ಅತ್ಯಂತ ಅಪರೂಪದ ಸನ್ನಿವೇಶದಲ್ಲಿ ಸಂಸದೆಯೊಬ್ಬರು ಮತದಾರರಿಗೆ ಆಮೀಷವೊಡ್ಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದಾರೆ. ಚುನಾವಣೆಯ ವೇಳೆ ಮತದಾರರನ್ನು ಸೆಳೆಯಲು ಹಣ, ಹೆಂಡ ಹಂಚುವುದು ಪ್ರತಿ ಬಾರಿ ವರದಿಯಾದರೂ ಯಾವುದೇ ಜನನಾಯಕರು ದೋಷಿ ಎಂದು ತೀರ್ಪು ಬಂದಿರಲಿಲ್ಲ.
2019ರ ಚುನಾವಣೆಯ ವೇಳೆ ಮತದಾರರಿಗೆ ಲಂಚ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸದೆ ಮಲೋತ್ ಕವಿತಾ ಹಾಗೂ ಅವರ ಆಪ್ತರೊಬ್ಬರನ್ನು ಅವರನ್ನು ನಾಂಪಲ್ಲಿಯ ವಿಶೇಷ ಸೆಷನ್ಸ್ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ. ಇದರೊಂದಿಗೆ ಇಬ್ಬರಿಗೂ ಆರು ತಿಂಗಳ ಸಜೆ ವಿಧಿಸಿದೆ.
ಸದ್ಯಕ್ಕೆ ಲೋಕಸಭೆಯಲ್ಲಿ ಮೆಹಬೂಬಾಬದಾದ್ ಕ್ಷೇತ್ರವನ್ನು ಪ್ರತಿನಿಧಿಸುವ ಕವಿತಾ ಅವರಿಗೆ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನ್ಯಾಯಾಲಯ ಜಾಮೀನು ಕೂಡ ಮಂಜೂರು ಮಾಡಿದೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ತೆಲಂಗಾಣದ ಹಾಲಿ ಸಂಸದರೊಬ್ಬರು ಚುನಾವಣೆಯಲ್ಲಿ ಅಕ್ರಮ ಎಸಗಿದ ಕಾರಣಕ್ಕೆ ಜೈಲು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
2019ರ ಲೋಕಸಭಾ ಚುನಾವಣೆಯ ಕವಿತಾ ಅವರ ಆಪ್ತನಾದ ಶೌಕತ್ ಅಲಿ ಎಂಬವರು ಮತದಾರರಿಗೆ ತಲಾ 500 ರೂ. ಹಂಚುವಾಗ ಫ್ಲೈಯಿಂಗ್ ಸ್ಕ್ವಾಡ್ ಕೈಗೆ ಸಿಕ್ಕಿಬಿದ್ದಿದ್ದರು. ಅವರು ಕವಿತಾ ಅವರ ಪರವಾಗಿಯೇ ಹಣ ಹಂಚುತ್ತಿದ್ದರು ಎಂಬುದನ್ನು ಶೌಕತ್ ಅಲಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ, ಎಂದು ಸರ್ಕಾರದ ಪರ ವಕೀಲ ಜಿ ನಾರಾಯಣ ಹೇಳಿದ್ದರು.
ಪ್ರಕರಣದ ನ್ಯಾಯಾಧೀಶರಾಗಿದ್ದ ವರಪ್ರಸಾದ್ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಸೆಕ್ಷನ್ 171-E (ಆಮೀಶವೊಡ್ಡಿರುವುದಕ್ಕೆ ಶಿಕ್ಷೆ) ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಜತೆಯಲ್ಲಿ ತಲಾ 10,000 ರೂ. ದಂಡವನ್ನು ಕೂಡಾ ವಿಧಿಸಲಾಗಿದೆ. ಶಿಕ್ಷೆಯ ಪ್ರಮಾಣ ಪ್ರಕಟಿಸುವಾಗ ಇಬ್ಬರು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.
ಶಾಸಕರು ಮತ್ತು ಸಂಸದರಿಗಾಗಿ ವಿಶೇಷ ಸೆಷನ್ಸ್ ನ್ಯಾಯಾಲಯವನ್ನು 2018ರಲ್ಲಿ ಸುಪ್ರಿಂ ಕೋರ್ಟ್ ನ ಆದೇಶದ ಮೇರೆಗೆ ರಚಿಸಲಾಗಿತ್ತು. ಇತ್ತೀಚಿಗೆ, ಬಿಜೆಪಿ ಶಾಸಕರಾದ ರಾಜಾ ಸಿಂಗ್ ಹಾಗೂ ಟಿಆರ್ಎಸ್ ಶಾಸಕರಾದ ದಾನಂ ನಾಗೆಂದರ್ ಅವರಿಗೂ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು.