ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಶ್ರೀರಾಮ ಘೋಷಣೆ ವಿಚಾರದಲ್ಲಿ ಘರ್ಷಣೆ ನಡೆದಿದೆ. ಮೂವರು ಯುವಕರು ಕಾರಿನಲ್ಲಿ ಹೋಗುವಾಗ ಮುಸ್ಲಿಂ ಸಮುದಾಯ ಇಬ್ಬರು ಬಂದು ಗಲಾಟೆ ಮಾಡಿದ್ದರು. ಆ ಬಳಿಕ ಮತ್ತೆ ಇಬ್ಬರು ಬಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದರು ಎಂದು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈ ಶ್ರೀರಾಮ್ ಹೇಳ್ಬೇಕಾ..? ಎಂದು ಪ್ರಶ್ನಿಸಿದ್ದ ಮುಸ್ಲಿಂ ಸಮುದಾಯ ಹುಡುಗರು. ಜೈ ಶ್ರೀರಾಮ್ ನೋ, ಓನ್ಲಿ ಅಲ್ಲಾಹ್ ಅಕ್ಬರ್ ಎಂದಿರುವ ಮಾತುಗಳು ರೆಕಾರ್ಡ್ ಆಗಿದ್ದವು. ಆಗ ನಾವು ನಿಮ್ಮ ಹಬ್ಬದಲ್ಲಿ ಏನಾದ್ರು ಬರ್ತೀವಾ..? ನಮ್ ಹಬ್ಬದಲ್ಲಿ ನಾವು ಏನಾದ್ರು ಹೇಳಿಕೊಳ್ತೇವೆ ಎಂದಿದ್ದರು ಹಿಂದೂ ಸಮುದಾಯದ ಹುಡುಗರು. ಆ ಬಳಿಕ ಹಲ್ಲೆ ಮಾಡಿದ್ರು ಎಂದು ದೂರು ದಾಖಲಾಗಿತ್ತು.
ಈ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾತನಾಡಿ, ವಿದ್ಯಾರಣ್ಯಪುರದ ಬೆಟ್ಟಹಳ್ಳಿ ಬಳಿ ಈ ಘಟನೆ ನಡೆದಿದೆ. ಶ್ರೀರಾಮ ನವಮಿ ಮುಗಿಸಿಕೊಂಡು ಕಾರಿನಲ್ಲಿ ಹೋಗ್ತಿದ್ದ ಹುಡುಗರನ್ನು ತಡೆದು ಹಲ್ಲೆ ಮಾಡಿದ್ದಾರೆ. ಅಲ್ಲಾಹ್ ಎಂದು ಕೂಗುವಂತೆ ಒತ್ತಡ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ ಎಂದಿದ್ದರು. ಇನ್ನು ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾಗಿರುವ ಯುವಕನನ್ನು ಪವನ್ ಕುಮಾರ್ ಎಂದು ಗುರ್ತಿಸಲಾಗಿದ್ದು, ಇನ್ನಿಬ್ಬರು ಅಪ್ರಾಪ್ತ ಬಾಲಕರಾಗಿದ್ದಾರೆ. IPC ಸೆಕ್ಷನ್ 295A, 298, 143, 147, 504, 324, 326, 149, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ, ಹಲ್ಲೆ, ಅಕ್ರಮವಾಗಿ ಕೂಟ ಸೇರುವುದು ಸೇರಿದಂತೆ ಸಾಕಷ್ಟು ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ. ಓರ್ವನ ಮೂಗಿಗೆ ಪೆಟ್ಟಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಕಾರಿನಲ್ಲಿ ಧ್ವಜ ಕಟ್ಟಿಕೊಂಡು, ಶ್ರೀರಾಮನ ಹಾಡನ್ನು ಹಾಕಿಕೊಂಡು ಎಂಎಸ್ ಪಾಳ್ಯ ಕಡೆಗೆ ಹೋಗುವಾಗ ಇಬ್ಬರು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಗಲಾಟೆ ಮಾಡಿದರು. ನಾವು ಯಾವುದೇ ಘೋಷಣೆ (Slogan) ಕೂಗಿರಲಿಲ್ಲ. ಆದರೂ ಕಿರಿಕ್ ಮಾಡಿ ಹಲ್ಲೆ ಮಾಡಿದರು ಎಂದು ಗಾಯಾಳು ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾನೆ.
ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ನಡೆದಿರುವ ಘಟನೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಓಲೈಕೆ ರಾಜಕಾರಣ ಅನ್ನೋ ಆರೋಪವನ್ನು ಮಾಡಿದ್ದರು. ಆದರೆ ಕಾಂಗ್ರೆಸ್ ಮಾತ್ರ ನಾವು ಯಾವುದೇ ರೀತಿಯ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಕುಮ್ಮಕು ಕೊಡುವ ಕೆಲಸ ಮಾಡುವುದಿಲ್ಲ. ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ದಂಡಿಸಲಾಗುವುದು ಎಂದಿತ್ತು. ಆದರಂತೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿದೆ. ಈ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯುವಕರನ್ನು ಭೇಟಿ ಮಾಡಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಇದೀಗ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.
ಕೃಷ್ಣಮಣಿ