• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಎಸ್‌ಐಆರ್‌  ಪ್ರಕ್ರಿಯೆ ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ ಭಾಗ 2

ಪ್ರತಿಧ್ವನಿ by ಪ್ರತಿಧ್ವನಿ
August 8, 2026
in ಅಂಕಣ
0
‘ಹೊರಟ್ಟಿಗೆ ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ’: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

 ಭಾಗ 2

ಸಾಂವಿಧಾನಿಕ ವ್ಯಾಖ್ಯಾನ

( ಪಿ ಡಿ ಟಿ ಆಚಾರಿ – ದ ಹಿಂದೂ )

 

ಆದರೆ ಎಸ್‌ಐಆರ್‌ ಪ್ರಕ್ರಿಯೆ ಸಾಂದರ್ಭಿಕವಾಗಿ ಸಂವಿಧಾನದ ಸಮ್ಮತಿ ಪಡೆದರೂ , ಈಗ ನಡೆಯುತ್ತಿರುವ ಎಸ್‌ಐಆರ್‌ ಮಾದರಿ ಮತ್ತು ಅದನ್ನು ನಿರ್ದೇಶಿಸುತ್ತಿರುವ ನಿಯಮಗಳು ಅಸಾಂವಿಧಾನಿಕ ಎಂದು ಹಲವಾರು ಸಂವಿಧಾನ-ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಾಗರಿಕ ಸಂಘಟನೆಗಳು (Citizen Groups ) ಮತ್ತು ನೂರಾರು ನಿವೃತ್ತ ನ್ಯಾಯಾಧೀಶರು ಈ ಉಪಕ್ರಮವನ್ನು ಅಸಾಂವಿಧಾನಿಕ ಎಂದು ಗುರುತಿಸಿದ್ದು, ಈಗ ಚೆಂಡು ಸುಪ್ರೀಂಕೋರ್ಟ್‌ ಅಂಗಳದಲ್ಲಿದೆ. ಆದರೆ ನ್ಯಾಯಾಂಗ ವಿಚಾರಣೆಗೊಳಪಟ್ಟಿದ್ದರೂ (Sub judice) ಎಸ್‌ಐಆರ್‌ ಜಾರಿಗೊಳಿಸಲು ಯಾವುದೇ ಅಡ್ಡಿಯಾಗಿಲ್ಲ

 

ಎಸ್‌ಐಆರ್‌ ಪ್ರಕ್ರಿಯೆ 14 ರಾಜ್ಯಗಳಲ್ಲಿ ಈಗಾಗಲೇ ಪೂರ್ತಿಯಾಗಿದ್ದು ಈಗ ಕರ್ನಾಟಕದಲ್ಲಿ ಜೂನ್‌ 29ರಿಂದ ಚಾಲ್ತಿಯಲ್ಲಿದೆ. (84 ಲಕ್ಷ ಮತದಾರರು ಹೊರಗುಳಿಯುವ ಆತಂಕ ಎದುರಾಗಿದೆ)  ಎಸ್‌ಐಆರ್‌ ಪ್ರಕ್ರಿಯೆ ಮುಗಿದಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ವಯಸ್ಕ ಮತದಾರರ ಜನಸಂಖ್ಯೆಗೂ ಮತದಾರರ ಪಟ್ಟಿಯಲ್ಲಿರುವ ಸಂಖ್ಯೆಗೂ ಏಳು ಕೋಟಿ ಅಂತರ ಕಂಡುಬಂದಿದೆ. ಅಂದರೆ ಏಳು ಕೋಟಿ ಜನರು ಮತವಂಚಿತರಾಗಿದ್ದಾರೆ ಎನ್ನಲಾಗುತ್ತಿದೆ.  2024-25ರಲ್ಲಿ ಮತದಾರ ಪಟ್ಟಿಯಲ್ಲಿ (Electoral rolls) ಇದ್ದ ಮತದಾರರ ಪೈಕಿ 5 ಕೋಟಿ ಜನರು ಈಗ ಹೊರದೂಡಲ್ಪಟ್ಟಿದ್ದಾರೆ. ಈ ಹೊರಗಿಡುವಿಕೆಗೆ ಚುನಾವಣಾ ಆಯೋಗ ನೀಡಿರುವ ಕಾರಣಗಳು, “ ಗೈರುಹಾಜರಿ, ಸ್ಥಳಾಂತರಗೊಂಡವರು, ನಕಲು, ಮೃತರು (ASDD) ಅಥವಾ “ತಾರ್ಕಿಕ ವ್ಯತ್ಯಾಸ” (Logical Discrepancy ) ಇತ್ಯಾದಿ. ಈ ತಾರ್ಕಿಕ ವ್ಯತ್ಯಾಸ ಎನ್ನುವುದು ಅತಾರ್ಕಿಕ ವ್ಯಾಖ್ಯಾನ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರ್ವೋಚ್ಛ ನ್ಯಾಯಾಲಯವೂ ಸ್ಪಷ್ಟ ವ್ಯಾಖ್ಯಾನವನ್ನು ನೀಡಲಾಗಿಲ್ಲ.

 

ಚುನಾವಣಾ ಆಯೋಗ ಈಗ ಅನುಸರಿಸುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯ ಮಾದರಿ ಹಲವು ಲೋಪಗಳಿಂದ ಕೂಡಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಏಕೆಂದರೆ ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ನೈಜ ಪ್ರಜೆಗಳು (True Citizens) ಮತವಂಚಿತರಾಗುತ್ತಾರೆ. ಸಂವಿಧಾನದ ಅನುಚ್ಛೇದ 326ರ ಅನುಸಾರ ಭಾರತದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ 18 ವರ್ಷಕ್ಕೆ ಮೇಲ್ಪಟ್ಟಿರುವವರಾದರೆ, ಕಾನೂನಾತ್ಮಕವಾಗಿ ನಿಷೇಧಕ್ಕೊಳಗಾಗದೆ ಇದ್ದರೆ, ಮತದಾನದ ಹಕ್ಕನ್ನು ಪಡೆಯುತ್ತಾರೆ.  ಹಾಗಾಗಿ ಮತದಾರ ಎಂಬ ಅರ್ಹತೆ ಪಡೆಯಲು ಮೂಲತಃ ಅವಶ್ಯವಾಗಿರುವುದು ದೇಶದ ಪೌರತ್ವ (Citizenship).

 

ಸಂವಿಧಾನದ ಅನುಚ್ಛೇದ 324ರ ಅನ್ವಯ ಪೌರತ್ವ ಕಾನೂನು ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ ಪೌರತ್ವವನ್ನು ನಿರ್ಧರಿಸಲು ಅಗತ್ಯವಾದ ದಾಖಲೆಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಹಕ್ಕು ಇರುವುದು ಗೃಹ ಸಚಿವರಿಗೆ ಮಾತ್ರ. ಚುನಾವಣಾ ಆಯೋಗಕ್ಕೆ ಈ ಹಕ್ಕು ಇರುವುದಿಲ್ಲ. ಆದರೂ ಎಸ್‌ಐಆರ್‌ ಜಾರಿಗೊಳಿಸುವ ಮುನ್ನ ಚುನಾವಣಾ ಆಯೋಗ ಈ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಐಆರ್‌ ಕುರಿತ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್‌ ಸಹ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಅಚ್ಚರಿ ಮೂಡಿಸುತ್ತದೆ. (Electoral Purges raise constitutional questions –ಪಿ ಡಿ ಟಿ ಆಚಾರಿ – ದ ಹಿಂದೂ 28 ಏಪ್ರಿಲ್‌ 2026).

ಈ ನಿಟ್ಟಿನಲ್ಲಿ ಉದಾರವಾದಿ ಚಿಂತಕ ಮರ್ರೇ ರೋತ್‌ಬಾರ್ಡ್‌ ಅವರು ವಿದ್ವಾಂಸ ಚಾರ್ಲ್ಸ್‌ ಬ್ಲ್ಯಾಕ್‌ ಅವರ ಈ ಅಭಿಪ್ರಾಯವನ್ನು ಉಲ್ಲೇಖಿಸುತ್ತಾರೆ : “ಪ್ರಭುತ್ವವು ನ್ಯಾಯಾಂಗ ಪರಿಷ್ಕರಣೆಯನ್ನು, ಸೀಮಿತಗೊಳಿಸುವ ಸಾಧನದಿಂದ ಸರ್ಕಾರದ ಕ್ರಮಗಳಿಗೆ ಸೈದ್ಧಾಂತಿಕ ನ್ಯಾಯಸಮ್ಮತತೆಯನ್ನು ಒದಗಿಸುವ ಮತ್ತೊಂದು ಸಾಧನವಾಗಿ ಪರಿವರ್ತಿಸಿದೆ “. (Kaleeshwaram raj The Hindu) ಬಹುತೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಇದ್ದು ಭಾರತವೂ ಹೊರತಾಗಿಲ್ಲ.

 

ರಾಜ್ಯಗಳಲ್ಲಿ ಎಸ್‌ಐಆರ್‌ ಗೊಂದಲಗಳು

 

ಚುನಾವಣೆಗಳನ್ನು ಎದುರಿಸಲಿದ್ದ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಕಾನೂನಿಗೆ ವಿರುದ್ಧವಾಗಿ ನಡೆಸಲಾಗಿದೆ. 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 21ರ ಅನ್ವಯ ಮತದಾರರ ಪಟ್ಟಿಯನ್ನು ಪ್ರತಿ ಮಹಾ ಚುನಾವಣೆಗಳ ಮುನ್ನ ಅಥವಾ ಉಪ ಚುನಾವಣೆಯ ಮುನ್ನ ಪರಿಷ್ಕರಿಸಬಹುದು. ಅಥವಾ ಚುನಾವಣಾ ಆಯೋಗ ಸೂಚಿಸುವ ಯಾವುದೇ ವರ್ಷದಲ್ಲಿ ಕೈಗೊಳ್ಳಬಹುದು.  ಇದಲ್ಲದೆ ಒಂದು ಚುನಾವಣಾ ಕ್ಷೇತ್ರ ಅಥವಾ ಅದರ ಒಂದು ಭಾಗದಲ್ಲಿ ವಿಶೇಷ ವಿಶೇಷ ಪರಿಷ್ಕರಣೆಯನ್ನು , ದಾಖಲಿತ ಕಾರಣಗಳ ದೃಷ್ಟಿಯಿಂದ ನಡೆಸಲು ಆಯೋಗಕ್ಕೆ ಅಧಿಕಾರ ಇರುತ್ತದೆ. 1960ರ ಮತದಾರ ನೋಂದಣಿ ನಿಯಮ 25ರ ಅನುಸಾರ ಈ ಪರಿಷ್ಕರಣೆ ಚುನಾವಣೆಗೆ ಮುನ್ನ ಸಂಕ್ಷಿಪ್ತವಾಗಿಯೂ (Summarily) ಯಾವುದೇ ನಿಗದಿತ ವರ್ಷದಲ್ಲಿ ತೀವ್ರತೆಯಿಂದಲೂ (Intensively) ನಡೆಸಬಹುದು. 1950ರ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 21(2) ಮತ್ತು ಮತದಾರರ ನೋಂದಣಿ ನಿಯಮ 25ನ್ನು ಒಟ್ಟಾಗಿ ನೋಡಿದಾಗ, ಯಾವುದೇ ಚುನಾವಣೆಗೆ ಮುನ್ನ ಸಂಕ್ಷಿಪ್ತ (summary) ಪರಿಷ್ಕರಣೆಯನ್ನು ಮಾತ್ರ ಕೈಗೊಳ್ಳಬಹುದು. (Electoral Purges raise constitutional questions –ಪಿ ಡಿ ಟಿ ಆಚಾರಿ – ದ ಹಿಂದೂ 28 ಏಪ್ರಿಲ್‌ 2026).

 

ಸಾಮಾನ್ಯವಾಗಿ ತೀವ್ರ ಪರಿಷ್ಕರಣೆಯನ್ನು ಹತ್ತಿರದಲ್ಲೇ ಚುನಾವಣೆಗಳು ನಡೆಯದೆ ಇರುವ ಸಂದರ್ಭಗಳಲ್ಲಿ ಕೈಗೊಳ್ಳಬಹುದು. ಹೀಗೆ ಮಾಡುವುದರಿಂದ ಸಮಗ್ರ ಪರಿಷ್ಕರಣೆ (Comprehensive Revision) ನಡೆಸಿ ಮತದಾರ ಪಟ್ಟಿಯನ್ನು ಹೊಸದಾಗಿ ಪ್ರಕಟಿಸಬಹುದು.  ಇದು ದೀರ್ಘಕಾಲಿಕ ಪ್ರಕ್ರಿಯೆಯಾಗಿದ್ದು ಅವಸರದಲ್ಲಿ ಮಾಡುವಂತಹುದಲ್ಲ. ಆದರೆ ಚುನಾವಣಾ ಆಯೋಗವು ಬಿಹಾರ, ಪಶ್ಚಿಮ ಬಂಗಾಲ, ಕೇರಳ, ತಮಿಳುನಾಡು,  ಚುನಾವಣೆಗಳು ಸಮೀಪಿಸುತ್ತಿರುವಾಗ ಎಸ್‌ಐಆರ್‌ ನಡೆಸಿರುವುದು ಕಾನೂನಾತ್ಮಕವಾಗಿ ಒಪ್ಪುವಂತಹುದಲ್ಲ. ಪಶ್ಚಿಮ ಬಂಗಾಲದಲ್ಲಿ ನಡೆಸಿದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 91 ಲಕ್ಷ ಮತದಾರರನ್ನು ʼ ತಾರ್ಕಿಕ ವ್ಯತ್ಯಾಸ ʼ (Logical Discrepancy)ದ ನೆಪದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.  ಪ್ರಜೆಗಳ ಈ ರೀತಿಯ ವರ್ಗೀಕರಣವನ್ನು ಯಾವುದೇ ಚುನಾವಣಾ ಕಾನೂನಿನಲ್ಲೂ ಕಾಣಲಾಗುವುದಿಲ್ಲ.

 

ಜೂನ್‌ 2025ರಲ್ಲಿ ಭಾರತೀಯ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಗೆ ಚಾಲನೆ ನೀಡಿದಾಗ , ಈ ಪ್ರಕ್ರಿಯೆಯ ಮೂಲ ಉದ್ದೇಶ  ಸಂವಿಧಾನದ ಅನುಚ್ಛೇದ 326ರ ಅಡಿಯಲ್ಲಿ ಅನರ್ಹ ಮತದಾರರನ್ನು ಗುರುತಿಸುವುದಾಗಿದೆ ಎಂದು ಘೋಷಿಸಿತ್ತು.  ಆದರೆ ಬಿಹಾರದಲ್ಲಾಗಲಿ ಪಶ್ಚಿಮ ಬಂಗಾಲದಲ್ಲಾಗಲಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣವಾದ ನಂತರ , ಈ ಅನುಚ್ಚೇದದ ಅನ್ವಯ ಅನರ್ಹಗೊಳಿಸಲಾದ ಮತದಾರರ ಹೆಸರುಗಳನ್ನು ಪ್ರಕಟಿಸಿಲ್ಲ.  ಈ ಪ್ರಕ್ರಿಯೆಯಲ್ಲಿ ಪಟ್ಟಿಯಿಂದ ತೆಗೆದುಹಾಕಿರುವ ಮತದಾರರ ಪೈಕಿ ಮೃತಪಟ್ಟವರು, ಬೇರೆಡೆಗೆ ವರ್ಗಾವಣೆಯಾಗಿರುವವರು, ಒಂದಕ್ಕಿಂತಲೂ ಹೆಚ್ಚು ಪಟ್ಟಿಯಲ್ಲಿರುವ ನಕಲಿ ಮತದಾರರು ಮಾತ್ರ ಕಾಣುತ್ತಾರೆ.  ಪಶ್ಚಿಮ ಬಂಗಾಲದಲ್ಲಿ ಗುರುತಿಸಿದ್ದು ʼವಿಚಾರಣೆಯಡಿಯಲ್ಲಿʼ (Under Adjudication) ಎಂದು ವರ್ಗೀಕರಿಸಲಾದ 60 ಲಕ್ಷ ಮತದಾರರನ್ನು.

 

ಒಂದು ಅಂದಾಜಿನ ಪ್ರಕಾರ ಗುಜರಾತ್‌ ಮತ್ತು ಉತ್ತರಪ್ರದೇಶದಲ್ಲಿ ವಲಸಿಗರ ಲಕ್ಷಣಗಳು ಬೇರೆಯೇ ಆಗಿದ್ದರೂ, ಶೇಕಡಾ 17ರಷ್ಟು ವಯಸ್ಕ ಜನಸಂಖ್ಯೆ ಮತದಾರರ ಪಟ್ಟಿಯಿಂದ ಹೊರಗುಳಿಯುವ ನಿರೀಕ್ಷೆ ಇದೆ. ಚುನಾವಣಾ ಆಯೋಗದ ಅನುಸಾರ ಎಸ್‌ಐಆರ್‌ ಪ್ರಕ್ರಿಯೆಯನ್ನು ಕೈಗೊಂಡಿರುವುದು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಸಲುವಾಗಿ, ಅಂದರೆ ಅನರ್ಹ ಮತದಾರರನ್ನು ಹೊರತುಪಡಿಸುವ ಉದ್ದೇಶದಿಂದ.  ಅದರೆ ಈ ಪ್ರಕ್ರಿಯೆಯ ಸಾಂವಿಧಾನಿಕತೆಯನ್ನೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಇನ್ನೂ ವಿಚಾರಣೆಯ ಹಂತದಲ್ಲಿದೆ. ಮತದಾರರ ಪಟ್ಟಿ ಪೌರತ್ವವನ್ನು ನಿರ್ಧರಿಸುವ ಶಾಸನಬದ್ದ ದಾಖಲೆಯಾಗಲು ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಮತದಾರ ಪಟ್ಟಿಯ ವ್ಯಾಪ್ತಿಯನ್ನು ಚುನಾವಣೆಗಳ ಉದ್ದೇಶದಿಂದ ಹೊರಗೆ ವಿಸ್ತರಿಸುವುದು ಅಪಾಯಕಾರಿಯಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ ಲೋಕುರ್‌ ಎಚ್ಚರಿಸುತ್ತಾರೆ. ಈ ಸಾಂವಿಧಾನಿಕ ಆಕ್ಷೇಪ ಮತ್ತು ಸಾಮಾಜಿಕ ಆತಂಕಗಳ ನಡುವೆಯೂ ಎಸ್‌ಐಆರ್‌ ಎಲ್ಲ ರಾಜ್ಯಗಳಲ್ಲೂ ಮುಂದುವರೆಯುತ್ತಿದೆ.

 

ಮತದಾರರ ಅನರ್ಹತೆ ನಿಯಮಗಳು

 

ಸಂವಿಧಾನದ ಅನುಚ್ಛೇದ 326, ವಯಸ್ಕ ಮತದಾನದ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳನ್ನು ನಡೆಸಬೇಕು ಎಂದು ಹೇಳುತ್ತದೆ. ಅರ್ಥಾತ್‌, ಪ್ರತಿಯೊಬ್ಬ ವಯಸ್ಕ ಮತದಾರರೂ , ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಅನರ್ಹಗೊಳ್ಳದೆ ಇದ್ದಲ್ಲಿ, ಮತದಾರರಾಗುವ ಹಕ್ಕು ಪಡೆದಿರುತ್ತಾರೆ ಎಂದು ಹೇಳುತ್ತದೆ. ಈ ಅನುಚ್ಛೇದದ ಅನುಸಾರ ಮತದಾರರಾಗಲು ಎರಡು ಅವಶ್ಯ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಮೊದಲನೆಯದು ವ್ಯಕ್ತಿಯು ಭಾರತದ ಪ್ರಜೆ ಆಗಿರಬೇಕು ಮತ್ತು ಎರಡನೆಯದು ಕನಿಷ್ಠ 18 ವರ್ಷದವರಾಗಿರಬೇಕು. 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ (RPA )ಯಲ್ಲಿ ಮತದಾರರಾಗಿ ನೋಂದಣಿಯಾಗಲು ಅನರ್ಹರಾಗುವ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಅವುಗಳೆಂದರೆ, ಸಮರ್ಥ ನ್ಯಾಯಾಲಯವೊಂದರ ಮೂಲಕ ವ್ಯಕ್ತಿಯು ಮಾನಸಿಕ ಅಸ್ವಸ್ಥ ಎಂದು ಘೋಷಿಸಿರಬೇಕು ಹಾಗೂ  1951ರ ಆರ್‌ಪಿಎ ಕಾಯ್ದೆಯ ಸೆಕ್ಷನ್‌ 11ಎ ಅಡಿಯಲ್ಲಿ ಮತದಾನಕ್ಕೆ ಅನರ್ಹ ಎಂದು ಘೋಷಿಸಿರಬೇಕು.

 

ಮತದಾರರಾಗಿ ನೋಂದಣಿ ಮಾಡಿಸಲು ನಿಯಮಗಳನ್ನು RPA ಕಾಯ್ದೆಯ ಸೆಕ್ಷನ್‌ 19ರಲ್ಲಿ ಸ್ಪಷ್ಟವಾಗಿ ನೀಡಲಾಗಿದೆ. ಅದೇನೆಂದರೆ, ವ್ಯಕ್ತಿಯು ಕನಿಷ್ಠ 18 ವರ್ಷ ದಾಟಿರಬೇಕು ಮತ್ತು ಆ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು. ಇಲ್ಲಿ ಸಾಮಾನ್ಯ ನಿವಾಸಿ (Ordinary Resident) ಎಂದರೇನು ಎಂಬುದನ್ನು ಸೆಕ್ಷನ್‌ 20ರಲ್ಲಿ ವಿವರಿಸಲಾಗಿದೆ. ಇದರನ್ವಯ ವ್ಯಕ್ತಿಯು ವಾಸಿಸುವ ಮನೆಯ ಮಾಲಿಕತ್ವ ಅಥವಾ ಮತ್ತಾವುದೇ ರೀತಿಯ ಹಕ್ಕು  ಹೊಂದಿರುವ ಕಾರಣಕ್ಕಾಗಿ ಸಾಮಾನ್ಯ ನಿವಾಸಿ ಎಂದು ಪರಿಭಾವಿಸಲಾಗುವುದಿಲ್ಲ. ಅಥವಾ ವ್ಯಕ್ತಿಯು ತಾನು ವಾಸಿಸುವ ಸ್ಥಳದಲ್ಲಿ,  ತಾತ್ಕಾಲಿಕವಾಗಿ ತಮ್ಮ ನಿವಾಸದಲ್ಲಿ ಇಲ್ಲದೆ ಹೋದ ಮಾತ್ರಕ್ಕೆ ʼಸಾಮಾನ್ಯ ನಿವಾಸಿ ʼಯ ಅರ್ಹತೆಯನ್ನು ಕಳೆದುಕೊಳ್ಳುವುದಿಲ್ಲ.

 

ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಹಾಗೂ ಲೋಕಸಭೆ, ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಮತ್ತು ರಾಷ್ಟ್ರಪತಿ-ಉಪರಾಷ್ಟ್ರಪತಿಗಳ ಚುನಾವಣೆಯನ್ನು   ಪರಮಾಧಿಕಾರ ಇರುತ್ತದೆ. ಸಂವಿಧಾನದ ಅನುಚ್ಛೇದ 324, ಚುನಾವಣಾ ಆಯೋಗಕ್ಕೆ ಈ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ಕಲ್ಪಿಸುತ್ತದೆ.  ಈ ಅಧಿಕಾರವನ್ನು ಸುಪ್ರೀಂಕೋರ್ಟ್‌ Reservoir of Power, ಅಂದರೆ ʼಅಧಿಕಾರದ ಸಂಗ್ರಹಾಗಾರʼ ಎಂದು ವ್ಯಾಖ್ಯಾನಿಸುತ್ತದೆ.  ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳನ್ನು ನೆರವೇರಿಸುವುದು ಸಂವಿಧಾನದ ಮೂಲ ಸಂರಚನೆಯ (Basic Structure) ಒಂದು ಪ್ರಧಾನ ಲಕ್ಷಣವಾಗಿರುವುದರಿಂದ, ಭಾರತದ ಚುನಾವಣಾ ಆಯೋಗವು ಈ ಕಾರ್ಯವನ್ನು ಪರಿಪೂರ್ಣತೆಯಿಂದ ನಿರ್ವಹಿಸುವ ಸಲುವಾಗಿ ಎಲ್ಲ ಅವಶ್ಯ ಅಧಿಕಾರಗಳನ್ನೂ ಹೊಂದಿರುವುದು ಅತ್ಯಗತ್ಯ.

 

ಏನೇ ಆದರೂ, ಸಂವಿಧಾನವು ಯಾವುದೇ ಅಧಿಕಾರ ಕೇಂದ್ರಕ್ಕೂ ಅನಿರ್ಬಂಧಿತ ಅಧಿಕಾರ ನೀಡುವುದನ್ನು ಊಹಿಸಲೂ ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ಸಹ ತನ್ನ ತೀರ್ಪುಗಳ ಮೂಲಕ, ಯಾವುದೇ ಶಾಸನಗಳ ವ್ಯಾಪ್ತಿಗೆ ಒಳಪಡದೆ ಇರುವ ಎಲ್ಲ ಪ್ರದೇಶಗಳಲ್ಲೂ ಚುನಾವಣಾ ಆಯೋಗವು ತನ್ನ ಎಲ್ಲ ಅಧಿಕಾರವನ್ನೂ ಚಲಾಯಿಸಬಹುದಾಗಿದೆ ಆದರೆ ಆಯಾ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಕಾನೂನುಗಳ ಅನುಸಾರ ನಿರ್ವಹಿಸತಕ್ಕದ್ದು ಎಂದು ಹೇಳಿದೆ. ಮೊಹಿಂದರ್‌ ಸಿಂಗ್ vs ಮುಖ್ಯ ಚುನಾವಣಾ ಆಯುಕ್ತ (1978) ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ ಕಾನೂನನ್ನು ಹೀಗೆ ವ್ಯಾಖ್ಯಾನಿಸುತ್ತದೆ : “ಮೊದಲನೆಯದಾಗಿ ಸಂಸತ್ತು ಅಥವಾ ಇತರ ಯಾವುದೇ ರಾಜ್ಯ ವಿಧಾನಸಭೆಯು ಚುನಾವಣೆಗಳಿಗೆ ಸಂಬಂಧಿಸಿದಂತೆ ನ್ಯಾಯಬದ್ದವಾದ ಕಾನೂನುಗಳನ್ನು ಜಾರಿಗೊಳಿಸಿದ್ದರೆ, ಆಯೋಗವು ಆ ನಿಬಂಧನೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು, ಅವುಗಳಿಗೆ ವ್ಯತಿರಿಕ್ತವಾಗಿ ಅಲ್ಲ. ಆದರೆ ಅಂತಹ ಕಾನೂನು ಏನೂ ಹೇಳದೆ ಇದ್ದಲ್ಲಿ, ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳನ್ನು ಕ್ರಮಬದ್ಧವಾಗಿ ನೆರವೇರಿಸುವ ನಿಟ್ಟಿನಲ್ಲಿ  ಅನುಚ್ಛೇದ 324  ಅಧಿಕಾರದ ಸಂಗ್ರಹಾಗಾರವಾಗಿ ಪರಿಣಮಿಸುತ್ತದೆ  ”.

 

 

 

ಸೂಕ್ತ ದಿನಾಂಕದ ನಿಯಮಗಳು

 

ಈಗ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಪಡಿಸುವ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸುವ ಪ್ರಜಾಪ್ರಾತಿನಿಧ್ಯ ಕಾಯ್ದೆಯ (ಆರ್‌ಪಿಎ) ಸಂಬಂಧಪಟ್ಟ ನಿಬಂಧನೆಗಳನ್ನು ಗಮನಿಸೋಣ  1950ರ ಆರ್‌ಪಿಎ ಕಾಯ್ದೆಯ ಸೆಕ್ಷನ್‌ 21 ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಷ್ಕರಣೆಯನ್ನು ಕುರಿತು ಹೇಳುತ್ತದೆ. ಈ ನಿಟ್ಟಿನಲ್ಲಿ ಸೆಕ್ಷನ್‌ 21 ನಾಲ್ಕು ಹಂತಗಳನ್ನು ಗುರುತಿಸುತ್ತದೆ. (1) ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಗಳ ಮುನ್ನ (2) ಪ್ರತಿಯೊಂದು ಉಪಚುನಾವಣೆಗಳಿಗೂ ಮುನ್ನ (3) ಯಾವುದೇ ವರ್ಷದಲ್ಲಿ ಭಾರತದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತ್ತು (4) ಆಯೋಗವು ಸಕಾರಣಗಳೊಂದಿಗೆ, ಯಾವುದೇ ಚುನಾವಣಾ ಕ್ಷೇತ್ರದಲ್ಲಿ ವಿಶೇಷ ಪರಿಷ್ಕರಣೆಯನ್ನು ಆದೇಶಿಸಿದಾಗ. ನಾಲ್ಕನೆಯ ನಿಬಂಧನೆಯನ್ನು ಹೊರತುಪಡಿಸಿ ಎಲ್ಲ ಪರಿಷ್ಕರಣೆಗಳನ್ನೂ  ಒಂದು ನಿರ್ದಿಷ್ಟ, ಸೂಕ್ತ ದಿನದಿಂದ, ಸಾಮಾನ್ಯವಾಗಿ ಜನವರಿ ತಿಂಗಳ ಮೊದಲನೆ ದಿನದಿಂದ, ನಡೆಸಬಹುದು ಎಂದು ಸೆಕ್ಷನ್‌ 14ರಲ್ಲಿ ಹೇಳಲಾಗಿದೆ.  ಇದಕ್ಕೆ ಹೊರತಾದ ಒಂದೇ ನಿಬಂಧನೆ (4) ಆಗಿರುತ್ತದೆ , ಇದರನ್ವಯ ಯಾವುದೇ ಸಮಯದಲ್ಲಿ ಮಾಡಬಹುದಾದ್ದರಿಂದ ಸೂಕ್ತ ದಿನವನ್ನು ನಮೂದಿಸಲಾಗಿಲ್ಲ.

 

ಭಾರತದ ಚುನಾವಣಾ ಆಯೋಗವು ಜೂನ್‌ 24ರಂದು ಹೊರಡಿಸಿದ ಆದೇಶವು ಜುಲೈ 1 2025ನ್ನು ಸೂಕ್ತ ದಿನ ಎಂದು ಸೂಚಿಸುತ್ತದೆ. ಇದು ಸೆಕ್ಷನ್‌ 21(2)(ಬಿ) ನಿರ್ದೇಶನದ ಅನ್ವಯ ನೀಡಲಾಗಿದೆ ಎಂದು ಹೇಳುತ್ತದೆ.  ಬಿಹಾರದಲ್ಲಿ ನಡೆಯುತ್ತಿರುವ ಪರಿಷ್ಕರಣೆಗೆ ಇದೇ ಸೆಕ್ಷನ್‌ ಅನ್ವಯಿಸಲಾಗಿದೆ ಎಂದು ಭಾವಿಸಬಹುದು.  ಅದರೆ ಈ ನಿಬಂಧನೆಯಡಿ ಸೂಕ್ತ ದಿನಾಂಕವು 1-1-2025 ಆಗಿರಬೇಕು. ಪರಿಷ್ಕರಣೆಯನ್ನು 2025ರ ಜನವರಿ 1ರಿಂದಲೇ ಆರಂಭಿಸಬೇಕಿತ್ತು. ಹಾಗಾಗಿ ಚುನಾವಣಾ ಆಯೋಗದ ಆದೇಶದಲ್ಲಿ ನೀಡಿರುವ ಸೂಕ್ತ ದಿನಾಂಕಕ್ಕೆ ಕಾನೂನಿನಡಿ  ಸಮ್ಮತಿ ಇರುವುದಿಲ್ಲ.  ಅದೇ ರೀತಿ, “ ವಿಶೇಷ ತೀವ್ರ ಪರಿಷ್ಕರಣೆ ” (SIR)‌ ಎಂಬ ಪದವು ಕಾನೂನಿನಲ್ಲಿ ಕಾಣುವುದಿಲ್ಲ. ಚುನಾವಣಾ ಆಯೋಗವು ವಿಶೇಷ ಪರಿಷ್ಕರಣೆಯನ್ನು  ಆದೇಶಿಸಬಹುದಾದ ಏಕೈಕ ಸನ್ನಿವೇಶ ಎಂದರೆ, ಅದು ಒಂದು ನಿರ್ದಿಷ್ಟ ಚುನಾವಣಾ  ಕ್ಷೇತ್ರಕ್ಕೆ ಅಥವಾ ಅದರ ಒಂದು ಭಾಗಕ್ಕೆ, ಸಂಬಂಧಿಸಿರಬೇಕೇ ಹೊರತು, ಇಡೀ ರಾಜ್ಯಕ್ಕೆ ಸಂಬಂಧಿಸಿರಕೂಡದು.  ಹಾಗಾಗಿ ಬಿಹಾರದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR)‌ ಪ್ರಜಾಪ್ರಾತಿನಿಧ್ಯ ಕಾಯ್ದೆಯ (RPA) ನಿಬಂಧನೆಗಳ ಅನುಸಾರ ನಡೆದಿಲ್ಲ ಈ ಕ್ರಮವನ್ನು ಕೈಗೊಳ್ಳಲು ತನಗೆ ಸೆಕ್ಷನ್‌ 21ರ ಅಡಿ ಅಧಿಕಾರ ಇದೆ ಎಂದು ಹೇಳಿದೆ. ನಿಜ, ಆದರೆ ಈ ಅಧಿಕಾರವು ಒಂದು ಕ್ಷೇತ್ರಕ್ಕೆ ಅಥವಾ ಅದರ ಒಂದು ಭಾಗಕ್ಕೆ ಸೀಮಿತವಾಗಿರುತ್ತದೆ ಎನ್ನುವುದನ್ನು ಸೆಕ್ಷನ್‌ 21(3)ರಲ್ಲಿ ಗುರುತಿಸಬಹುದು.

 

ಮುಂದುವರೆಯುವುದು,,,,,

 

Tags: Democracydemocracy in indiaDemocratic RightsElection Commission of Indiaelection newsElection ProcessElectoral ReformsElectoral Roll RevisionElectoral TransparencyImpact on DemocracyImpact on SocietyIndia Politicsindian democracyKarnataka SIRKarnataka Voter ListPolitical ParticipationSIR ProcessSpecial Intensive RevisionVoter AwarenessVoter ExclusionVoter InclusionVoter listVoter RightsVoter VerificationVoting Rights
Previous Post

26 ತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಮಾಂಸ, ಕೊಳೆತ ತರಕಾರಿ ಪತ್ತೆ!

Next Post

 “ಮೀಸಲಾತಿ ಭಿಕ್ಷೆಯಲ್ಲ, ಶೋಷಿತರ ಹಕ್ಕು: ಸಿದ್ದರಾಮಯ್ಯ”

Related Posts

SIR ಪ್ರಕ್ರಿಯೆ: ನ್ಯಾಯಾಂಗದ ತೀರ್ಪು ಮತ್ತು ವಿಶ್ಲೇಷಣೆ-ಭಾಗ 3
Top Story

SIR ಪ್ರಕ್ರಿಯೆ: ನ್ಯಾಯಾಂಗದ ತೀರ್ಪು ಮತ್ತು ವಿಶ್ಲೇಷಣೆ-ಭಾಗ 3

by ನಾ ದಿವಾಕರ
August 8, 2026
0

SIR ತೀರ್ಪಿನ ವಿಶ್ಲೇಷಣೆಗಳು ಸಾಮೂಹಿಕ ಹಕ್ಕು ನಿರಾಕರಣೆ ಮತ್ತು ಅನಿಶ್ಚಿತತೆಯ ಮೇಲೆ – ಕೇಂದ್ರೀಕರಿಸಿವೆ. ಈ ಕಾನೂನು ಪ್ರಕ್ರಿಯೆಗಳು ಇಂದಿನ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ತೀರ್ಪಿನ ವಿಧಾನದ...

Read moreDetails
ಎಸ್ಐಆರ್ ಪ್ರಕ್ರಿಯೆ: ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ

ಎಸ್ಐಆರ್ ಪ್ರಕ್ರಿಯೆ: ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ

August 7, 2026
ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು

ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು

August 5, 2026
ವಿವೇಕದ ಎರಡು ಮುಖಗಳು –ಶಿಕ್ಷಣ ಮತ್ತು ಆಧ್ಯಾತ್ಮ

ವಿವೇಕದ ಎರಡು ಮುಖಗಳು –ಶಿಕ್ಷಣ ಮತ್ತು ಆಧ್ಯಾತ್ಮ

August 4, 2026
ಸ್ವ-ವಿಮರ್ಶೆಯ ಹಾದಿಯಲ್ಲಿ ಸಣ್ಣ ಬೆಳಕಿಂಡಿ

ಸ್ವ-ವಿಮರ್ಶೆಯ ಹಾದಿಯಲ್ಲಿ ಸಣ್ಣ ಬೆಳಕಿಂಡಿ-ಭಾಗ 2

July 29, 2026
Next Post
 “ಮೀಸಲಾತಿ ಭಿಕ್ಷೆಯಲ್ಲ, ಶೋಷಿತರ ಹಕ್ಕು: ಸಿದ್ದರಾಮಯ್ಯ”

 “ಮೀಸಲಾತಿ ಭಿಕ್ಷೆಯಲ್ಲ, ಶೋಷಿತರ ಹಕ್ಕು: ಸಿದ್ದರಾಮಯ್ಯ”

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada