ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರು ಹಾಗು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲು ಹೋದಾಗ ನಮ್ಮ ರಾಜ್ಯದ ಸಚಿವರನ್ನು ಕೇಂದ್ರದ ಬಿಜೆಪಿ ನಾಯಕರು ಭೇಟಿ ಆಗಿಲ್ಲ ಎನ್ನುವುದು ಚರ್ಚೆಗೆ ನಾಂದಿ ಹಾಡಿದೆ. ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಪ್ರತಿನಿತ್ಯ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ, ಬೈಯ್ಯುತ್ತಲೇ ಇದ್ದರೆ ಪ್ರಧಾನಿ ಏಕೆ ಸಿಎಂ ಭೇಟಿಯಾಗ್ತಾರೆ..? ಎಂದು ಹೇಳಿದ್ರು. ಇದಕ್ಕೆ ಉತ್ತರ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ದ ಕಿಡಿಕಾರಿದ್ದಾರೆ.
ಕರುನಾಡಿನ ಆರೂವರೆ ಕೋಟಿ ಜನರಿಗೆ ಅಪನಾಮ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನ. ರಾಜಕೀಯ ಅಸ್ತಿತ್ವಕ್ಕಾಗಿ ಗುಲಾಮಿ ಮನೋಭಾವ ತೋರಿಸಿದ್ದಕ್ಕೆ ವಿಷಾಧನೀಯ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ನನಗೆ ವೈಯುಕ್ತಿಕವಾಗಿ ಪ್ರೀತಿ ಅಥವಾ ದ್ವೇಷ ಇಲ್ಲ. ವೈಯುಕ್ತಿಕವಾಗಿ ಅವರೇನು ನನಗೆ ಹಾನಿ ಮಾಡಿಲ್ಲ. ಆದರೆ ಕನ್ನಡಿಗರಿಗೆ ಮಾಡುವ ಅನ್ಯಾಯ ಕಂಡು ಕಣ್ಮುಚ್ಚಿ ಕೂರಲು ಆಗಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿಯ ಗುಲಾಮರಲ್ಲ ಎಂದಿದ್ದಾರೆ.
ಈ ಹಿಂದೆ ಬಿಜೆಪಿ ಬಿಟ್ಟಿದ್ದಾಗ ಮೋದಿಗೆ ಬೈದಿಲ್ವಾ..?
ಬಿಜೆಪಿ ತೊರೆದಿದ್ದ ಬಿ.ಎಸ್ ಯಡಿಯೂರಪ್ಪ ಪ್ರಧಾನಿ ಮೋದಿ ಹಾಗುಅಡ್ವಾಣಿಯಂತ ಹಿರಿಯರನ್ನ ಹೇಗೆ ಬೈದಾಡಿದ್ದಾರೆ ಅನ್ನೋದು ರಾಜ್ಯದ ಜನರು ನೋಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನ ಮೂರೊತ್ತು ಹಾಡಿ ಹೊಗಳಿದ್ರೂ ಬಿ.ಎಸ್ ಯಡಿಯೂರಪ್ಪಗೆ ಒಂದು ಅಪಾಯಿಂಟ್‌ಮೆಂಟ್ ಕೊಡುತ್ತಿಲ್ಲ. ರಾಜ್ಯದಲ್ಲಿ ರಾಜಾಹುಲಿ ಎನಿಸಿಕೊಳ್ಳುವ ಬಿ.ಎಸ್ ಯಡಿಯೂರಪ್ಪ ಮೋದಿ ಮುಂದೆ ಇಲಿಯಂತೆ ವರ್ತಿಸೋದು ಅವರ ವ್ಯಕ್ತಿತ್ವಕ್ಕೆ ಭೂಷಣವಲ್ಲ ಎಂದು ಕಿಚಾಯಿಸಿದ್ದಾರೆ.
ಮೋದಿ ಕುಮಾರಸ್ವಾಮಿಯನ್ನು ಅಪ್ಪಿ, ಬೆನ್ನು ತಟ್ಟಿದ್ಯಾಕೆ..?
ಈ ಹಿಂದೆ ಆರ್‌ಎಸ್‌ಎಸ್ ಹಾಗು ನರೇಂದ್ರ ಮೋದಿ ಬಗ್ಗೆ ಬೈದಾಡಿದ್ದ ಹೆಚ್.ಡಿ ಕುಮಾರಸ್ವಾಮಿ ಕರೆಯಿಸಿ ಬೆನ್ನು ತಟ್ಟುತ್ತಾರೆ. ಈ ಹಿಂದೆ ಕುಮಾರಸ್ವಾಮಿ ಬೈದಾಡಿದ್ದು ಮೋದಿಗೆ ತಿಳಿದಿರಲಿಲ್ಲವೇ.. ಅಡ್ವಾಣಿ, ಬಿ.ಎಸ್ ಯಡಿಯೂರಪ್ಪರಂತ ಹಿರಿಯರನ್ನ ಮೋದಿ ನಡೆಸಿಕೊಳ್ಳುವ ರೀತಿ ಬಗ್ಗೆ ನನಗೆ ತೀವ್ರ ಅಸಮಧಾನ ಇದೆ ಎಂದಿರುವ ಸಿಎಂ ಸಿದ್ದರಾಮಯ್ಯ, ನಿಮಗೆ ತೃಪ್ತಿ ಆಗುವಷ್ಟು ನಿಮ್ಮ ನಾಯಕರನ್ನ ಓಲೈಸಿ, ಬೇಕಿದ್ರೆ ಕಾಲುಹಿಡೀರಿ, ಅದರಿಂದಾದರೂ ರಾಜ್ಯದ ಜನತೆಗೆ ನ್ಯಾಯ ಸಿಗಲಿ ಎಂದು ದಾಳಿ ಮಾಡಿದ್ದಾರೆ.

ಬರ ಪರಿಹಾರವಾಗಿ 17,900 ಕೋಟಿ ಪರಿಹಾರಕ್ಕೆ ಮನವಿ..
ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕೇಂದ್ರ ಸರ್ಕಾರದಿಂದ ₹17,900 ಕೋಟಿ ಪರಿಹಾರ ಕೇಳಲಾಗಿದೆ. ರಾಜ್ಯದಲ್ಲಿ ಸುಮಾರು ₹33 ಸಾವಿರ ಕೋಟಿಗೂ ಹೆಚ್ಚು ಬೆಳೆ ನಷ್ಟವಾಗಿದೆ. ದೇಶದ ಐದಾರು ರಾಜ್ಯಗಳಲ್ಲಿ ಮಳೆ ಬಂದಿಲ್ಲ. ನಾವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ತಂಡವೂ ರಾಜ್ಯಕ್ಕೆ ಬಂದು ಪರಿಶೀಲನೆ ಮಾಡಿ ಹೋಗಿದೆ. ಆದರೆ ಪ್ರಧಾನ ಮಂತ್ರಿಗಳು ಭೇಟಿಯಾಗೋಕೆ ಸಿಗ್ತಿಲ್ಲ. ಕೇಂದ್ರದಲ್ಲಿರೋ ಕೃಷಿ, ಗೃಹ ಮಂತ್ರಿಗಳೂ ನಮ್ಮ ಕೈಗೆ ಸಿಗ್ತಿಲ್ಲ. ಸಚಿವ ಕೃಷ್ಣ ಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಹೋದರೂ ಭೇಟಿ ಆಗಿಲ್ಲ. ಕೇವಲ ಅಧಿಕಾರಿಗಳನ್ನ ಮಾತ್ರ ಭೇಟಿ ಮಾಡಿ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಅವರು ಬರ ಅಧ್ಯಯನ ಮಾಡೋಕೆ ಹೊರಟಿದಾರೆ. ಇಲ್ಲಿ ಅಧ್ಯಯನ ಮಾಡೋ ಬದಲು ಡೆಲ್ಲಿಗೆ ಹೋಗಿ ಕುಳಿತು ದುಡ್ಡು ಕೊಡಿಸಲಿ. ಸೆಂಟ್ರಲ್‌ನಿಂದ ಬಂದಿದ್ದ ತಂಡಕ್ಕೆ ನಾವು ಈಗಾಗಲೇ ಬರದ ಬಗ್ಗೆ ತೋರಿಸಿದ್ದೇವೆ. ಬೆಳೆ ನಷ್ಟದ ಬಗ್ಗೆ ಮಾಹಿತಿ ನೀಡಿದ್ದೇವೆ. ಇಲ್ಲಿ ಅಧ್ಯಯನ ಮಾಡಿ ಏನು ಮಾಡುತ್ತಾರೆ..? 26 ಜನ ಸಂಸದರಿದ್ದಾರೆ. ಒಬ್ಬರೂ ಪ್ರಯತ್ನ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಸಹಾಯ ಕೊಡಿಸೋಕೆ ಪ್ರಯತ್ನ ಮಾಡಲಿ ಅಂತಾ ಆಗ್ರಹ ಕೂಡ ಮಾಡಿದ್ದಾರೆ.






