ ನೋಡಿಕೊಂಡರು.
ದೀಪ್ತಿ ಶರ್ಮ (20), ನಾಯಕಿ ಹರ್ಮನ್ ಪ್ರೀತ್ ಕೌರ್ (20) ಉತ್ತಮ ಪ್ರದರ್ಶನ ನೀಡಿದರೆ ಜೆಮಿಯಾ ರೋಡ್ರಿಗಜ್ 31 ಎಸೆತಗಳಲ್ಲಿ 7 ಬೌಂಡರಿ ಸೇರಿದ 44 ರನ್ ಬಾರಿಸಿ ಅಜೇಯರಾಗಿ ಉಳಿದರು.