ಸ್ವತಂತ್ರ ಮುಂಚಲನೆಯ ಅಪವಾಖ್ಯಾನಗಳು
ಶಕ್ತಿ ಯೋಜನೆ ಜಾರಿಯಾದ ಕೂಡಲೇ ಕರ್ನಾಟಕದಾದ್ಯಂತ ಎರಡು ರೀತಿಯ ವಾತಾವರಣ ಸೃಷ್ಟಿಯಾಯಿತು. ಮೊದಲನೆಯದು ರಾಜ್ಯವ್ಯಾಪಿಯಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯಲ್ಲಿನ ಹೆಚ್ಚಳ. ಶಾಲೆಯಲ್ಲಿ ಕೊನೆಯ ಬೆಲ್ ಹೊಡೆದ ಕೂಡಲೇ ಮಕ್ಕಳು ಒಮ್ಮೆಲೇ ಹೊರಬರುವ ರೀತಿಯಲ್ಲಿ ರಾಜ್ಯದ ಮಹಿಳೆಯರು ತಾವು ಬಹುದಿನಗಳಿಂದ ಅದುಮಿಟ್ಟುಕೊಂಡಿದ್ದ ಪ್ರಯಾಣದ ಅಪೇಕ್ಷೆಯನ್ನು ಪೂರೈಸಿಕೊಳ್ಳಲು ಹೊರಬಂದಂತೆ ತೋರುತ್ತಿತ್ತು. ಮಡುಗಟ್ಟಿದ ಆಕಾಂಕ್ಷೆ, ಅಪೇಕ್ಷೆಗಳಿಗೆ ಮುಕ್ತ ಅವಕಾಶ ದೊರೆತಾಗ ಒಮ್ಮೆಲೇ ಬೃಹತ್ ಪ್ರಮಾಣದಲ್ಲಿ ಪ್ರತಿಕ್ರಯಿಸುವ ಒಂದು ಸಾಮಾಜಿಕ ಪ್ರಕ್ರಿಯೆಯನ್ನು (ಭಾವನಾತ್ಮಕವಾದ ವಿಚಾರಗಳಲ್ಲಿ ಇದನ್ನು ಕಾಕ್ ಬಾಟಲ್ ಅಥವಾ ಸೋಡಾ ಬಾಟಲ್ ಪರಿಣಾಮ ಎಂದೂ ಹೇಳಲಾಗುತ್ತದೆ) ಒಮ್ಮೆಲೆ ಹೆಚ್ಚಾದ ಮಹಿಳೆಯರ ಪ್ರಯಾಣದಲ್ಲೂ ಕಾಣಬಹುದಿತ್ತು. ಏಕೆ ಹೀಗೆ ಎಂದು ಯೋಚಿಸುವ ವ್ಯವಧಾನ ನಮ್ಮ ಸಮಾಜದಲ್ಲಿ ಇದ್ದಿದ್ದರೆ ಬಹುಶಃ ಈ ಪ್ರಕ್ರಿಯೆಯ ಒಳಸುಳಿಗಳನ್ನು ಒಳಹೊಕ್ಕು ಅರ್ಥಮಾಡಿಕೊಳ್ಳಬಹುದಿತ್ತು. ಆ ಪ್ರಯತ್ನಗಳು ಈಗ ನಡೆಯುತ್ತಿರುವುದು ಸಮಾಧಾನಕರ ಅಂಶ.

ಮತ್ತೊಂದು ವಾತಾವರಣ ಎಂದರೆ ರಾಜಕೀಯ ವಿರೋಧ ಹಾಗೂ ಪುರುಷಾಸೂಯೆಯ ನೆಲೆಯಲ್ಲಿ ವ್ಯಕ್ತವಾದಂತಹ ವ್ಯಂಗ್ಯ ಮತ್ತು ಅಪಮಾನಕರ ವ್ಯಾಖ್ಯಾನಗಳು. ರಾಜ್ಯ ಸಾರಿಗೆ ಬಸ್ಸುಗಳು ಎಂದೂ ಭರ್ತಿಯಾದದ್ದೇ ಇಲ್ಲ, ಎಂದೂ ಸಹ ತುಂಬಿ ತುಳುಕುವಂತೆ ಸಂಚರಿಸಿದ್ದೇ ಇಲ್ಲ, ಎಂದಿಗೂ ಫುಟ್‌ಬೋರ್ಡ್ಗಳ ಮೇಲೆ ಪ್ರಯಾಣಿಕರು ಸಂಚರಿಸಿದ್ದೇ ಇಲ್ಲ, ಎಂದೂ ಸಹ ಬಸ್ಸುಗಳಲ್ಲಿ ಮಹಿಳೆಯರ ನಡುವೆ ಜಗಳ-ಕದನ-ಬೈಗುಳಗಳ ಮೇಳ ನಡೆದೇ ಇಲ್ಲ, ಎಂದಿಗೂ ಜನರು ಕಿಟಕಿಗಳ ಮೂಲಕ ತೂರಿಹೊಗಿ ತಮ್ಮ ಆಸನ ಭದ್ರಪಡಿಸಿಕೊಂಡಿದ್ದೇ ಇಲ್ಲ ಎನ್ನುವ ರೀತಿಯಲ್ಲಿ ಈ ಎಲ್ಲ ರೀತಿಯ ಪ್ರಸಂಗಗಳನ್ನೂ ರೋಚಕವಾಗಿ ಬಿತ್ತರಿಸಿದ ದೃಶ್ಯ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್ ವಿಶ್ವವಿದ್ಯಾಲಯದ ಅಧ್ಯಯನ ಪೀಠಗಳು ಹೊಸ ಸರ್ಕಾರದ ಶಕ್ತಿ ಯೋಜನೆಯ ʼ ದುಷ್ಪರಿಣಾಮ ʼ ಎನ್ನುವ ರೀತಿಯಲ್ಲಿ ಈ ಪ್ರಸಂಗಗಳನ್ನು ರೋಚಕವಾಗಿ ಬಿತ್ತರಿಸಲಾರಂಭಿಸಿದ್ದು ನಮ್ಮ ಸಾಮಾಜಿಕ ಮಾಲಿನ್ಯದ ಸಂಕೇತವಾಗಿಯೇ ಕಾಣುತ್ತದೆ. ಅಸಮರ್ಪಕ ಸಾರಿಗೆ ವ್ಯವಸ್ಥೆಯಡಿಯಲ್ಲೇ ತಮ್ಮ ನಿತ್ಯ ದುಡಿಮೆಗಾಗಿ ಬಸ್ ಪ್ರಯಾಣ ಮಾಡಿರುವ/ಮಾಡುತ್ತಿರುವ ಯಾರಿಗೇ ಆದರೂ ಈ ಪ್ರಸಂಗಗಳು ಹೊಸತಾಗಿ ಕಾಣುವುದಿಲ್ಲ. ಬಸ್ ಮೇಲೆ ಕುಳಿತು ಪ್ರಯಾಣಿಸುವುದೂ ಸಹ ಸಹಜವಾಗಿಯೇ ಕಾಣುತ್ತದೆ.
ಈ ವ್ಯಂಗ್ಯೋಕ್ತಿಗಳಿಗಿಂತಲೂ ಕ್ರೂರವಾಗಿ ಪ್ರಕಟವಾದದ್ದು ಸಾಂಪ್ರದಾಯಿಕ ಸಮಾಜದ ವಕ್ರ ಮನಸ್ಥಿತಿ. ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರು ತಮ್ಮ ಕುಟುಂಬಗಳನ್ನು ಧಿಕ್ಕರಿಸಿಬಿಡುತ್ತಾರೆ, ಕುಟುಂಬಗಳ ವಿಘಟನೆಯಾಗಿಬಿಡುತ್ತದೆ, ಗೃಹಿಣಿಯರು ತಮ್ಮ ಗಂಡಂದಿರನ್ನೂ ಲೆಕ್ಕಿಸದೆ ಓಡಾಡಲಾರಂಭಿಸುತ್ತಾರೆ, ಹೆಣ್ಣು ಮಕ್ಕಳು ಹಿರಿಯರ ಅಣತಿಯನ್ನೂ ಲೆಕ್ಕಿಸದೆ ಎಲ್ಲೆಂದರಲ್ಲಿ ಸುತ್ತಾಡಲಾರಂಭಿಸುತ್ತಾರೆ, ಪತಿಗೆ ಅಧೀನಳಾಗಿಯೇ ಇದ್ದ ಪತ್ನಿಯೂ ಲಕ್ಷ್ಮಣರೇಖೆಯನ್ನು ದಾಟಿ ತನ್ನ ಪ್ರಯಾಣಕ್ಕೆ ಮುಂದಾಗುತ್ತಾಳೆ–ಹೀಗೆ ಹತ್ತುಹಲವು ರೀತಿಯ ವ್ಯಾಖ್ಯಾನಗಳು ಹರಿದಾಡಲಾರಂಭಿಸಿವೆ. ವಾಸ್ತವದಲ್ಲಿ ಭಾರತದ ಕುಟುಂಬ ವ್ಯವಸ್ಥೆಯಲ್ಲಿ ಇದಾವುದೂ ಸಂಭವಿಸುವುದಿಲ್ಲ. ಕೆಳಸ್ತರದ ಸಮಾಜದಲ್ಲಿ ಮಹಿಳೆಯರ ಬಾಹ್ಯ ಚಲನೆಗೆ ಅಡ್ಡಿಯಾಗಿದ್ದ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳು ಹಾಗೂ ಪುರುಷಾಧೀನ ಕುಟುಂಬಗಳಲ್ಲಿ ಅಡ್ಡಿಯಾಗಿದ್ದ ಕಟ್ಟಳೆಗಳು ಮಹಿಳೆಯರ ಚಲನೆಯನ್ನು ನಿಯಂತ್ರಿಸಿದ್ದೇ ಅಲ್ಲದೆ ಅವರ ಹಂಬಲ ಮತ್ತು ಅಪೇಕ್ಷೆಗಳನ್ನೂ ಅದುಮಿಟ್ಟುಕೊಳ್ಳುವಂತೆ ಮಾಡುತ್ತವೆ. ಅನಿವಾರ್ಯವಾಗಿಯೋ, ಒತ್ತಡದಿಂದಲೋ, ಸಂಪ್ರದಾಯ ಕಟ್ಟಳೆಗಳಿಗೆ ಮಣಿದೋ ಮಹಿಳೆಯರು ನಾಲ್ಕು ಗೋಡೆಗಳೊಳಗೆ ಅಥವಾ ತಮ್ಮ ಊರುಗಳ ಒಳಗೇ ಬಂಧಿತರಾಗಿರುತ್ತಾರೆ.

ಧರ್ಮಸ್ಥಳ ಮುಂತಾದ ಯಾತ್ರಾಸ್ಥಳಗಳಗೆ ಒಮ್ಮೆಲೆ ಧಾವಿಸಿದ ಸಹಸ್ರಾರು ಮಹಿಳೆಯರನ್ನು ಸೂಕ್ಷ್ಮವಾಗಿ ಗಮನಿಸಿದಾಗ ಶಕ್ತಿ ಯೋಜನೆ ಈ ಕಟ್ಟಲೆಗಳ ಭಂಗ ಮಾಡಲು ನೆರವಾಗಿರುವುದನ್ನೂ ಗಮನಿಸಬಹುದು. ಈ RushಓRushಉ ಎಂದು ಉದ್ಗರಿಸುವವರಿಗೆ ಈ ತಾತ್ಕಾಲಿಕವಾದ ಸನ್ನಿವೇಶವೇ ಅಸಹನೀಯವಾಗಿ ಕಾಣುತ್ತದೆ. ಪುರುಷ ಪ್ರಧಾನ-ಸಂಪ್ರದಾಯವಾದಿ ಸಮಾಜಕ್ಕೆ ಶಾಶ್ವತವಾಗಿ ತಾವು ವಿಧಿಸುತ್ತಿದ್ದ ಲಕ್ಷ್ಮಣರೇಖೆಗಳು ಅಳಿಸಿಹೋಗಬಹುದೇನೋ ಎಂಬ ಆತಂಕವೂ ಸಹ ಇಲ್ಲಿ ಢಾಳಾಗಿ ಕಾಣುತ್ತದೆ. ಸ್ವಂತ ದುಡಿಮೆ ಅಥವಾ ಆದಾಯವಿಲ್ಲದ, ಪರಾವಲಂಬಿಯಾಗಿರುವ ಮಹಿಳೆ ತನಗೆ ಬೇಕೆನಿಸಿದ ಕಡೆಗೆ ಹೋಗಲು ಬಯಸುವಾಗ ಅಡ್ಡಿಯಾಗುವುದು ಒಂದು ಕುಟುಂಬದ ವೆಚ್ಚ ಮತ್ತೊಂದು ಸಂಪ್ರದಾಯದ ಗೋಡೆಗಳು. ಎಷ್ಟೋ ಮಧ್ಯಮವರ್ಗದ ಕುಟುಂಬಗಳಲ್ಲಿ ಸಂಪಾದನೆ ಮಾಡುವ ಮಹಿಳೆಯೂ ಇಂತಹುದೇ ಪರಿಸ್ಥಿತಿ ಎದುರಿಸುತ್ತಿರುತ್ತಾಳೆ. ಸಂಪ್ರದಾಯದ ರಕ್ಷಾ ಕವಚವಾಗಿ ಆರ್ಥಿಕ ಸ್ಥಿತಿಗತಿಗಳೂ ನೆರವಾಗುತ್ತವೆ. ಸರ್ಕಾರದ ಶಕ್ತಿ ಯೋಜನೆ ಈ ಎರಡೂ ಕವಚಗಳನ್ನು ಒಮ್ಮೆಲೆ ಕಳಚಿಹಾಕಿ, ಮಹಿಳೆಗೆ ಒಂದು ಸಾಮಾಜಿಕ-ಭೌತಿಕ ಚಲನೆಯ ಶಕ್ತಿಯನ್ನು ಒದಗಿಸಿದೆ. ಇದರಿಂದ ಸರ್ಕಾರದ ಬೊಕ್ಕಸ ಸಾರಿಗೆ ಸಂಸ್ಥೆಗಳ ಖಜಾನೆ ಬರಿದಾಗುತ್ತದೆ ಎಂದು ಹುಯಿಲೆಬ್ಬಿಸುವವರನ್ನು ಅಂಕಿಅಂಶಗಳೇ ತೆಪ್ಪಗಾಗಿಸಿವೆ.
ದುಡಿಮೆ ಮತ್ತು ಶ್ರಮಶಕ್ತಿಯ ಚಲನೆ
ಭಾರತೀಯ ಆರ್ಥಿಕತೆಯು 1990ರ ಜಾಗತಿಕರಣ ನಂತರದ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ. ಆದರೆ ಇದೇ ಅವಧಿಯಲ್ಲಿ ಅಂದರೆ 1990-91 ಮತ್ತು 2020-21ರ ನಡುವೆ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಶೇ 30 ರಿಂದ ಶೇಕಡಾ 19 ಕ್ಕೆ ಕುಸಿದಿದೆ. ಕಳೆದ 15 ವರ್ಷಗಳ ದತ್ತಾಂಶವನ್ನು ಗಮನಿಸಿದಾಗ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು 2005 ರಲ್ಲಿ ಶೇ 32ರಷ್ಟಿದ್ದುದು 2021 ರಲ್ಲಿ ಶೇ 19 ಕ್ಕೆ ಕುಸಿದಿದೆ. ಆರ್ಥಿಕತೆಯು ನಾಲ್ಕು ಪಟ್ಟು ಹೆಚ್ಚಾಗಿರುವ ಅವಧಿಯಲ್ಲೇ ಮಹಿಳಾ ದುಡಿಮೆಗಾರರ ಸಂಖ್ಯೆ ಕುಸಿದಿರುವುದು ಭಾರತದಲ್ಲಿನ ಲಿಂಗ ಅಸಮಾನತೆಯ ನೆಲೆಗಳನ್ನು ಸೂಚಿಸುತ್ತದೆ. ಕೋವಿದ್ ಸಾಂಕ್ರಾಮಿಕದ ನಂತರದಲ್ಲಿ ಕೊಂಚ ಸುಧಾರಣೆ ಕಂಡುಬಂದಿದ್ದರೂ ಮಹಿಳಾ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯ ಪ್ರಮಾಣ (Women Labour Force Participation Rate-LFPR) ಸ್ಥಗಿತಗೊಂಡಿರುವುದನ್ನು ಕಳೆದ ವರ್ಷದ ದತ್ತಾಂಶಗಳು ನಿರೂಪಿಸುತ್ತವೆ.

ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (Progressive Labour force Survey) ದತ್ತಾಂಶಗಳ ಅನುಸಾರ ಜೂನ್ 2021ರಿಂದ ಜೂನ್ 2022ರ ಅವಧಿಯಲ್ಲಿ ಈ ಸ್ಥಗಿತತೆ ಕಂಡುಬರುತ್ತದೆ. 2021-22ರಲ್ಲಿ 15 ರಿಂದ 59 ವಯೋಮಾನದ ಶೇ 29.4ರಷ್ಟು ಮಹಿಳೆಯರು ಮಾತ್ರ ಕಾರ್ಮಿಕ ಶಕ್ತಿಯ ಭಾಗವಾಗಿದ್ದರು. ಹಿಂದಿನ ವರ್ಷದಲ್ಲಿ ಈ ಪ್ರಮಾಣ ಶೇ 29.8ರಷ್ಟಿತ್ತು. ಈ ಸ್ಥಗಿತತೆ ಅಥವಾ ಕುಸಿತದ ಹೊರತಾಗಿಯೂ ಗಮನಿಸಬೇಕಾದ ಅಂಶವೆಂದರೆ ಈ ಕುಸಿತದಿಂದ ಬಾಧಿತರಾಗಿರುವವರ ಪೈಕಿ ಗ್ರಾಮೀಣ ಮಹಿಳೆಯರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗದ ಸಮುದಾಯಗಳ ಮಹಿಳೆಯರು ಮತ್ತು ಅನಕ್ಷರಸ್ಥ ಅಥವಾ ಪ್ರಾಥಮಿಕದಿಂದ ಮಧ್ಯಮ ಮಟ್ಟದ ಶಿಕ್ಷಣವನ್ನು ಹೊಂದಿರುವ ಮಹಿಳೆಯರು ಪ್ರಧಾನವಾಗಿ ಕಂಡುಬರುತ್ತಾರೆ. ಮತ್ತೊಂದೆಡೆ, ನಗರ ಮಹಿಳೆಯರು, ಪದವೀಧರ (ಅಥವಾ ಉನ್ನತ) ಮಟ್ಟದ ಶಿಕ್ಷಣ ಹೊಂದಿರುವ ಮಹಿಳೆಯರು ಅಥವಾ ಅನಕ್ಷರಸ್ಥರಲ್ಲಿ ಮಹಿಳಾ LFPR ಪ್ರಮಾಣವು 2020-21 ಮತ್ತು 2021-22 ರ ನಡುವೆ ಅಲ್ಪ ಸುಧಾರಣೆಯನ್ನು ಕಂಡಿದೆ.
2021-22ರಲ್ಲಿ 15-59 ವರ್ಷ ವಯಸ್ಸಿನ 57.3% ಮಹಿಳೆಯರು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಕೇವಲ 34.4% ಪುರುಷ ಉದ್ಯೋಗಿಗಳು ಮಾತ್ರ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಸರಾಸರಿ, ಮಹಿಳಾ ಕಾರ್ಮಿಕರು ಉದ್ಯೋಗದ ಪ್ರಕಾರಗಳಲ್ಲಿ ಪುರುಷರಿಗಿಂತ ಕಡಿಮೆ ಸಂಪಾದಿಸುತ್ತಾರೆ. ಆದಾಗ್ಯೂ, ಸ್ವಯಂ ಉದ್ಯೋಗಿಗಳಲ್ಲಿ ಲಿಂಗ ಗಳಿಕೆಯ ಅಂತರವು ಹೆಚ್ಚು ವ್ಯತ್ಯಯಗಳನ್ನು ಸೂಚಿಸುವುದನ್ನು PLFS ದತ್ತಾಂಶವು ತೋರಿಸುತ್ತದೆ. ಸಂಬಳ ಪಡೆಯುವ ಕಾರ್ಮಿಕರಲ್ಲಿ, ಏಪ್ರಿಲ್-ಜೂನ್ 2022 ರ ಅವಧಿಯಲ್ಲಿ ಮಹಿಳೆಯರು ತಿಂಗಳಿಗೆ ಸರಾಸರಿ 14,678 ರೂ.ಗಳನ್ನು ಗಳಿಸಿದರೆ, ಪುರುಷರು ತಿಂಗಳಿಗೆ 19,722 ರೂ.ಗಳನ್ನು (ಮಹಿಳೆಯರಿಗಿಂತ 1.3 ಪಟ್ಟು) ಗಳಿಸುತ್ತಾರೆ. ದಿನಗೂಲಿ ಕಾರ್ಮಿಕರಾಗಿ ದುಡಿಯುವವರು ಸಾಮಾನ್ಯವಾಗಿ ಕಡಿಮೆ ಸಂಪಾದಿಸುತ್ತಾರೆ. ಆದರೆ ಇಲ್ಲಿಯೂ ಪುರುಷರು ಸರಾಸರಿ ಹೆಚ್ಚು ಸಂಪಾದಿಸುತ್ತಿದ್ದರು. ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರ ಸರಾಸರಿ ದಿನಗೂಲಿ 272 ರೂ.ಗಳಾಗಿದ್ದರೆ, ಪುರುಷರಿಗೆ ಸರಾಸರಿ 408 ರೂ.ಗಳನ್ನು (ಮಹಿಳೆಯರಿಗಿಂತ 1.5 ಪಟ್ಟು) ಗಳಿಸುತ್ತಾರೆ.
ಅಸಂಘಟಿತ-ಸಂಘಟಿತ-ಅನೌಪಚಾರಿಕ ಕಾರ್ಮಿಕ ವಲಯದಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಕಡಿಮೆಯಾಗುತ್ತಿರುವುದಕ್ಕೆ ಹಲವು ಸಾಮಾಜಿಕ ಸಾಂಸ್ಕೃತಿಕ ಕಾರಣಗಳನ್ನು ಶೋಧಿಸಬಹುದಾದರೂ, ಮಹಿಳೆಯ ಭೌತಿಕ ಚಲನೆಯೂ ಒಂದು ಪ್ರಧಾನ ಅಂಶವಾಗಿ ಕಾಣುತ್ತದೆ. ಅಲ್ಪ ದುಡಿಮೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ನೌಕರಿಗಳಿಗೆ ಬಹುಸಂಖ್ಯೆಯ ಮಹಿಳೆಯರು ಹಣಕಾಸಿನ ಕೊರತೆಯ ಕಾರಣದಿಂದಲೇ ಹಿಂಜರಿಯುತ್ತಾರೆ. ಅಸಂಘಟಿತ ವಲಯದ, ದಿನಗೂಲಿ ನೌಕರಿಗಳಲ್ಲಿ ಬಸ್ ಪ್ರಯಾಣದ ಖರ್ಚುಗಳೇ ಆದಾಯದ ಬಹುಪಾಲು ಅಂಶವನ್ನು ಕಬಳಿಸುವುದರಿಂದ ಮನೆಯಲ್ಲೇ ಉಳಿಯುತ್ತಾರೆ. ಬಡತನ ಮತ್ತು ಹಸಿವೆಯನ್ನು ನೀಗುವ ಅನಿವಾರ್ಯತೆ ಇರುವ ಗ್ರಾಮೀಣ-ಬಡ ಕುಟುಂಬದ ಮಹಿಳೆಯರು ಹತ್ತಾರು ಕಿಲೋಮೀಟರ್ ನಡೆದೇ ಹೋಗುವುದನ್ನೂ ಸಹ ಗಮನಿಸಬಹುದಿತ್ತು. ಅತಿ ಹೆಚ್ಚಿನ ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಗಾರ್ಮೆಂಟ್ ವಲಯದಲ್ಲಿ ಇದು ಢಾಳಾಗಿ ಕಾಣುವ ವಿದ್ಯಮಾನ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಗೃಹ ಕೈಗಾರಿಕೆಗಳಲ್ಲಿ ದುಡಿಯುವವರು, ಸಾರ್ವಜನಿಕ ಕಾಮಗಾರಿಯ ಕಾರ್ಮಿಕರು ಮತ್ತು ಇತರ ಅನೌಪಚಾರಿಕ ವಲಯದ ಮಹಿಳಾ ದುಡಿಮೆಗಾರರೂ ಸಹ ಬಸ್ ಪ್ರಯಾಣದ ಖರ್ಚು ವೆಚ್ಚವನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ದುಡಿಮೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಸ್ವಾಭಾವಿಕ. ಆಶಾ/ಅಂಗನವಾಡಿ/ಸಾರ್ವಜನಿಕ ಆರೋಗ್ಯ ವಲಯದ ಸಾವಿರಾರು ಕಾರ್ಯಕರ್ತೆಯರು ಬಸ್ ಪ್ರಯಾಣದ ಖರ್ಚು ಉಳಿಸಲು ಹಳ್ಳಿಯಿಂದ ಹಳ್ಳಿಗೆ ನಡೆದು ಹೋಗುವುದು ಸಾಮಾನ್ಯ ವಿದ್ಯಮಾನವಾಗಿದ್ದುದನ್ನು ಸ್ಮರಿಸಬಹುದು. ಉತ್ತಮ ಶಾಲಾ ಕಾಲೇಜು ಸೌಲಭ್ಯ ಇಲ್ಲದ ನಗರದ ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕೆಳಮಧ್ಯಮ ವರ್ಗದ-ಬಡ ಕುಟುಂಬಗಳ ಹೆಣ್ಣುಮಕ್ಕಳು ಸಹ ದುಬಾರಿ ಬಸ್ ಪ್ರಯಾಣದ ಕಾರಣಕ್ಕಾಗಿಯೇ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಾರೆ. ಏಕೆಂದರೆ ಈ ಕುಟುಂಬಗಳಲ್ಲಿ ಗಂಡು ಮಕ್ಕಳ ಶಿಕ್ಷಣ ಪ್ರಥಮ ಆದ್ಯತೆಯಾಗಿರುತ್ತದೆ. ಇಂದಿಗೂ ಸಹ ಹೆಚ್ಚಿನ ಸಂಖ್ಯೆಯ ದುಡಿಮೆಗಾರರು, ಪುರುಷರು ಮತ್ತು ಮಹಿಳೆಯರು, ರೈಲು ಸೌಲಭ್ಯವಿದ್ದೆಡೆ ಪ್ಯಾಸೆಂಜರ್ ರೈಲುಗಳನ್ನೇ ಆಶ್ರಯಿಸುವುದನ್ನು ಗಮನಿಸಿದರೆ ಈ ವಾಸ್ತವದ ಅರಿವೂ ಮೂಡಲು ಸಾಧ್ಯ.
ಮುಂದುವರೆಯುತ್ತದೆ ,,,,,,,






