ಮೈಸೂರು: ಯಾವುದೇ ತಪ್ಪು ಮಾಡಿಲ್ಲ, ಯಾವುದೇ ಕೇಸು ಇಲ್ಲ ಅಂದ್ರೆ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ರು? ಅಪರಾಧ ನಡೆದಿಲ್ಲ ಎಂದರೆ ಯಾಕೆ ಆ ಅರ್ಜಿ ತಿರಸ್ಕಾರವಾಗಿದೆ? ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ನಗರದಲ್ಲಿ (Mysuru) ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣವನ್ನು (Prajwal Revanna Pendrive case) ಎಸ್‍ಐಟಿ (SIT) ತನಿಖೆ ನಡೆಸುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಬೆರೆತಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿ ವರದಿ ನೀಡುತ್ತಾರೆ ಎಂದು ಹೇಳಿದರು.

ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಆಡಳಿತದಲ್ಲಿ ಒಂದೇ ಒಂದು ಕೇಸ್ ನ್ನು ಸಿಬಿಐಗೆ ನೀಡಿಲ್ಲ. ದೇವೇಗೌಡರು ಚೋರ್ ಬಚಾವ್ ಸಂಸ್ಥೆ ಎಂದಿದ್ದರು. ಈಗ ನೋಡಿದ್ರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ತನಿಖೆ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂಬ ನಂಬಿಕೆ ನನಗಿದೆ. ನಾನು ಯಾವುದೇ ಕಾರಣಕ್ಕೂ ಕಾನೂನಿನ ವಿರುದ್ಧ ನಡೆದುಕೊಳ್ಳುವಂತೆ ಪೊಲೀಸರಿಗೆ ಹೇಳುವುದಿಲ್ಲ ಎಂದು ಹೇಳಿದ್ದಾರೆ.