ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಬೇಸರದ ಸುದ್ದಿ ಹೊರಬಿದ್ದಿದ್ದು, ಮಾಜಿ ನಾಯಕ ಎಂ.ಎಸ್. ಧೋನಿ ಗಾಯದ ಕಾರಣದಿಂದ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ.

ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿರುವ 44 ವರ್ಷದ ಧೋನಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ತಂಡದ ಮೂಲಗಳು ತಿಳಿಸಿವೆ. ಕಳೆದ ಒಂದು ತಿಂಗಳಿನಿಂದ ಚೆನ್ನೈನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಧೋನಿ, ಇದೀಗ ಗಾಯದ ಹಿನ್ನೆಲೆಯಲ್ಲಿ ತಂಡದ ಜೊತೆ ಗುವಾಹಟಿಗೆ ಪ್ರಯಾಣಿಸದೆ ಚೆನ್ನೈನಲ್ಲೇ ಉಳಿದಿದ್ದಾರೆ. ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಮರಳುವ ನಿರೀಕ್ಷೆಯಿದ್ದರೂ, ಇದು ಇನ್ನೂ ಖಚಿತವಾಗಿಲ್ಲ.

ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಈ ಹಿಂದೆ ಸುಳಿವು ನೀಡಿದ್ದರು. ನಾಯಕ ರುತುರಾಜ್ ಗಾಯಕ್ವಾಡ್ ಜೊತೆಗೂಡಿ ಸಂಜು ತಂಡದ ಪ್ರಮುಖ ನಿರ್ಧಾರಗಳಲ್ಲಿ ಭಾಗಿಯಾಗಲಿದ್ದಾರೆ.

ಗಾಯದಿಂದ ಚೇತರಿಸಿಕೊಂಡು ಮರಳಿದರೂ, ಧೋನಿ ಎಲ್ಲಾ ಪಂದ್ಯಗಳಲ್ಲಿ ಆಡಲಾರರು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ‘ಇಂಪ್ಯಾಕ್ಟ್ ಸಬ್’ ಆಟಗಾರನಾಗಿ ಬಳಸಿಕೊಳ್ಳುವ ಯೋಚನೆ ಮ್ಯಾನೇಜ್ಮೆಂಟ್ನಲ್ಲಿ ಇದೆ. ಕಳೆದ ಎರಡು ಸೀಸನ್ಗಳಲ್ಲಿಯೂ ಧೋನಿ ಕೊನೆಯ ಓವರ್ಗಳಲ್ಲಿ ಮಾತ್ರ ಬ್ಯಾಟಿಂಗ್ಗೆ ಇಳಿಯುವ ತಂತ್ರ ಅನುಸರಿಸಿದ್ದರು.
ಇದೇ ವೇಳೆ, ಧೋನಿ ಅನುಪಸ್ಥಿತಿಯಿಂದ ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ವಿಶೇಷವಾಗಿ 14.2 ಕೋಟಿ ರೂಪಾಯಿಗೆ ತಂಡ ಸೇರಿಕೊಂಡಿರುವ ಕಾರ್ತಿಕ್ ಶರ್ಮಾ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕವೂ ಐಪಿಎಲ್ನಲ್ಲಿ ಸಿಎಸ್ಕೆ ಪರವಾಗಿ ಆಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಚಾಂಪಿಯನ್ ಪಟ್ಟವನ್ನು ಗೆದ್ದಿದ್ದು, 2023ರಲ್ಲಿ ಕೊನೆಯ ಬಾರಿ ಟ್ರೋಫಿ ಗೆದ್ದಿತ್ತು. 2026ರ ಐಪಿಎಲ್ ಧೋನಿ ಪಾಲಿಗೆ ಕೊನೆಯ ಸೀಸನ್ ಆಗುವ ಸಾಧ್ಯತೆಗಳೂ ವ್ಯಕ್ತವಾಗಿವೆ.






