ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಮಾಡುವುದು 1 ವಾರಗಳ ಕಾಲ ತಡವಾಗಿತ್ತು. ಅದಕ್ಕೆ ಕಾರಣ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನಡುವೆ ನಡೆದಿದ್ದ ಮುಖ್ಯಮಂತ್ರಿಗಾದಿ ಪೈಪೋಟಿ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಮುಖನೋಡಿಕೊಂಡು ಕರ್ನಾಟಕದ ಜನರು ಮ್ಯಾಂಡೇಟ್ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಬೆಂಬಲಿಗರು ಹೈಕಮಾಂಡ್ ಎದುರು ಹೇಳಿದರೆ, ಡಿಕೆ ಶಿವಕುಮಾರ್ ಇಡೀ ರಾಜ್ಯದಲ್ಲಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ ಗೆಲುವಿಗೆ ಕಾರಣಾಗಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಡಿಕೆಶಿ ಬಣ ದೆಹಲಿಯಲ್ಲಿ ಬೀಡು ಬಿಟ್ಟಿತ್ತು. ಈ ನಡುವೆ ಹೈಕಮಾಂಡ್ ಒಂದು ಸೂತ್ರ ರಚನೆ ಮಾಡಿದೆ, ಅದರಂತೆ ನಾನು ಒಪ್ಪಿಕೊಂಡಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿಕೊಂಡಿದ್ದರು. ಅದೇನು ಸೂತ್ರ ಎನ್ನುವುದನ್ನು ಬಿಟ್ಟು ಕೊಟ್ಟಿರಲಿಲ್ಲ. ಆ ಬಳಿಕ ಮಾಧ್ಯಮಗಳಿಗೆ ಲೀಕ್ ಆಗಿದ್ದು ಏನಂದರೆ, ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗುವುದು. ಆ ಬಳಿಕ ಕೊನೆಯ ಎರಡೂವರೆ ವರ್ಷ ಡಿ.ಕೆ ಶಿವಕುಮಾರ್ ಸಿಎಂ ಆಗುವುದು ಎಂದು. ಆದರೆ ಇದೀಗ ಸಂಪೂರ್ಣ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಎಂದು ರಾಯರೆಡ್ಡಿ ಗುಡುಗಿದ್ದಾರೆ.
ಸಿಎಂ ಕಚ್ಚಾಟಕ್ಕೆ ಬ್ರೇಕ್ ಹಾಕಿದ್ದ ಕಾಂಗ್ರೆಸ್ ಹೈಕಮಾಂಡ್!
ಡಿ.ಕೆ ಶಿವಕುಮಾರ್ ಬಣದ ಸಂದೇಶದ ಮಾತುಗಳಿಗೆ ತಿರುಗಿ ಬಿದ್ದಿದ್ದ ಸಿದ್ದರಾಮಯ್ಯ ಸೇನೆ ಸಂಪೂರ್ಣ ಅಧಿಕಾರವನ್ನು ಸಿದ್ದರಾಮಯ್ಯ ಅವರೇ ಪೂರೈಸುತ್ತಾರೆ ಎಂದು ಬಹಿರಂಗ ಹೇಳಿಗಳನ್ನು ನೀಡುವುದಕ್ಕೆ ಶುರು ಮಾಡಿದ್ದರು. ಹೇಳಿಕೆಗಳಿಂದ ಸರ್ಕಾರಕ್ಕೆ ಮುಜುಗರ ಆಗುತ್ತಿದ್ದನ್ನು ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರೂ ಎಲ್ಲಿಯೂ ಬಹಿರಂಗ ಹೇಳಿಕೆ ನೀಡದಂತೆ ಕಟ್ಟು ನಿಟ್ಟಿನ ಎಚ್ಚರಿಕೆ ಸಮದೇಶ ರವಾನೆ ಮಾಡಿತ್ತು. ಅಂದಿನಿಂದ ಯಾರೊಬ್ಬರೂ ಮಾತನಾಡಿರಲಿಲ್ಲ. ಆದರೆ ಮಂಗಳವಾರ ಸದನದಲ್ಲಿ ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಮಾತಿನ ನಡುವೆ ಸಿದ್ದರಾಮಯ್ಯ ಐದೂ ವರ್ಷ ಸಿಎಂ ಆಗಿ ಇರ್ತಾರೆ ಎಂದಿದ್ದಾರೆ. ಸಿಎಂ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ಬಸವರಾಜ ರಾಯರೆಡ್ಡಿ ಹೇಳಿಕೆ ಅಚ್ಚರಿಗೂ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಗೂ ಸೊಪ್ಪು ಹಾಕದೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ಯಾಕೆ ಎನ್ನುವ ಆಶ್ಚರ್ಯದ ಸೂಚನೆ ಮೂಡುವಂತಾಗಿದೆ.
ಡಿಕೆ ಶಿವಕುಮಾರ್ ಬಣ ಏನು ಮಾಡುತ್ತೆ..? ಈವಾಗ..?
ಈ ಹಿಂದೆ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂದು ಪದೇ ಪದೇ ಹೇಳಿಕೆಗಳು ಹೊರ ಬಿದ್ದಿದ್ದವು. ಸಚಿವ ಎಂ.ಬಿ ಪಾಟೀಲ್, ಹೆಚ್.ಸಿ ಮಹದೇವಪ್ಪ ಮಾತನಾಡಿದ್ದರು. ಆ ಬಳಿಕ ಎಂಬಿ ಪಾಟೀಲ್ ಜೊತೆಗೆ ಡಿ.ಕೆ ಸುರೇಶ್ ವಾಕ್ಸಮರ ನಡೀತು ಅನ್ನೋ ಸುದ್ದಿ ಹೊರಬಿದ್ದಿತ್ತು. ಏಯ್.. ಎಂ.ಬಿ ಪಾಟೀಲ್ ಎನ್ನುವ ಮೂಲಕ ಬೆದರಿಕೆ ಒಡ್ಡಿದ್ದರು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆ ಬಳಿಕ ನಾನು ಯಾವ ಬೆದರಿಕೆಗೂ ಹೆದರುವ ಮನುಷ್ಯ ಅಲ್ಲ ಎಂದು ಸ್ವತಃ ಎಂಬಿ ಪಾಟೀಲರೇ ಹೇಳಿದ್ದರು. ಇದೀಗ ಸದನದಲ್ಲೇ ಸಿದ್ದರಾಮಯ್ಯ ಪರ ಶಾಸಕ ಬಸವರಾಜ ರಾಯರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ. ರಾಯರೆಡ್ಡಿ ಮಾತಿನಿಂದ ಡಿ.ಕೆ ಶಿವಕುಮಾರ್ ಬಣ ಕೊತ ಕೊತ ಕುದಿಯುವುದು ಗ್ಯಾರಂಟಿ. ಅಧಿಕಾರ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಎಳೆದಾಡುವುದಕ್ಕೆ ಬಿಜೆಪಿಗೂ ಒಂದು ಅಸ್ತ್ರ ಸಿಕ್ಕಂತಾಗಿದೆ. ಕನಕಪುರ ಬಂಡೆ ಬಳಗ ಇದಕ್ಕೆ ಯಾವ ರೀತಿ ಉತ್ತರ ಕೊಡುತ್ತೆ ಎನ್ನುವುದು ತುಂಬಾ ನಿಗೂಢವಾಗಿದೆ. ಆದರೆ ಉತ್ತರ ಕೊಡದೆ ಸುಮ್ಮನಿರುವ ಪಡೆಯಲ್ಲ ಅನ್ನೋದು ಕೂಡ ಸತ್ಯ.
ವಿಪಕ್ಷ ನಾಯಕನಿಲ್ಲದೆ ಕಂಗಾಲಾಗಿದ್ದ ಬಿಜೆಪಿಗೆ ಅಸ್ತ್ರ..!
ವಿರೋಧ ಪಕ್ಷದ ನಾಯಕನ ಆಯ್ಕೆ ಆಗದೆ ಇರುವ ಕಾರಣಕ್ಕೆ ಕಾಂಗ್ರೆಸ್ ಅದನ್ನೇ ಬ್ರಹ್ಮಾಸ್ತ್ರದಂತೆ ಬಳಕೆ ಮಾಡುತ್ತಿತ್ತು. ಆದರೀಗ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎನ್ನುವುದು ಕಾಂಗ್ರೆಸ್ನ ಡಿ.ಕೆ ಶಿವಕುಮಾರ್ ಬಣಕ್ಕೆ ನುಂಗಲಾರದು ಬಿಸಿ ತುಪ್ಪ ಎನ್ನುವಂತಾಗಿದೆ. ಇದೀಗ ಸದನದಲ್ಲೇ ಸಿದ್ದರಾಮಯ್ಯ ಐದೂ ವರ್ಷ ಸಿಎಂ ಎಂದಿರುವ ಬಗ್ಗೆ ಡಿ.ಕೆ ಶಿವಕುಮಾರ್ ಕಾಲು ಎಳೆದು ಕಾಲ ಹರಣ ಮಾಡುವುದಕ್ಕೆ ಕೇಸರಿ ಪಾಳಯಕ್ಕೆ ಒಂದು ದಿವ್ಯಾಸ್ತ್ರ ಸಿಕ್ಕಂತಾಯ್ತು. ಸಿದ್ದರಾಮಯ್ಯ 5 ವರ್ಷ ಇರುತ್ತಾರೋ? ಡಿ.ಕೆ ಶಿವಕುಮಾರ್ ಅಧಿಕಾರ ಬಿಟ್ಟು ಕೊಡ್ತಾರೋ ಎಂಬ ಚರ್ಚೆ ಶುರು ಮಾಡಿ, ರಾಜ್ಯದ ಜನರಿಗೆ ಕ್ಲಾರಿಟಿ ಕೊಡಿ ಎಂದು ಬಿಜೆಪಿ ಛೇಡಿಸುವ ಕೆಲಸ ಮಾಡಲಿದೆ. ಅದಕ್ಕೂ ಮಿಗಿಲಾಗಿದೆ, ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮೊನ್ನೆಯಷ್ಟೇ ಮಾತನಾಡುತ್ತ, ಬಾಯಿಗೆ ಬಂದ ಹಾಗೆ ಮಾತನಾಡಿದರೆ ನಾನು ನಮ್ಮ ಪಕ್ಷದಲ್ಲಿ ಸಸ್ಪೆಂಡ್ ಮಾಡುತ್ತಿದ್ದೆ, ನಿಮ್ಮ ಪಕ್ಷದಲ್ಲಿ ಏನೂ ಮಾಡಲಾಗದೆ ಸುಮ್ಮನಾಗಿದ್ದಾರೆ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಇದೀಗ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ವಿರುದ್ಧ ಯಾವ ಕ್ರಮ ತೆಗೆದುಕೊಳ್ತಾರೆ ಕಾದು ನೋಡ್ಬೇಕು..?
ಕೃಷ್ಣಮಣಿ