ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು 2025ರಲ್ಲಿ ಗಾಯಕಿ ವಾರಿಜಾಶ್ರೀ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ವೇಳೆ ರಘು ದೀಕ್ಷಿತ್ ಅವರಿಗೆ 50 ವರ್ಷ ಹಾಗೂ ವಾರಿಜಾಶ್ರೀ ಅವರಿಗೆ 34 ವರ್ಷ ವಯಸ್ಸಾಗಿದ್ದು, ಇಬ್ಬರ ನಡುವಿನ 16 ವರ್ಷಗಳ ವಯಸ್ಸಿನ ಅಂತರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಕುರಿತು ರಘು ದೀಕ್ಷಿತ್ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
‘ಹಿಂದುಸ್ತಾನ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಘು ದೀಕ್ಷಿತ್, “ನಾವಿಬ್ಬರೂ ಒಟ್ಟಿಗೆ ನಗುತ್ತೇವೆ, ಸಂಗೀತ ಸೃಷ್ಟಿಸುತ್ತೇವೆ, ಪ್ರವಾಸ ಮಾಡುತ್ತೇವೆ. ಮುಖ್ಯವಾಗಿ ಪರಸ್ಪರರಿಗೆ ಅಗತ್ಯವಾದ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗೌರವವನ್ನು ನೀಡುತ್ತೇವೆ. ಸಂಗೀತ ನಮ್ಮಿಬ್ಬರ ಜೀವನದ ಅವಿಭಾಜ್ಯ ಭಾಗವಾದರೂ, ನಮ್ಮ ಸಂಬಂಧ ಕೇವಲ ಸಂಗೀತಕ್ಕೆ ಸೀಮಿತವಾಗಿಲ್ಲ. ಒಬ್ಬರ ಬೆಳವಣಿಗೆಗೆ ಮತ್ತೊಬ್ಬರು ಸದಾ ಬೆಂಬಲವಾಗಿ ನಿಲ್ಲುತ್ತೇವೆ” ಎಂದು ಹೇಳಿದರು.

“ವಾರಿಜಾಶ್ರೀ ಒಬ್ಬ ಅದ್ಭುತ ಸಂಗೀತಗಾರ್ತಿ ಮಾತ್ರವಲ್ಲ, ಅದಕ್ಕಿಂತಲೂ ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುವುದು ಸಹಜ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಯೊಂದು ಪ್ರತಿಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಹಾಗೆ ಮಾಡಿದರೆ ಮಾತ್ರ ಮನಸ್ಸಿನ ನೆಮ್ಮದಿ ಉಳಿಸಿಕೊಳ್ಳಬಹುದು” ಎಂದು ಅವರು ಹೇಳಿದರು.”ನಮ್ಮನ್ನು ನಿಜವಾಗಿ ಪ್ರೀತಿಸುವವರು ನಮ್ಮೊಂದಿಗಿದ್ದಾರೆ. ನಮ್ಮ ನಿಜವಾದ ಅಭಿಮಾನಿಗಳು ಸದಾ ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದ್ದಾರೆ. ಅದಕ್ಕಿಂತ ದೊಡ್ಡ ಬೆಂಬಲ ಮತ್ತೊಂದಿಲ್ಲ. ಎಲ್ಲರಿಗೂ ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ವಿವರಣೆ ನೀಡಬೇಕೆಂಬ ಅಗತ್ಯ ನಮಗಿಲ್ಲ” ಎಂದು ರಘು ದೀಕ್ಷಿತ್ ಸ್ಪಷ್ಟಪಡಿಸಿದರು.
“ಪ್ರೀತಿ ಎನ್ನುವುದು ಇತರರಿಗೆ ಕಾಣದ ಸೌಂದರ್ಯವನ್ನು ಕಂಡುಕೊಳ್ಳುವ ಭಾವನೆ. ನಾವು ಹಲವು ವರ್ಷಗಳ ಕಾಲ ಸ್ನೇಹಿತರಾಗಿದ್ದೆವು. ಆ ಸ್ನೇಹವೇ ಸಹಜವಾಗಿ ಪ್ರೀತಿಯಾಗಿ, ನಂತರ ಮದುವೆಯ ನಿರ್ಧಾರಕ್ಕೆ ದಾರಿ ಮಾಡಿಕೊಟ್ಟಿತು. ಸಂಬಂಧದಲ್ಲಿ ಪ್ರೀತಿ, ಗೌರವ ಮತ್ತು ನಂಬಿಕೆ ಇದ್ದಾಗ ಹೊರಗಿನ ಟೀಕೆಗಳು ಅಥವಾ ಗಾಸಿಪ್‌ಗಳಿಗೆ ಯಾವುದೇ ಮಹತ್ವ ಇರುವುದಿಲ್ಲ. ವಾರಿಜಾಶ್ರೀ ಅವರೊಂದಿಗೆ ಬದುಕು ಕಟ್ಟಿಕೊಂಡಿರುವುದು ನನ್ನ ಜೀವನದ ಅತ್ಯಂತ ಸಂತೋಷದ ಹಾಗೂ ತೃಪ್ತಿಕರ ಪ್ರಯಾಣವಾಗಿದೆ” ಎಂದು ರಘು ದೀಕ್ಷಿತ್ ಮನದಾಳದ ಮಾತುಗಳನ್ನು ಹಂಚಿಕೊಂಡರು.






