
ಬೆಂಗಳೂರು: ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ವಿಶೇಷ ತನಿಖಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಅಪ ರಾಧಿಕ ಸಂಚಿನಲ್ಲಿ ಪಾತ್ರವಹಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮೂಲದ ರಾಜ್ಯದ ಬಿಜೆಪಿ ಪ್ರಭಾವಿ ಮುಖಂಡ ಹಾಗೂ ಹಿರಿಯ ಶಾಸಕನಿಗೆ ಏಡ್ಸ್ ಸೋಂಕು ಹಬ್ಬಿಸಲು ಚುಚ್ಚು ಮದ್ದು ನೀಡುವ ಸಂಚನ್ನು ಆರೋಪಿಗಳು ರೂಪಿಸಿದ್ದರು. ಈ ಸಂಚಿನಲ್ಲಿ ಇನ್‌ಸ್ಪೆಕ್ಟರ್ ಅಯ್ಯಣ್ಣ ಪ್ರಮುಖ ಪಾತ್ರವಹಿಸಿದ್ದ ಸಂಗತಿ ಗೊತ್ತಾಯಿತು. ಹಾಗೆಯೇ ವಿಚಾರಣೆ ವೇಳೆ ದೂರುದಾರರು ಹಾಗೂ ಕೆಲ ಸಾಕ್ಷಿದಾರರು ಕೂಡ ಅಯ್ಯಣ್ಣ ಕುರಿತು ಮಾಹಿತಿ ನೀಡಿದ್ದರು. ಅಂತೆಯೇ ಐಪಿಸಿ 120ಬಿ (ಅಪರಾಧಿ ಸಂಚು) ಆರೋಪದಡಿ ಐಯ್ಯಣ್ಣರವನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




