ಶಮ್ಸಿಯಾ ಹಸ್ಸಾನಿ ಅಫ್ಘಾನಿನ ಪ್ರಸಿದ್ಧ ಭಿತ್ತಿಚಿತ್ರ ಕಲಾವಿದೆ. ಅಫ್ಘಾನಿಸ್ತಾನದ ಮೊದಲ ಮಹಿಳಾ ಗೀಚುಬರಹ ಮತ್ತು ಬೀದಿ ಕಲಾವಿದೆಯಾಗಿ ಮಹಿಳಾ ಧ್ವನಿಗಳ ದಿಟ್ಟ ಪ್ರಚಾರಕ್ಕೆ ಹೆಸರುವಾಸಿಯಾದ ಅವರು ಆನ್-ಸೈಟ್ ಭಿತ್ತಿಚಿತ್ರಗಳನ್ನು ಮಾಡಲು ಉತ್ತರ ಅಮೆರಿಕ, ಯುರೋಪಿಯನ್ ಮತ್ತು ಏಷ್ಯನ್ ದೇಶಗಳಲ್ಲಿ ಸಂಚಾರ ಕೈಗೊಂಡಿದ್ದಾರೆ ಮತ್ತು ಹಲವಾರು ಅಂತರ ರಾಷ್ಟ್ರೀಯ ಗ್ಯಾಲರಿಗಳಲ್ಲಿ ಅವರ ಕಲೆ ಪ್ರದರ್ಶನಗೊಂಡಿವೆ. 2014 ರ ಅಗ್ರ 100 ಜಾಗತಿಕ ಚಿಂತಕರ ಪಟ್ಟಿಯಲ್ಲಿ ಮತ್ತು ‘ಗುಡ್‌ನೈಟ್ ಸ್ಟೋರೀಸ್ ಫಾರ್ ರೆಬೆಲ್ ಗರ್ಲ್ಸ್’ನ ಎರಡನೇ ಸಂಪುಟದಲ್ಲಿ ಅವರು ಸ್ಥಾನ ಪಡೆದಿದ್ದರು.
ಕಳೆದ ವಾರ ತಾಲಿಬಾನ್ ಇಡೀ ಅಫ್ಘಾನನ್ನು ವಶಪಡಿಸಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಸಾನಿ ಅವರ ಕುರಿತಾಗಿನ ಚರ್ಚೆ ತೀವ್ರವಾಗಿ ಮುನ್ನಲೆಗೆ ಬಂತು.

ಅವರು ರಚಿಸಿರುವ ಉಜ್ವಲ ನೀಲಿ ಬಣ್ಣದ ಧಿರಿಸು ಧರಿಸಿರುವ ಹುಡುಗಿಯರು ಮತ್ತು ಗಾಢವಾದ ಬಣ್ಣದ ವಸ್ತ್ರ ಧರಿಸಿರುವ ಉಗ್ರರು ಗನ್ ಹಿಡಿದುಕೊಂಡಿರುವ ಎರಡು ಶಕ್ತಿಶಾಲಿ ಚಿತ್ರಗಳು-ಅಫಘಾನ್ ಮಹಿಳೆಯರು ಈಗ ಎದುರಿಸುತ್ತಿರುವ ತೀವ್ರ ಭಯ, ಹತಾಶೆ ಮತ್ತು ಹಿಂಸಾತ್ಮಕ ದಮನವನ್ನು ಅಭಿವ್ಯಕ್ತಿಗಳಿಸುತ್ತವೆ. ಈ ಚಿತ್ರಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಲೈಕ್‌ಗಳನ್ನು ಗಳಿಸಿವೆ ಮತ್ತು ಫೇಸ್‌ಬುಕ್‌ನಲ್ಲಿ ಸಾವಿರಾರು ಬಾರಿ ಹಂಚಿಕೊಳ್ಳಲ್ಪಟ್ಟವೆ.
ಕಾಬೂಲ್ ಅನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಹಸಾನಿಯ ಸಾಮಾಜಿಕ ಮಾಧ್ಯಮ ಖಾತೆಗಳು ಕೆಲವು ದಿನಗಳ ಕಾಲ ಮೌನವಾಗಿದ್ದವು. ಆಗ ಆಕೆಯ ಸುರಕ್ಷತೆಯ ಬಗ್ಗೆ ಅಭಿಮಾನಿಗಳು ಆತಂಕಿತರಾಗಿದ್ದರು. ಅವರ ಹೊಸ ಚಿತ್ರವು ಅಂತಿಮವಾಗಿ ಮಂಗಳವಾರ ಪ್ರಕಟವಾಯಿತು. ಈ ಚಿತ್ರಕ್ಕೆ ‘ಡೆತ್ ಟು ಡಾರ್ಕ್‌ನೆಸ್’ ಎಂದು ಹೆಸರುಕೊಟ್ಟಿದ್ದಾರೆ.

ಹಸ್ಸಾನಿಯ ಮ್ಯಾನೇಜರ್ ‘ದಿ ವೈರ್’ ಜೊತೆ ಮಾತನಾಡಿ ಅವರು ಸಂದರ್ಶನಕ್ಕೆ ಲಭ್ಯವಿಲ್ಲ ಆದರೆ ಸುರಕ್ಷಿತವಾಗಿದ್ದಾರೆ ಆದರೆ ಅವರ ಲೊಕೇಶನ್ ಬಹಿರಂಗಪಡಿಸಿಲಾಗುವುದಿಲ್ಲ ಎಂದಿದ್ದಾರೆ. ತಾಲಿಬಾನ್ ಕಲಾವಿದರಿಗೆ ಅದರಲ್ಲೂ ಮಹಿಳಾ ಕಲಾವಿದರಿಗೆ ಬೆದರಿಕೆಯೊಡ್ಡುತ್ತಿರುವುದರ ನಡುವೆಯೇ ಚಿತ್ರಗಳನ್ನು ಪ್ರಕಟಿಸಿರುವುದು ದಿಟ್ಟ ಕ್ರಮ. ತಾಲಿಬಾನ್‌ನ ಈ ಹಿಂದಿನ ಆಡಳಿತವನ್ನು ಗಮನಿಸಿದರೆ ಮಹಿಳೆಯರಿಗೆ ಅದರಲ್ಲೂ ಕಲಾವಿದೆಯರಿಗೆ ಹೆಚ್ಚಿನ ಭೀತಿ ಇರುವುದು ಕಂಡು ಬರುತ್ತದೆ. ತಮ್ಮ ಕಾನೂನನ್ನು ಉಲ್ಲಂಘಿಸಿದವರನ್ನು ಅಮಾನುಷವಾಗಿ ಹಿಂಸಿಸಿ ಕೊಂದಿರುವ ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿವೆ.
“ಇಸ್ಲಾಂನಲ್ಲಿ ಕಲೆಯನ್ನು ಅನುಮತಿಸಲಾಗುವುದಿಲ್ಲ ಎಂದು ಕೆಲವರು ಭಾವಿಸುತ್ತಾರೆ ಮತ್ತು ಅದಕ್ಕಾಗಿಯೇ ಅವರು ನನ್ನನ್ನು ತಡೆಯಲು ಯತ್ನಿಸುತ್ತಾರೆ. ಮೂಲಭೂತವಾದಿ ಮನಸ್ಸುಗಳು ಒಗ್ಗೂಡಿದರೆ, ಅವರು ತುಂಬಾ ಶಕ್ತಿಯುತರಾಗುತ್ತಾರೆ ಮತ್ತು ಅವರು ಏನು ಬೇಕಾದರೂ ಮಾಡಬಹುದು” ಎಂದು ಹಸ್ಸಾನಿ 2016 ರ ವಿಡಿಯೋ ಸಂದರ್ಶನದಲ್ಲಿ ಹೇಳಿದ್ದರು.

1988 ರಲ್ಲಿ ಇರಾನ್‌ನಲ್ಲಿ ಅಫಘಾನ್ ಪೋಷಕರಿಗೆ ಜನಿಸಿದ ಹಸ್ಸಾನಿ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆ ಮತ್ತು ದೃಶ್ಯ ಕಲೆಗಳನ್ನು ಅಧ್ಯಯನ ಮಾಡಲು 2005 ರಲ್ಲಿ ಅಫ್ಘಾನಿಸ್ತಾನಕ್ಕೆ ಮರಳಿದರು. 2010 ರಲ್ಲಿ ಭಿತ್ತಿಚಿತ್ರ ಬರೆಯ ತೊಡಗಿದಾಗ ತನ್ನ ಪದವಿಗಳನ್ನು ಮುಗಿಸಿಯಾಗಿತ್ತು. ಅಫ್ಘಾನ್ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಸಾರ್ವಜನಿಕವಾಗಿ ಎತ್ತಿ ತೋರಿಸಲು ಪ್ರಮುಖವಾಗಿ ಭಿತ್ತಿ ಚಿತ್ರ ಮಾಡಲು ಆಯ್ದುಕೊಂಡರು ಎಂದು ಅವರು ‘ಸ್ಟ್ರೀಟ್ ಆರ್ಟ್ ಬಯೋ’ಗೆ ತಿಳಿಸಿದ್ದಾರೆ.
ಬುರ್ಖಾ ಧರಿಸಿದ ಅಫ್ಘಾನ್ ಮಹಿಳೆಯರ ಬಗೆಗಿನ ಜನರ ಗ್ರಹಿಕೆಯನ್ನು ಬದಲಾಯಿಸ ಬಯಸಿದೆ ಎಂದು ಹೇಳುವ ಅವರು “ನಾನು ಜನರಿರಿಗೆ ವಾಸ್ತವದಲ್ಲಿರುವುದಕ್ಕಿಂತ ದೊಡ್ಡ ಆಕಾರದಲ್ಲಿ, ಆಧುನಿಕ ರೂಪದಲ್ಲಿ, ಸಂತೋಷವಾಗಿ, ಚಲನೆಯಲ್ಲಿರುವಂತೆ, ಬಹುಶಃ ಬಲಶಾಲಿಗಳಾಗಿ ತೋರಿಸಲು ಪ್ರಯತ್ನಿಸುತ್ತೇನೆ ಮತ್ತು ನಾನು ಜನರನ್ನು ವಿಭಿನ್ನವಾಗಿ ನೋಡುವಂತೆ ಮಾಡಲು ಪ್ರಯತ್ನಿಸುತ್ತೇನೆ ” ಎನ್ನುತ್ತಾರೆ.

ನೋವು ಮತ್ತು ಸಂಕಟದ ಚಿತ್ರಗಳನ್ನು ಸೃಷ್ಟಿಸಿ ತಾಲಿಬಾನ್ ಮತ್ತು ಇತರ ಉಗ್ರಗಾಮಿ ಗುಂಪುಗಳ ದಾಳಿಗೆ ನೇರವಾಗಿ ಪ್ರತಿಕ್ರಿಯಿಸಲು ಹಸ್ಸಾನಿ ತನ್ನ ಕಲೆಯನ್ನು ಬಳಸಿದ್ದಾರೆ. ಹಸ್ಸಾನಿಯು ಲಲಿತಕಲೆಗಳ ಪ್ರಾಧ್ಯಾಪಕರಾಗಿರುವ ಕಾಬೂಲ್ ಯುನಿವರ್ಸಿಟಿಯ ಮೇಲೆ 2020ರ ನವೆಂಬರನಲ್ಲಿ ನಡೆದ ದಾಳಿಯ ನಂತರ ಅವರು ರಚಿಸಿದ ಚಿತ್ರವು ತೀವ್ರ ದುಃಖವನ್ನು ವ್ಯಕ್ತಪಡಿಸಿದರೆ ಅದೇ ವರ್ಷದ ಮೇ ತಿಂಗಳ ಒಂದು ಬೂದುಬಣ್ಣದ ಚಿತ್ರವು ಹೆರಿಗೆ ವಾರ್ಡ್ ಮೇಲಿನ ಮಾರಣಾಂತಿಕ ದಾಳಿಗೆ ಪ್ರತಿಕ್ರಿಯೆಯಾಗಿ ಮಾಡಲ್ಪಟ್ಟಿದೆ.
ಹಲವು ಭಾವಗಳನ್ನು ವ್ಯಕ್ತಪಡಿಸುವ ಅವರ ಚಿತ್ರ ಕಲೆಗಳು ಧಿಕ್ಕಾರ, ಭರವಸೆ, ಸ್ವಾತಂತ್ರ್ಯ ಮತ್ತು ಭಯವನ್ನು ತುಂಬಾ ಪರಿಣಾಮಕಾರಿಯಾಗಿ ಬಿಂಬಿಸುತ್ತವೆ. ಅವರ ಹಲವು ಚಿತ್ರಗಳಲ್ಲಿ ಬಾಯಿಯೇ ಇಲ್ಲ, ಆದರೆ ವಾದ್ಯಗಳಿರುತ್ತವೆ.
ಅವಳ ಕಣ್ಣುಗಳು ಮುಚ್ಚಲ್ಪಟ್ಟಿರುತ್ತವೆ. ಏಕೆಂದರೆ ಸಾಮಾನ್ಯವಾಗಿ ಅವಳು ನೋಡಲು ತನ್ನ ಸುತ್ತಲೂ ಯಾವುದೂ ಚೆನ್ನಾಗಿಲ್ಲ .ಕೆಲವೊಮ್ಮೆ ಅವಳು ತನ್ನ ಭವಿಷ್ಯವನ್ನು ನೋಡಲು ಸಾಧ್ಯವಿಲ್ಲ. ಆದರೆ ಇದರರ್ಥ ಅವಳು ನೋಡಲು ಸಾಧ್ಯವೇ ಇಲ್ಲ ಎಂದಲ್ಲ.

ಗ್ಯಾಲರಿ ಅಥವಾ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲು ಕಡಿಮೆ ಅವಕಾಶವಿರುವ ಜನರಿಗೆ ಕಲೆಯನ್ನು ಪರಿಚಯಿಸಲು ಇದು ಉತ್ತಮ ಮಾರ್ಗವಾಗಿರುವುದರಿಂದ ಭಿತ್ತಿಚಿತ್ರದ ಬಗ್ಗೆ ಹೆಚ್ಚು ಆಕರ್ಷಿತಳಾದೆ ಎನ್ನುತ್ತಾರೆ ಅವರು. ನಗರವು ಅಫಘಾನ್ ಸರ್ಕಾರದ ನಿಯಂತ್ರಣದಲ್ಲಿದ್ದಾಗಲೂ ಕಾಬೂಲ್‌ನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಸೃಜನಾತ್ಮಕವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅದರದೇ ಅಪಾಯಗಳನ್ನು ಹೊಂದಿತ್ತು. “ನಾನು ಸಾರ್ವಜನಿಕ ಸ್ಥಳಗಳಿಗೆ ನಿಜವಾಗಿಯೂ ಹೆದರುತ್ತೇನೆ. ಸ್ಫೋಟಗಳಿಗೆ ನಾನು ನಿಜವಾಗಿಯೂ ಹೆದರುತ್ತೇನೆ ಮತ್ತು ನಿರ್ದಿಷ್ಟವಾಗಿ ಹೇಳುವುದಾದರೆ ಮಹಿಳೆಯರು ಭಿತ್ತಿ ಚಿತ್ರ ಮತ್ತು ಬೀದಿ ಕಲೆಯನ್ನು ಮಾಡುವುದು ಕಷ್ಟಕರವಾಗಿದೆ ಏಕೆಂದರೆ ಸಾಮಾನ್ಯವಾಗಿ ಜನರು ಮಹಿಳೆಯರು ಇಂತಹ ಚಟುವಟಿಕೆಗಳಲ್ಲಿ ತೊಡಗುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಎಲ್ಲಾ ಸಮಯದಲ್ಲೂ ನಾನು ಜಾಗರೂಕಳಾಗಿರುತ್ತೇನೆ ”ಎಂದು ಅವರು 2018 ರಲ್ಲಿ ದಿ ವೈರ್ ಜೊತೆ ಮಾತನಾಡುತ್ತಾ ಹೇಳಿದ್ದರು. ಈ ಸವಾಲುಗಳನ್ನು ತಪ್ಪಿಸಲೆಂದೇ ಅವರು ಕಟ್ಟಡಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಮತ್ತು ತಮ್ಮ ಭಿತ್ತಿಚಿತ್ರಗಳನ್ನು ನೇರವಾಗಿ ಸ್ನ್ಯಾಪ್‌ಶಾಟ್‌ಗಳಲ್ಲಿ ಚಿತ್ರಿಸಲು ಪ್ರಾರಂಭಿಸಿ, ಅದನ್ನು ಅವರ “ಡ್ರೀಮಿಂಗ್ ಗ್ರಾಫಿಟ್ಟಿ” ಸರಣಿ ಎಂದು ಕರೆದಿದ್ದರು.
ಕಲಾ ಜಗತ್ತಿನಲ್ಲಿ ತನ್ನ ಯಶಸ್ಸಿನ ಹೊರತಾಗಿಯೂ ದಿ ವೈರ್ ಗೆ ಅವರು 2018ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹತಾಶ ಭಾವ ವ್ಯಕ್ತಪಡಿಸಿದ್ದರು. ಆದರೆ ತನ್ನ ಕಲೆಯ ಮೂಲಕ ಜನರಿಗೆ ಶಕ್ತಿಯನ್ನು ನೀಡಲು ಸಮರ್ಪಿತಳಾಗಿದ್ದೇನೆ ಎಂದು ಹೇಳಿದ ಅವರು ” ನನ್ನ ಕಲಾಕೃತಿಯ ಮೂಲಕ ನನ್ನ ಆಲೋಚನೆಗಳನ್ನು ಜನರೊಂದಿಗೆ ಹಂಚಿಕೊಳ್ಳುವದರಿಂದ ನಾನು ಜನರನ್ನು ಬದಲಾಯಿಸುತ್ತೇನೆ ಎಂದು ಭಾವಿಸುತ್ತೇನೆ ” ಎಂದಿದ್ದರು.