ಹನ್ನೆರಡನೆ ಶತಮಾನದ ಇತಿಹಾಸದ ಕಾಲದಿಂದಲೂ ಲಿಂಗಾಯತರು ಬ್ರಾಹ್ಮಣರ ದಬ್ಬಾಳಿಕೆಗೆ ಗುರಿಯಾಗುತ್ತಲೆ ಬಂದಿದ್ದಾರೆ. ಬ್ರಾಹ್ಮಣ್ಯಕ್ಕೆ ವಿರೋಧ ಹಾಗು ಪ್ರತಿಧ್ವಂದ್ವಿಯಾಗಿ ಉದಿಸಿದ ಲಿಂಗಾಯತ ಧರ್ಮವು ಅಂದು ಸಂಪ್ರದಾಯವಾದಿ ಬ್ರಾಹ್ಮಣರ ಹುನ್ನಾರದಿಂದ ಅಸಂಖ್ಯಾತ ಶರಣರ ರಕ್ತಪಾತದಲ್ಲಿ ಕೊನೆಗೊಂಡಿತು. ಎರಡು ಶತಮಾನಗಳು ಭೂಗತವಾಗಿˌ ಭಯದ ನೆರಳಿನಲ್ಲಿ ಅಜ್ಞಾತವಾಸದಲ್ಲಿ ಬದುಕಿದ ಲಿಂಗಾಯತ ಧರ್ಮ ೧೫ ನೇಯ ಶತಮಾನದಲ್ಲಿ ಮತ್ತೆ ಪುನಃರುತ್ಥಾನಗೊಂಡ ಸಂಗತಿ ತನಗೆಲ್ಲ ತಿಳಿದಿದೆ. ೧೮೭೧ ರ ಬ್ರಿಟೀಷ್ ಆಡಳಿತದ ಮೈಸೂರು ಸಂಸ್ಥಾನದಲ್ಲಿ ಲಿಂಗಾಯತರು ಬ್ರಾಹ್ಮಣ ಯಜಮಾನಿಕೆಯ ಹಿಂದೂ ಧರ್ಮದ ಭಾಗವಾಗಿರದೆ ಸ್ವತಂತ್ರ ಧರ್ಮೀಯರಾಗಿದ್ದರು. ೧೮೮೧ ರ ಜನಗಣತಿಯಲ್ಲಿ ಮೈಸೂರು ಸಂಸ್ಥಾನದ ದಿವಾನನಾಗಿದ್ದ ರಂಗಾಚಾರ್ಯನೆಂಬ ಅಯ್ಯಂಗಾರಿ ಬ್ರಾಹ್ಮಣ ಯಾವುದೇ ನಿರ್ಧಿಷ್ಟ ಕಾರಣಗಳು ನೀಡದೆ ಲಿಂಗಾಯತರನ್ನು ಸ್ವತಂತ್ರ ಧರ್ಮದಿಂದ ಪಟ್ಟಿಯಿಂದ ತೆಗೆದು ಶೂದ್ರರ ಪಟ್ಟಿಗೆ ಸೇರಿಸಿದ.
೧೬೦೦ ರ ಸುಮಾರಿಗೆ ಮೈಸೂರು ಸಂಸ್ಥಾನಕ್ಕೆ ಸರಿಸಮನಾಗಿ ಬೆಳೆಯುತ್ತಿದ್ದ ಕೊಡಗಿನ ಲಿಂಗಾಯತ ಸಂಸ್ಥಾನದ ಮೇಲೆ ಮೈಸೂರಿನ ಅರಸರು ಮಾಡಿದ ಆಕ್ರಮಣದ ಹಿಂದೆ ಅದೇ ಬ್ರಾಹ್ಮಣ ದಿವಾನರ ಪಾತ್ರವಿತ್ತು ಎನ್ನುವ ಸಂಗತಿ ಗುಟ್ಟಿನದೇನಲ್ಲ. ಬ್ರಿಟೀಷರೊಂದಿಗೆ ಎಂದಿಗೂ ಹೋರಾಡದ ಮೈಸೂರು ಸಂಸ್ಥಾನಕ್ಕಿಂತ ಬ್ರಿಟೀಷರೊಂದಿಗೆ ಶೌರ್ಯದಿಂದ ಕಾದಾಡಿ ಸರ್ವಸ್ವವನ್ನು ಕಳೆದುಕೊಂಡಿದ್ದು ಕೊಡಗಿನ ಸಂಸ್ಥಾನ. ಅಂದು ಮೈಸೂರಿನ ದಿವಾನನಾಗಿದ್ದ ಅಯ್ಯಂಗಾರಿ ಬ್ರಾಹ್ಮಣ ವಿಶಾಲಾಕ್ಷ ಪಂಡಿತನು ನಂಜನಗೂಡಿನ ಶಿರೋಭಾವಿಯಲ್ಲಿ ಮಾಡಿದ ಲಿಂಗಾಯತ ಜಂಗಮರ ಸಾಮೂಹಿಕ ನರಮೇಧವು ಇತಿಹಾಸದಲ್ಲಿ ಲಿಂಗಾಯತರ ಮೇಲಿನ ಬ್ರಾಹ್ಮಣ್ಯದ ದಬ್ಬಾಳಿಕೆ ಹಾಗು ಕ್ರೌರ್ಯದ ಸಂಕೇತ. ಮೈಸೂರು ಅರಸರ ರೈತ ವಿರೋಧಿ ತೆರಿಗೆಯ ವಿರುದ್ಧ ಬಂಡೆದ್ದ ಅಂದಾಜು ೪೦೦ ಕ್ಕೂ ಹೆಚ್ಚು ಲಿಂಗಾಯತ ಜಂಗಮರನ್ನು ಸಂಧಾನಕ್ಕೆಂದು ಕರೆದು ಮೋಸದಿಂದ ದಿವಾನ್ ವಿಶಾಲಾಕ್ಷ ಹತ್ಯೆ ಮಾಡಿಸಿದ್ದ.
ನಂಜನಗೂಡು ಸುತ್ತಮುತ್ತಲಿನ ಪರಿಸರಲ್ಲಿ ನೆಲೆಸಿರುವ ಬಹುಸಂಖ್ಯಾತ ಲಿಂಗಾಯತರು ನಂಜುಂಡೇಶ್ವರನನ್ನು ನಡೆದುಕೊಳ್ಳುವುದರ ಹಿಂದೆ ಒಂದು ಬಲವಾದ ಕಾರಣವಿದೆ ಎನ್ನಲಾಗುತ್ತದೆ. ಆ ಕಾರಣವೇನೆಂದರೆ ಕಲ್ಯಾಣದ ಶರಣ ಪರಂಪರೆಗೆ ಸೇರಿದ್ದ ನಂಜುಂಡಶಿವಯೋಗಿ ಹೆಸರಿನ ಒಬ್ಬ ಶರಣರು ಆ ಭಾಗದಲ್ಲಿ ಆಗಿಹೋಗಿದ್ದರೆಂತಲುˌ ಅವರ ಗದ್ದುಗೆಯೇ ಇಂದಿನ ನಂಜುಂಡೇಶ್ವರ ದೇವಸ್ಥಾನವೆಂದು ಅಲ್ಲಿನ ಲಿಂಗಾಯತರ ನಂಬಿಕೆಯಾಗಿದೆ. ಕಾಲಾನಂತರದಲ್ಲಿ ನಂಜುಂಡಶಿವಯೋಗಿಗಳ ಗದ್ದುಗೆ ಬ್ರಾಹ್ಮಣ ಅರ್ಚಕರು ನಂಜುಂಡೇಶ್ವರ ದೇವಸ್ಥಾನವಾಗಿ ಮಾರ್ಪಡಿಸಿದರು ಮತ್ತು ಆಮೇಲೆ ನಂಜುಂಡ ಎನ್ನುವ ಹೆಸರನ್ನೆ ಇತಿಹಾಸದಿಂದ ಅಳಿಸಲು ಅದನ್ನು ಈಗ ಶ್ರೀಕಂಠೇಶ್ವರ ದೇವಸ್ಥಾನವೆಂದು ಕರೆಯಲಾರಂಭಿಸಿದರು ಎನ್ನುತ್ತಾರೆ ಅಲ್ಲಿನ ಲಿಂಗಾಯತರು.

ಕಳೆದ ಒಂದೆರಡು ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಒಂದು ಹಳ್ಳಿಯಲ್ಲಿ ಬ್ರಾಹ್ಮಣರು ಲಿಂಗಾಯತರಿಗೆ ಕುಡಿಯುವ ನೀರಿನ ಬಾವಿಗೆ ಬರದಂತೆ ಬಹಿಷ್ಕಾರ ಹಾಕಿದ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ನಂಜನಗೂಡಿನ ಮತ್ತು ಇಡೀ ರಾಜ್ಯದ ಲಿಂಗಾಯತರ ಬೆಂಬಲದಿಂದ ಬ್ರಾಹ್ಮಣವಾದಿಗಳು ನಂಜನಗೂಡು ಸೆರಿದಂತೆ ಇಡೀ ಕರ್ನಾಟಕದಲ್ಲಿ ರಾಜಕೀಯ ಅಧಿಕಾರ ಹಿಡಿದಿದ್ದಾರೆ. ಆದರೆ ಹಿಂದುತ್ವದ ಮುಖವಾಡದಲ್ಲಿ ಬ್ರಾಹ್ಮಣ್ಯವನ್ನು ಕರ್ನಾಟಕದಲ್ಲಿ ಸುಲಭವಾಗಿ ಬಿತ್ತಲು ಲಿಂಗಾಯತರು ಮತ್ತು ಅವರ ತತ್ವ ಸಿದ್ಧಾಂತಗಳೆ ಅಡಚಣೆ ಎಂದು ಭಾವಿಸಿರುವ ಬ್ರಾಹ್ಮಣವಾದಿಗಳು ಲಿಂಗಾಯತ ಸಂಸ್ಕೃತಿಯನ್ನು ನಾಶಮಾಡಲು ಹೊರಟಿದ್ದಾರೆ ಎನ್ನುವ ಅಭಿಪ್ರಾಯ ಲಿಂಗಾಯತ ಸಮುದಾಯದಲ್ಲಿ ಮನೆಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಲಿಂಗಾಯತ ಸಮುದಾಯದ ಮೇಲೆ ಬ್ರಾಹ್ಮಣರ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ ಎನ್ನುತ್ತಾರೆ ಅಲ್ಲಿನ ಲಿಂಗಾಯತ ಸಮುದಾಯದವರು.
ಇದಕ್ಕೆ ಪೂರಕವೆನ್ನುವಂತೆ ಇದೇ ತಿಂಗಳು ಅಂದರೆ ನವಂಬರ್ ೪ˌ ೨೦೨೨ ರಂದು ನಂಜುಂಡೇಶ್ವರ ದೇವಸ್ಥಾನದಲ್ಲಿ ಒಂದು ಅವಮಾನಕರ ಘಟನೆ ನಡೆದ ಬಗ್ಗೆ ನಂಜನಗೂಡಿನ ಲಿಂಗಾಯತ ಸಮುದಾಯದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಅಂದು ಲಿಂಗಾಯತ ಸಮುದಾಯಕ್ಕೆ ಸೇರಿದ ಕನಕಗಿರಿ ಕೆಂಡಗನ್ನಸ್ವಾಮಿ ಮಠ ಟ್ರಸ್ಟಿನ ಅಂದಾಜು ಎಂಟು ಜನ ಟ್ರಷ್ಟಿಗಳು ಮತ್ತು ಯಳಂದೂರಿನ ಮುಮ್ಮಡಿ ಷಡಕ್ಷರಿ ಪೀಠದ ಮಠಾಧೀಶರು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಪೂಜೆಗೆಂದು ಭೇಟಿ ನೀಡಿದಾಗ ನಡೆದ ಘಟನೆಯು ಲಿಂಗಾಯತ ಸಮುದಾಯವನ್ನು ಕೆರಳಿಸಿದೆ. ನಂಜುಂಡೇಶ್ವರನ ಪೂಜೆಗೆ ಆಗಮಿಸಿದ ಯಳಂದೂರು ಮಠಾಧೀಶರು ಮತ್ತು ಕೆಂಡಗನ್ನಸ್ವಾಮಿ ಮಠ ಟ್ರಷ್ಟಿನ ಎಂಟು ಜನ ಟ್ರಷ್ಟಿಗಳಿಗೆ ದೇವಸ್ಥಾನದ ಗರ್ಭಗುಡಿ ಎದುರಿಗಿನ ಪ್ರಾಂಗಣದೊಳಗೆ ಕೂಡಿಸಿ ಗುಡಿಯೊಳಗೆ ಪ್ರವೇಶಿಸದಂತೆ ಅಲ್ಲಿನ ಅರ್ಚಕರು ತಡೆದಿದ್ದಾರೆಂದು ಟ್ರಷ್ಟಿಗಳಲ್ಲಿ ಒಬ್ಬರಾದ ಬಸವಣ್ಣನವರು ಹೇಳಿದ್ದಾರೆ.
ಯಳಂದೂರಿನ ಈ ಮುಮ್ಮಡಿ ಷಡಕ್ಷರಿ ಪೀಠವು ಮೈಸೂರು ಸಂಸ್ಥಾನದ ಆಳ್ವಿಕೆಯ ಕಾಲದಿಂದಲೂ ಹೆಸರುವಾಸಿಯಾಗಿದೆ. ಆಗಿನ ಸ್ವಾಮಿಗಳ ಜೀವನ್ಮುಖಿ ದಾಸೋಹ ಕಾರ್ಯಗಳನ್ನು ಮೆಚ್ಚಿ ಅಂದಿನ ಮೈಸೂರು ಅರಸರು ಅವರನ್ನು ರಾಜಗುರು ಪಟ್ಟ ಅಲಂಕರಿಸಲು ಮನವಿ ಮಾಡಿದ್ದರೆಂತಲುˌ ಅದನ್ನು ಸ್ವಾಮಿಗಳು ತಿರಸ್ಕರಿಸಿದರೆಂತಲುˌ ಆಗ ಆಸ್ಥಾನದ ಬ್ರಾಹ್ಮಣರು ಮೈಸೂರು ಸಂಸ್ಥಾನದ ರಾಜಗುರು ಪಟ್ಟ ತಪ್ಪಿಸಲು ಆ ಸ್ವಾಮಿಗಳ ದಾಸೋಹ ಕಾರ್ಯವನ್ನು ಗೇಲಿ ಮಾಡುತ್ತಿದ್ದರೆಂದು ಸ್ಥಳೀಯ ಲಿಂಗಾಯತರು ಮಾತನಾಡುತ್ತಾರೆ. ಆಗ ಮೈಸೂರು ಅರಸರಿಗೆ ಸ್ವಾಮಿಗಳು ಒಂದು ಮಾತನ್ನು ಕೇಳಿದ್ದರೆಂತಲುˌ ಅದೇನೆಂದರೆ ಸ್ವಾಮಿಗಳು ಹೋದಲ್ಲೆಲ್ಲ ಅವರ ಹೆಸರಿನಲ್ಲಿ ಆ ಭಾಗದ ಜನರಿಗೆ ದಾಸೋಹ ಭವನಗಳು ಸ್ಥಾಪಿಸಿ ಅದಕ್ಕೆ ಸ್ಥಿರಾಸ್ತಿ ರೂಪದಲ್ಲಿ ಭೂಧಾನ ಮಾಡಲು ಹೇಳಿದ್ದರಂತೆ. ಹಾಗಾಗಿ ಮುಮ್ಮಡಿ ಷಡಕ್ಷರಿ ಸ್ವಾಮಿಗಳು ಹೋದಲೆಲ್ಲ ಮೈಸೂರು ಅರಸರು ದಾಸೋಹಕ್ಕಾಗಿˌ ಭೂದಾನ ಮಾಡಿದ್ದರ ಬಗ್ಗೆ ಆ ಭಾಗದಲ್ಲಿ ಮಾತುಗಳು ಕೇಳಿಬರುತ್ತವೆ.
ಲಿಂಗಾಯತ ಸಮುದಾಯಕ್ಕೆ ಸೇರಿರುವ ಶ್ರೀಯುತ ಬಸವಣ್ಣನವರು ನಂಜನಗೂಡಿನ ಸ್ಥಳೀಯ ನಿವಾಸಿಯಾಗಿದ್ದು ಈ ಮೊದಲು ಬ್ರಾಹ್ಮಣರ ಯಜಮಾನಿಕೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರಂತೆ. ಸಂಘದ ಮುಸ್ಲಿಮ್ ವಿರೋಧಿ ಧೋರಣೆಗೆ ಬಲಿಯಾಗಿ ಅನೇಕ ಮೊಕದ್ದಮೆಗಳಲ್ಲಿ ಸಿಲುಕಿ ರೌಡೀಶೀಟರ್ ಪಟ್ಟಿ ಸೇರಿ ಪಡಬಾರದ ಪಾಡು ಪಟ್ಟರಂತೆ. ಆನಂತರ ಅವರು ನಂಜನಗೂಡಿನ ಮುನ್ಸಿಪಟ್ಲಿಗೆ ನಾಮನಿರ್ಧೇಶಿತ ಸದಸ್ಯರಾಗಿಯು ಕೆಲಸ ಮಾಡಿದವರು. ಸದರಿ ಬಸವಣ್ಣ ಮತ್ತು ಉಳಿದ ಕೆಂಡಗನ್ನಸ್ವಾಮಿ ಮಠ ಟ್ರಷ್ಟಿನ ಟ್ರಷ್ಟಿಗಳು ಹಾಗು ಯಳಂದೂರಿನ ಲಿಂಗಾಯತ ಮಠಾಧೀಶರನ್ನು ನಂಜುಂಡೇಶ್ವರನ ಗುಡಿಯೊಳಗೆ ಬಿಡದೆ ಬ್ರಾಹ್ಮಣ ಅರ್ಚಕರು ಅವಮಾನಿಸಿದ್ದಾರೆ ಎನ್ನುವ ಸಂಗತಿ ಬಸವಣ್ಣನವರಿಗೆ ಘಾಸಿಗೊಳಿಸಿದೆಯಂತೆ. ಏಕೆಂದರೆ ದಶಕಗಳ ಕಾಲ ಹಿಂದುತ್ವದ ಹೆಸರನಲ್ಲಿ ಲಿಂಗಾಯತರನ್ನು ಬಳಸಿಕೊಂಡ ಬ್ರಾಹ್ಮಣರು ಈಗ ಲಿಂಗಾಯತರನ್ನೆ ತುಳಿಯುತ್ತಿರುವುದು ಅವರಿಗೆ ಆಶ್ಚರ್ಯ ಮತ್ತು ಅಘಾತ ಮಾಡಿದೆಯಂತೆ.

ಅದೇ ಸಮಯದಲ್ಲಿ ನಂಜನಗೂಡು ಬ್ರಾಹ್ಮಣ ಸಮಾಜಕ್ಕೆ ಸೇರಿದ ಖ್ಯಾತ ಉದ್ಯಮಿಯೊಬ್ಬ ಮಂದಿರಕ್ಕೆ ಆಗಮಿಸುತ್ತಾನೆ ಮತ್ತು ಆತ ನಿರಾತಂಕವಾಗಿ ಗರ್ಭಗುಡಿಯನ್ನು ಪ್ರವೇಶಿಸುತ್ತಾನೆ. ಅರ್ಚಕರು ಬಹಳ ಸಂಭ್ರಮದಿಂದ ಆ ಬ್ರಾಹ್ಮಣ ಉದ್ಯಮಿಯನ್ನು ಗರ್ಭಗುಡಿಗೆ ಬರಮಾಡಿಕೊಳ್ಳುತ್ತಾರೆ. ಈ ಘಟನೆ ಬಸವಣ್ಣ ಮತ್ತು ಸಂಗಡಿಗರನ್ನು ಕೆರಳಿಸುತ್ತದೆ. ಅಲ್ಲಿನ ಅರ್ಚಕರು ಮತ್ತು ಮುಖ್ಯ ಪರಿಚಾರಕ ವಿಶ್ವನಾಥ ದಿಕ್ಷಿತರನ್ನು ಬಸವಣ್ಣ ಮತ್ತು ಸಂಗಡಿಗರು ಈ ತಾರಮತ್ಯ ಕುರಿತು ಪ್ರಶ್ನಿಸಿದಾಗ ಅವರು ಇದು ದೇವಸ್ಥಾನದ ಕಾರ್ಯನಿರ್ಹಾಹಕ ಅಧಿಕಾರಿಯ ಆಜ್ಞೆ ಎಂದು ಉತ್ತರಿಸುತ್ತಾರೆ. ಆಗ ಅವರು ಸರಕಾರದ ಅಧಿಕಾರಿಯನ್ನು ಸಂಪರ್ಕಿಸಿ ವಿಷಯ ತಿಳಿಸುತ್ತಾರೆ. ಆಗ ಆ ಅಧಿಕಾರಿ ತಾರತಮ್ಯ ಮಾಡಲು ನಾನು ನಿರ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸುತ್ತಾನೆ ಮತ್ತು ಈ ಕುರಿತು ಲಿಖಿತ ದೂರು ನೀಡಲು ಹೇಳುತ್ತಾನೆ. ಕಣ್ಣೆದುರಿಗೆ ನಡೆದ ಘಟನೆಗೆ ಲಿಖಿತ ದೂರಿನ ಅಗತ್ಯವೇನಿದೆ ಎಂದು ವಾದಿಸಿ ಅವರೆಲ್ಲರು ತಮ್ಮ ಸ್ವಾಮಿಗಳೊಂದಿಗೆ ದೇಶಸ್ಥಾನದಿಂದ ಹೊರಬರುತ್ತಾರೆ.
ಈ ಘಟನೆಯು ನಂಜನಗೂಡಿನ ಲಿಂಗಾಯತ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ದೇವಸ್ಥಾನಕ್ಕೆ ಬರುವ ಉಡುಪಿˌ ಉತ್ತರಾಧಿˌ ಮೇಲುಕೋಟೆಯ ಬ್ರಾಹ್ಮಣ ಮಠಾಧೀಶರನ್ನು ˌ ಇನ್ನಿತರ ಸಾಧಾರಾಣ ಬ್ರಾಹ್ಮಣ ಅರ್ಚಕರನ್ನು ಮತ್ತು ಬ್ರಾಹ್ಮಣ ಉದ್ಯಮಿಗಳನ್ನು ನಿರಾತಂಕವಾಗಿ ಗರ್ಭಗುಡಿಗೆ ಬಿಟ್ಟುಕೊಳ್ಳುವ ಮತ್ತು ಅವರೊಂದಿಗೆ ಗರ್ಭಗುಡಿಯ ಪ್ರಾಂಗಣದಲ್ಲಿ ಲೋಕೋಭಿರಾಮವಾಗಿ ಹರಟುವ ಅಲ್ಲಿನ ಬ್ರಾಹ್ಮಣ ಅರ್ಚಕರು ಲಿಂಗಾಯತ ಸಮುದಾಯದ ಗಣ್ಯರು ಮತ್ತು ಪ್ರಮುಖ ಮಠಾಧೀಶರನ್ನು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳದೆ ಅವಮಾನಿಸುವ ಘಟನೆ ಅಲ್ಲಿ ಸರ್ವೇಸಾಮಾನ್ಯವಾಗಿದ್ದು ಅದು ಇತ್ತೀಚಿಗೆ ಅಲ್ಲಿನ ಲಿಂಗಾಯತ ಸಮುದಾಯದಲ್ಲಿ ಬ್ರಾಹ್ಮಣರ ದಬ್ಬಾಳಿಕೆಯ ಕುರಿತು ಆಕ್ರೋಶವನ್ನು ಹೆಚ್ಚಿಸಿದೆ.
ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಮಾತ್ರವಲ್ಲದೆ ಕರ್ನಾಟಕದ ಎಲ್ಲಾ ಭಾಗದ ಲಿಂಗಾಯತರು ಬ್ರಾಹ್ಮಣರ ಯಜಮಾನಿಕೆಯ ರಾಷ್ಟ್ರೀಯ ಸ್ವಯಂಸೇವಕ ಸಂಘˌ ಅವರ ರಾಜಕೀಯ ವೇದಿಕೆಯಾಗಿರುವ ಬಿಜೆಪಿಯೊಂದಿಗಿನ ನಂಟನ್ನು ಕಡಿದುಕೊಳ್ಳುವ ಮತ್ತು ಬ್ರಾಹ್ಮಣರು ಅರ್ಚಕರಾಗಿರುವ ದೇವಸ್ಥಾನಗಳಿಗೆ ಭೇಟಿ ಕೊಡುವುದನ್ನು ತಕ್ಷಣಕ್ಕೆ ನಿಲ್ಲಿಸುವ ಅಗತ್ಯವಿದೆ. ಲಿಂಗಾಯತ ಧರ್ಮವು ಬ್ರಾಹ್ಮಣರ ಮಂದಿರ ಸಂಸ್ಕೃತಿಯನ್ನು ದಿಕ್ಕರಿಸಿ ಹುಟ್ಟಿರುವಂತದ್ದು. ಲಿಂಗಾಯತರಲ್ಲಿ ಮಂದಿರ ಸಂಸ್ಕೃತಿಯಾಗಲಿˌ ಮೂರ್ತಿಪೂಜೆˌ ಬಹುದೇವೋಪಾಸನೆಯಾಗಲಿ ಇಲ್ಲ. ಇದನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಮತ್ತು ಲಿಂಗಾಯತ ಸಮುದಾಯಕ್ಕೆ ಮತ್ತು ಆ ಧರ್ಮದ ಉದಾತ್ ತತ್ವ ಸಿಂದ್ಧಾಂತಗಳಿಗೆ ಅಂದು-ಇಂದು-ಮುಂದೆಯು ಕೂಡ ಪುರೋಹಿತಶಾಹಿಗಳೆ ಕಾಲ್ತೊಡಕು ಎನ್ನುವುದನ್ನು ಲಿಂಗಾಯತರು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ.