ಕ್ರಿಕೆಟ್ ಕ್ವೀನ್ ಖ್ಯಾತಿಯ ಭಾರತದ ಕ್ರಿಕೆಟ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ(Smriti Mandhana) ಮದುವೆ ಮುಂದೂಡಿದ ಬಳಿಕ ಕೊನೆಗೂ ಮೌನ ಮುರಿದಿದ್ದು, ಪಲಾಶ್ ಮುಚ್ಚಲ್(Palash Muchhal) ಜೊತೆಗಿನ ತಮ್ಮ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಮೃತಿ ಮಂಧಾನಾ, ʼನಿಶ್ಚಯವಾಗಿದ್ದ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಈ ವಿಷಯವನ್ನು ನಾನು ಇಲ್ಲಿಗೆ ನಿಲ್ಲಿಸಲು ಇಷ್ಟಪಡುತ್ತೇನೆ. ನೀವು ಕೂಡ ಇದನ್ನು ಇಲ್ಲಿಗೆ ನಿಲ್ಲಿಸುತ್ತೀರಿ ಎಂದು ಬಯಸುತ್ತೇನೆ. ಇಂತಹ ಸಮಯದಲ್ಲಿ ಎರಡು ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ. ಹಾಗೂ ನಮ್ಮ ಜೀವನ ಮುಂದುವರಿಯಲು ಅವಕಾಶ ನೀಡಿ ಎಂದು ವಿನಂತಿಸುತ್ತೇನೆʼ.

ʼನಮ್ಮೆಲ್ಲರನ್ನೂ ಒಂದು ಉದ್ದೇಶ ಮುನ್ನಡೆಸುತ್ತದೆ ಎಂದು ಭಾವಿಸುತ್ತೇನೆ. ನನಗೆ ಅದು ಯಾವಾಗಲೂ ನನ್ನ ದೇಶವನ್ನು ಪ್ರತಿನಿಧಿಸುವುದಾಗಿದೆ. ದೇಶಕ್ಕಾಗಿ ಆಡುವುದು, ಟ್ರೋಫಿಗಳನ್ನು ಗೆಲ್ಲುವುದು ನನ್ನ ಮುಂದಿನ ಗಮನವಾಗಿರುತ್ತದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಇದು ಜೀವನದಲ್ಲಿ ಮುಂದುವರಿಯುವ ಸಮಯʼ ಎಂದು ಸ್ಮೃತಿ ಮಂಧಾನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.












