ಮೈಸೂರಿನಲ್ಲಿ ಚಾರಿತ್ರಿಕ ಮಹತ್ವ ಇರುವ ಒಂದು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ನುಂಗಿಹಾಕಲು ಆಧುನಿಕ ಅಧ್ಯಾತ್ಮ ಮಾರುಕಟ್ಟೆ ಶತ ಪ್ರಯತ್ನ ಮಾಡುತ್ತಿದೆ. ಭೂಮಿ, ನೆಲದ ಮೌಲ್ಯ, ಸ್ಥಿರಾಸ್ಥಿಯ ಮಾರುಕಟ್ಟೆ ಮೌಲ್ಯ ಮತ್ತು ಆಧ್ಯಾತ್ಮಿಕ ಮಾರುಕಟ್ಟೆಯಿಂದ ಒದಗಿಬರುವ ಲಾಭಾಂಶ ಈ ಎಲ್ಲ ಹಿತಾಸಕ್ತಿಗಳೂ ಒಂದಾಗಿ ಶಿಕ್ಷಣ ಸಂಸ್ಥೆಯೊಂದರ ಸಮಾಧಿ ನಿರ್ಮಿಸಲು ಸಜ್ಜಾಗುತ್ತಿವೆ. ಈ ಅಧ್ಯಾತ್ಮ ಕೇಂದ್ರಿತ ಮಾರುಕಟ್ಟೆ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿರುವ “ ಕ್ಷಿಪ್ರಗತಿಯ ಧ್ವಂಸಾಚರಣೆಯ ವಾಹನ ”ದ (ಜೆಸಿಬಿಗೆ ಸಂವಾದಿ ಪದ) ಚಾಲನಾ ಶಕ್ತಿಗೆ ಇಂಧನ ಒದಗಿಸಲು ಸ್ವಾಮಿ ವಿವೇಕಾನಂದರನ್ನು ಬಳಸಿಕೊಳ್ಳಲಾಗುತ್ತಿದೆ. ಮೂರು ನಾಲ್ಕು ಪೀಳಿಗೆಗಳ ಕಾಲ ಸಾವಿರಾರು ಸಾಮಾನ್ಯ ಜನರ ಬದುಕು ಕಟ್ಟಿಕೊಳ್ಳಲು ಸುಭದ್ರ ಬುನಾದಿ ಒದಗಿಸಿದ್ದ ಒಂದು ಶಿಕ್ಷಣ ಸಂಸ್ಥೆಯ ಸಾವು ಬಾಧಿಸಿದ್ದು ಕೇವಲ ಕೆಲವು ಪ್ರಗತಿಪರ ಸಂಘಟನೆಗಳನ್ನು ಮತ್ತು ಸಮಾಜಮುಖಿ ‘ಬುದ್ಧಿಜೀವಿಗಳನ್ನು ’ ಮಾತ್ರ.
ಆದರೆ ಈಗ ನೋಡಿ, ಅಕ್ರಮವಾಗಿ ನಿರ್ಮಿಸಲಾಗಿರುವ ನೂರಾರು ಪೂಜಾ ಸ್ಥಳಗಳನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತೆರವುಗೊಳಿಸುವ ಸರ್ಕಾರದ ಕ್ರಮ ಎಲ್ಲ ರಾಜಕೀಯ ಪಕ್ಷಗಳನ್ನೂ ಧಿಗ್ಗನೆಂದು ಎದ್ದು ಕುಳಿತುಕೊಳ್ಳುವಂತೆ ಮಾಡಿದೆ. ನೂರಾರು ಶಿಕ್ಷಣ ಸಂಸ್ಥೆಗಳು ಹೆಸರಿಲ್ಲದಂತೆ ಮುಚ್ಚಿಹೋಗುತ್ತಿದ್ದರೂ ಕಣ್ಣೆತ್ತಿಯೂ ನೋಡದ, ಲಕ್ಷಾಂತರ ಬಡ ಜನತೆ ಶಾಲೆಗಳಿಂದಲೇ ವಂಚಿತರಾಗಿ, ಸರ್ಕಾರಿ ಶಾಲೆಗಳು ಮಾರುಕಟ್ಟೆ ಲೂಟಿಕೋರರ ಪಾಲಾಗುತ್ತಿದ್ದರೂ ಲೆಕ್ಕಿಸದ ರಾಜಕೀಯ ಪಕ್ಷಗಳಿಗೆ ದೇವರು, ದೈವತ್ವ, ದೈವಭಕ್ತಿ ಮತ್ತು ದೇವಾಧಿದೇವತೆಗಳ ಆವಾಸ ನೆಲೆಗಳು ಎಷ್ಟು ಮುಖ್ಯವಾಗುತ್ತವೆ ಅಲ್ಲವೇ ? 21ನೆಯ ಶತಮಾನದ ಅತಿ ದೊಡ್ಡ ದುರಂತ ಎಂದರೆ ಈ ರಾಜಕೀಯ ಮೌಢ್ಯ ಮತ್ತು ಬೌದ್ಧಿಕ ದಾರಿದ್ರ್ಯ.
ನಿಜಾರ್ಥದಲ್ಲಿ ‘ ಧರ್ಮ ’ ಎನ್ನುವ ಪರಿಕಲ್ಪನೆಯಲ್ಲಿ ‘ ಅಕ್ರಮ ‘ ಎಂಬ ಪದ ನುಸುಳಬಾರದು. ಒಂದು ಧಾರ್ಮಿಕ ಕೇಂದ್ರ ಮತ್ತು ನಿರ್ದಿಷ್ಟ ಮತಧರ್ಮಗಳನ್ನೇ ಉಸಿರಾಡುವ ಅಧ್ಯಾತ್ಮ ಕೇಂದ್ರ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಎಲ್ಲ ರೀತಿಯ ಅಕ್ರಮಗಳನ್ನೂ ನಿವಾರಿಸಿ, ಜನಸಾಮಾನ್ಯರಿಗೆ ಒಂದು ನೈತಿಕ ಮಾರ್ಗದರ್ಶನ ತೋರುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದರೆ ಈ ಧರ್ಮ ಎನ್ನುವ ಪದ ಅರ್ಥಪೂರ್ಣವಾಗುತ್ತದೆ. ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ ಎನ್ನುವ ಮತಗಳು ತಮ್ಮ ಸ್ಥಾಪಿತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ತಮ್ಮ ವ್ಯಾಪ್ತಿ ಮತ್ತು ಪಾರಮ್ಯವನ್ನು ವಿಸ್ತರಿಸಿಕೊಳ್ಳಲು, ನೊಂದ ಜನತೆಯ ಮೇಲೆ ತಮ್ಮ ಪಾರಮ್ಯವನ್ನು ಸಾಧಿಸಲು ಈ ಧರ್ಮದ ಪರಿಕಲ್ಪನೆಯನ್ನು ಸಾಧನವನ್ನಾಗಿ ಬಳಸಿಕೊಂಡೇ ಬಂದಿವೆ. ಇದು ಚಾರಿತ್ರಿಕ ಸತ್ಯ . ಮತಧರ್ಮಗಳ ಸಾಂಸ್ಥೀಕರಣ ಪ್ರಕ್ರಿಯೆ ನೆಲೆಗೊಂಡಷ್ಟೂ ಧಾರ್ಮಿಕ ಚಟುವಟಿಕೆಗಳು ಮತ್ತು ಆಚರಣಾತ್ಮಕ ಪ್ರಕ್ರಿಯೆಗಳು ತಮ್ಮ ಜಂಗಮ ಸ್ವರೂಪವನ್ನು ಕಳಚಿಹಾಕಿ ಸ್ಥಾವರ ರೂಪ ಪಡೆದುಕೊಂಡುಬಿಡುತ್ತವೆ. ಈ ಪ್ರಕ್ರಿಯೆಯಲ್ಲೇ ವಿವೇಕಾನಂದರಂತಹ ಜಂಗಮ ಸಂನ್ಯಾಸಿಯನ್ನೂ ಸ್ಥಾವರಗಳಲ್ಲಿ ಬಂಧಿಸಲಾಗುತ್ತದೆ.
ಕಳೆದ ಮೂರು ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣದ ಪರಿಣಾಮ ಭಾರತದಲ್ಲಿ ದೇವಾಲಯಗಳು, ಪೂಜಾಸ್ಥಳಗಳು ಮತ್ತು ಅಧ್ಯಾತ್ಮ ಕೇಂದ್ರಗಳು ರಾಜಕೀಯ ಧೃವೀಕರಣದ ಕೇಂದ್ರಗಳಾಗಿ ಪರಿಣಮಿಸಿವೆ. ದೈವತ್ವದ ವಾಣಿಜ್ಯೀಕರಣ ಮತ್ತು ಮತಧರ್ಮಗಳ ಸಾಂಸ್ಥೀಕರಣದ ಪ್ರಕ್ರಿಯೆ ಒಟ್ಟೊಟ್ಟಿಗೇ ಸಾಗುತ್ತಿವೆ. ಇಂದು ಬಹುತೇಕ ದೇವಸ್ಥಾನಗಳು ಒಂದು ಅತೀತ ಶಕ್ತಿಯನ್ನು ಆರಾಧಿಸುವ ಶ್ರದ್ಧಾ ಕೇಂದ್ರಗಳಾಗಿ ಉಳಿದಿಲ್ಲ ಬದಲಾಗಿ ನಿರ್ದಿಷ್ಟ ಮತಧಾರ್ಮಿಕ ಹಿತಾಸಕ್ತಿಗಳನ್ನು ಕಾಪಾಡಬಲ್ಲ ಶಕ್ತಿ ಕೇಂದ್ರಗಳಾಗಿ ನೆಲೆ ಕಂಡುಕೊಳ್ಳುತ್ತಿವೆ. ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸಿರುವ ಅಕ್ರಮ ಸಂತಾನಗಳು ತಮ್ಮ ಭ್ರಷ್ಟ ಚಟುವಟಿಕೆಗಳಿಗೆ ಮತ್ತು ಅಕ್ರಮ ವ್ಯವಹಾರಗಳಿಗೆ ಸಾಂತ್ವನ ಕಂಡುಕೊಳ್ಳಲು ಮತಧಾರ್ಮಿಕ ಕೇಂದ್ರಗಳನ್ನೇ ಆಶ್ರಯಿಸುವಂತಾಗಿದೆ. ಹಾಗಾಗಿಯೇ ಧಾರ್ಮಿಕ ಕೇಂದ್ರಗಳನ್ನು ಮುಟ್ಟಿದ ಕೂಡಲೇ ರಾಜಕೀಯ ಪಕ್ಷಗಳಿಗೆ ಷಾಕ್ ಹೊಡೆದಂತಾಗುತ್ತದೆ. ಇದು ಪಕ್ಷಾತೀತ ವಿದ್ಯಮಾನ (ಎಡ ಪಕ್ಷಗಳನ್ನು ಹೊರತುಪಡಿಸಿ).
ಐದು ದಶಕಗಳಷ್ಟು ಹಿಂತಿರುಗಿ ನೋಡಿದಾಗ ನಮ್ಮ ಕಣ್ಣೆದುರು ಬರುವ ದೇವಾಲಯ ಅಥವಾ ಪೂಜಾ ಮಂದಿರಗಳಿಗೂ, 21ನೆಯ ಶತಮಾನದ ಡಿಜಿಟಲ್ ಯುಗದ ಧಾರ್ಮಿಕ ಸ್ಥಾವರಗಳಿಗೂ ಇರುವ ವ್ಯತ್ಯಾಸ ಎಂದರೆ ಇಲ್ಲಿ ಶ್ರದ್ಧೆ, ಭಕ್ತಿ ಭಾವಗಳ ಸ್ಥಾನವನ್ನು ಆಡಂಭರ, ವೈಭವ ಮತ್ತು ನಿತ್ಯವಿನೂತನ ಆಚರಣೆಗಳು ಆಕ್ರಮಿಸಿವೆ. ಜನಸಾಮಾನ್ಯರ ದೈನಂದಿನ ಸಂಕಷ್ಟಗಳಿಗೆ, ಬಡತನದ ಬವಣೆಗೆ ಮತ್ತು ಫಲನೀಡದ ಬೆವರಿನ ದುಡಿಮೆಯಿಂದ ನಿತ್ರಾಣವಾಗುವ ಜೀವಗಳಿಗೆ ಸಾಂತ್ವನ ಕೇಂದ್ರಗಳಾಗಿದ್ದ ಪೂಜಾಸ್ಥಳಗಳು ಇಂದು ಆಧುನಿಕ ನಾಗರಿಕ ಸಮಾಜದ ರಮ್ಯ ಬದುಕಿನ ವೈಭವಗಳ ತಾಣಗಳಾಗಿವೆ. ಮಾರುಕಟ್ಟೆ ಆರ್ಥಿಕತೆಗೆ ಅತಿ ಹೆಚ್ಚು ಹಣಕಾಸಿನ ಹರಿವು ಈ ವಾಹಿನಿಯ ಮೂಲಕವೇ ಇದೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕಿದೆ. ದೇವಸ್ಥಾನಗಳು, ಅಧ್ಯಾತ್ಮ ಕೇಂದ್ರಗಳು ಹೆಚ್ಚಾದಷ್ಟೂ ನಿತ್ಯ ಮಾರುಕಟ್ಟೆಯ ವ್ಯವಹಾರಗಳು ಚುರುಕಾಗುತ್ತಿರುತ್ತವೆ. ಇದು ಬದುಕಿನ ಪ್ರಶ್ನೆ.
ಆದರೆ ತಾತ್ಕಾಲಿಕವಾಗಿ ನಿತ್ಯ ಬದುಕಿನ ಸವಾಲುಗಳಿಗೆ ಸಾಂತ್ವನ ನೀಡುವ ಈ ಮಾರುಕಟ್ಟೆ ಕೇಂದ್ರಿತ ಅಧ್ಯಾತ್ಮ ಮತ್ತು ಮತಧಾರ್ಮಿಕ ಸ್ಥಾವರಗಳು ಮತ್ತೊಂದು ಬದಿಯಲ್ಲಿ ಸಮಾಜದ ಬೌದ್ಧಿಕ ವಿಕಸನಕ್ಕೆ ಅಗತ್ಯವಾದ ವೈಚಾರಿಕತೆಯ ಭೂಮಿಕೆಯನ್ನೇ ಶಿಥಿಲಗೊಳಿಸುತ್ತಿರುವುದನ್ನು ಗಮನಿಸಬೇಕಿದೆ. ಧಾರ್ಮಿಕ ಕೇಂದ್ರಗಳ, ಅರ್ಥಾತ್ ದೇವಸ್ಥಾನ, ಚರ್ಚು, ಮಸೀದಿ, ಪೂಜಾಮಂದಿರ ಮತ್ತು ಅಧ್ಯಾತ್ಮ ಕೇಂದ್ರಗಳನ್ನು ಕಾನೂನುಬಾಹಿರವಾಗಿ ಅಕ್ರಮವಾಗಿ ನಿರ್ಮಿಸಲಾಗಿದ್ದಲ್ಲಿ ಅಂಥವನ್ನು ಕೆಡವಲು ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಅಕ್ರಮ ಸ್ಥಾವರಗಳು ಯಾವ ಜಾಗಗಳಲ್ಲಿ ನಿರ್ಮಿತವಾಗಿವೆ ಮತ್ತು ಯಾವ ದೇವರುಗಳನ್ನು ಹೊಂದಿವೆ ಎನ್ನುವುದನ್ನು ಗಮನಿಸಿದಾಗ ಸಾಂಸ್ಕೃತಿಕ ರಾಜಕಾರಣ, ಮತೀಯ ರಾಜಕೀಯ ಮತ್ತು ಮಾರುಕಟ್ಟೆ ಶಕ್ತಿಗಳ ಸಂಯೋಗವೂ ಸ್ಪಷ್ಟವಾಗುತ್ತದೆ.
ಕಳೆದ ಮೂರು ದಶಕಗಳ ನಗರೀಕರಣ ಪ್ರಕ್ರಿಯೆಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದಾಗ, ಶಾಲೆ, ಆಸ್ಪತ್ರೆ, ಗ್ರಂಥಾಲಯ ಅಥವಾ ಇತರ ಸಾರ್ವಜನಿಕವಾಗಿ ಉಪಯುಕ್ತವಾದ ಕಟ್ಟಡಗಳಿಗೂ ಮುನ್ನ ತಲೆಎತ್ತಿ ನಿಲ್ಲುವುದು ಒಂದು ಧಾರ್ಮಿಕ ಕೇಂದ್ರ. ಮಸೀದಿ ಇಲ್ಲವೇ ಇಗರ್ಜಿ ಇಲ್ಲವೇ ಒಂದು ದೇವಾಲಯ. ಕೆಲವು ಸಂದರ್ಭಗಳಲ್ಲಿ ಜಾತಿ ಕೇಂದ್ರಿತ ಮಠಗಳು, ಅಧ್ಯಾತ್ಮ ಕೇಂದ್ರಗಳು ಕೆಲವು ಬಡಾವಣೆಗಳಿಗೇ ಅಸ್ತಿಭಾರ ಹಾಕಿರುವುದನ್ನೂ ಕಾಣಬಹುದು. ಈ ಧಾರ್ಮಿಕ ಕೇಂದ್ರಗಳು ಒಂದು ಅಶ್ವತ್ಥ ಕಟ್ಟೆಯಲ್ಲಿ, ಉದ್ಯಾನವನಗಳಲ್ಲಿ, ಕೆರೆಗಳ ದಡದಲ್ಲಿ ಅಥವಾ ಬಡಾವಣೆಗಳಿಗೆ ಪ್ರವೇಶಿಸುವ ಮುನ್ನವೇ ತಮ್ಮ ಮೂಲ ನೆಲೆಯನ್ನು ಗುರುತಿಸಿಕೊಳ್ಳುತ್ತವೆ. ಇಂದು ಯಾವುದೇ ನಗರದಲ್ಲಿನ ಪ್ರಮುಖ ಉದ್ಯಾನಗಳೆಲ್ಲವೂ ಒಂದಲ್ಲಾ ಒಂದು ದೇವಸ್ಥಾನದ ಪಾಲಾಗಿವೆ. ಈ ಉದ್ಯಾನವನಗಳು ಸಾರ್ವಜನಿಕರ ಉಲ್ಲಾಸಕ್ಕೆ, ಮರಂಜನೆಗೆ, ನಿತ್ಯ ಬದುಕಿನ ಜಂಜಾಟದಿಂದ ಹೊರಬರಲು ಅಗತ್ಯವಾದ ಆಹ್ಲಾದಕರ ವಾತಾವರಣದ ಸೃಷ್ಟಿಗಾಗಿ ನಿರ್ಮಾಣವಾಗುತ್ತವೆ. ಆದರೆ ಇಲ್ಲಿ ಒಂದು ದೇವಾಲಯ ಸ್ಥಾಪಿಸುವ ಮೂಲಕ ಉದ್ಯಾನಗಳು ತಮ್ಮ ಸಾರ್ವತ್ರಿಕತೆಯನ್ನು ಕಳೆದುಕೊಂಡು ಒಂದು ನಿರ್ದಿಷ್ಟ ಮತಧರ್ಮದ ಕೇಂದ್ರ ಬಿಂದುಗಳಾಗಿಬಿಡುತ್ತವೆ.
ಮೈಸೂರಿ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಇರುವ ದೇವಸ್ಥಾನವನ್ನು ನಂತರದ ಚಿತ್ರಣ
ಈ ಬಹುಪಾಲು ದೇವಸ್ಥಾನಗಳಲ್ಲಿನ ದೇವರುಗಳನ್ನು ಗಮನಿಸಿದರೆ, ಪ್ರಮುಖವಾಗಿ ಗಣೇಶ, ಹನುಮಾನ್ ಅಥವಾ ಶನಿ ದೇವರುಗಳೇ ಕಾಣುತ್ತಾರೆ. ಇದರೊಂದಿಗೆ ಒಂದು ನಾಗರ ಪ್ರತಿಮೆ ಕಡ್ಡಾಯವಾಗಿ ಇರುತ್ತದೆ. ಏಕೆಂದರೆ ತಮ್ಮ ನಿತ್ಯ ಬದುಕಿನ ಸವಾಲುಗಳನ್ನು ಎದುರಿಸಲು ಸಾಕಷ್ಟು ಸಾಮಾಜಿಕಾರ್ಥಿಕ ಸಂಕಷ್ಟಗಳನ್ನು, ತಡೆಗೋಡೆಗಳನ್ನು ಎದುರಿಸುವ ಮಧ್ಯಮ ವರ್ಗಗಳಿಗೆ, ಕೆಳಸ್ತರದ ಜನತೆಗೆ, ದುಡಿಯುವ ವರ್ಗಗಳಿಗೆ ಅವರ ಕಷ್ಟಗಳಿಂದ ಪಾರಾಗಲು ಈ ದೇವರುಗಳ ಮೂಲಕ ಸಾಂತ್ವನ ಒದಗಿಸುವುದು ಸುಲಭವಾಗಿರುತ್ತದೆ. ಈ ದೇವಸ್ಥಾನಗಳಲ್ಲಿ ಅನುಸರಿಸಲಾಗುವ ಮೌಢ್ಯಾಚರಣೆಗಳು ಇಡೀ ಸಮಾಜವನ್ನೇ ಆವರಿಸುವಂತೆ ದೇವಸ್ಥಾನದ ಧರ್ಮದರ್ಶಿಗಳು ಎಚ್ಚರ ವಹಿಸುತ್ತಾರೆ. ಈ ಮೂರು ದೇವರುಗಳ ಸುತ್ತ ಹೆಣೆಯಲಾಗಿರುವ ಕಪೋಲಕಲ್ಪಿತ ಕಥನಗಳು ಸುಲಭವಾಗಿ ಜನರಲ್ಲಿ ನಂಬಿಕೆಯನ್ನು ಹುಟ್ಟಿಸುವಂತೆಯೇ, ಭೀತಿಯನ್ನೂ ಸೃಷ್ಟಿಸುತ್ತದೆ.
ನವಗ್ರಹ ಪೂಜೆ, ಶನಿದೇವರಿಗೆ ಪ್ರತಿ ಶನಿವಾರ ನಡೆಯುವ ತೈಲ-ಕ್ಷೀರಾಭಿಷೇಕಗಳು, ಶನಿಕಾಟದಿಂದ ಪಾರಾಗಲು ಬೊಗಳೆ ಜ್ಯೋತಿಷಿಗಳು ಸೂಚಿಸುವ ಪೂಜಾ ವಿಧಾನಗಳು, ನಾಗ ಪೂಜೆಯ ಸುತ್ತ ಹೆಣೆಯಲಾಗಿರುವ ಹಲವಾರು ಐತಿಹ್ಯಗಳು, ಕಾಲ್ಪನಿಕ ಕಥನಗಳು, ಹನುಮಾನ್ ಚಾಲಿಸಾದಂತಹ ಪಠಣ ಪ್ರಕ್ರಿಯೆಗಳು, ಗಣೇಶನನ್ನು ಸ್ತುತಿಸುವ ಸಂಕಷ್ಟ ಚತುರ್ಥಿಯಂತಹ ನಿಯತಕಾಲಿಕ ಆಚರಣೆಗಳು, ಜನರಲ್ಲಿ ಮಡುಗಟ್ಟಿರುವ ಭೀತಿಯನ್ನು ಮತ್ತು ದೋಷಗಳನ್ನು ಹೋಗಲಾಡಿಸಲು ಹನುಮಾನ್ ದೇವಾಲಯಗಳಲ್ಲಿ ನೀಡಲಾಗುವ ತಾಯತಗಳು, ಇತ್ತೀಚೆಗೆ ಹೆಚ್ಚು ಪ್ರಚಲಿತವಾಗಿರುವ ಪ್ರದೋಷ ಪೂಜಾ ವಿಧಾನಗಳು ಇವೆಲ್ಲವೂ ಸಹ ಬೆವರುಹರಿಸಿ ದುಡಿಯುವ ಜನತೆಯಲ್ಲಿ ಮೌಢ್ಯವನ್ನು ಬಿತ್ತುವ ಮೂಲಕ ಸಾಂತ್ವನ ಹೇಳುವ ಮಾರುಕಟ್ಟೆ ಆಧಾರಿತ ತಂತ್ರಗಾರಿಕೆಗಳಾಗಿವೆ.
ಗಣೇಶ, ಹನುಮಾನ್, ಶನಿದೇವರು ಮತ್ತು ನಾಗ ಈ ದೇವರುಗಳ ಸುತ್ತ ಹೆಣೆದಿರುವ ಮೌಢ್ಯ ಕಥನಗಳನ್ನು ಪ್ರಚಾರ ಮಾಡಲೆಂದೇ ಕನ್ನಡದ ವಿದ್ಯುನ್ಮಾನ ಮಾಧ್ಯಮಗಳು ತಮ್ಮದೇ ಆದ ಅಧಿಕೃತ ಮೌಢ್ಯಾಧಿಪತಿಗಳನ್ನು ನೇಮಿಸಿಕೊಂಡಿವೆ. ದಿನನಿತ್ಯ ಈ ಜ್ಯೋತಿಷಿಗಳು, ಗುರೂಜಿಗಳು ಮತ್ತು ಸ್ವಾಮಿಗಳು ಟಿವಿ ಪರದೆಗಳ ಮೇಲೆ ಬಿತ್ತರಿಸುವ ಪ್ರಶ್ನೋತ್ತರ ಕಾರ್ಯಕ್ರಮ, ದಿನಭವಿಷ್ಯ ಮತ್ತು ವಾಸ್ತು ದೋಷಗಳ ಪಠಣಗಳು ಜನಸಾಮಾನ್ಯರಲ್ಲಿನ ಆತಂಕಗಳನ್ನು ಹೆಚ್ಚು ಮಾಡುವ ಮೂಲಕ, ಸಮೀಪದಲ್ಲೇ ಇರುವ ದೇವಸ್ಥಾನಗಳ ಮೊರೆ ಹೋಗುವಂತೆ ಮಾಡುತ್ತವೆ. ನಿತ್ಯ ಜೀವನದ ಪ್ರತಿಯೊಂದು ಸಮಸ್ಯೆಗೂ ಪೂಜಾ ವಿಧಾನಗಳ ಮೂಲಕ, ದೋಷಪರಿಹಾರ ಸೂತ್ರಗಳ ಮೂಲಕ ಮತ್ತು ವಿಭಿನ್ನ ಮೌಢ್ಯಾಚರಣೆಗಳ ಮೂಲಕ ಪರಿಹಾರ ಒದಗಿಸುವ ಈ ಜ್ಯೋತಿಷಿಗಳ ಮಾರುಕಟ್ಟೆ ಮತ್ತು ಮೌಢ್ಯದ ಸಾಮ್ರಾಜ್ಯ ದಿನೇ ದಿನೇ ವಿಸ್ತರಿಸುತ್ತಲೇ ಇರುವುದನ್ನು ಗಮನಿಸಬೇಕಿದೆ.
ಹಾಗಾಗಿಯೇ ಈಗ ನಗರಗಳ ಪ್ರತಿಯೊಂದು ಹೊಸ ಬಡಾವಣೆಯಲ್ಲೂ, ಪ್ರತಿಯೊಂದು ಸಣ್ಣ ಗ್ರಾಮದಲ್ಲೂ ಒಂದು ದೇವಸ್ಥಾನ, ಅಲ್ಲಿ ಗಣೇಶ, ಆಂಜನೇಯ, ನವಗ್ರಹ, ಶನಿದೇವರು ಮತ್ತು ನಾಗರ ಪ್ರತಿಮೆಗಳು ಕಡ್ಡಾಯವಾಗಿ ಇರುತ್ತದೆ. ಹಾಗೆಯೇ ಮಧ್ಯಮ ವರ್ಗದ ಜನ ದಿನನಿತ್ಯ ಸಂಜೆ ಮತ್ತು ಮುಂಜಾನೆಯ ವಿಹಾರಕ್ಕೆ ಬಳಸುವ ಉದ್ಯಾನಗಳಲ್ಲೂ ಈ ಸ್ಥಾವರಗಳು ಇದ್ದೇ ಇರುತ್ತವೆ. ಮನೆಯ ಬಾಗಿಲಿಗೇ ದೇವರನ್ನು ಕೊಂಡೊಯ್ಯುವ ಈ ಮತಧಾರ್ಮಿಕ ಆಚರಣೆಗಳ ಜೊತೆಗೇ ಮೌಢ್ಯ ಬಿತ್ತನೆಯ ಕಾರ್ಯವೂ ಮಾಧ್ಯಮಗಳ ಮೂಲಕ ನಿರಂತರವಾಗಿ ನಡೆಯುತ್ತಿರುತ್ತದೆ. ಇಲ್ಲಿ ಜನಸಾಮಾನ್ಯರ ಹತಾಶೆ, ಆತಂಕ ಮತ್ತು ಭವಿಷ್ಯದ ಅನಿಶ್ಚಿತತೆಯ ಬಗ್ಗೆ ಇರುವ ಭೀತಿಯನ್ನು ಹೋಗಲಾಡಿಸಲು, ಹಲವು ಮೌಢ್ಯಾಚರಣೆಯ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿರುತ್ತದೆ.
ಮೈಸೂರಿ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಇರುವ ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ನಂತರ ಅಧಿಕಾರಿಗಳು ಬೇಟಿ ನೀಡುರುವ ಚಿತ್ರ
ಈ ಮೌಢ್ಯಾಚರಣೆಯ ಕೇಂದ್ರಗಳಾಗಿರುವ ಎಲ್ಲ ಅಕ್ರಮ ಸ್ಥಾವರಗಳನ್ನು ಧ್ವಂಸಗೊಳಿಸುವುದು ಪ್ರಜ್ಞಾವಂತ ಸಮಾಜದ ಆದ್ಯತೆಯಾಗಬೇಕಿತ್ತಲ್ಲವೇ ? ಆದರೆ ಆಂಜನೇಯನ ತಾಯತಕ್ಕಾಗಿ, ಶನಿದೇವರ ಪ್ರಸಾದಕ್ಕಾಗಿ, ಸಂಕಷ್ಟ ಚತುರ್ಥಿಯ ಪ್ರಸಾದಕ್ಕಾಗಿ, ನಾಗದೇವತೆಯ ಕಪೆಗಾಗಿ, ಆಶ್ಲೇಷಬಲಿಗಾಗಿ, ಶಿರಡಿ ಸಾಯಿಬಾಬನ ಪ್ರಸಾದಕ್ಕಾಗಿ ಹಾತೊರೆಯುವ ಯುವ ಪೀಳಿಗೆಯನ್ನು, ವಿದ್ಯಾವಂತ, ಸುಶಿಕ್ಷಿತ ಪ್ರಜೆಗಳನ್ನು ನೋಡಿದಾಗ ನಮ್ಮ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಇನ್ನೂ ಶೈಶಾವಸ್ಥೆಯಲ್ಲಿರುವುದು ಸ್ಪಷ್ಟವಾಗುತ್ತದೆ. ಅಕ್ರಮಗಳಿಂದ, ಭ್ರಷ್ಟ ಮಾರ್ಗಗಳಿಂದ ಅಕ್ರಮ ಸಂಪತ್ತು ಗಳಿಸಿರುವ ಶ್ರೀಮಂತ ವರ್ಗಗಳು ತಮ್ಮ ಪಾಪಪ್ರಜ್ಞೆಯನ್ನು ಕಳೆದುಕೊಳ್ಳಲು ತಿರುಪತಿ, ಕುಕ್ಕೆ, ಧರ್ಮಸ್ಥಳಗಳಿಗೆ ಭೇಟಿ ನೀಡಲು ಸಾಧ್ಯ. ಆದರೆ ನಿಕೃಷ್ಟ ಜೀವನ ನಡೆಸುವ ಕೆಳಸ್ತರದ ಜನತೆಗೆ ತಮ್ಮ ಮನೆಗಳ ಸಮೀಪದಲ್ಲೇ ಇರುವ ಉದ್ಯಾನಗಳ ಧಾರ್ಮಿಕ ಕೇಂದ್ರಗಳೇ ಮುಖ್ಯವಾಗುತ್ತವೆ.
ಯಾವುದೇ ಧರ್ಮ ರಕ್ಷಣೆಗೆ ದೇವರ ಅಗತ್ಯವಿಲ್ಲ. ಮತಧರ್ಮಗಳ ಅಸ್ತಿತ್ವಕ್ಕೆ ದೇವಸ್ಥಾನ, ಮಸೀದಿ, ಇಗರ್ಜಿ ಅಥವಾ ಧಾರ್ಮಿಕ ಕೇಂದ್ರಗಳು ಅನಿವಾರ್ಯವಲ್ಲ. ಆದರೆ ಮತಧರ್ಮಗಳ ಸಾಂಸ್ಥೀಕರಣ ಹೆಚ್ಚಾದಷೂ ಈ ಸ್ಥಾವರಗಳ ಅವಶ್ಯಕತೆಯೂ ಹೆಚ್ಚಾಗುತ್ತದೆ. ಜನಸಾಮಾನ್ಯರು ಎದುರಿಸುವ ನಿತ್ಯ ಜೀವನದ ಜಟಿಲ ಸಮಸ್ಯೆಗಳಿಗೆ ಸಾಂತ್ವನ ಒದಗಿಸಲು ಸದಾ ತೆರೆದಿರುವ ಈ ಸ್ಥಾವರಗಳು, ತಾತ್ಕಾಲಿಕ ಶಮನ ಮಾಡುವುದರಿಂದಿಗೇ ಶಾಶ್ವತವಾಗಿ ಭವಿಷ್ಯದ ಹಲವು ಪೀಳಿಗೆಗಳನ್ನು ತಮ್ಮ ಮೌಢ್ಯಾಚರಣೆಗಳ ಮೂಲಕ ಅಂಧಕಾರಕ್ಕೆ ತಳ್ಳುತ್ತಿರುವುದನ್ನು ಸಮಾಜ ಗಮನಿಸುತ್ತಲೇ ಇದೆ, ಸಹಿಸಿಕೊಳ್ಳುತ್ತಲೇ ಇದೆ. ಸಾಂಸ್ಥಿಕ ಧರ್ಮಗಳು ಮಾರುಕಟ್ಟೆ ಆರ್ಥಿಕತೆಯೊಡನೆ ಹೊಂದಾಣಿಕೆಯೊಂದಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸುವಾಗ ಪೂಜಾ ಕೇಂದ್ರಗಳು, ದೇವಮಂದಿರಗಳು, ಅಧ್ಯಾತ್ಮ ಕೇಂದ್ರಗಳು ವಾಣಿಜ್ಯೋದ್ಯಮಗಳಾಗಿ ರೂಪುಗೊಳ್ಳುತ್ತವೆ. ಈ ಪ್ರಕ್ರಿಯೆಯ ಒಂದು ಸ್ವರೂಪವನ್ನು ಇಂದು ವಿವಾದಕ್ಕೀಡಾಗಿರುವ ಅಕ್ರಮ ಧಾರ್ಮಿಕ ಕೇಂದ್ರಗಳಲ್ಲಿ ಕಾಣಬಹುದಾಗಿದೆ.
ಈ ಅಕ್ರಮ ಸಂತಾನದ ಸ್ಥಾವರಗಳನ್ನು ಧ್ವಂಸ ಮಾಡುವುದರಿಂದ ಯಾವುದೇ ಧರ್ಮಕ್ಕೂ ಅಪಚಾರವಾಗುವುದಿಲ್ಲ ಎನ್ನುವುದನ್ನು ಪ್ರಜ್ಞಾವಂತ ರಾಜಕಾರಣಿಗಳೂ ಅರ್ಥಮಾಡಿಕೊಳ್ಳದಂತಹ ಒಂದು ಸಾಂಸ್ಕೃತಿಕ ರಾಜಕಾರಣದ ವಾತಾವರಣ ಸೃಷ್ಟಿಯಾಗಿದೆ. ಜಾತಿ ಆಧಾರಿತ ದೇವ ದೇವತೆಗಳು ಮತ್ತು ದೇವಸ್ಥಾನಗಳು ಜಾತಿ ರಾಜಕಾರಣಕ್ಕೂ ಒಂದು ನಿಷ್ಕೃಷ್ಟ ಭೂಮಿಕೆಯನ್ನು ಒದಗಿಸುವುದರಿಂದ ಪ್ರತಿಯೊಂದು ಪೂಜಾಸ್ಥಳದ ಹಿಂದೆಯೂ ಮಾರುಕಟೆ ಹಿತಾಸಕ್ತಿ ಇರುವಂತೆಯೇ ರಾಜಕೀಯ ಹಿತಾಸಕ್ತಿಯೂ ಅಡಗಿರುತ್ತದೆ. ಅಕ್ರಮ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ, ಕೆಡವುವ ಕಾರ್ಯಾಚರಣೆಗೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಪೈಪೋಟಿಯ ಪ್ರತಿರೋಧವನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಭಾರತದ ರಾಜಕೀಯ ಮುಖ್ಯವಾಹಿನಿಯಲ್ಲಿ ವೈಚಾರಿಕತೆ ಸಂಪೂರ್ಣ ನಿಶ್ಶೇಷವಾಗಿರುವುದರ ಸೂಚನೆಯೂ ಇದಾಗಿದೆ.
ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಜನಸಾಮಾನ್ಯರ, ದುಡಿಯುವ ವರ್ಗಗಳ ಬದುಕನ್ನು ನಿಕೃಷ್ಟವಾಗಿಸುತ್ತಿರುವ ಈ ಸಂದರ್ಭದಲ್ಲಿ, ವೈಚಾರಿಕತೆಯೊಂದೇ ಜನರನ್ನು ಸಮ ಸಮಾಜದ ಗುರಿಯತ್ತ ಕೊಂಡೊಯ್ಯಬಹುದಾದ ಅಸ್ತ್ರವಾಗಿದೆ. ಈ ವೈಚಾರಿಕ ಪ್ರಜ್ಞೆಯನ್ನು ಜನರಲ್ಲಿ ಬೆಳೆಸಲು, ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಧಾರ್ಮಿಕ ಕೇಂದ್ರಗಳು, ಅಧ್ಯಾತ್ಮ ಕೇಂದ್ರಗಳು ತಡೆಗೋಡೆಗಳಾಗಿ ಪರಿಣಮಿಸುತ್ತವೆ. ಮಾರುಕಟ್ಟೆಯನ್ನು ಪೋಷಿಸಲು ಬಳಕೆಯಾಗುತ್ತಿರುವ ಈ ಅಕ್ರಮ ಧಾರ್ಮಿಕ ಕೇಂದ್ರಗಳು ಮತ್ತೊಂದು ಬದಿಯಲ್ಲಿ ಈ ಮಾರುಕಟ್ಟೆಯ ಸುಸ್ಥಿರತೆಗಾಗಿ ಜನವಿರೋಧಿ ಆರ್ಥಿಕ ನೀತಿಗಳನ್ನು ಅನುಸರಿಸುವ ಅಧಿಕಾರ ರಾಜಕಾರಣಕ್ಕೆ ಮತ್ತು ಮತೀಯವಾದಿ ರಾಜಕಾರಣದ ರಾಜಕೀಯ ಧೃವೀಕರಣಕ್ಕೂ ಭೂಮಿಕೆಯಾಗುತ್ತಿರುವುದು ಆತಂಕಕಾರಿ ವಿದ್ಯಮಾನಗಳಾಗಿವೆ. ಪ್ರಾಥಮಿಕ ತರಗತಿಗಳಿಂದ ವಿಶ್ವವಿದ್ಯಾಲಯ, ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳವರೆಗೂ ವಿಸ್ತರಿಸುವ ಮೌಢ್ಯ ಬಿತ್ತನೆಯ ಯೋಜನೆಗಳು ಭವಿಷ್ಯದ ಪೀಳಿಗೆಯನ್ನು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯಲು ಈ ಧಾರ್ಮಿಕ ಕೇಂದ್ರಗಳು ಪ್ರವೇಶ ದ್ವಾರಗಳಂತೆ, ತರಬೇತು ಕೇಂದ್ರಗಳಂತೆ ಕಂಡರೆ ಅಚ್ಚರಿಪಡಬೇಕಿಲ್ಲ.
ನಾವು, ಅಂದರೆ ಪ್ರಜ್ಞಾವಂತ ಸಮಾಜ, ಧ್ವಂಸಗೊಳಿಸಬೇಕಿರುವುದು, ತೆರವುಗೊಳಿಸಬೇಕಿರುವುದು ಈ ಮೌಢ್ಯ ಬಿತ್ತನೆಯ ಕೇಂದ್ರಗಳನ್ನು. ಮೌಢ್ಯಾಚರಣೆಯನ್ನು ಪೋಷಿಸುವ ಧಾರ್ಮಿಕ ಕೇಂದ್ರಗಳನ್ನು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ, ಕಾನೂನುಬಾಹಿರವಾಗಿ ನಿರ್ಮಿಸಲಾಗಿರುವ ಈ ಮೌಢ್ಯ ಪ್ರಸರಣ ಕೇಂದ್ರಗಳನ್ನು. ಶ್ರದ್ಧೆ, ಭಕ್ತಿ ಭಾವ, ನಂಬಿಕೆಗಳಿಂದಾಚೆಗೆ ತಮ್ಮದೇ ಆದ ಸ್ವಹಿತಾಸಕ್ತಿಗಳಿಗಾಗಿ ಸಮಾಜದ ಸುಪ್ರಜ್ಞೆಯನ್ನೇ ಭ್ರಷ್ಟಗೊಳಿಸುವ ಈ ಮೌಢ್ಯ ಪ್ರಸರಣ ಕೇಂದ್ರಗಳ ವಿರುದ್ಧ ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಈ ಪ್ರಸರಣ ಪ್ರಕ್ರಿಯೆಗೆ ಬೌದ್ಧಿಕ ಬಂಡವಾಳ ಒದಗಿಸುವ ವಿದ್ಯುನ್ಮಾನ ಮಾಧ್ಯಮಗಳ ವಾಹಿನಿಗಳು ಮತ್ತು ಸುದ್ದಿಮನೆಗಳ ಅಕ್ರಮ ಮಾರ್ಗಗಳ ವಿರುದ್ಧವೂ ದನಿ ಎತ್ತಬೇಕಿದೆ.
ನಂಜನಗೂಡು ದೇವಸ್ಥಾನದ ನೆಲಸಮದ ಕುರಿತು ರಾಜಕೀಯ ನಾಯಕರು ಟ್ವೀಟ್ ಮಾಡುವ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ:
ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ಮೈಸೂರು ಜಿಲ್ಲೆಯ 93 ದೇವಾಲಯಗಳ ಧ್ವಂಸಕ್ಕೆ ರಾಜ್ಯ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯೇ ಕಾರಣ. ಒಂದು ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದೇ? ಒಂದೆಡೆ ದೇಗುಲಗಳ ಧ್ವಂಸ ನಡೆಯುತ್ತಿದೆ. ಇನ್ನೊಂದೆಡೆ ಆಡಳಿತ ಪಕ್ಷದ ಮಿತ್ರಸಂಘಟನೆ ಹಿಂದೂ ಜಾಗರಣ ವೇದಿಕೆ ಹಾದಿಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದೆ! (1/4)
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 14, 2021
ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು @BJP4Karnataka ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು.
1/5 pic.twitter.com/809YTvCLha— Siddaramaiah (@siddaramaiah) September 11, 2021
You need to answer this @mepratap , it’s BJP government in India.
How did you allow this to happen?
Are you asking @narendramodi or @BSBommai ? https://t.co/nxAxDFdvw7— Lavanya Ballal Jain (@LavanyaBallal) September 9, 2021