ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆ 2022 ಗಾಗಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಆಕಾಂಕ್ಷಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 1,011 ಹುದ್ದೆಗಳಿಗೆ ಫೆಬ್ರವರಿ 2022 ರಲ್ಲಿ ಪ್ರಕಟಣೆಯ ಮೂಲಕ ಅರ್ಜಿ ಕರೆಯಲಾಗಿತ್ತು. ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಸೇರಿದಂತೆ 14 ಕೇಂದ್ರ ಸೇವೆಗಳಾದ ಭಾರತೀಯ ವಿದೇಶಾಂಗ ಸೇವೆ ಮತ್ತು ನಾಲ್ಕು B ಗುಂಪಿನ ಸೇವೆಗಳಾದ ಸಶಸ್ತ್ರ ಪಡೆಗಳ ಪ್ರಧಾನ ಕಛೇರಿಯ ನಾಗರಿಕ ಸೇವೆ ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ನಾಗರಿಕ ಸೇವೆ, ಪಾಂಡಿಚೇರಿ ನಾಗರಿಕ ಸೇವೆ ಮತ್ತು ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ಪೊಲೀಸ್ ಸೇವೆಗೆ ಅರ್ಜಿ ಆಹ್ವಾನಿಸಲಾಗಿತ್ತು.
ವಿಶೇಷವೆಂದರೆ ಈ ವರ್ಷ ಭಾರತೀಯ ರೈಲ್ವೆ ಸಂಚಾರ ಸೇವೆ (IRTS), ಭಾರತೀಯ ರೈಲ್ವೆ ಖಾತೆಗಳ ಸೇವೆ (IRAS), ಮತ್ತು ಭಾರತೀಯ ರೈಲ್ವೆ ಸಿಬ್ಬಂದಿ ಸೇವೆ (IRPS) ಪರೀಕ್ಷೆಗಳನ್ನು ಯುಪಿಎಸ್ಸಿ ಪರೀಕ್ಷೆಗಳಿಂದ ಪ್ರತ್ಯೇಕವಾಗಿರಿಸಲಾಗಿದೆ. ಭಾರತೀಯ ರೈಲ್ವೇಯ ಇಂಜಿನಿಯರಿಂಗ್ ಅಲ್ಲದ ಇತರ ಸಿಬ್ಬಂದಿಗಳ ಸೇರ್ಪಡೆಗಾಗಿ ಪ್ರತ್ಯೇಕ ಪರೀಕ್ಷೆ ನಡೆಸಲು ರೈಲ್ವೇ ಮಂಡಳಿಯು ಯುಪಿಎಸ್ಸಿಗೆ ವಿನಂತಿಸಿದೆ ಎಂದು ತಿಳಿದುಬಂದಿದೆ.
ರೈಲ್ವೇಗೆ ಹೊಸ ಪ್ರತಿಭೆಗಳ ನೇಮಕಾತಿ
ಭಾರತೀಯ ಇಂಜಿನಿಯರಿಂಗ್ ಸೇವೆಗಳ (IES) ಪರೀಕ್ಷೆಯು UPSC ಯಿಂದ ನಡೆಸಲ್ಪಡುತ್ತದೆ. ಇದು ರೈಲ್ವೆಯ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಶಾಖೆಗಳಿಗೆ ಅಧಿಕಾರಿಗಳನ್ನು ಶಿಫಾರಸು ಮಾಡುತ್ತದೆ. ರೈಲ್ವೆಯು 1.4 ಮಿಲಿಯನ್ ಉದ್ಯೋಗಿಗಳೊಂದಿಗೆ, ಭಾರತದಲ್ಲಿ ಅತಿ ದೊಡ್ಡ ಉದ್ಯೋಗದಾತ ಮತ್ತು ವಿಶ್ವದ ಏಳನೇ ಅತಿ ದೊಡ್ಡ ಉದ್ಯೋಗವಾಗಿದೆ. ಭಾರತೀಯ ರೈಲ್ವೇಸ್ ತೆಗೆದುಕೊಳ್ಳುವ ಮಾನವ ಸಂಪನ್ಮೂಲ (HR) ನಿರ್ಧಾರಗಳು ದೇಶದ ರಾಜಕೀಯ ಆರ್ಥಿಕತೆಯ ಮೇಲೆ ದೂರಗಾಮಿ ಪರಿಣಾಮ ಬೀರುವಷ್ಟು ಸಶಕ್ತವಾಗಿದೆ.
ಬಹುಮಾದರಿ ಸಾರಿಗೆ, ಮೂಲಸೌಕರ್ಯ, ಸರಕು ಸಾಗಣೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕ್ರಮದಲ್ಲಿ ಮೆಟ್ರೋ ಯೋಜನೆಗಳಿಗೆ ಒತ್ತು ನೀಡುವುದರೊಂದಿಗೆ ಭಾರತೀಯ ರೈಲ್ವೇಯಂತಹ ವಾಣಿಜ್ಯ ಸಂಸ್ಥೆಯನ್ನು ನಡೆಸಲು ಅಗತ್ಯವಿರುವ ಕೌಶಲ್ಯ ಮತ್ತು ಸಾಮರ್ಥ್ಯಗಳು ಜಿಲ್ಲಾಡಳಿತ ಮತ್ತು ಸರ್ಕಾರಿ ಇಲಾಖೆಗಳನ್ನು ನಡೆಸಲು ಬೇಕಾಗುವ ಕೌಶಲ್ಯಕ್ಕಿಂತ ಭಿನ್ನವಾಗಿದೆ ಎಂಬುವುದು ರೈಲ್ವೇ ಮಂಡಳಿಯ ಅಭಿಪ್ರಾಯ. ಹಾಗಾಗಿ ಪ್ರತ್ಯೇಕ ಪರೀಕ್ಷೆ ನಡೆಸಲು ರೈಲ್ವೇ ನಿರ್ಧರಿಸಲಾಗಿದೆ.
ಅಲ್ಲದೆ, ಮ್ಯಾನೇಜ್ಮೆಂಟ್, ವಾಣಿಜ್ಯ ಮತ್ತು ಕಾನೂನು ಪದವೀಧರರಿಂದ ರೈಲ್ವೇಗಳಿಗೆ ‘ತಾಂತ್ರಿಕವಲ್ಲದ’ ವ್ಯವಸ್ಥಾಪಕರನ್ನು ಸೇರಿಸುವುದು ಹೆಚ್ಚು ಸಮಂಜಸವೂ ಆಗಿದೆ. 1951 ರಲ್ಲಿ ರೈಲ್ವೆಯ ರಾಷ್ಟ್ರೀಕರಣದ ಮೊದಲು, ಎಲ್ಲಾ ರೈಲ್ವೆ ಕಂಪನಿಗಳು ಖಾತೆಗಳು/ಹಣಕಾಸು ಕಾರ್ಯವನ್ನು ಹೊರತುಪಡಿಸಿ ತಮ್ಮದೇ ಆದ ನೇಮಕಾತಿ ವಿಧಾನಗಳನ್ನು ಹೊಂದಿದ್ದವು.

ICS ಇತಿಹಾಸ ಏನು ಹೇಳುತ್ತದೆ?
ಸ್ವಾತಂತ್ರ್ಯಕ್ಕೂ ಮೊದಲು, ಐಸಿಎಸ್, ಐಪಿ ಮತ್ತು ಕೇಂದ್ರ ಸೇವೆಗಳಿಗೆ ಪ್ರತ್ಯೇಕವಾಗಿ ಪರೀಕ್ಷೆಗಳು ನಡೆಯುತ್ತಿದ್ದವು. 1922 ರಿಂದ, ICS ಪರೀಕ್ಷೆಯು ಪ್ರತಿ ವರ್ಷ ಇಂಗ್ಲೆಂಡ್ ಮತ್ತು ಭಾರತದಲ್ಲಿ ನಡೆಯುತ್ತಿತ್ತು. IAS (ಮತ್ತು ಸಂಬಂಧಿತ ಸೇವೆಗಳು) ಗಾಗಿ ಲಂಡನ್ ಪರೀಕ್ಷೆಯು 70 ರ ದಶಕದ ವರೆಗೂ ನಡೆಯುತ್ತಿತ್ತು. D.S. ಕೊಠಾರಿ ಆಯೋಗದ ಶಿಫಾರಸಿನ ಮೇರೆಗೆ 1976 ರ ನಂತರ ಅದನ್ನು ನಿಲ್ಲಿಸಲಾಯಿತು.
ಈಗಿನ ಐಎಎಸ್ ಅನ್ನು ಸ್ವಾತಂತ್ರ್ಯ ಪೂರ್ವದಲ್ಲಿ ICS ಎಂದೂ ಮತ್ತು IPSನ್ನು IP ಎಂದೂ ಕರೆಯಲಾಗುತ್ತಿತ್ತು. ಹಾಗೆಯೇ IFS ಸೇರಿದಂತೆ ಭಾರತ ಸರ್ಕಾರದ ಇತರ ಉನ್ನತ ಹುದ್ದೆಗಳಿಗೆ ಒಂದೇ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತೆಗೆದುಕೊಂಡಿದ್ದರು. ಭಾರತದ ಪ್ರಥಮ ಪ್ರಧಾನಿ ನೆಹರು ಅವರು ವಿದೇಶಿ ಸೇವೆಗೆ ಪ್ರತ್ಯೇಕ (ವಿಶೇಷವಾಗಿ ಸಂದರ್ಶನ ಆಧಾರಿತ ಸೇರ್ಪಡೆ) ಪರೀಕ್ಷೆ ನಡೆಸುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ ಗೃಹ ಸಚಿವಾಲಯವು ಅದನ್ನು ವಿರೋಧಿಸಿ ಎಲ್ಲಾ ನೇಮಕಾತಿಗಳನ್ನು ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮಾಡಬೇಕೆಂದು ಒತ್ತಾಯಿಸಿತು.
1947 ಮತ್ತು 1950 ರ ನಡುವೆ, IAS, IFS, IPS ಮತ್ತು ಕೇಂದ್ರ ಸೇವೆಗಳಿಗೆ ನೇಮಕಾತಿಗಾಗಿ ವರ್ಷಕ್ಕೊಮ್ಮೆ ಸಂಯೋಜಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಯಿತು. ಐಪಿಎಸ್ಗೆ ಕನಿಷ್ಠ ವಯಸ್ಸಿನ ಮಿತಿ 20 ವರ್ಷವಾಗಿದ್ದರೆ, ಐಆರ್ಟಿಎಸ್ ಹೊರತುಪಡಿಸಿ ಎಲ್ಲಾ ಸೇವೆಗಳಿಗೆ ಇದು 21 ರಿಂದ 24 ಆಗಿತ್ತು ಮತ್ತು ಪ್ರಯತ್ನಗಳ ಸಂಖ್ಯೆಗೆ ಯಾವುದೇ ಮಿತಿ ಇರಲಿಲ್ಲ.
‘ಏಕ ಪರೀಕ್ಷೆ’ಯ ಬೇರುಗಳು
ಸ್ವಾತಂತ್ರ್ಯದ ನಂತರ ಎಲ್ಲಾ ಸೇವೆಗಳಿಗೆ ಒಂದೇ ಪರೀಕ್ಷೆ ಎಂಬ ನಿಯಮಕ್ಕೆ ಅಗಾಧ ಬೆಂಬಲವಿದ್ದರೂ, ‘ಎಲ್ಲಾ ಸೇವೆಗಳಿಗೆ ಏಕರೂಪದ ಸೇವಾ ಷರತ್ತುಗಳು ಹೊಂದಿದ್ದರೆ ಮಾತ್ರ ಎಲ್ಲಾ ಸೇವೆಗಳಿಗೆ ಒಂದೇ ಪರೀಕ್ಷೆ ಎಂಬುವುದು ಅರ್ಥಪೂರ್ಣವಾಗಬಹುದು’ ಎಂಬ ಮಾತುಗಳೂ ಕೇಳಿಬಂದಿದ್ದವು. ಅಲ್ಲದೆ 1971ರಲ್ಲಿ ಪೋಲಿಸ್ ತರಬೇತಿಯ ಕುರಿತಾದ ಡಾ ಎಂಎಸ್ ಗೋರ್ ಸಮಿತಿಯ (1971) ಶಿಫಾರಸು ಒಂದೇ ಪರೀಕ್ಷೆಯನ್ನು ಒಪ್ಪಲಿಲ್ಲ. ಸಾಮಾನ್ಯ ಪರೀಕ್ಷೆಗಳಲ್ಲಿ ಸೂಚಿಸಲಾದ ಕಡಿಮೆ ಮಾನದಂಡಗಳು ಐಪಿಎಸ್ಗೂ ಅನ್ವಯಿಸಿದರೆ ಅದು ಇತರ ಪರೀಕ್ಷೆಗಳಂತೆಯೇ ಸಾಮಾನ್ಯ ಪರೀಕ್ಷೆ ಆಗಲಿದೆ ಎಂಬ ಆತಂಕ ವ್ಯಕ್ತಪಡಿಸಿತು.
ಐಪಿಎಸ್ ಪರೀಕ್ಷೆಯು ಐಎಎಸ್ ಪರೀಕ್ಷೆಯಂತೆಯೇ ಇರಬೇಕೆಂದು ಅವರು ಬಲವಾಗಿ ಶಿಫಾರಸು ಮಾಡಿದರು. ಸಾಮಾನ್ಯ ನಿರ್ವಾಹಕರು, ರಾಜತಾಂತ್ರಿಕರು, ಪೊಲೀಸ್ ಅಧಿಕಾರಿ ಅಥವಾ ಇತರ ಯಾವುದೇ ಕೇಂದ್ರ ಸರ್ಕಾರದ ಸೇವೆಗಳ ಅಭ್ಯರ್ಥಿಗಳಿಗೆ ಅಗತ್ಯವಿರುವ ವೃತ್ತಿಪರ ಪರಿಣತಿಯು ವಿಭಿನ್ನವಾಗಿದ್ದರೂ ಸಹ, ಅವರಲ್ಲಿ ಸಾಮರ್ಥ್ಯ ಮತ್ತು ಬದ್ಧತೆಯ ಪ್ರಜ್ಞೆಯು ಸಾಮಾನ್ಯವಾಗಿ ಇರಲೇಬೇಕು ಎಂದು ಕೊಠಾರಿ ಆಯೋಗವೂ ಒಪ್ಪಿಕೊಂಡಿತು.
ಆದರೆ 1950 ರಲ್ಲಿ 4,000 ಕ್ಕಿಂತ ಕಡಿಮೆಯಿದ್ದ ಆಕಾಂಕ್ಷಿಗಳ ಸಂಖ್ಯೆ 1975 ರಲ್ಲಿ ಸುಮಾರು 30,000 ಕ್ಕೆ ಏರಿದಾಗ ಕೊಠಾರಿ ಆಯೋಗವು ಎರಡು-ಹಂತದ ಪರೀಕ್ಷಾ ಪ್ರಕ್ರಿಯೆಯನ್ನು ಶಿಫಾರಸು ಮಾಡಿತು, ಪ್ರಾಥಮಿಕ ಪರೀಕ್ಷೆಯ ನಂತರ ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ (ಮೌಖಿಕ ಸಂದರ್ಶನ)ಯನ್ನು ಮೊದಲ ಬಾರಿ ಪರಿಚಯಿಸಿತು.
ಅಂದಿನಿಂದ ಇಂದಿನವರೆಗೂ UPSC ಇತರ ಸಾಮಾನ್ಯ ಪರೀಕ್ಷೆಗಳಂತೆಯೇ IRTS ಪರೀಕ್ಷೆ ಗಳನ್ನೂ ನಡೆಸಿಕೊಂಡು ಬರುತ್ತಿದೆ. ಇದೀಗ ಈ ವರ್ಷದಿಂದ ರೈಲ್ವೇ ಮಂಡಳಿಯು ಪ್ರತ್ಯೇಕ ಪರೀಕ್ಷೆಗೆ ಬೇಡಿಕೆ ಸಲ್ಲಿಸಿದ್ದು ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳು ಸೇವೆಗೆ ಸೇರಿದ ನಂತರ ಅದರ ಸೇವೆ, ಕಾರ್ಯತತ್ಪರತೆ ಮತ್ತು ಪ್ರಗತಿಯಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುವುದು ಕುತೂಹಲ ಮೂಡಿಸಿದೆ.