ರಾಜಸ್ಥಾನ ಭರತ್ಪುರ ಜಿಲ್ಲೆಯಲ್ಲಿ ಸೋಮವಾರ (ಸೆಪ್ಟೆಂಬರ್ 11) ಬಸ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇವರೆಲ್ಲರೂ, ಧೋಲಾಪುರ ಜಿಲ್ಲೆಯ ಸಿಕರ್ನಲ್ಲಿರುವ ಶ್ಯಾಮ್ಜಿ ದೇಗುಲಕ್ಕೆ ಭೇಟಿ ನೀಡಿ ಮರಳುತ್ತಿದ್ದರು. ತಡರಾತ್ರಿ 1 ಗಂಟೆ ವೇಳೆಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ 2 ಗೂಳಿಗಳ ಶವಗಳೂ ಕೂಡ ಪತ್ತೆಯಾಗಿದ್ದು, ಗೂಳಿಗಳ ಕಾಳಗದಿಂದಾಗಿ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಡಿಕ್ಕಿಯಾದ ಪರಿಣಾಮ ಕಾರು ಪರಿಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಹೇಳಲಾಗಿದೆ.
ಹರೇಂದ್ರ ಸಿಂಗ್ (32), ಅವರ ಪತ್ನಿ ಮಮತಾ (30), ಮಗಳು ಜಾಹ್ನವಿ (6), ಮಮತಾ ಅವರ ಸಹೋದರಿ ಸುಧಾ (35) ಅವರ ಪತಿ ಸಂತೋಷ್ (37) ಹಾಗೂ ಅವರ ಪುತ್ರ ಅನೂಜ್ (5) ಮೃತಪಟ್ಟವರು.
ಪೊಲೀಸ್ ಠಾಣೆಯ ಬಳಿಯೇ ಅಪಘಾತ ಸಂಭವಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆರು ಮಂದಿ ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿದ್ದಾರೆ.
ಇಬ್ಬರು ಅಪ್ರಾಪ್ತರು ಪ್ರಾಣಾಪಾಯದಿಂದ ಪಾರಾಗಿದ್ದು, ಮಗುವೊಂದು ಯಾವುದೇ ಗಾಯಗಳಿಲ್ಲದೆ ಪಾರಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಹೇಳಿದ್ದಾರೆ.