• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಲೂಟಿ ಮಾಡಲು ಮಾತ್ರ ಮೋದಿ, ಶಾಗೆ ಕರ್ನಾಟಕದ ನೆನಪಾಗುತ್ತದೆ: ಸಿದ್ದರಾಮಯ್ಯ ವಾಗ್ದಾಳಿ

ಪ್ರತಿಧ್ವನಿ by ಪ್ರತಿಧ್ವನಿ
January 19, 2023
in ಕರ್ನಾಟಕ
0
ಲೂಟಿ ಮಾಡಲು ಮಾತ್ರ ಮೋದಿ, ಶಾಗೆ ಕರ್ನಾಟಕದ ನೆನಪಾಗುತ್ತದೆ: ಸಿದ್ದರಾಮಯ್ಯ ವಾಗ್ದಾಳಿ
Share on WhatsAppShare on FacebookShare on Telegram

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್‌ಶಾ ಅವರು ಕರ್ನಾಟಕಕ್ಕೆ ಪ್ರತಿ ಸಾರಿ ಬಂದಾಗಲೂ ಕನ್ನಡಿಗರಿಗೆ ಘಾತ ಮಾಡಿಯೆ ಬರುತ್ತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿದ್ದ ಯುಜಿಸಿ ಕಛೇರಿಯನ್ನು ಸ್ಥಳಾಂತರ ಮಾಡಿ ಕನ್ನಡಿಗರ ಮತ್ತೊಂದು ಹಕ್ಕು ಕಸಿದಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಮಕ್ಕಳಿಗೆ ಹಾಗೂ ಅಧ್ಯಾಪಕರುಗಳು, ಕಾಲೇಜು, ವಿವಿಗಳ ಆಡಳಿತ ಮಂಡಳಿಗಳವರು ಇನ್ನು ಮುಂದೆ ಸಣ್ಣ ಸಣ್ಣ ಸಮಸ್ಯೆಗಳಾದರೂ ದೆಹಲಿಗೆ ಹೋಗಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.

ಈ ಸಂಬಂಧ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆಯ ವಿವರ ಹೀಗಿದೆ:

ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ ಕಛೇರಿ ಬೆಂಗಳೂರು ಬಿಟ್ಟು ದೆಹಲಿಗೆ ಹೋಗುತ್ತಿದ್ದರೂ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಸಣ್ಣ ಪ್ರತಿಭಟನೆಯನ್ನೂ ದಾಖಲಿಸಿಲ್ಲ. ಗುಜರಾತ್ ಮೂಲದ ಈ ಜೋಡಿ ರಾಜ್ಯದ ಪ್ರತಿಯೊಂದನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಧಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದ ಸ್ವಾಭಿಮಾನವನ್ನೆ ದರೋಡೆ ಮಾಡುತ್ತಿದ್ದರೂ ಉಸಿರೆ ಎತ್ತದೆ ರಾಜ್ಯದ 7 ಕೋಟಿ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ.

ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ಎಂಬುದೊಂದು ರಾಜ್ಯವಿದೆ ಎಂದು ನೆನಪಾಗುವುದು ಚುನಾವಣೆಗಳು ಬಂದಾಗ ಅಥವಾ ಕರ್ನಾಟಕದಲ್ಲಿ ಸಂಪತ್ತಿದೆ ಅದನ್ನು ಲೂಟಿ ಮಾಡುವುದು ಹೇಗೆ ಎಂಬ ಯೋಚನೆ ಬಂದಾಗ ಮಾತ್ರ.

ರಾಜ್ಯದಲ್ಲಿ ರೈತರು ಬೆಳೆದ ಅಡಿಕೆ, ತೆಂಗು, ಕಬ್ಬು, ಮೆಣಸು, ಕಾಫಿ, ಭತ್ತ ಮುಂತಾದ ಬೆಳೆಗಳಿಗೆ ಬೆಲೆಗಳಿಲ್ಲ. ತೊಗರಿಗೆ ನೆಟೆ ರೋಗ ಬಂದಿದೆ.

ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದು 30000ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿವೆ. ಸುಮಾರು 18 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ. ಪ್ರತಿ ದಿನ ರೈತರಿಗೆ 6.66 ಕೋಟಿಗಳಷ್ಟು ಆದಾಯ ನಷ್ಟವಾಗುತ್ತಿದೆ. ಮಲೆನಾಡಿನ ಅಡಿಕೆ, ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಅತಿವೃಷ್ಟಿ, ಪ್ರವಾಹವು ರಾಜ್ಯದ ರೈತರನ್ನು ಕಾಡುತ್ತಿದೆ. ಇದರಿಂದ 1 ಲಕ್ಷ ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ಅಂದರೆ 3 ವರ್ಷಗಳಲ್ಲಿ 2.5 ಲಕ್ಷ ಎಕರೆಗಳಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. 2.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಬೆಳೆಗೆ ಮತ್ತು ಮನೆಗಳಿಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ಕೊಟ್ಟಿಲ್ಲ. ಅಷ್ಟು ಭೀಕರ ಮಳೆ ಹಾನಿಯಾದಾಗಲೂ ಪ್ರಧಾನಮಂತ್ರಿ ಮೋದಿಗಾಗಲಿ, ಅಮಿತ್ ಶಾ ಅವರಿಗಾಗಲಿ ಹೋಗಲಿ ಉಳಿದ ಯಾವುದೆ ಸಚಿವರಿಗಾಗಲಿ ಕರ್ನಾಟಕ ರಾಜ್ಯವೆಂಬುದೊಂದಿದೆ ಎಂಬ ನೆನಪು ಬಂದಿತ್ತೆ?

2020 ಮತ್ತು 2021 ರಲ್ಲಿ ರಾಜ್ಯವನ್ನು ಕಾಡಿದ ಭೀಕರ ಕೊರೋನಾಕ್ಕೆ ರಾಜ್ಯದಲ್ಲಿ 4.5 ರಿಂದ 5 ಲಕ್ಷ ಜನರು ದುರಂತದ ಸಾವಿಗೀಡಾದರು. ಇವರುಗಳಿಗೆ ಪರಿಹಾರವನ್ನೆ ಕೊಟ್ಟಿಲ್ಲ. ಮೋದಿ ಸರ್ಕಾರ ಕರ್ನಾಟಕದ ಜನರಿಗೆ ಸಿಗಬೇಕಾದ ಆಕ್ಸಿಜನ್ನನ್ನು ಕಿತ್ತುಕೊಂಡರು. ಆಕ್ಸಿಜನ್ ಸಿಗದೆ, ವೆಂಟಿಲೇಟರ್ ಸಿಗದೆ ಅಸಂಖ್ಯಾತ ಜನ ಮರಣ ಹೊಂದಿದರು. ಇದರ ಹೊಣೆಯನ್ನು ಯಾರು ಹೊರಬೇಕು?

ಕರ್ನಾಟಕದ ಪ್ರಬಲವಾದ 5 ಬ್ಯಾಂಕುಗಳನ್ನು ಮೋದಿ ಸರ್ಕಾರ ಕಿತ್ತುಕೊಂಡಿತು. ಇದರಿಂದ ಲಕ್ಷಾಂತರ ಕೋಟಿಗಳಷ್ಟು ನಮ್ಮ ಜನರ ಸಂಪತ್ತನ್ನು ಕೊಳ್ಳೆ ಹೊಡೆಯಲಾಯಿತು. ಮೈಸೂರು ಬ್ಯಾಂಕು, ಕೆನರಾಬ್ಯಾಂಕು, ಕಾರ್ಪೊರೇಷನ್‌ಬ್ಯಾಂಕು, ವಿಜಯಾಬ್ಯಾಂಕು ಹೀಗೆ ಎಲ್ಲ ಬ್ಯಾಂಕುಗಳೂ ಹೋದವು. ಈ ಬ್ಯಾಂಕುಗಳಲ್ಲಿ ಸುಮಾರು 1 ಲಕ್ಷ ಕರ್ನಾಟಕದ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಈಗ ಉತ್ತರ ಭಾರತದವರೆ ತುಂಬಿ ಹೋಗಿದ್ದಾರೆ. ಈ ಅನ್ಯಾಯಕ್ಕೆ ಮೋದಿಯವರೆ ಹೊಣೆ.

ಕರ್ನಾಟಕದ ಪಾಲಿಗೆ ಬಂದಿದ್ದ ಸಿಆರ್‌ಪಿಎಫ್ ಬೆಟಾಲಿಯನ್ನನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸಿದರು.

ತಮಿಳಿನಂತೆ ಕನ್ನಡ ಭಾಷೆಯೂ ಶಾಸ್ತ್ರೀಯ ಭಾಷೆಯೆ. ಆದರೆ ತಮಿಳುನಾಡಿಗೆ ಕೊಡುವ ಅನುದಾನಗಳಲ್ಲಿ ಕಾಲುಭಾಗವನ್ನೂ ಕರ್ನಾಟಕಕ್ಕೆ ಕೊಡುತ್ತಿಲ್ಲವೆಂದು ಈ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಹೇಳಿದ್ದಾರೆ.

ಕರ್ನಾಟಕದಿಂದ ಮೋದಿ ಸರ್ಕಾರವು 3.5 ಲಕ್ಷ ಕೋಟಿ ರೂಪಾಯಿಗಳನ್ನು ದೋಚಿಕೊಂಡು ಹೋಗುತ್ತಿದೆ. ಆದರೆ ರಾಜ್ಯಕ್ಕೆ ತೆರಿಗೆ ಹಂಚಿಕೆ ಮಾಡುತ್ತಿರುವುದು ಕೇವಲ 29 ಸಾವಿರ ಕೋಟಿ ಮಾತ್ರ. ತೆರಿಗೆ ಹಂಚಿಕೆ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳು ಎರಡೂ ಸೇರಿದರೂ ಸಹ 50 ಸಾವಿರ ಕೋಟಿಗಳಿಗೆ ತಲುಪುತ್ತಿಲ್ಲ. ರಾಜ್ಯದಿಂದ 2.5 ಲಕ್ಷ ಕೋಟಿ ಸಂಗ್ರಹವಾಗುತ್ತಿದ್ದಾಗ 72 ಸಾವಿರ ಕೋಟಿಗೂ ಹೆಚ್ಚು ಅನುದಾನ, ತೆರಿಗೆ ಹಂಚಿಕೆ ಸಿಗುತ್ತಿತ್ತು. 3.5 ಲಕ್ಷ ಕೋಟಿಗೆ ಶೇ.42 ರ ಸೂತ್ರದಂತೆ ನಮಗೆ ಮೋದಿ ಸರ್ಕಾರ ಕೊಡಬೇಕಾಗಿದ್ದುದು 1.47 ಲಕ್ಷ ಕೋಟಿ ರೂಗಳು. ನಮಗೆ ಕೊಡದೆ ವಂಚಿಸುತ್ತಿರುವುದು 1.17 ಲಕ್ಷ ಕೋಟಿ ರೂಗಳು.

ಈ ಬಿಜೆಪಿಯವರು ಅದೆಷ್ಟು ಲಜ್ಜೆಗೆಟ್ಟಿದ್ದಾರೆಂದರೆ ನಮ್ಮ ಸರ್ಕಾರದ ಅವಧಿಯ ಕಾರ್ಯಕ್ರಮಗಳನ್ನು ತಮ್ಮ ಕಾರ್ಯಕ್ರಮಗಳೆಂದು ಹೇಳಿಕೊಂಡು ಬೀಗುತ್ತಿದ್ದಾರೆ. ಮೋದಿಯವರನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕರೆಸಿ ಎರಡು ಮುಖ್ಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಒಂದು, ನಾರಾಯಣಪುರ ಎಡದಂಡೆ ಕಾಲುವೆ ಉದ್ಘಾಟನೆ ಮತ್ತೊಂದು ಕಂದಾಯ ಗ್ರಾಮ ಯೋಜನೆಯಲ್ಲಿ ಹಕ್ಕುಪತ್ರಗಳ ವಿತರಣೆ.

ನಾರಾಯಣಪುರ ಎಡದಂಡೆ ನಾಲೆ;

ಜನವರಿ 18, 2023: ಕರ್ನಾಟಕದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿರುವ ನಾರಾಯಣಪುರ ಎಡದಂಡೆ ನಾಲೆಯ ಸದ್ಯ ಪೂರ್ಣಗೊಂಡಿರುವ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣ ಕಾಮಗಾರಿಗಳನ್ನು ಜನವರಿ 19, 2023 ರಂದು ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಕಾಮಗಾರಿಗಳು ಆಧುನಿಕ ತಂತ್ರಜ್ಞಾನ ಸ್ಕಾಡಾ ಆಧಾರಿತ ಸ್ವಯಂಚಾಲಿತ ತಂತ್ರಜ್ಞಾನವನ್ನು ಸಹ ಒಳಗೊಂಡಿವೆ.

ಕರ್ನಾಟಕ ಸರ್ಕಾರದ ಕೃಷ್ಣ ಭಾಗ್ಯ ಜಲ ನಿಗಮದಡಿ ನಾರಾಯಣಪುರ ಎಡದಂಡೆ ಕಾಲುವೆಯ ಕಾಮಗಾರಿ ಗಳನ್ನೊಳಗೊಂಡಂತೆ ಮೊದಲ ಹಂತದ ಸ್ಕಾಡಾ ಆಧಾರಿತ ಗೇಟ್‌ಗಳ ಅಳವಡಿಕೆ ಕಾರ್ಯಕ್ಕೆ 2014ರಲ್ಲಿ ನಮ್ಮ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ಎಂ. ಬಿ. ಪಾಟೀಲರು ಟೆಂಡರ್ ಕರೆದು ಚಾಲನೆ ನೀಡಿದರು ಹಾಗೂ ಆಧುನೀಕರಣ ಕಾಮಗಾರಿಗಳು 2017 ರಲ್ಲಿ ಬಹುತೇಕ ಪೂರ್ಣಗೊಂಡು, ಕಳೆದ 4-5 ವರ್ಷಗಳಿಂದ ಮೊದಲ ಹಂತದ ಸ್ಕಾಡಾ ಆಧಾರಿತ ತಂತ್ರಜ್ಞಾನ ಕಾರ್ಯಾಚರಣೆಯಲ್ಲಿದೆ. ಈ ತಂತ್ರಜ್ಞಾನ ಸದ್ಯ ನಾರಾಯಣಪುರ ಎಡದಂಡೆ ಕಾಲುವೆ ಜಾಲದಲ್ಲಿ ಶೇ.20 ರಷ್ಟು ನೀರು ಪೋಲಾಗುವುದನ್ನು ತಡೆಯುತ್ತಿದೆ. ಇಂತಹ ತಂತ್ರಜ್ಞಾನವನ್ನು ದೇಶದಲ್ಲೇ ಮೊದಲ ಬಾರಿಗೆ ನೀರಾವರಿ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಿತ್ತು.

ನಾರಾಯಣಪುರ ಎಡದಂಡೆ ಕಾಲುವೆ ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಸುಮಾರು 4.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ಈ ಕಾಲುವೆ ನಾರಾಯಣಪುರ ಅಣೆಕಟ್ಟಿನ ಅತೀ ದೊಡ್ಡ ಕಾಲುವೆಯಾಗಿದೆ. ಸ್ಕಾಡಾ ಗೇಟ್‌ಗಳು ವೈರ್‌ಲೆಸ್ ಆಧಾರಿತ ರಿಮೋಟ್ ಗೇಟ್ ನಿರ್ವಹಣೆ ತಂತ್ರಜ್ಞಾನವನ್ನು ಒಳಗೊಂಡಿವೆ. ಈ ಯೋಜನೆಯ ಎರಡೂ ಹಂತಗಳಲ್ಲಿ ಒಟ್ಟಾರೆಯಾಗಿ ಸ್ಕಾಡಾ ಕಂಟ್ರೋಲ್ ಸೆಂಟರ್‌ನಿAದ ಸುಮಾರು ರೂ. 1,500 ಕೋಟಿ ವೆಚ್ಚದಲ್ಲಿ 4,250 ಗೇಟುಗಳನ್ನು ಅಳವಡಿಸಲಾಗಿದೆ.

ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ನಾರಾಯಣ ಎಡದಂಡೆ ಕಾಲುವೆ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣ ಯೋಜನೆಯಡಿ ಸುಮಾರು ರೂ. 3,500 ಕೋಟಿ ಮೊತ್ತದಲ್ಲಿ ಮುಖ್ಯ ಹಾಗೂ ಶಾಖಾ ಕಾಲುವೆಗಳು, ವಿತರಣಾ ಕಾಲುವೆ, ಲ್ಯಾಟರಲ್ ಹಾಗೂ ಸಬ್-ಲ್ಯಾಟರಲ್‌ಗಳ ಕಾಮಗಾರಿಗಳನ್ನು ಆರಂಭಿಸಿ ಪೂರ್ಣಗೊಳಿಸಲಾಯಿತು. ಇದರಿಂದ 2014-15 ಹಾಗೂ 2016-17ರ ನಡುವಿನ ಅವಧಿಯಲ್ಲಿ ಮರುಸ್ಥಾಪಿಸಲಾದ ನೀರಾವರಿ ಸಾಮರ್ಥ್ಯ ಒಟ್ಟು 98,381 ಹೆಕ್ಟೇರ್‌ಗಳಾಗಿತ್ತು. ಜಲಸಂಪನ್ಮೂಲ ಸಚಿವಾಲಯ, ಭಾರತ ಸರ್ಕಾರ, ಆಧುನಿಕ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಅನುಷ್ಠಾನಗೊಳಿಸಿರುವ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣ ಕಾಮಗಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿತ್ತು.

 ನಮ್ಮ ಸರ್ಕಾರವೆ ಪ್ರಾರಂಭಿಸಿ ಅನುಷ್ಠಾನ ಮಾಡಿದ್ದ ಯೋಜನೆಯನ್ನು ಉದ್ಘಾಟನೆ ಮಾಡಲು ಪ್ರಧಾನ ಮಂತ್ರಿಗಳನ್ನು ರಾಜ್ಯ ಬಿಜೆಪಿ ಸರ್ಕಾರ ಕರೆದುಕೊಂಡು ಬರುತ್ತಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಬಿಟ್ಟರೆ ಒಂದೆ ಒಂದು ಹೊಸ ಕಾರ್ಯಕ್ರಮವನ್ನು ಮಾಡಿ ಅನುಷ್ಠಾನಗೊಳಿಸಲಿಲ್ಲ.

ಎರಡನೆ ಹಂತದ ಈ ಯೋಜನೆಯಲ್ಲಿ ಸುಮಾರು 452 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಆರ್ಥಿಕ ಇಲಾಖೆಯಿಂದ ಯಾವುದೆ ಅನುಮೋದನೆಯನ್ನೂ ಪಡೆಯದೆ ನಿಯಮ ಉಲ್ಲಂಘಿಸಿ ಭ್ರಷ್ಟಾಚಾರ ಎಸಗಲಾಗಿದೆಯೆಂದು ವರದಿಯಾಗಿದೆ. ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮಾಹಿತಿ ಕಳಿಸಿ ಎಂದು ಆರ್ಥಿಕ ಇಲಾಖೆಯೆ ತಿಳಿಸಿದೆ.

 ಅಂದರೆ ವ್ಯಾಪಕ ಭ್ರಷ್ಟಾಚಾರ ಮಾಡಿ ನಿಯಮ ಉಲ್ಲಂಘಿಸಿ ಹೆಚ್ಚುವರಿ ಹಣ ನುಂಗಿ ಹಾಕಿರುವ ರಾಜ್ಯ ಬಿಜೆಪಿ ಸರ್ಕಾರದ ಎರಡನೆ ಹಂತದ ಈ ಯೋಜನೆಯನ್ನು ‘ ನಾ ಖಾವೂಂಗ, ನಾ ಖಾನೆದೂಂಗ’ ಎಂದು ಮತ್ತು ‘ಚೌಕಿದಾರ’ ಎಂದು ಹೇಳಿಕೊಂಡು ಓಟು ಗಿಟ್ಟಿಸಿಕೊಂಡ ನರೇಂದ್ರ ಮೋದಿಯವರು ಯೋಜನೆ ಉದ್ಘಾಟಿಸಲು ಬರುತ್ತಿದ್ದಾರೆ. ಇದಕ್ಕಿಂತ ಅವಮಾನಕಾರಿಯಾದ ಸಂಗತಿ ಯಾವುದಾದರೂ ಇದೆಯಾ?

ಕಂದಾಯ ಗ್ರಾಮಗಳಿಗೆ ಹಕ್ಕು ಪತ್ರ:

ಅನೇಕ ದಶಕಗಳ ಕಾಲ ಲಂಬಾಣಿ ತಾಂಡಾ, ಗೊಲ್ಲರು ಮುಂತಾದ ಪಶುಪಾಲಕ ಸಮುದಾಯಗಳು ಹಾಗೂ ಇತರರು ವಾಸಿಸುವ ಹಟ್ಟಿ, ಪಾಳ್ಯ, ಹಾಡಿ, ಮಜರೆ , ಕಾಲೋನಿ ಮುಂತಾದ ಸ್ವತಂತ್ರ ಅಸ್ತಿತ್ವವಿಲ್ಲದ, ಮುಖ್ಯ ಕಂದಾಯ ಗ್ರಾಮಗಳ ಜೊತೆ ಸೇರಿ ಹೋಗಿ ಅಭಿವೃದ್ಧಿಯನ್ನೆ ಕಾಣದಾಗಿದ್ದ ಅನೇಕ ಹಿಂದುಳಿದ ಮತ್ತು ದಲಿತ ಸಮುದಾಯಗಳ ಜನರ ಕಲ್ಯಾಣಕ್ಕೆಂದು ನಮ್ಮ ಸರ್ಕಾರ ಸ್ವತಂತ್ರ ಕಂದಾಯ ಗ್ರಾಮಗಳ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಆಗ ಈ ಯೋಜನೆಗೆ ಬಿಜೆಪಿಯ ಹಲವರು ವಿರೋಧ ಮಾಡಿದ್ದರು.

ಶತಮಾನಗಳ ಕಾಲದಿಂದ ವಾಸಿಸುತ್ತಿದ್ದರೂ ಈ ಜಾಗಗಳ ಮೇಲೆ ಈ ದಮನಿತ ಸಮುದಾಯಗಳಿಗೆ ಯಾವುದೆ ಹಕ್ಕುಗಳು ಇರಲಿಲ್ಲ. ಅರಣ್ಯ ಭೂಮಿ, ಸರ್ಕಾರಿ ಭೂಮಿ ಹಾಗೂ ಇತರೆ ಯಾರದೊ ಖಾಸಗಿ ಭೂಮಿಯಲ್ಲಿ ಈ ಜನರು ವಾಸಿಸುತ್ತಿದ್ದರು. ಅದೆಷ್ಟೊ ವರ್ಷಗಳಿಂದ ವಾಸಿಸುತ್ತಿದ್ದರೂ ಸಹ ಜಾಗ ಖಾಲಿ ಮಾಡುವಂತೆ ಅನೇಕರಿಗೆ ಚಿತ್ರಹಿಂಸೆಗಳನ್ನು ಮಾಡಿದ್ದ ಉದಾಹರಣೆಗಳೂ ಇವೆ.

ಇದನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರವು ಈ ಸಮಸ್ಯೆಯನ್ನು ಅಧ್ಯಯನ ಮಾಡಿ ವರದಿ ನಿಡಲು ನರಸಿಂಹಯ್ಯ ಸಮಿತಿಯನ್ನು ನೇಮಕ ಮಾಡಿತ್ತು. ನರಸಿಂಹಯ್ಯನವರ ಸಮಿತಿ ವರದಿ ನೀಡಿದ ಕೂಡಲೆ ನಾವು ಭೂ ಕಂದಾಯ ಕಾಯ್ದೆಯ ಸೆಕ್ಷನ್ 94ಡಿ ಮತ್ತು ಭೂ ಸುಧಾರಣಾ ಕಾಯ್ದೆಯ 38ಎ ಗಳಿಗೆ ತಿದ್ದುಪಡಿ ತಂದೆವು ಹಾಗೂ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಅರಣ್ಯ ಹಕ್ಕು ಕಾಯ್ದೆಗೆ ನಿಯಮಾವಳಿಗಳನ್ನು ರೂಪಿಸಿದ್ದೆವು.

ಇಷ್ಟನ್ನು ಮಾಡಿ ಸುಮ್ಮನಾಗಲಿಲ್ಲ. 2017 ರಿಂದ ಅನುಷ್ಠಾನಕ್ಕೆ ಮುಂದಾದೆವು. ಕೇವಲ 11 ತಿಂಗಳಲ್ಲಿ 2800ಕ್ಕೂ ಅಧಿಕ ದಾಖಲೆ ರಹಿತ ಗ್ರಾಮಗಳನ್ನು ಗುರ್ತಿಸಿ ಅವುಗಳನ್ನು ಕಂದಾಯ ಗ್ರಾಮ ಮಾಡಲು 2300 ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ತರಿಸಿಕೊಂಡು 1300ಕ್ಕೂ ಹೆಚ್ಚಿನ ಗ್ರಾಮಗಳನ್ನು ಕಂದಾಯ ಗ್ರಾಮ ಎಂದು ಅಧಿಸೂಚನೆ ಹೊರಡಿಸಿದ್ದೆವು.

ಸ್ವಂತ ಕೆಲಸ ಮಾಡಿ ಗೊತ್ತಿಲ್ಲದ ಬಿಜೆಪಿಯವರು ನಾವು ಮಾಡಿದ್ದರ ಕ್ರೆಡಿಟ್ಟು ತೆಗೆದುಕೊಳ್ಳಲು ಹೊರಟಿದ್ದಾರೆ. ಇದಕ್ಕಿಂತ ದುರಂತ ಬೇರೇನಾದರೂ ಇದೆಯೆ? ಎಂದು ನರೇಂದ್ರ ಮೋದಿಯವರೆ ಹೇಳಬೇಕು.

Tags: BJPsiddaramaiaḩ amit sha narendra modi karnatakaನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಲಿಂಗರಾಜು “ಕೈ” ಹಿಡಿಯಲಿದ್ದಾರಾ ಚೆನ್ನಗಿರಿ ಕ್ಷೇತ್ರದ ಮತದಾರರು…!

Next Post

ಕೋಟಿ ಕೋಟಿ ಲೂಟಿ ಮಾಡೋ ಅಧಿಕಾರಿಗಳಿಗೆ ಒಂದು ಪ್ರಶ್ನೆ ಮಾಡಲ್ಲ : Roopesh Rajanna | pentagon AnthologyFilm

Related Posts

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
0

ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ಸಚಿವರು ಬೀದರ್ ಪ್ರವಾಸದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಇಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ...

Read moreDetails

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025
Next Post
ಕೋಟಿ ಕೋಟಿ ಲೂಟಿ ಮಾಡೋ ಅಧಿಕಾರಿಗಳಿಗೆ ಒಂದು ಪ್ರಶ್ನೆ ಮಾಡಲ್ಲ : Roopesh Rajanna | pentagon AnthologyFilm

ಕೋಟಿ ಕೋಟಿ ಲೂಟಿ ಮಾಡೋ ಅಧಿಕಾರಿಗಳಿಗೆ ಒಂದು ಪ್ರಶ್ನೆ ಮಾಡಲ್ಲ : Roopesh Rajanna | pentagon AnthologyFilm

Please login to join discussion

Recent News

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada