2019 ರ ಡಿಸೆಂಬರ್ನಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಫೆಬ್ರವರಿ 4, ಶನಿವಾರದಂದು ವಿದ್ಯಾರ್ಥಿ ಮುಖಂಡರಾದ ಶರ್ಜೀಲ್ ಇಮಾಮ್, ಸಫೂರ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ ಎಂಟು ಜನರನ್ನು ಬಿಡುಗಡೆ ಮಾಡಿದೆ.
ಸಾಕೇತ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಅರುಲ್ ವರ್ಮಾ ಅವರು ‘ನಿಜವಾದ ದುಷ್ಕರ್ಮಿಗಳನ್ನು’ ಬಂಧಿಸಲು ಪ್ರಾಸಿಕ್ಯೂಷನ್ಗೆ ಸಾಧ್ಯವಾಗಲಿಲ್ಲ ಆದರೆ ಈ ಆರೋಪಿಗಳನ್ನು “ಬಲಿಪಶುಗಳು” ಮಾಡಲಾಗಿದೆ ಎಂದು ಹೇಳಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಪ್ರಾಸಿಕ್ಯೂಷನ್ ‘ತಪ್ಪು ಮತ್ತು ಕಲ್ಪಿತ ಆರೋಪಪಟ್ಟಿಗಳನ್ನು’ ಸಲ್ಲಿಸಿದೆ ಎಂದು ನ್ಯಾಯಾಧೀಶರು ಹೇಳಿದ್ದು, ಪೊಲೀಸರು “ಪ್ರತಿಭಟನಾನಿರತರಲ್ಲೇ ಕೆಲವರನ್ನು ಆರೋಪಿಗಳಾಗಿ ಮತ್ತು ಇತರರನ್ನು ಪೊಲೀಸ್ ಸಾಕ್ಷಿಗಳಾಗಿ” ಆಯ್ಕೆ ಮಾಡಿದ್ದಾರೆ. ಈ “ಚೆರ್ರಿ ಪಿಕಿಂಗ್” ನ್ಯಾಯಸಮ್ಮತತೆಯ ನಿಯಮಕ್ಕೆ ಹಾನಿಕಾರಕವಾಗಿದೆ ಎಂದೂ ನ್ಯಾಯಾಲಯ ಹೇಳಿದೆ.
ನ್ಯಾಯಾಧೀಶ ವರ್ಮಾ ಅವರು “ಭಿನ್ನಾಭಿಪ್ರಾಯ ಎಂಬುವುದು ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಮೂಲಭೂತ ಹಕ್ಕಿನ ವಿಸ್ತರಿತ ರೂಪವಾಗಿದೆ”ಎಂದಿದ್ದಾರೆ. ಈ ಬಗ್ಗೆ ವರದಿ ಮಾಡಿರುವ ‘ಇಂಡಿಯನ್ ಎಕ್ಸ್ಪ್ರೆಸ್’ ಭಿನ್ನಾಭಿಪ್ರಾಯ ಹೊಂದುವ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಒತ್ತಿ ಹೇಳಿದ ನ್ಯಾಯಾಧೀಶರು ” ನಮ್ಮ ಮನಸಾಕ್ಷಿಗೆ ಒಪ್ಪಿಗೆಯಾಗದ್ದನ್ನು ಪಾಲಿಸಲು ಸಾಧ್ಯವೇ ಇಲ್ಲ. ಆ ರೀತಿ ನಿರಾಕರಿಸುವುದು ನಮ್ಮ ಕರ್ತವ್ಯವೂ ಹೌದು” ಎಂದಿದೆ. ಅಲ್ಲದೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಭಿನ್ನಾಭಿಪ್ರಾಯ ಎನ್ನುವುದು ‘ಪ್ರಜಾಪ್ರಭುತ್ವದ ಸುರಕ್ಷತಾ ಕವಾಟ’ ಎಂದಿರುವುದನ್ನೂ ಕೋಟ್ ಮಾಡಿದ್ದಾರೆ.

ಪ್ರಾಸಿಕ್ಯೂಷನ್ನ ವೈಫಲ್ಯದ ಬಗ್ಗೆ ಹೇಳುತ್ತಾ ವರ್ಮಾ ಅವರು ಪ್ರಸ್ತುತ ಪ್ರಕರಣದಲ್ಲಿ ಮೂರು ಮೂರು ಚಾರ್ಜ್ಶೀಟ್ಗಳನ್ನು ಸಲ್ಲಿಸಲಾಗಿದೆ. ಆದರೆ ಎಲ್ಲಿಯೂ ಯಾವ ಚಾರ್ಜ್ಶೀಟ್ಗಳೂ ಪ್ರಕರಣದ ಬಗ್ಗೆ ಯಾವ ಪೂರಕ ಮಾಹಿತಿಯನ್ನೂ ನೀಡಲು ಸಮರ್ಥವಾಗಿಲ್ಲ. ಆರೋಪಿತರು ಗಲಭೆಯನ್ನು ಪ್ರಾರಂಭಿಸಿದ್ದಾರೆ, ಹಿಂಸಾಚಾರ ಎಸಗಿದ್ದಾರೆ ಎನ್ನುವುದಕ್ಜೆ ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದಾರೆ. “ಖಂಡಿತವಾಗಿಯೂ ಕಾನೂನು ಕ್ರಮಗಳನ್ನು ಊಹೆ ಮತ್ತು ಉದ್ಯೋಗದ ಆಧಾರದ ಮೇಲೆ ಕೈಗೊಳ್ಳಲು ಸಾಧ್ಯವಿಲ್ಲ, ಮತ್ತು ಚಾರ್ಜ್ಶೀಟ್ಗಳನ್ನು ಸಂಭವನೀಯತೆಗಳ ಆಧಾರದ ಮೇಲೆ ಸಲ್ಲಿಸಲು ಸಾಧ್ಯವಿಲ್ಲ” ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳನ್ನು ಬಲಿಪಶುಗಳಾಗಿ ಮಾಡುವುದಕ್ಕಿಂತ ಅವರ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಪೊಲೀಸರು ವಿಶ್ವಾಸಾರ್ಹ ಗುಪ್ತಚರವನ್ನು ಮತ್ತು ತಂತ್ರಜ್ಞಾನವನ್ನು ಬಳಸಬೇಕಾಗಿತ್ತು ಎಂದು ನ್ಯಾಯಾಲಯವು ಹೇಳಿದೆ.
ಈ ಬಿಡುಗಡೆಯ ಹೊರತಾಗಿಯೂ ಶಾರ್ಜಿಲ್ ಇಮಾಮ್ರ ಬಂಧನವು ಮುಂದುವರಿಯಲಿದ್ದು 2020ರ ದೆಹಲಿ ಗಲಭೆಯಲ್ಲೂ ಅವರ ಮೇಲೆ ಪಿತೂರಿ ಮಾಡಿದ ಆರೋಪಗಳನ್ನು ಹೊರಿಸಲಾಗಿದ್ದು UAPA ಅಡಿಯಲ್ಲಿ ಪ್ರಕರಣ ದಾಖಲಾಗಿದೆ.