ಬಾಗಲಕೋಟೆ : ಕೋಲಾರದಲ್ಲಿ ಸ್ಪರ್ಧೆ ಬೇಡ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಹೈಕಮಾಂಡ್ ಸೂಚನೆ ನೀಡಿರುವ ಬೆನ್ನಲ್ಲೇ ಮಾಜಿ ಸಿಎಂ ಮತ್ತೆ ಬಾದಾಮಿ ಕ್ಷೇತ್ರದತ್ತ ಒಲವು ತೋರಿದ್ದಾರೆ. ಇಂದು ಮಧ್ಯಾಹ್ನ 2:!5ಕ್ಕೆ ಸರಿಯಾಗಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರವನ್ನು ತಲುಪಲಿದ್ದಾರೆ .ತೋಗುಣಶಿ ಗ್ರಾಮಕ್ಕೆ ಭೇಟಿ ನೀಡಲಿರುವ ವಿಪಕ್ಷ ನಾಯಕ ಬಾದಾಮಿ-ಕೆರೂರು ಶಾಶ್ವತ ಕುಡಿಯುವ ನೀರು ಯೋಜನೆಯ ಪಂಪ್ಹೌಸ್ಗೆ ಬಟನ್ ಒತ್ತುವ ಮೂಲಕ ಚಾಲನೆ ನೀಡಲಿದ್ದಾರೆ.
ಇಂದು ಬಾದಾಮಿಯ ರಾಮದುರ್ಗ ಸರ್ಕಲ್ನಿಂದ ಎಪಿಎಂಸಿವರೆಗೆ ಒಂದೂವರೆ ಕಿಲೋ ಮೀಟರ್ವರೆಗೆ ಸಿದ್ದರಾಮಯ್ಯ ರೋಡ್ ಶೋ ನಡೆಸಲಿದ್ದಾರೆ. ಇದಾದ ಬಳಿಕ ಮೂರು ಗಂಟೆಗೆ ಸಿದ್ದರಾಂಯ್ಯ ಕೆರೂರು ಶಾಶ್ವತ ಕುಡಿಯುವ ನೀರಿನ ಯೋಜನೆ ಸೇರಿದಂತೆ ಒಟ್ಟೂ 500 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮಾಡಲಿದ್ದಾರೆ.
ಸಿದ್ದರಾಮಯ್ಯರಿಗೆ ಕೋಲಾರದಲ್ಲಿ ಸ್ಪರ್ಧೆ ಬೇಡ ಎಂದು ಹೇಳಿದ ಹಿನ್ನೆಲೆಯಲ್ಲಿ ಬಾದಾಮಿಯ ಸಿದ್ದು ಅಭಿಮಾನಿಗಳಲ್ಲಿ ಮತ್ತೆ ಉತ್ಸಾಹ ಚಿಗುರೊಡೆದಿದೆ. ಹೀಗಾಗಿ ಸಿದ್ದರಾಮಯ್ಯರಿಗೆ ಬಾದಾಮಿ ಕ್ಷೇತ್ರವೇ ಸೇಫ್ ಎಂದು ಸಾಬೀತುಪಡಿಸುವ ಸಲುವಾಗಿ ಸಿದ್ದರಾಮಯ್ಯ ಆಪ್ತರು ಇಂದು ರೋಡ್ ಶೋ ಸಂದರ್ಭದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇಂದಿನ ಬೃಹತ್ ಕಾರ್ಯಕ್ರಮಗಳಲ್ಲಿ 30 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಲು ಸಿದ್ಧತೆ ನಡೆಸಿದ್ದಾರೆ. ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದರೂ ಅದರ ಜೊತೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿಯೂ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.