ಪಂಚಮಸಾಲಿ ಸಮುದಾಯ 2A ಮೀಸಲಾತಿಗಾಗಿ ಕಳೆದ ಒಂದೆರಡು ವರ್ಷಗಳಿಂದ ಭಾರೀ ಹೋರಾಟ ನಡೆಸುತ್ತಿದೆ. ಕಳೆದ ಡಿಸೆಂಬರ್ನಲ್ಲಿ ಅಂತಿಮ ಗಡುವು ಕೊಟ್ಟಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಕೇವಲ 3B ಪ್ರವರ್ಗದ ಬದಲು 2D ಪ್ರವರ್ಗ ಎಂದು ಹೊಸ ಪ್ರವರ್ಗ ಮಾಡ್ತೇವೆ ಎಂದಿದ್ದರು. ಆದರೆ ಅದರಿಂದ ಯಾವುದೇ ಲಾಭ ಇಲ್ಲ ಖಚಿತ ಮಾಡಿಕೊಂಡ ಪಂಚಮಸಾಲಿ ಸಮುದಾಯ, ಹೋರಾಟವನ್ನು ಮುಂದುವರಿಸಿದೆ. ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಫ್ರೀಡಂಪಾರ್ಕ್ನಲ್ಲಿ ಹೋರಾಟ ಮುಂದುವರಿಸಿದ್ದಾರೆ. ಇದರ ಜೊತೆಗೆ ರಾಜಕೀಯವಾಗಿ ತಿರುಗೇಟು ನೀಡುವುದಕ್ಕೆ ಭಾರೀ ತಯಾರಿ ನಡೆಯುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿಯೇ ರಾಜಕೀಯದಲ್ಲಿ ನೋಡಿಕೊಳ್ಳೋಣ ಎಂದ ಮರು ದಿನವೇ ಸಿಎಂ ಬಸವರಾಜ ಬೊಮ್ಮಾಯಿ ಎದುರಾಳಿ ಯಾರು ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಅತ್ಯಧಿಕ ಪಂಚಮಸಾಲಿ ಸಮುದಾಯದ ಜನರಿದ್ದು, ಮೀಸಲಾತಿ ನೀಡಲು ಹಿಂದೇಟು ಹಾಕಿದ ಮುಖ್ಯಮಂತ್ರಿಗೇ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಜೈಲಿನಿಂದ ಬಂದವರು ಸಿಎಂ ವಿರುದ್ಧ ಫೈಟ್ಗೆ ತಯಾರಿ..!
ಧಾರವಾಡದಲ್ಲಿ ಈ ಬಗ್ಗೆ ಮಹತ್ವದ ಮಾಹಿತಿ ಹೊರ ಹಾಕಿರುವ ಮಾಜಿ ಸಚಿವ ವಿನಯ ಕುಲಕರ್ಣಿ, ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಲ್ಲಿ ಸ್ಪರ್ಧೆಗಿಳಿಯುತ್ತೀರಿ ಅನ್ನೋ ಮಾತುಗಳು ಕೇಳಿಬರುತ್ತಿವೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ಕೊಟ್ಟಿರುವ ವಿನಯ ಕುಲಕರ್ಣಿ, ಶಿಗ್ಗಾಂವಿಯಲ್ಲಿ ವಿನಯ ಕುಲಕರ್ಣಿ ಸ್ಪರ್ಧೆ ಮಾಡಬೇಕು ಎನ್ನುವ ಆಗ್ರಹ ಕಾಂಗ್ರೆಸ್ ಪಕ್ಷ ನಡೆಸಿರುವ ಸರ್ವೆಯಲ್ಲಿ ಬಂದಿದೆ ಎಂದಿದ್ದಾರೆ. ಶಿಗ್ಗಾಂವಿಗೆ ವಿನಯ್ ಕುಲಕರ್ಣಿ ಸೂಕ್ತ ಅಭ್ಯರ್ಥಿ ಅಂತಾ ಸರ್ವೆಯಲ್ಲಿ ಫಲಿತಾಂಶ ಬಂದಿದೆ. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ನನ್ನನ್ನು ಕರೆದು ಮಾತನಾಡಿದ್ದಾರೆ. ಆದರೆ ನಾನು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ಅಲ್ಲಿ ಈಗಾಗಲೇ ಹಲವಾರು ಜನ ಆಕಾಂಕ್ಷಿಗಳಿದ್ದಾರೆ. ಅವರ ಮನಸ್ಸಿಗೆ ನೋವುಂಟು ಮಾಡಿ ನಾನು ಶಿಗ್ಗಾಂವಿಗೆ ಹೋಗುವುದು ಸರಿಯಲ್ಲ. ಆ ಕ್ಷೇತ್ರದಲ್ಲಿ ಅವರೆಲ್ಲ ಸಾಕಷ್ಟು ದಿನದಿಂದ ಕೆಲಸ ಮಾಡುತ್ತಿದ್ದಾರೆ. ನಾನು ಹೋಗಿ ಅವರ ಆಸೆ ಆಕಾಂಕ್ಷೆ ನಾನು ಅಡೆ ತಡೆ ಮಾಡುವುದು ಸರಿಯಲ್ಲ. ಒಂದು ವೇಳೆ ಅಲ್ಲಿಂದಲೇ ಸ್ಪರ್ಧೆ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದರೆ ನೋಡೋಣ ಎನ್ನುವ ಮೂಲಕ ನಾನು ಶಿಗ್ಗಾಂವಿಯಿಂದ ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ.
ಪಂಚಮಸಾಲಿ ಸಮುದಾಯ ಎದುರು ಹಾಕಿಕೊಂಡ್ರೆ ಕಷ್ಟ..!
ಬೆಂಗಳೂರಿನಲ್ಲಿ ಈ ಬಗ್ಗೆ ಶುಕ್ರವಾರ (ಫೆಬ್ರವರಿ 3) ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಬಸವರಾಜ ಬೊಮ್ಮಾಯಿ, ತಾಯಿ ಆಣೆ ನಾನು ಮೀಸಲಾತಿ ಕೊಡ್ತೇನೆ ಎಂದು ಹೇಳಿ ಮಾತು ತಪ್ಪಿದ್ದಾರೆ. ರಾಜ್ಯದಲ್ಲಿ ಸಿಎಂ ಆಗಬೇಕು ಅಂದ್ರೆ ನಮ್ಮ ಸಮುದಾಯದ ಅವಶ್ಯಕತೆ ಇದೆ. ನಮ್ಮ ಸಮುದಾಯವನ್ನು ಎದುರು ಹಾಕಿಕೊಂಡು ಯಾರೂ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಕೆಲವರು ತಮಗೆ ತಾವೇ ಲೀಡರ್ ಎಂದುಕೊಂಡಿದ್ದಾರೆ. ಯಾರು ಲೀಡರ್ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದಿದ್ದರು. ನಾವು ಎಲ್ಲಾ ಕ್ಷೇತ್ರದಲ್ಲೂ ಇದ್ದೇವೆ. ನಮ್ಮನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸ್ವಂತ ಪಕ್ಷಕ್ಕೆ ಎಚ್ಚರಿಕೆ ರವಾನೆ ಮಾಡಿದ್ದರು. ಇದೀಗ ವಿನಯ್ ಕುಲಕರ್ಣಿ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಆಗುವ ಮೂಲಕ ಮುಖ್ಯಮಂತ್ರಿ ಗೆಲುವಿಗೆ ಚೆಕ್ಮೇಟ್ ಕೊಡಲಾಗಿದೆ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಒತ್ತಡಕ್ಕೆ ಸಿಲುಕಿದ್ದು, ಗೆಲುವಿನ ಹಾದಿ ಕಷ್ಟ ಎನ್ನಲಾಗ್ತಿದೆ. ಮೀಸಲಾತಿ ವಿಚಾರದ ಜೊತೆಗೆ ಮತ್ತೊಂದು ಕಾರಣವೂ ಕೇಳಿ ಬರುತ್ತಿದೆ.

ಗೃಹ ಸಚಿವರಾಗಿ ಇದ್ದಾಗ ಜೈಲಿಗೆ ಕಳುಹಿಸಿದ ಕೋಪ..!
2016ರ ಜೂನ್ 15ರಂದು ಯೋಗೀಶ್ಗೌಡ ಎಂಬ ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯನ ಭೀಕರ ಕೊಲೆ ಆಗಿತ್ತು. ಈ ಕೊಲೆ ಹಿಂದೆ ವಿನಯ್ ಕುಲಕರ್ಣಿ ಕೈವಾಡ ಹಿಂದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಆ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಸಚಿವರಾಗಿ ಕೆಲಸ ಮಾಡ್ತಿದ್ದ ಬಸವರಾಜ ಬೊಮ್ಮಾಯಿ, ರಾಜಕೀಯ ಕಾರಣಕ್ಕಾಗಿ ಉದ್ದೇಶ ಪೂರ್ವಕವಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದರು ಎನ್ನುವುದು ವಿನಯ್ ಕುಲಕರ್ಣಿ ಅವರ ಕೋಪಕ್ಕೆ ಕಾರಣ. ಯೋಗೀಶ್ಗೌಡ ಕೊಲೆ ಕೇಸ್ನಲ್ಲಿ ನನ್ನ ಕೈವಾಡ ಇರಲಿಲ್ಲ, ಆದರೂ ನಾನು 9 ತಿಂಗಳ ಕಾಲ ಬೆಳಗಾವಿಯ ಜೈಲಿನಲ್ಲಿ ಕಂಬಿಗಳ ಹಿಂದೆ ಕಾಲ ಕಳೆಯುವಂತಾಯ್ತು. ನನ್ನ ಕಷ್ಟಕ್ಕೆ ಬಸವರಾಜ ಬೊಮ್ಮಾಯಿಯೇ ಕಾರಣ ಎನ್ನುವುದನ್ನು ಪ್ರಬಲವಾಗಿ ನಂಬಿರುವ ವಿನಯ್ ಕುಲಕರ್ಣಿ ಬಸವರಾಜ ಬೊಮ್ಮಾಯಿ ವಿರುದ್ಧ ರಾಜಕೀಯ ಅಖಾಡದಲ್ಲೇ ಉತ್ತರ ಕೊಡುತ್ತೇನೆ ಎಂದಿದ್ದಾರೆ. ಹಾವೇರಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ಮತದಾರರೇ ನಿರ್ಣಾಯಕರಾಗಿದ್ದು, ಸಮುದಾಯವನ್ನೇ ಬಳಸಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಣ್ಣು ಮುಕ್ಕಿಸುವ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಅದೇ ಕಾರಣದಿಂದ ಚುನಾವಣೆ ಘೋಷಣೆಗೂ ಮುನ್ನವೇ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.







