ಶಿವಮೊಗ್ಗ: ಆರಗ ಜ್ಞಾನೇಂದ್ರ ಗೃಹ ಸಚಿವರಾದ ಮೇಲೆ ಮಾಧ್ಯಮಗಳಿಗೆ ನೀಡಿದ ಅನೇಖ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಟೀಕೆಗಳೊಳಗಾದವು. ಮೈಸೂರು ಗ್ಯಾಂಗ್ ರೇಪ್, ಶಿವಮೊಗ್ಗದಲ್ಲಿ ಹರ್ಷ ಸಾವಿನ ಪ್ರಕರಣ ಸೇರಿ ನಿನ್ನೆ ದಲಿತ ಚಂದ್ರು ಹತ್ಯೆ ಕುರಿತಾಗಿ ನೀಡಿದ ಹಠಾತ್ ಹೇಳಿಕೆ ಆಡಳಿತ ಪಕ್ಷದವರಿಗೇ ಇರಿಸು ಮುರಿಸಾಗಿದೆ. ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಇವೆಲ್ಲದರ ಬೆನ್ನಲ್ಲೇ ಆರಗ ಜ್ಞಾನೇಂದ್ರ ಅವರ ಸಾಂಪ್ರದಾಯಿಕ ಎದುರಾಳಿ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಗರಂ ಆಗಿದ್ದಾರೆ. ತಮ್ಮ ಕ್ಷೇತ್ರ ತೀರ್ಥಹಳ್ಳಿ ಹಾಗೂ ಅದರ ರಾಜಕೀಯ ಮತ್ತು ಹೋರಾಟದ ಪರಂಪರೆಗೆ ಜ್ಞಾನೇಂದ್ರ ಮಸುಕಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಾಗೂ ಶುಕ್ರವಾರ ತೀರ್ಥಹಳ್ಳಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಕ್ಷೇತ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಳಂಕ ಎಂದರು.
ಆರಗ ಜ್ಞಾನೇಂದ್ರ ಗೃಹ ಸಚಿವರಾದಾಗ, ನಮ್ಮ ಕ್ಷೇತ್ರಕ್ಕೆ ಒಳ್ಳೆಯ ಪೋಸ್ಟ್ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದೆ. ನಾನೇ ಮುಂದೆ ನಿಂತು ಸನ್ಮಾನ ಸಹ ಮಾಡಿದ್ದೆ. ತೀರ್ಥಹಳ್ಳಿ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ. ಶಾಂತವೇರಿ ಗೋಪಾಲಗೌಡರ ಹೆಸರು ಹೇಳದೇ ಇವತ್ತಿಗೂ ಅಧಿವೇಶನ ನಡೆಯಲ್ಲ. ಅಂತಹ ಹಿನ್ನೆಲೆ ಇರುವ ತೀರ್ಥಹಳ್ಳಿ ಕ್ಷೇತ್ರದಲ್ಲಿಆರಗ ಜ್ಞಾನೇಂದ್ರ ಅಸಂಬದ್ಧವಾಗಿ ಹೇಳಿಕೆ ನೀಡುತ್ತಾ ನಮ್ಮ ಕ್ಷೇತ್ರಕ್ಕೆ ಕಳಂಕ ತರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಜ್ಯದ ಜನರು ಆರಗ ಜ್ಞಾನೇಂದ್ರ ಅವರನ್ನು ಬೈಯ್ಯುತ್ತಿದ್ದಾರೆ. ಆದ ಕಾರಣ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೀರ್ಥಹಳ್ಳಿ ಗೌರವವನ್ನು ಉಳಿಸಬೇಕು, ಸರ್ಕಾರದ ಭಾಗವಾಗಿರುವ ಸಚಿವರು, ಶಾಸಕರು, ಮುಖಂಡರು ಶಾಂತಿ- ಸುವ್ಯವಸ್ಥೆ ಕಾಪಾಡಬೇಕು. ಆಡಳಿತ ಪಕ್ಷದವರೇ ಕೋಮುಗಲಭೆ ಸೃಷ್ಟಿಸುತ್ತಿರುವುದು ಹಾಗೂ ಗೃಹ ಸಚಿವರು ಅಭಯ ನೀಡುವುದು ದೇಶದ ದುರಂತ.
ಓರ್ವ ಗೃಹ ಸಚಿವರಾಗಿ ಕೋಮು ಭಾವನೆ ಕೆರಳಿಸುವಂತೆ ಹೇಳಿಕೆ ಕೊಡಬಾರದು. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮಿನಿಸ್ಟರ್ ಹೀಗೆ ಮಾತಾಡಿದ್ರೆ ಹೇಗೆ? ಹೋಮ್ ಮಿನಿಸ್ಟರ್ ಇರೋದು ಕೋಮು ಭಾವನೆ ಸೃಷ್ಟಿಸೋದಕ್ಕಾ ಅಥವಾ ಕಡಿಮೆ ಮಾಡೋದಕ್ಕಾ ಇವರ ವಿರುದ್ದವೇ ಕೇಸ್ ದಾಖಲಿಸಬೇಕು. ಸಿಎಂ ಇವರನ್ನು ವಜಾ ಮಾಡಬೇಕಿತ್ತು ಎಂದರು. ಗೃಹ ಸಚಿವರಾಗಿ ಅಸಮರ್ಪಕ ಮಾಹಿತಿಯೊಂದಿಗೆ ಮಾಧ್ಯಮದ ಎದುರು ಬಂದು ಚುಚ್ಚಿ-ಚುಚ್ಚಿ ಕೊಲೆ ಮಾಡ್ತಾರೆ ಅಂತಾರೆ. ಚಂದ್ರು ಉರ್ದು ಮಾತನಾಡಲಿಲ್ಲ ಆ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಮುಗಿಬೀಳಲಿ ಎನ್ನುವ ಉದ್ದೇಶ ಇವರಲ್ಲಿದೆ. ಗೃಹಸಚಿವರ ವಿರುದ್ಧವೇ ದೇಶದ್ರೋಹದ ಕೇಸ್ ದಾಖಲಿಸಬೇಕು. ಅವರ ರಾಜೀನಾಮೆಗೆ ಒತ್ತಾಯಿಸಿ, ಏ.೦೮ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಕಿಮ್ಮನೆ ಹೇಳಿದರು.