ಡಾ.ಬಿ ಶ್ರೀಪಾದ್ ಭಟ್
⦁ ‘ಎನ್ಇಪಿ 2020’ ರ ಅಧ್ಯಾಯಗಳು 1.1, 1.4, 2.3, 3.4, 3.5, 4.44, 6.8, 6.16, 6.8, 6.9, 12.4, 14.4.2(ಬಿ), 21.9, 26.3 ಗಳಲ್ಲಿ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುರಿತು ಒಂದು ಸಾಲಿನ ಪ್ರಸ್ತಾಪವಿದೆ. ಆದರೆ ಇಡೀ ಕರಡು ಪ್ರತಿಯಲ್ಲಿ ಪ.ಜಾತಿ/ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಎಲ್ಲಿಯೂ ಶೈಕ್ಷಣಿಕ ಮೀಸಲಾತಿ ಕುರಿತು ಪ್ರಸ್ತಾಪವಿಲ್ಲ.
⦁ ಸ್ಕಾಲರ್ಶಿಪ್ಗಳ ಕುರಿತು ಪ್ರಸ್ತಾಪವಿಲ್ಲ. ಅಧ್ಯಾಯ 14.4.2(ಬಿ)ನಲ್ಲಿ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಣಕಾಸು ನೆರವು ನೀಡಬೇಕೆಂದು ಒಂದು ಸಾಲಿನ ಪ್ರಸ್ತಾಪ ಮಾಡುತ್ತದೆ. ಅಧ್ಯಾಯ 4.44ರಲ್ಲಿ ಮೆರಿಟ್ ಆಧಾರಿತ, ಸಮಾನ ಪ್ರವೇಶದ ಕುರಿತು ಹೇಳುತ್ತದೆ. ಅಧ್ಯಾಯ 5.2ರಲ್ಲಿ ನಾಲ್ಕು ವರ್ಷಗಳ ಸಂಯೋಜಿತ ಬಿ.ಎಡ್. ಶಿಕ್ಷಣಕ್ಕೆ ಮೆರಿಟ್ ಆಧಾರಿತ ಸ್ಕಾಲರ್ಶಿಪ್ ಕೊಡಬೇಕು ಎನ್ನುತ್ತದೆ.
⦁ ಅಧ್ಯಾಯ 6.16ರಲ್ಲಿ ಎಲ್ಲಾ ಮೆರಿಟ್ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ಸ್ಕಾಲರ್ಶಿಪ್ ಮೂಲಕ ಹಣಕಾಸು ನೆರವು ಕೊಡಬೇಕೆಂದು ಹೇಳುತ್ತದೆ. ಅಧ್ಯಾಯ 15.5 ರಲ್ಲಿ ಮೆರಿಟ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡುವುದರ ಮೂಲಕ ಬಿಎಡ್. ಕೋರ್ಸ್ ಗೆ ಸೆಳೆಯಬೇಕೆಂದು ಹೇಳುತ್ತದೆ.
⦁ ಅಧ್ಯಾಯ 17.9 ರಲ್ಲಿ ‘ರಾಷ್ಟ್ರೀಯ ಸಂಶೋದನೆ ಪ್ರತಿಷ್ಠಾನ’ವು ಮೆರಿಟ್ ವಿದ್ಯಾರ್ಥಿಗಳಿಗೆ ಅನುದಾನ ಕೊಡುವ ಪ್ರಸ್ತಾಪವಿದೆ.
ಮೇಲಿನ ಶಿಫಾರಸ್ಸುಗಳು ಸಂಪೂರ್ಣವಾಗಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ. ಪ್ರತಿ ಹಣಕಾಸು ನೆರವಿನ ಸಂದರ್ಭದಲ್ಲಿ ಮೆರಿಟ್ನ್ನು ಮಾನದಂಡವಾಗಿ ಬಳಸುವುದು ಭಾರತದಂತಹ ಜಾತಿ, ವರ್ಗ ತಾರತಮ್ಯದ ದೇಶದಲ್ಲಿ ಪ್ರತಿಗಾಮಿ ನೀತಿಯಾಗುತ್ತದೆ.
ಇನ್ನು ‘ಎನ್ಇಪಿ 2020’ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತರಬಯಸಿರುವ ಬದಲಾವಣೆ ಕುರಿತು ಗಮನ ಹರಿಸೋಣ.
ಶಾಲಾ ಶಿಕ್ಷಣದ ಕುರಿತು : ಇದನ್ನು 5+3+3+4 ಮಾದರಿಯಾಗಿ ಪ್ರಸ್ತಾಪಿಸಿದೆ.
ಪ್ರಸ್ತಾಪ : ಮೂರು ವರ್ಷಗಳ ( 4-6 ವಯಸ್ಸು) ಅಂಗನವಾಡಿ ಮತ್ತು ಎರಡು ವರ್ಷಗಳ (7-8) 1,2 ತರಗತಿಯನ್ನು ಒಗ್ಗೂಡಿಸಿ 5 ವರ್ಷಗಳ ‘ಬುನಾದಿ ಶಿಕ್ಷಣ’ವನು ಆರಂಭಿಕ ಹಂತವೆಂದು ಕರೆದಿದೆ. ಇದರ ಉದ್ದೇಶ 4-8 ವಯಸ್ಸಿನ ಮಕ್ಕಳಿಗೆ ಪಾಠ ಮಾಡುವುದಲ್ಲ, ಬದಲಿಗೆ ಅವರ ಸಾಮಾಜಿಕ ಕೌಶಲ್ಯವನ್ನು, ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಇತ್ಯಾದಿ ಎಂದು ಹೇಳಿದೆ.
ಮಿತಿಗಳು : ಆದರೆ 4 ರಿಂದ 6ನೆ ವಯಸ್ಸಿನ ಮಕ್ಕಳನ್ನು ಶಿಶು ಪಾಲನೆಗೆ, ಪೌಷ್ಟಿಕ ಆಹಾರ ಮತ್ತು ದೈಹಿಕವಾಗಿ ಸದೃಡಗೊಳಿಸುವುದರ ಕಡೆಗೆ ಬೆಳೆಸಬೇಕಾಗುತ್ತದೆ. ಈ ಕಾರ್ಯವನ್ನು ನಿಭಾಯಿಸುವ ಅಂಗನವಾಡಿ ಕಾರ್ಯಕರ್ತರು ಈ ಶಿಕ್ಷಣ ನೀತಿ ಬಯಸುವ ಶಿಕ್ಷಣದ ತರಬೇತಿ ಪಡೆದಿರುವುದಿಲ್ಲ. ಅವರಿಗೆ ಯಾರು ತರಬೇತಿ ಕೊಡುತ್ತಾರೆ? ಅಂಗನವಾಡಿ ಕಾರ್ಯಕರ್ತರಿಗೆ ವೃತ್ತಿಪರ ತರಬೇತಿ ಕೊಡಲು ಸರಕಾರಗಳು ಯಾವ ಸಿದ್ಧತೆ ಮಾಡಿಕೊಂಡಿವೆ? ಈ ಬದಲಾವಣೆಗಳನ್ನು ತರುವ ಉದ್ದೇಶವೇನು? ಇದರ ತರ್ಕವೇನು ಎಂದು ವಿವರಿಸಿಲ್ಲ. ಪೂರ್ವ ಪ್ರಾಥಮಿಕ ಶಿಶುಪಾಲನೆ ಜೊತೆಗೆ 1-2 ತರಗತಿಗಳನ್ನು ಜೋಡಿಸುವುದು ಸಮರ್ಪಕವಲ್ಲ. ಇದು ಮಕ್ಕಳ ಪೌಷ್ಟಿಕತೆಯ ಕಡೆಗಿನ ಆದ್ಯತೆಯನ್ನು ಕುಂಠಿತಗೊಳಿಸುತ್ತದೆ.
ಪ್ರಸ್ತಾಪ : ೩,೪,೫ ತರಗತಿಗಳನ್ನು (9-11 ವಯಸ್ಸು) ತರಬೇತಿ ಹಂತವೆಂತಲೂ 6,7,8 ಕ್ಲಾಸ್ಗಳನ್ನು (12-14 ವಯಸ್ಸು) ಮಾದ್ಯಮಿಕ ಶಿಕ್ಷಣ ಮತ್ತು 9,10,11,12 (15-18) ತರಗತಿಗಳನ್ನು ಪ್ರೌಡ ಶಿಕ್ಷಣವೆಂತಲೂ ವರ್ಗೀಕರಿಸಿದೆ. ಇನ್ನು ಮುಂದೆ ಪದವಿಪೂರ್ವ ಶಿಕ್ಷಣ (ಪಿಯುಸಿ) ಇರುವುದಿಲ್ಲ. ಮತ್ತು ಈ ಹೊಸದಾದ ಪ್ರೌಡ ಶಿಕ್ಷಣದಲ್ಲಿ ಮಾನವಿಕ ಮತ್ತು ವಿಜ್ಞಾನ ವಿಷಯಗಳನ್ನು 12ನೆ ತರಗತಿಯವರೆಗೂ ಕಲಿಯಬಹುದು.
ಮಿತಿಗಳು : ಇಲ್ಲಿ ವರ್ಗೀಕರಣದ ಅವಶ್ಯಕತೆಯನ್ನು ಸೂಕ್ತವಾಗಿ ವಿವರಿಸಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ, ಶಿಕ್ಷಕರಿಗೆ ಎನ್ಸಿಇಆರ್ಟಿ ರಚಿಸಿದ ಪಠ್ಯಗಳ ಮೂಲಕ ತರಬೇತಿ ಕೊಡುವ ನಿರ್ಧಾರವು ಸ್ಥಳೀಯತೆಯ ಮಹತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಬಹುಸಂಸ್ಕೃತಿಗೆ ಮಾರಕವಾಗುತ್ತದೆ. ಕರ್ನಾಟಕದ ಮೂಲೆಯ ಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ದೆಹಲಿಯ ಅಧಿಕಾರಶಾಹಿಯು ನವಉದಾರೀಕರಣದ ಪ್ರಭಾವದಲ್ಲಿ ರೂಪಿಸಿದ ಪಠ್ಯವನ್ನು ಕಲಿಯಬೇಕೆಂಬ ನಿರ್ಧಾರವು ಅತಾರ್ಕಿಕ ಮತ್ತು ಸ್ವತಂತ್ಯ ಶಿಕ್ಷಣಕ್ಕೆ ಪ್ರತಿಕೂಲ.
ಪ್ರಸ್ತಾಪ : 3,5,8 ತರಗತಿಗಳಿಗೆ ಕೇಂದ್ರೀಕೃತ ಸಾಮಾನ್ಯ ಪರೀಕ್ಷೆ ನಡೆಸಬೇಕೆಂದು ಶಿಫಾರಸ್ಸು ಮಾಡಿದೆ. ಮಕ್ಕಳ ಬುದ್ದಿಮಟ್ಟ, ಶೈಕ್ಷಣಿಕ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಲು ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ ‘ಪರಕ್’ (Performance Assessment, Review, and Analysis of Knowledge for Holistic Development) ಸ್ಥಾಪಿಸಲಾಗುವುದು.
ಮಿತಿಗಳು : ಆದರೆ 8-14ನೆ ವಯಸ್ಸಿನ ಮಕ್ಕಳನ್ನು ಈ ರೀತಿಯಾಗಿ ಕೇಂದ್ರೀಕರಣದ ಮೌಲ್ಯಮಾಪನಕ್ಕೆ ಒಳಪಡಿಸುವುದು ಅವರ ಕಲಿಕೆಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಸ್ಥಳೀಯ ಶಿಕ್ಷಕರು ಸಹ ತಮ್ಮ ಶಾಲೆಯ ಮಕ್ಕಳ ಉತ್ತರ ಪತ್ರಿಕೆಗಳನ್ನು, ಶೈಕ್ಷಣಿಕ ಬೆಳವಣಿಯನ್ನು ಮೌಲ್ಯಮಾಪನ ಮಾಡಲು ಸಮರ್ಥರಾಗಿರುತ್ತಾರೆ. ಒಂದೆಡೆ ಶಿಕ್ಷಕರ ನೇಮಕಾತಿ, ತರಬೇತಿ ಕುರಿತಾಗಿ ವಿವರವಾಗಿ ಬರೆಯುವ ಈ ನೀತಿಯು ಮತ್ತೊಂದೆಡೆ ಆ ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದನ್ನು ನಿರಾಕರಿಸುತ್ತದೆ. ಇದು ಬಲು ದೊಡ್ಡ ವಿರೋದಾಭಾಸ. ಆದರೆ ವಾಸ್ತವದಲ್ಲಿ ಸರಕಾರವು ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ, ತನ್ನ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ, ಉತ್ತಮ ಗುಣಮಟ್ಟದ ಬೋಧನೆಗೆ ಶ್ರಮಿಸುವುದಿಲ್ಲ. ಸರಕಾರಿ ಶಾಲೆಗಳನ್ನು ಎಲ್ಲಾ ಬಗೆಯಲ್ಲಿ ದುರ್ಬಲಗೊಳಿಸಲಾಗಿದೆ. ಇಂತಹ ಅನಾನುಕೂಲ ವಾತಾವರಣದಲ್ಲಿ ಓದುವ 8,9,10 ವಯಸ್ಸಿನ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಬೇಕು ಎನ್ನುವ ಶಿಫಾರಸ್ಸು ಅಮಾನವೀಯವಾಗಿದೆ. ಯಾವುದೇ ತಯಾರಿ ಇಲ್ಲದ ಮಕ್ಕಳು ಈ ಕೇಂದ್ರೀಕೃತ ಸಾಮಾನ್ಯ ಪರೀಕ್ಷೆಗಳಿಂದ ಅನಗತ್ಯವಾಗಿ ಒತ್ತಡಕ್ಕೆ ಸಿಲುಕುತ್ತಾರೆ. ಉತ್ತಮ ಗುಣಮಟ್ಟದ ವ್ಯಾಸಂಗಕ್ರಮ ರೂಪಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಆ ಮೂಲಕ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಸರಕಾರದ ಮೊದಲ ಆದ್ಯತೆಯಾಗಿರಬೇಕಿತ್ತು ಮತ್ತು ಇದನ್ನು ಕಾರ್ಯಗತಗೊಳಿಸುವುದರ ಕುರಿತು ಶಿಕ್ಷಣ ನೀತಿಯು ಒತ್ತು ನೀಡಬೇಕಿತ್ತು. ಆದರೆ ಇವೆಲ್ಲವನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಮಕ್ಕಳನ್ನು ನೇರವಾಗಿ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ತಳ್ಳುವುದು, ಅವರ ಶೈಕ್ಷಣಿಕ ಬೆಳವಣಿಗೆಯನ್ನು ರಾಷ್ಟ್ರಮಟ್ಟದಲ್ಲಿ ‘ಪರಕ್’ ಎನ್ನುವ ಸಂಸ್ಥೆಯ ಮೂಲಕ ಮೌಲ್ಯಮಾಪನ ಮಾಡುವುದು ಅನಾಹುತಕಾರಿ. ಇದರಿಂದ ಯಾವುದೇ ಸೌಕರ್ಯಗಳಿಲ್ಲದ, ಸಾಮಾಜಿಕ-ಆರ್ಥಿಕ ಬೆಂಬಲವಿಲ್ಲದ ತಳಸಮುದಾಯದ, ಬಡಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಉಳ್ಳವರು, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಕ್ಕಳು ಮಾತ್ರ ಶಿಕ್ಷಣ ಪಡೆಯುತ್ತಾರೆ. ಶಿಕ್ಷಣ, ವ್ಯಾಸಂಗ ಕ್ರಮವೆಂದರೆ ಅದು ಪರೀಕ್ಷಾ ಪದ್ದತಿಯನ್ನು ಆಧರಿಸಬೇಕು ಎನ್ನುವುದು ತಪ್ಪು ಕಲ್ಪನೆ. ಇಲ್ಲಿ ಪರೀಕ್ಷೆ ಎನ್ನುವುದು ಒಂದು ಪ್ರಕ್ರಿಯೆ ಮಾತ್ರ. ಕಡೆಗೂ ಮುಖ್ಯವಾಗುವುದು ಮಕ್ಕಳ ಕಲಿಕಾ ಕ್ರಮ ಮತ್ತು ಶಿಕ್ಷಕರ ಬೋಧನ ಕ್ರಮ. ಇದರ ಕುರಿತು ಮಾತನಾಡುವ ಈ ಶಿಕ್ಷಣ ನೀತಿ ಮರಳಿ ಪರೀಕ್ಷೆಯನ್ನು ಮುಖ್ಯವಾದ ಅಂಶವೆಂದು ಅವೈಜ್ಞಾನಿಕವಾಗಿ ನಿರ್ಧರಿಸುತ್ತದೆ. ಇದು ಆಪೇಕ್ಷಣೀಯವಲ್ಲ.
ಪ್ರಸ್ತಾಪ : 9-12 ನೆ ತರಗತಿಗಳಿಗೆ ರಾಷ್ಟ್ರೀಯ ಮಟ್ಟದ ಸೆಮಿಸ್ಟರ್ ಪರೀಕ್ಷೆಗಳನ್ನು ಶಿಫಾರಸ್ಸು ಮಾಡುತ್ತದೆ.
ಮಿತಿಗಳು : ಈ ನೀತಿಯು ಶೈಕ್ಷಣಿಕ ವ್ಯವಸ್ಥೆಯೆಂದರೆ ಅದು ಪರೀಕ್ಷೆಗಳನ್ನು ನಡೆಸುವುದು ಎನ್ನುವ ಕಲ್ಪನೆಯಲ್ಲಿರುವಂತಿದೆ. 9-12ನೆ ತರಗತಿಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಪ್ರವೇಶ ಪರೀಕ್ಷೆ ಬರೆಯಬೇಕೆನ್ನುವ ಚಿಂತನೆ ಇಡೀ ಮಕ್ಕಳ ಬವಿಷ್ಯಕ್ಕೆ ಮಾರಕವಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ, ಕಳಪೆ ಗುಣಮಟ್ಟದ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಶೇ.70 ಪ್ರಮಾಣದ ಮಕ್ಕಳು ಎಲ್ಲಾ ಸೌಲಭ್ಯಗಳನ್ನು ಹೊಂದಿದ ಕುಟುಂಬದ ಮಕ್ಕಳೊಂದಿಗೆ ಸ್ಪರ್ಧೆ ನಡೆಸಲು ವಿಫಲರಾಗುತ್ತಾರೆ ಮತ್ತು ಶಿಕ್ಷಣದಿಂದ ಹೊರಗುಳಿಯುತ್ತಾರೆ. ಈ ನಿರ್ಧಾರವು 54 ಪರಿಚ್ಚೇದಗಳನ್ನೊಳಗೊಂಡ ‘ಮಕ್ಕಳ ಹಕ್ಕಿಗಾಗಿ ವಿಶ್ವಸಂಸ್ಥೆಯ ಸಮಾವೇಶ’ ದ ನೀತಿಗಳಿಗೆ ವಿರುದ್ಧವಾಗಿದೆ. ಮಕ್ಕಳು ತಮ್ಮ ಹಕ್ಕನ್ನ ಸಂಪೂರ್ಣವಾಗಿ ಅನುಭವಿಸುವಂತೆ ಸರಕಾರ ಮತ್ತು ಪೋಷಕರು ಎಲ್ಲ ಬಗೆಯ ಕಾರ್ಯವಿಧಾನಗಳನ್ನ ಜಾರಿಗೊಳಿಸಬೇಕು ಎಂಬುದು ಅದರ ನೀತಿಯಾಗಿದೆ. ಅದರ ಪರಿಚ್ಚೇದ 28ರ ಅನುಸಾರ ಪ್ರತಿ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಪರಿಚ್ಚೇದ 3ರ ಅನುಸಾರ ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ಕೊಡಬೇಕು. ಪರಿಚ್ಚೇದ 12ರ ಅನುಸಾರ ತಮಗೆ ಪರಿಣಾಮ ಬೀರುವ ವಿಷಯಗಳಲ್ಲಿ ಮಕ್ಕಳ ಅಬಿಪ್ರಾಯ, ದೃಷ್ಟಿಕೋನವನ್ನ ಪರಿಗಣಿಸಬೇಕು. ಆದರೆ ಶಿಕ್ಷಣ ಮಂತ್ರಿ ಸುರೇಶ್ ಕುಮಾರ ಅವರ 7ನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ ನೀತಿಯ ಉಲ್ಲಂಘನೆಯಾಗಿದೆ. ಜೊತೆಗೆ ಭಾರತ ಸಂವಿದಾನದ ಪರಿಚ್ಚೇದ 45, 21ಎರ ಆಶಯಗಳನ್ನೂ ಕಡೆಗಣಿಸುತ್ತದೆ.
‘ಆರ್ಟಿಇ 2009’ ಕಾಯಿದೆಯ ಪರಿಚ್ಚೇದ 4 ರ ಅನುಸಾರ ‘೬ನೆ ವಯಸ್ಸಿನ ನಂತರವೂ ಶಾಲೆಗೆ ದಾಖಲಾಗದ ಮಕ್ಕಳಿಗೆ ಅಥವಾ12ನೆ ವಯಸ್ಸಿಗಿಂತ ಮೊದಲು ಶಿಕ್ಷಣವನ್ನ ಅರ್ಧದಲ್ಲಿಯೆ ಮೊಟಕುಗೊಳಿಸುವ ಮಕ್ಕಳಿಗೆ ವಿಶೇಷ ಸೌಲಭ್ಯ ಕೊಡಬೇಕು, ಅಗತ್ಯ ಕಾರ್ಯಯೋಜನೆಗಳನ್ನ ರೂಪಿಸಬೇಕು’ ಎಂದು ವಿವರಿಸುತ್ತದೆ. ಆದರೆ ಈ ಶಿಫಾರಸ್ಸು ಪರಿಚ್ಚೇದ 4ರ ಆಶಯಗಳಿಗೆ ವಿರುದ್ಧವಾಗಿದೆ
ಮುಖ್ಯವಾಗಿ ಪಬ್ಲಿಕ್ ಪರೀಕ್ಷೆಯ ಮೂಲಕ ಮಕ್ಕಳಲ್ಲಿ ಪರೀಕ್ಷೆಯ ಭಯವನ್ನ ನಿವಾರಿಸುತ್ತೇವೆ ಎನ್ನುವ ಹೇಳಿಕೆ ವಿವೇಚನೆರಹಿತವಾಗಿದೆ. ಪರೀಕ್ಷೆಗಳ ಮೂಲಕ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನವನ್ನ ಉತ್ತಮಪಡಿಸುವ ನಿರ್ಧಾರವು ಸಹ ಅವಿವೇಕದ ಸಂಗತಿಯಾಗಿದೆ. ಉತ್ತಮ ಬೋಧನೆ, ಗುಣಮಟ್ಟದ ಕಲಿಕೆಯನ್ನ ರೂಪಿಸದೆ, ಶಿಕ್ಷಕರನ್ನ ನೇಮಕಾತಿ ಮಾಡಿಕೊಳ್ಳದೆ, ಅತ್ಯುತ್ತಮ ಪಠ್ಯಗಳನ್ನ ಸಿದ್ಧಪಡಿಸದೆ, ಪೂರ್ವ ಸಿದ್ದತೆಗಳನ್ನ ಮಾಡಿಕೊಳ್ಳದೆ ಪಬ್ಲಿಕ್ ಪರೀಕ್ಷೆಗಳನ್ನ ನಡೆಸುವುದು ಬಡ ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಪ್ರಸ್ತಾಪ : 6ನೆ ತರಗತಿಯ ಮಕ್ಕಳಿಗೆ (12ನೇ ವಯಸ್ಸು) ವೃತ್ತಿಪರ ಶಿಕ್ಷಣ ಕಲಿಸಲು ಶಿಫಾರಸ್ಸು.
ಮಿತಿಗಳು : ಇಲ್ಲಿ 12ನೆ ವಯಸ್ಸಿನ ಮಕ್ಕಳಿಗೆ ವೃತ್ತಿಪರ ಶಿಕ್ಷಣವನ್ನು (vocational course) ಶಿಫಾರಸ್ಸು ಮಾಡಲಾಗಿದೆ. ಅದನ್ನು ಕಾನೂನುಬದ್ದಗೊಳಿಸಬೇಕೆಂದು ಹೇಳಿದೆ. ಇದು ನಿಜಕ್ಕೂ ಅಘಾತಕಾರಿಯಾಗಿದೆ. ತನ್ನ ಆರಂಭದ ಆಶಯದಲ್ಲಿ ಮಾತನಾಡುವಾಗ ಎಲ್ಲಾ ಮಕ್ಕಳಿಗೂ 2020ರ ಉಳಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬೇಕೆನ್ನುವುದು ತನ್ನ ಉದ್ದೇಶ ಎಂದು ಹೇಳುವ ಈ ನೀತಿಯು ಮಕ್ಕಳಿಗೆ ಈ ವೃತ್ತಿಪರ ಶಿಕ್ಷಣವನ್ನು ಕಡ್ಡಾಯಗೊಳಿಸುವುದರ ಮೂಲಕ ತನ್ನ ಆಶಯಕ್ಕೇ ಧಕ್ಕೆ ಉಂಟು ಮಾಡಿದೆ. ಏಕೆಂದರೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಕ್ಕಳ ಏಕಾಗ್ರತೆಯನ್ನು ಬದಲಿಸುವ ಈ ವೃತ್ತಿಪರ ಕೋರ್ಸ್ ಗಳಿಂದ ದಲಿತ, ಹಿಂದುಳಿದ ಕುಟುಂಬದ ಮಕ್ಕಳು, ಅಂಚಿನಲ್ಲಿರುವ ಸಮುದಾಯಗಳು, ಬಡಕುಟುಂಬದ ಮಕ್ಕಳು ಇತಿಹಾಸ, ಭಾಷೆ, ರಾಜಕೀಯ ಶಾಸ್ತ್ರ, ಸಾಮಾಜ ಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಯಿಂದ ವಂಚಿತರಾಗುತ್ತಾರೆ. ಬದಲಿಗೆ ಬಾಲ್ಯದಲ್ಲಿಯೆ ತಮ್ಮ ಕುಲಕಸುಬುಗಳಿಗೆ ಮರಳುತ್ತಾರೆ ಹಾಗೂ ಈ ವೃತ್ತಿಪರ ಶಿಕ್ಷಣದ ಮೂಲಕ ಟ್ರೇಡ್ ಕೋರ್ಸ್ಗಳನ್ನು ಕಲಿತು ಬಂಡವಾಳಶಾಹಿಗಳ ಗುಲಾಮರಾಗಿ ರೂಪುಗೊಳ್ಳುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಗೆ ಸಹಕಾರಿಯಾಗುವ ಈ ನೀತಿಯು ಸಮತಾವಾದದ ಆಶಯಗಳಿಗೆ ಧಕ್ಕೆ ತರುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ಅತ್ತ ಮೋದಿ ನೇತೃತ್ವದ ಬಿಜೆಪಿ ಸರಕಾರವು ತನ್ನ ಮೊದಲನೆ ಅವಧಿಯಲ್ಲಿ ತಿದ್ದಪಡಿ ಮಾಡಿದ ‘ಬಾಲಕಾರ್ಮಿಕ ಪದ್ದತಿ (ತಿದ್ದಪಡಿ) ಮಸೂದೆ ೨೦೧೬’ರ ಅನುಸಾರ ೧೪ನೆ ವಯಸ್ಸಿನೊಳಗಿನ ಮಕ್ಕಳನ್ನು ದುಡಿತಕ್ಕೆ ಬಳಸಿಕೊಳ್ಳುವುದು ಅಪರಾಧ ಎಂದು ಹೇಳಲಾಗಿದೆ. ಆದರೆ ಒಂದು ವೇಳೆ ಕುಲ ಕಸುಬಿನಲ್ಲಿ ಸಹಾಯ ಮಾಡಬೇಕಾದಂತಹ ಸಂದರ್ಭ ಬಂದರೆ ಆ ಮಕ್ಕಳು ತಮ್ಮ ಕುಟುಂಬ ಕಸುಬುನ್ನು ಮುಂದುವರೆಸಬಹುದು ಎಂದು ಹೇಳುತ್ತದೆ. ಇದು ನೇರವಾಗಿ ಜಾತಿ ಅಸಮಾನತೆಯ ಭಾರತದಲ್ಲಿ ತಳಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುತ್ತದೆ. ಪರಿಸ್ಥಿತಿಯ ಅನಿವಾರ್ಯತೆಗೆ ಬಲಿಯಾಗುವ ಮಕ್ಕಳು ಶಿಕ್ಷಣದಿಂದ ಡ್ರಾಪ್ ಆಗಿ ಬಾಲಕಾರ್ಮಿಕರಾಗಿ ತಮ್ಮ ಕುಲಕಸುಬುಗಳಿಗೆ ಮರಳುತ್ತಾರೆ. ಈ ಶಿಕ್ಷಣ ನೀತಿಯ ಮೇಲಿನ ವೃತ್ತಿಪರ ಶಿಕ್ಷಣದ ಪ್ರಸ್ತಾಪವು ಈ ‘ಬಾಲಕಾರ್ಮಿಕ ಪದ್ದತಿ (ತಿದ್ದಪಡಿ) ಮಸೂದೆ ೨೦೧೬’ಯೊಂದಿಗೆ ಹೊಂದಿಕೊಳ್ಳುತ್ತದೆ. ಇದು ಅಪೇಕ್ಷಣೀಯವಲ್ಲ.
(ಮುಂದುವರಿಯುವುದು..)
ರಾಷ್ಟ್ರೀಯ ಶಿಕ್ಷಣ ನೀತಿ-2021 ಕುರಿತ ಚರ್ಚೆಯ ಹಿನ್ನೆಲೆಯಲ್ಲಿ ಓದುಗರು ತಮ್ಮ ಅಭಿಪ್ರಾಯಗಳನ್ನು ಕಳಿಸಬಹುದು. ಬರಹ 400-500 ಪದಗಳ ಮಿತಿಯಲ್ಲಿರಲಿ. ಇಮೇಲ್: pratidhvaninews@gmail.com