ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋದಕ್ಕೆ ಪಣತೊಟ್ಟಿರೋ ಸಿಎಂ ಸಿದ್ದರಾಮಯ್ಯ, ಚಿಕ್ಕಬಳ್ಳಾಪುರದಲ್ಲಿ ಮತ ಬೇಟೆಗೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ದೊಡ್ಡಬಳ್ಳಾಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ ಸಿಎಂ ಸಿದ್ದರಾಮಯ್ಯ. ಮುಖ್ಯಮಂತ್ರಿ ಹೋದ ಕಡೆಯಲ್ಲೆಲ್ಲಾ ಜನಸಾಗರವೇ ಹರಿದು ಬರ್ತಿದೆ. ಸಿದ್ದರಾಮಯ್ಯಗೆ ಶಾಸಕ ಪ್ರದೀಪ್ ಈಶ್ವರ್, ಮಾಜಿ ಶಾಸಕ ಶಿವಶಂಕರ್ ರೆಡ್ಡಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಕ್ಷಾ ರಾಮಯ್ಯ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೀರಿ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ. ಇನ್ನು NDA ಅಭ್ಯರ್ಥಿ ಸೋಲಿಸಿದರೆ ಮಾತ್ರ ಇಲ್ಲಿ ಅಭಿವೃದ್ಧಿ ಆಗಲಿದೆ. ಈ ಬಾರಿ ಸೋಲು ಖಚಿತ ಅನ್ನೋದು ಮೋದಿಗೂ ಗೊತ್ತಿದೆ. ನರೇಂದ್ರ ಮೋದಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ, ಇಂಡಿಯಾ ಮೈತ್ರಿಕೂಟ ಗೆಲುವಿನ ಬಗ್ಗೆ ಜನತೆಗೆ ವಿಶ್ವಾಸ ಇದೆ ಎಂದಿದ್ದಾರೆ.
ಬಾಗೇಪಲ್ಲಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎತ್ತಿನಹೊಳೆ ಮಾಡಿದ್ದು ಯಾರು..? ಕುಮಾರಸ್ವಾಮಿ ಎತ್ತಿಹೊಳೆ ಮಾಡಬಾರದು ಅಂತ ಪಟ್ಟು ಹಿಡಿದಿದ್ದರು. ಅವರ ಶಿಷ್ಯ ಕೋರ್ಟಿಗೆ ಹೋದ. ಆದರೆ ಈಗ ಎತ್ತಿನಹೊಳೆ ಪ್ರಗತಿಯಲ್ಲಿದೆ. ಈ ಅವಧಿಯಲ್ಲಿ ಎತ್ತಿನಹೊಳೆ ಮುಗಿಸಿ ಕುಡಿಯುವ ನೀರು ಕೊಡ್ತೇವೆ ಎಂದು ಭರವಸೆ ನೀಡಿದ್ದಾರೆ. ಜನರಿಗೆ ಮೋದಿ ಸುಳ್ಳು ಹೇಳಿ ಜನರಿಗೆ ವಚನ ಭ್ರಷ್ಟರಾಗಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ ಅಲ್ವಾ..? ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ ಎಂದಿದ್ದಾರೆ.