ಕಳೆದ ವಾರ ಪ್ರಧಾನಿ ಮೋದಿ (PM MODI) ಹೊಸ ಸಂಸತ್ತನ್ನು (NEW parliment house) ಉದ್ಘಾಟನೆ ಮಾಡುತ್ತಿರುವಾಗ ದೇಶಕ್ಕಾಗಿ ಪದಕ ಗೆದ್ದ ಕ್ರೀಡಾ ಪಟುಗಳು ತ್ರಿವರ್ಣ ಧ್ವಜ (flag) ಜೊತೆಗೆ ನೆಲದಲ್ಲಿ ಬಿದ್ದು ಪ್ರತಿರೋಧ ಒಡ್ಡುತ್ತಿರುವ ಚಿತ್ರವನ್ನು ನೋಡಿದಾಗ, ಭಾರತದ ಕ್ರೀಡೆ (Sports) ಎಲ್ಲಿ ನಿಂತಿದೆ ಎಂಬ ಪ್ರಶ್ನೆಗೆ ಉತ್ತರವಾಗುತ್ತದೆ. ಭಾರತದ ಮಹಿಳಾ ಕುಸ್ತಿಪಟುಗಳು (Women wrestlers) ತಮ್ಮ ಪದಕಗಳನ್ನು (Medals) ಗಂಗಾನದಿಯಲ್ಲಿ ಎಸೆಯಲು ಹೊರಟಾಗ ʼಈ ದೇಶದಲ್ಲಿ ನಮಗಾಗಿ ಏನೂ ಉಳಿದಿಲ್ಲʼ ಎಂದ ವಾಕ್ಯ ದೇಶದ ಕ್ರೀಡೆಯ ಭವಿಷ್ಯವಾಣಿಯಂತೆ ಕಂಡರೆ ತಪ್ಪೇನಿಲ್ಲ.
ಕಳೆದ ಕೆಲವು ತಿಂಗಳ ಕಾಲ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕ್ರೀಡಾಪಟುಗಳನ್ನು ನಮ್ಮ ಪ್ರಭುತ್ವ ಹೇಗೆ ನಡೆದುಕೊಂಡಿದೆ ಎಂಬುದನ್ನು ಇಡಿ ವಿಶ್ವವೇ ನೋಡುತ್ತಿದೆ. ಲೈಂಗಿಕ ದೌರ್ಜನ್ಯದ (Sexual assault) ಆರೋಪ ಮಾಡಿರುವ ಸಂತ್ರಸ್ತೆಯರ ಜೊತೆಗೆ ಸಾಕ್ಷಿ ನೀಡುವಂತೆ ಚೂರೂ ಮಾನವೀಯತೆ ಇಲ್ಲದೆ ಆಡಳಿತರೂಢ ಪಕ್ಷ ಕೇಳುತ್ತಿದೆ. ಪದಕ ಗೆದ್ದಾಗ ಕ್ರೀಡಾಪಟುಗಳ ಜೊತೆಗೆ ಸೆಲ್ಫಿ ಪಡೆದುಕೊಂಡ ಪ್ರಧಾನಿ ಮೋದಿ (PM MODI) ರಾಜಪ್ರಭುತ್ವದ ರಾಜದಂಡಕ್ಕೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದಾರೆಯೆ ಹೊರತು, ಮಹಿಳಾ ಸಾಧಕಿಯರ ಬಗ್ಗೆ ತುಟಿ ಬಿಚ್ಚುತ್ತಿಲ್ಲ.
ಪ್ರಜಾಪ್ರಭುತ್ವದ ದೇಶದ ಸಂಸತ್ತನ್ನು ಬಹುಸಂಖ್ಯಾತ ಧಾರ್ಮಿಕ ವಿಧಿವಿಧಾನದ ಮೂಲಕ ಉದ್ಘಾಟನೆ ಮಾಡುತ್ತಿರುವಾಗ, ಪ್ರತಿಭಟನೆ ಎಂಬ ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರವನ್ನು ಕುಸ್ತಿಪಟುಗಳಿಗೆ ನಿರಾಕರಿಸಿ, ಅವರ ಆಗ್ರಹಗಳಿಗೆ ಬೆಲೆ ನೀಡದೆ ಅವರನ್ನು ಅಮಾನವೀಯವಾಗಿ ಬಂಧಿಸಿದ್ದು ಭಾರತ ಒಕ್ಕೂಟ ವಿಶ್ವದ ಮುಂದೆ ತಲೆತಗ್ಗಿಸುವಂತೆ ನಡೆದುಕೊಳ್ಳಲಾಯಿತು.
ಒಲಿಂಪಿಕ್ಸ್ಗೆ ಪ್ರವೇಶಿಸುವ ಕ್ರೀಡಾಪಟುಗಳೆಂದರೆ ಕೋಟ್ಯಾಂತರ ಭಾರತೀಯರಿಗೆ ಮ್ಯಾಜಿಕ್ ಮಾಡುವ ಮಾಂತ್ರಿಕರು. ಜಾತ್ಯಾತೀರ ದೇಶದ ನಾಗರಿಕರಾದ ಭಾರತೀಯರಿಗೆ ಈ ಸಾಧಕರೇ ನಿಜವಾದ ದೇವತೆಗಳು. ಅವರ ಗೆಲುವುಗಳೇ ರಾಷ್ಟ್ರೀಯ ಹಬ್ಬ. ಈ ಹೆಮ್ಮೆಯ ಕ್ರೀಡಾಪಟುಗಳು ನಮ್ಮ ಪ್ರಜಾಪ್ರಭುತ್ವದ ಅತ್ಯುತ್ತಮ ಭೌತಿಕ ಪ್ರತಿನಿಧಿಗಳು. ಆದರೆ ಅವರನ್ನು, ಅವರ ಮಾತುಗಳನ್ನು ಕೇಳಿಸಿಕೊಳ್ಳದೆ ಆಡಳಿತರೂಢ ಪಕ್ಷ, ಅವರ ಬೆಂಬಲಿಗರು ಅವರನ್ನು ಕೆಟ್ಟದಾಗಿ ನಡೆಸಿಕೊಂಡವು. ರಾಜ ಪ್ರಭುತ್ವದ ಸೆಂಗೋಲ್ (Sengol) ಸಿಂಹಾಸನರೂಢವಾಗುತ್ತಿದ್ದಾಗ, ಪ್ರಜಾಪ್ರಭುತ್ವದ ಪ್ರತಿನಿಧಿಗಳನ್ನು ನೆಲಕ್ಕೆ ಕೊಡವಿ ಹಾಕಿದ್ದು ಪ್ರಜಾಪ್ರಭುತ್ವದ ವಿಪರ್ಯಾಸವಲ್ಲದೆ ಮತ್ತೇನು?
ದೇಶದ ಕೀರ್ತಿ ಪತಾಕೆ ಎತ್ತಿದ ಸಾಧಕರು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಹೊರಗೆ ತಮ್ಮ ಹಕ್ಕಿಗಾಗಿ ಪ್ರತಿಭಟನೆಯನ್ನು ನಡೆಸುತ್ತಿರುವಾಗ, ಅವರು ಲೈಂಗಿಕ ಆರೋಪ ಹೊರಿಸಿದ ಆರೋಪಿ, ಬ್ರಿಜ್ ಭೂಷಣ್ ಸಂಸತ್ತಿನಲ್ಲಿ ಕಾಣಿಸಿಕೊಂಡರು. ಅನ್ಯಾಯವಾಗಿದೆ ಎಂದು ಹೇಳಿ ಪ್ರತಿಭಟಿಸಿದವರ ವಿರುದ್ಧ ಗಲಭೆʼ, ‘ಕ್ರಿಮಿನಲ್ ದಾಳಿʼ, ‘ಕಾನೂನುಬಾಹಿರ ಸಭೆ’ ‘ಅವಿಧೇಯತೆ’ ಸೇರಿದಂತೆ ಏಳು ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ತಿಂಗಳುಗಳ ಕಾಲ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಸಂಯಮವನ್ನು ಗಮನಿಸಿದರೆ, ಇದು ನಗು ತರಿಸುತ್ತದೆ.
ಕುಸ್ತಿ ಪಂದ್ಯದಲ್ಲಿ ಬೆನ್ನು ನೆಲಕ್ಕೆ ತಾಗುವುದು ಎಂದರೆ ಕುಸ್ತಿ ಪಂದ್ಯ ಸೋತಂತೆ. ಮೊನ್ನೆಯ ಪ್ರತಿಭಟನೆಯಲ್ಲಿ ಕುಸ್ತಿ ಆಟದ ಚಾಂಪಿಯನ್ ಗಳು ತಮ್ಮ ಪ್ರತಿಭಟನೆಯನ್ನು ತಡೆಯಲು ಬಂದ ಯಾವುದೆ ಪೊಲೀಸರನ್ನು ಅನಾಮತ್ತಾಗಿ ಎತ್ತಿ ಬಿಸಾಕಬಹುದಿತ್ತು. ಆದರೆ ಕುಸ್ತಿಪಟುಗಳ ಬೆನ್ನು ನೆಲಕ್ಕೆ ಸ್ಪರ್ಶಿಸಿದರೂ ಕೂಡಾ ಅವರು ಪ್ರತಿರೋಧ ತೋರುತ್ತಿದ್ದರೆ ವಿನಃ, ಪೊಲೀಸರ ಮೇಲೆ ದಾಳಿ ಮಾಡಿರಲಿಲ್ಲ. ಆದರೂ, ಪ್ರಜಾಪ್ರಭುತ್ವದ ಮೇಲೆ ಇಷ್ಟೆಲ್ಲಾ ನಂಬಿಕೆಯಿಟ್ಟ ಕುಸ್ತಿಪಟುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಹಾಗಾಗಿಯೆ ಅವರು ತಾವು ಜೀವನ ಪರ್ಯಂತ ಕಷ್ಟಪಟ್ಟು ಗಳಿಸಿದ ಪದಕಗಳನ್ನು ಗಂಗಾನದಿಗೆ ಎಸೆಯುವಾಗ ʼಈ ದೇಶದಲ್ಲಿ ನಮಗಾಗಿ ಏನೂ ಉಳಿದಿಲ್ಲʼ ಎಂದು ಹೇಳಿದ್ದು. ಹಾಗೂ ಈ ಹೇಳಿಕೆ ದೇಶದ ಕ್ರೀಡೆಯ ಕರಾಳ ಭವಿಷ್ಯವಾಗಿ ಕಂಡಿದ್ದು ಮಾತ್ರ ಸುಳ್ಳಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಆಳುವ ಸರ್ಕಾರ ಈ ಬಗ್ಗೆ ಸ್ವಲ್ಪ ಗಮನಹರಿಸಿ, ಈ ಸರ್ಕಾರವನ್ನ ಜನ ಆಯ್ಕೆ ಮಾಡಿದ್ದಾರೆ. ನಾವು ಜನರ ಮಾತು ಕೇಳಬೇಕು ಎಂಬ ಸೂಕ್ಷ್ಮ ಪ್ರಜ್ಞೆಯನ್ನ ಬೆಳೆಸಿಕೊಳ್ಳಬೇಕಾಗಿದೆ. ಒಂದು ವೇಳೆ ಹಾಗಾಗದಿದ್ದ ಮತ್ತೊಮ್ಮೆ ರಾಜಪ್ರಭುತ್ವಕ್ಕೆ ಪರೋಕ್ಷವಾಗಿ ಸರ್ಕಾರ ಮನ್ನಣೆ ನೀಡಿದ ಹಾಗಾಗುವುದರಲ್ಲಿ ಅನುಮಾನವಿಲ್ಲ.