ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಲಸಿಕಾ ಉತ್ಸವ ನಡೆಸಬೇಕು ಎಂದು ಕರೆ ನೀಡಿದ್ದರೆ, ಇನ್ನೊಂದೆಡೆ ಮಹಾರಾಷ್ಟ್ರದ ಮುಂಬೈನಲ್ಲಿ ಲಸಿಕೆಗಳ ಕೊರತೆಯಿಂದ 70ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ. ಇತ್ತೀಚಿಗೆ ಕೋವಿಡ್ ಲಸಿಕೆಗಳ ಕೊರತೆಯಿದೆ ಎಂದು ಮಹಾರಾಷ್ಟ್ರ ಆರೋಗ್ಯ ಮಂತ್ರಿ ರಾಜೇಶ್ ತೋಪೆ ಅವರು ಹೇಳಿದ್ದರು. ಇದರ ಬೆನ್ನಲ್ಲೇ ಈಗ 70+ ಲಸಿಕಾ ಕೇಂದ್ರಗಳನ್ನು ಮುಚ್ಚಿರುವುದು ಲಸಿಕಾ ಅಭಿಯಾನಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಮುಚ್ಚಿರುವ ಲಸಿಕಾ ಕೇಂದ್ರಗಳಲ್ಲಿ ಜಂಬೋ ಲಸಿಕಾ ಕೇಂದ್ರವು ಸೇರಿದೆ. ಬಿಕೆಸಿಯಲ್ಲಿರುವ ಈ ಲಸಿಕಾ ಕೇಂದ್ರವು ಪ್ರಮುಖವಾದ ವಾಣಿಜ್ಯ ಕೇಂದ್ರವಾಗಿರುವುದರಿಂದ, ಹಲವು ಜನರು ಇಲ್ಲಿ ಲಸಿಕೆ ಪಡೆಯುತ್ತಿದ್ದರು. ಈಗ ಏಕಾಏಕಿ ಈ ಕೇಂದ್ರವನ್ನು ಮುಚ್ಚಿರುವುದರಿಂದ ಜನರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಹಿಂದೆ, ಒಂದು ದಿನಕ್ಕೆ ಮುಂಚಿತವಾಗಿಯೇ ಅಗತ್ಯವಿರುವಷ್ಟು ಲಸಿಕೆಗಳು ನಮ್ಮಲ್ಲಿ ಬಂದು ತಲುಪುತ್ತಿದ್ದವು. ಆದರೆ, ನಿನ್ನೆ ರಾತ್ರಿಯಿಂದ ಕಾಯುತ್ತಿದ್ದೇವೆ ಈ ವರೆಗೆ ನಮ್ಮಲ್ಲಿ ಲಸಿಕೆಗಳು ಬಂದಿಲ್ಲ,” ಎಂದು ಲಸಿಕಾ ಕೇಂದ್ರ ಡೀನ್ ಆಗಿರುವ ರಾಜೇಶ್ ಡೇರೆ ಹೇಳಿದ್ದಾರೆ.
ಮುಂಬೈನಲ್ಲಿರುವ 120 ಲಸಿಕಾ ಕೇಂದ್ರಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಕೇಂದ್ರಗಳು ಮುಚ್ಚಿವೆ ಎಂದು ಬ್ರಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಹೇಳಿದೆ. ಇವುಗಳಲ್ಲಿ 49 ಕೇಂದ್ರಗಳನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ ಜಂಟಿಯಾಗಿ ನಿರ್ವಹಿಸುತ್ತಿದೆ. ಇವುಗಳಲ್ಲಿ 40ರಿಂದ 50 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ.
ಲಸಿಕೆಗಳ ಕೊರತೆಯ ಬಗ್ಗೆ ಮಾತನಾಡಿರುವ ಮುಂಬೈ ಮೇಯರ್ ಕಿಶೋರಿ ಪೇಡ್ನೆಕರ್, ಹಲವು ಲಸಿಕಾ ಕೇಂದ್ರಗಳಲ್ಲಿ ಈಗ ಒಂದು ಲಸಿಕೆಯೂ ಇಲ್ಲ. ಅವುಗಳು ಕಾರ್ಯಾಚರಿಸುವುದನ್ನು ನಿಲ್ಲಿಸಿವೆ. ಇಂದು ಮುಂಬೈಗೆ 76 ಸಾವಿರದಿಂದ 1 ಲಕ್ಷದವರೆಗೆ ಲಸಿಕೆಗಳು ತಲುಪಬೇಕಿತ್ತು. ಇದರ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ನನಗೆ ತಲುಪಿಲ್ಲ, ಎಂದಿದ್ದಾರೆ.
ಈಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿರುವ ಲಸಿಕೆಗಳ ಕೊರತೆಯಿಂದ ಜನರು ಬಲಿಪಶುವಾಗಬೇಕಿದೆ. ಒಬ್ಬರ ಮೇಲೊಬ್ಬರು ದೋಷಾರೋಪಣೆ ಮಾಡುವ ಬದಲು, ಈ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕಿದೆ.