ಬೆಳಗಾವಿ: ಕರ್ನಾಟಕ ಕೇಡರ್ ನ ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿ (51) ಮಂಗಳವಾರ ಸಂಜೆ
ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸದ್ಯ ಬೀಳಗಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಹಿಂದೆ ದಾವಣಗೆರೆ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಬೀಳಗಿ ಸೇವೆ ಸಲ್ಲಿಸಿದ್ದರು.

ನಿನ್ನೆ ಸಂಜೆ ಮಹಾಂತೇಶ್ ಬೀಳಗಿ ಮದುವೆ ಕಾರ್ಯಕ್ರಮಕ್ಕಾಗಿ ಬೆಳಗಾವಿಯ ರಾಮದುರ್ಗದಿಂದ ಕಲಬುರಗಿಯತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಬೀಳಗಿ ವಾಹನಕ್ಕೆ ಅಡ್ಡಲಾಗಿ ಬೈಕ್ ಸವಾರನೋರ್ವ ಬಂದ ಪರಿಣಾಮ ಬೈಕ್ ಸವಾರನನ್ನು ಉಳಿಸಲು ಹೋಗಿ ಸೇತುವೆಗೆ ರಭಸವಾಗಿ ಕಾರ್ ಡಿಕ್ಕಿ ಹೊಡೆದು ಸೇತುವೆಯ ಕೆಳಗೆ ಕಾರು ಪಲ್ಟಿಯಾಗಿದೆ. ಈ ವೇಳೆ ಈರಣ್ಣ ಬೀಳಗಿ ಹಾಗು ಹಾಗೂ ಶಂಕರ್ ಬೀಳಗಿ ಸ್ಥಳದಲ್ಲೆ ಸಾವನಪ್ಪಿದ್ರೆ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಮತ್ತೊಬ್ಬ ಸ್ನೇಹಿತರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ತಮ್ಮ ಸೇವೆ ಹಾಗೂ ಕಾರ್ಯವೈಖರಿಯಿಂದಲೇ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಖ್ಯಾತಿ ಗಳಿಸಿದ್ದರು. ಕರ್ತವ್ಯ ಪಾಲನೆ ಹಾಗೂ ಜನಪರ ಕಾಳಜಿಯ ಕೆಲಸಗಳಿಂದಲೇ ಅವರು ಖ್ಯಾತಿ ಗಳಿಸಿದ್ದರು. ಬೀಳಗಿ ಅಕಾಲಿಕ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.
2012 ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದ ಬೀಳಗಿಯವರು ಹಲವು ಜಿಲ್ಲೆಗಳ ಸಿಇಒ, ಜಿಲ್ಲಾಧಿಕಾರಿಯಾಗಿ ಕಾರ್ಯ ಕೆಲಸ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಗೊಂಡು ಬೆಸ್ಕಾಂ ಎಂಡಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇತ್ತೀಚೆಗೆ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದರು.

1974ರ ಮಾರ್ಚ್ 27ರಂದು ಜನಿಸಿದ್ದ ಮಹಾಂತೇಶ್ ಬೀಳಗಿ 2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮಹಾಂತೇಶ್ ಬೀಳಗಿ ಬೆಸ್ಕಾಂ ಎಂಡಿ ಸಹ ಆಗಿದ್ದರು. ಅಲ್ಲದೇ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು.
ಮೃತ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ ಇಂದು ಹುಟ್ಟೂರು ಬೆಳಗಾವಿಯ ರಾಮದುರ್ಗದಲ್ಲಿ ನಡೆಯಲಿದೆ.







