ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಸೋಲಿಸುತ್ತಾರೆ. ಸ್ವತಃ ಕಾಂಗ್ರೆಸ್ ನಾಯಕರೂ ಸೇರಿದಂತೆ ಬಿಜೆಪಿ, ಜೆಡಿಎಸ್ನ ಘಟಾನುಘಟಿ ನಾಯಕರು ಸಿದ್ದರಾಮಯ್ಯ ರಾಜಕೀಯ ಜೀವನ ಅಂತ್ಯ ಮಾಡಲು ಕಾಯುತ್ತಿದ್ದಾರೆ ಎನ್ನುವುದು ಕೇಳಿಬರುತ್ತಿರುವ ಮಾತು. ಇದೇ ಕಾರಣದಿಂದ ಸಿದ್ದರಾಮಯ್ಯ ಕೂಡ ಕ್ಷೇತ್ರ ಬಿಟ್ಟು ಕ್ಷೇತ್ರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಮೊನ್ನೆಯಷ್ಟೇ ಕೋಲಾರ ಕ್ಷೇತ್ರದಲ್ಲಿ ಸೋಲು-ಗೆಲುವಿನ ಸಾಧ್ಯತೆಗಳ ಬಗ್ಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಿದ್ದರಾಮಯ್ಯ, ಅಂತಿಮವಾಗಿ ವರುಣಾ, ಕೋಲಾರ, ಬಾದಾಮಿ ಈ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧೆ ಮಾಡ್ತೇನೆ. ಆದರೆ ಆ ಮೂರಲ್ಲಿ ಯಾವ ಕ್ಷೇತ್ರ ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಚುನಾವಣೆ ಘೋಷಣೆ ಆದ ಬಳಿಕ ಅಷ್ಟೇ ನನ್ನ ಸ್ಪರ್ಧೆ ನಿರ್ಧಾರ ಆಗಲಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಬೇಕಿದ್ದರೆ ಅರ್ಜಿ ಸಲ್ಲಿಕೆ ಮಾಡಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದ್ರು. ಸಾಕಷ್ಟು ಕ್ಷೇತ್ರಗಳಿಂದ ನೂರಾರು ಜನ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದಾರಾಮಯ್ಯ ಮಾತ್ರ ಯಾವುದೇ ಕ್ಷೇತ್ರದಿಂದಲೂ ಅರ್ಜಿ ಸಲ್ಲಿಕೆ ಮಾಡಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಕೆ ಮಾಡಿದ್ರೆ ಸಿದ್ದರಾಮಯ್ಯ ತಂತ್ರಗಾರಿಕೆ ಬಯಲಾಗುವ ಭೀತಿಯಲ್ಲಿ ಸಿದ್ದರಾಮಯ್ಯ ಅಂಡ್ ಟೀಂ, ಗೌಪ್ಯತೆ ಕಾಪಾಡಿಕೊಳ್ಳುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ವಿರೋಧಿ ಪಾಳಯಕ್ಕೆ ಗುಟ್ಟು ಬಿಟ್ಟುಕೊಡದೆ ಗೆಲುವಿನ ದಡ ಸೇರಿದರೆ ಮಾತ್ರ ಮುಖ್ಯಮಂತ್ರಿ ಕುರ್ಚಿ ಅನ್ನೋದು ಸಿದ್ದರಾಮಯ್ಯ ಆಪ್ತ ಬಳಗದ ಮಾತು.
2014ರಲ್ಲಿ ಡಾ ಜಿ ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇಡೀ ರಾಜ್ಯ ಸುತ್ತಾಡಿದ್ದ ಪರಮೇಶ್ವರ್, ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ನಿರ್ವಹಣೆ ಮಾಡಿದ್ದರು. ಆದರೆ ಪಕ್ಷದೊಳಗೆ ನಡೆದ ರಾಜಕೀಯ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ ಡಾ ಜಿ ಪರಮೇಶ್ವರ್, ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋಲಬೇಕಾಯ್ತು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸಂಭ್ರಮದಲ್ಲಿ ಇರುವಾಗ ಪೆಚ್ಚು ಮೋರೆ ಹಾಕಿಕೊಳ್ಳುವಂತಾಯ್ತು. ಸಿದ್ದರಾಮಯ್ಯ ಯಾವುದೇ ವಿರೋಧ ಇಲ್ಲದೆ ಮುಖ್ಯಮಂತ್ರಿ ಕುರ್ಚಿ ಮೇಲೆ ಆಸೀನರಾದರು. ಅಂದು ಡಾ ಜಿ ಪರಮೇಶ್ವರ್ಗೆ ಎದುರಾದ ಸೋಲನ್ನು ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಕ್ಕೆ ತರುವುದು ಅಷ್ಟೇ ಮುಖ್ಯವಲ್ಲ, ಕ್ಷೇತ್ರದಲ್ಲಿ ಗೆದ್ದು ಬರುವುದು ಮುಖ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಕಾರಣದಿಂದ ಗುಟ್ಟಿನ ಗೋಪುರ ಕಟ್ಟಿರುವ ಸಿದ್ದರಾಮಯ್ಯ, ಚುನಾವಣೆ ಘೋಷಣೆ ತನಕ ಯಾವ ಕ್ಷೇತ್ರ ಎನ್ನುವುದನ್ನೇ ಮುಚ್ಚಿಡಲಿದ್ದಾರೆ.
ಬಾದಾಮಿಯಿಂದ ಸ್ಪರ್ಧೆ ಮಾಡಿದ್ರೆ ಈ ಬಾರಿ ಎದುರಾಳಿಗಳ ತಂತ್ರಗಾರಿಕೆಗೆ ಸಿಲುಕುವ ಭಯದಿಂದ ಕ್ಷೇತ್ರವನ್ನು ತೊರೆಯುತ್ತಿರುವ ಸಿದ್ದರಾಮಯ್ಯ, ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕೋಲಾರ ಕ್ಷೇತ್ರದ ಜಾತಿವಾರು ಮತಗಳ ಆಧಾರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಪೂರಕವಾಗಿದೆ ಎನ್ನುವ ಕಾರಣಕ್ಕೆ ಸ್ಪರ್ಧೆ ಮಾಡುವ ಚರ್ಚೆ ನಡೆಯುತ್ತಿದೆ. ಆದರೆ ಕೊನೇ ಕ್ಷಣದಲ್ಲಿ ಕ್ಷೇತ್ರ ಬದಲಾವಣೆ ಮಾಡಿ, ಎದುರಾಳಿಗಳಿಗೆ ಚಳ್ಳೆಹಣ್ಣು ತಿನ್ನಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ಮಾತುಗಳು ಶುರುವಾಗಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅಥವಾ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ತಯಾರಿ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಯಾರು ಸೋಲುತ್ತಾರೆ ಅವರನ್ನು ಕಾಂಗ್ರೆಸ್ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಯೋಜನೆ ಕಾಂಗ್ರೆಸ್ನಲ್ಲೇ ನಡೆಯುತ್ತಿದೆ ಎನ್ನುವುದು ರಾಜಕೀಯದಲ್ಲಿ ಕೇಳಿ ಬರುತ್ತಿರುವ ವಿಚಾರ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ, ಸಿದ್ದರಾಮಯ್ಯ ಸೋಲುಂಡರೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಕನಸು ಸಲೀಸು. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರೋಧ ಪಕ್ಷ ಹಾಗು ಸ್ವಪಕ್ಷ ಕಾಂಗ್ರೆಸ್ಗೂ ತಿಳಿಯದಂತೆ ತಂತ್ರಗಾರಿಕೆ ಮಾಡಲು ಟೀಂ ಸಿದ್ದರಾಮಯ್ಯ ಮಾಡಿಕೊಂಡಿದ್ದಾರೆ.
ಮೂಲ : ಕೃಷ್ಣಮಣಿ