ಬಾಲಿವುಡ್ ನಟ ಶಾರುಖ್ ಖಾನ್ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಆದರೆ, ಈ ವಿವಾದವನ್ನು ಬಲಪಂಥೀಯ ಸಂಘಟನೆಗಳು ವೃಥಾ ಸೃಷ್ಟಿಸಿದೆ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ. ಭಾರತ ರತ್ನ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಎದುರು ಶಾರುಖ್ ಉಗುಳಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.
ಶಾರುಖ್ ಮತ್ತು ಅವರ ಮೆನೇಜರ್ ಪೂಜಾ ದದ್ಲಾನಿ ಲತಾ ಮಂಗೇಶ್ಕರ್ಗೆ ಒಟ್ಟಿಗೆ ಅಂತಿಮ ನಮನ ಸಲ್ಲಿಸಿದ್ದು, ಶಾರುಖ್ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥಿಸಿದ್ದರೆ, ಪೂಜಾ ಹಿಂದೂ ಸಂಪ್ರದಾಯದಂತೆ ನಮಸ್ಕರಿಸಿದ್ದರು. ಇವರಿಬ್ಬರೂ ಒಟ್ಟಿಗೆ ಗೌರವ ಸಲ್ಲಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು, ʼಇದು ಜಾತ್ಯಾತೀತ ಭಾರತದ ನೈಜ ಸೌಂದರ್ಯʼ ಎಂದು ಬಣ್ಣಿಸಿ ಹಲವರು ಹಂಚಿಕೊಂಡಿದ್ದಾರೆ.
ಆದರೆ, ಇದನ್ನು ಸಹಿಸದ ಬಲಪಂಥೀಯರು ಶಾರುಖ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಲತಾ ಪಾರ್ಥಿವ ಶರೀರದ ಮುಂದೆ ಪ್ರಾರ್ಥಿಸಿದ ಶಾರುಖ್, ಬಳಿಕ ಸಾಮಾನ್ಯವಾಗಿ ಮುಸ್ಲಿಮರು ಮಾಡುವಂತೆ ಬಾಯಿಯಿಂದ ಗಾಳಿಯನ್ನು ಊದಿದ್ದಾರೆ. (ಪ್ರಾರ್ಥನೆ (ದುಆ) ಹಾಗೂ ಕುರಾನ್ ಪಾರಾಯಣ ಮಾಡಿದ ಬಾಯಿಯಿಂದ ಊದುವುದನ್ನು ಪುಣ್ಯ ಗಾಳಿ ಎಂದು ಮುಸ್ಲಿಮರು ನಂಬುತ್ತಾರೆ. ಹಾಗು ಸಾಮಾನ್ಯವಾಗಿ ಅದನ್ನು ಆಚರಿಸುತ್ತಾರೆ.)
ಆದರೆ, ಇದನ್ನು ಬಲಪಂಥೀಯರು ಪಾರ್ಥಿವ ಶರೀರದ ಮುಂದೆ ಶಾರುಖ್ ಉಗುಳುವುದು ಎಂದು ಬಿಂಬಿಸಿ ಪ್ರಚಾರ ಮಾಡುತ್ತಿದ್ದಾರೆ. ಶಾರುಖ್ ಲತಾ ಅವರ ಮೃತದೇಹದ ಎದುರು ಉಗುಳುತ್ತಿದ್ದಾರೆ. ಇದೆಂತಹ ಸಂಸ್ಕೃತಿ ಎಂದು ಕೆಲವು ಬಲಪಂಥೀಯರು ಪ್ರಚಾರ ಮಾಡುತ್ತಿದ್ದರೆ, ಹರ್ಯಾಣ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಯಾದವ್ ಈ ವಿಡಿಯೋ ಹಂಚಿಕೊಂಡಿದ್ದು, ʼಅವರು ಉಗುಳುತ್ತಿದ್ದಾರೆಯೇ?ʼ ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಕರ್ತೆ ರುಬಿಕಾ ಲಿಯಾಕತ್ ಪ್ರತಿಕ್ರಿಯಿಸಿ, ʼಇದು ಉಗುಳುವುದಲ್ಲ, ಇದನ್ನು ಫಾತಿಹಾ ಓದುವುದು ಅನ್ನುತ್ತಾರೆ. ಇದು ಪ್ರಾರ್ಥನೆ ಬಳಿಕ ಊದುತ್ತಿರುವುದುʼ ಎಂದಿದ್ದಾರೆ.
ಶಾರುಖ್ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥಿಸಿದ್ದರೆ, ಪೂಜಾ ಹಿಂದೂ ಸಂಪ್ರದಾಯದಂತೆ ನಮಸ್ಕರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಜಾತ್ಯತೀತ ಭಾರತದ ಸೌಂದರ್ಯ ಎಂದು ವೈರಲ್ ಆಗುತ್ತಲಿತ್ತು. ಆದರೆ, ಇದನ್ನು ಸಹಿಸದ ಬಲಪಂಥೀಯರು ಶಾರುಖ್ ವಿರುದ್ಧ ಅಪಪ್ರಚಾರ ನಡೆಸಿ, ತೀರಾ ಕೊಳಕು ಮಟ್ಟದ ಭಾಷೆಗಳಿಂದ ಶಾರುಖ್ ಮತ್ತು ಮುಸ್ಲಿಂ ಸಂಪ್ರದಾಯಗಳನ್ನು ಹಂಗಿಸಲು ಆರಂಭಿಸಿದ್ದಾರೆ.
ಬಲಪಂಥೀಯ ಟ್ರಾಲರ್ಗಳ ಈ ಅಪಪ್ರಚಾರವನ್ನು ನೆಟ್ಟಿಗರು ತರಾಟೆಗೆ ತೆಗೆದಿದ್ದು, ಶಾರೂಕ್ ಉಗುಳಿಲ್ಲ. ಮುಸ್ಲಿಮರು ಕುರಾನ್ ಸೂಕ್ತ ಓದಿ, ಪ್ರಾರ್ಥಿಸಿದ ಬಳಿಕ ಬಾಯಿಯಿಂದ ಊದುವುದು ಸಹಜ. ಅದು ಉಗುಳುತ್ತಿರುವುದಲ್ಲ ಎಂದು ಹೇಳಿದ್ದಾರೆ.
ಇನ್ನು ವೈರಲ್ ಆಗುತ್ತಿರುವ ವಿಡಿಯೋದಲ್ಲೂ ಉಗುಳುತ್ತಿರುವುದು ಎಲ್ಲೂ ಕಂಡು ಬರುತ್ತಿಲ್ಲ. ಬದಲಾಗಿ, ಬಾಯಯಿಂದ ಮಾಸ್ಕ್ ಜಾರಿಸಿ ಶಾರುಖ್ ಊದುತ್ತಿರುವುದು ಕಾಣಬಹುದು.
ಮುಸ್ಲಿಮರು ಕಂಡ ಕಂಡಲ್ಲಿ ಉಗುಳುತ್ತಾರೆ, ಆಹಾರದ ಮೇಲೆ ಉಗುಳುತ್ತಾರೆ, ಕರೋನಾ ಸೋಂಕು ಹರಡಲು ಉಗುಳುತ್ತಾರೆ ಎಂದೆಲ್ಲಾ ಬಲಪಂಥೀಯರು ಈ ಹಿಂದೆ ಪ್ರಚಾರ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು.
ಶಾರುಖ್ ಜೊತೆಗಿದ್ದದ್ದು ಪತ್ನಿ ಗೌರಿಯಲ್ಲ.!
ಶಾರುಖ್ ಮತ್ತು ಮೆನೇಜರ್ ಪೂಜಾ ಒಟ್ಟಿಗೆ ವಂದಿಸುವ ಫೋಟೋ ವೈರಲ್ ಆಗುತ್ತಿದ್ದಂತೆ ಬಹುತೇಕರು ಅದು ಗೌರಿ ಖಾನ್ ಎಂದೇ ನಂಬಿದ್ದರು. ಮಾಸ್ಕ್ ಹಾಕಿದ್ದ ಹಿನ್ನೆಲೆಯಲ್ಲಿ ಮುಖದ ಪರಿಚಯ ಸರಿಯಾಗಿ ಆಗದ ಕಾರಣ ಶಾರುಖ್ ಮತ್ತು ಅವರ ಪತ್ನಿ ಗೌರಿ ಎಂದು ಭಾವಿಸಿ ಚಿತ್ರವನ್ನು ಹಂಚಿಕೊಂಡಿದ್ದರು. ಆದರೆ, ಶಾರುಖ್ ಜೊತೆಗೆ ಇದ್ದದ್ದು ಗೌರಿಯಲ್ಲ, ಶಾರುಖ್ ಅವರ ಮೆನೇಜರ್ ಪೂಜಾ ದದ್ಲಾನಿ ಎಂದು ವರದಿಯಾಗಿದೆ.