ರಾಜ್ಯದಲ್ಲಿ ಪ್ರಬಲ ಸಮುದಾಯಗಳ ಪೈಕಿ ಲಿಂಗಾಯತ ಸಮುದಾಯ ಕೂಡಾ ಒಂದಾಗಿದೆ. ಬಸವಾದಿ ಶರಣ ತತ್ವದ ಮೇಲೆ ನಂಬಿಕೆ ಇಟ್ಟಿರುವ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟ ರಾಜಕೀಯಶಕ್ತಿ ಪ್ರದರ್ಶನ ಮಾಡಿತ್ತು. ಆದರೆ ಅದೇ ಮೀಸಲಾತಿಯ ಹೋರಾಟ ಇದೀಗ ಸಮುದಾಯದ ಸ್ವಾಮೀಜಿಗಳಲ್ಲಿ ಭಿನ್ನಮತ ಉಂಟಾಗಲು ಕಾರಣವಾಗಿದೆ.
ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮಿಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮಿಜಿ ವಿರುದ್ಧ ಇದೀಗ ಅದೇ ಸಮುದಾಯದ ಕೆಲವು ಸ್ವಾಮಿಜಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತ್ಯೇಕವಾಗಿ ಸಭೆಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಸ್ಥಾಪನೆ ಮಾಡುವ ಮೂಲಕ ಪಂಚಮಸಾಲಿ ಸಮುದಾಯದಲ್ಲೇ ಮತ್ತೊಂದು ಕದನಕ್ಕೆ ವೇದಿಕೆ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಎರಡು ಪಂಚಮಸಾಲಿ ಪೀಠಗಳು ಇದ್ದರೂ ಸಹ ಇದೀಗ ಈ ಎರಡೂ ಪೀಠಗಳಿಗೆ ಪರ್ಯಾಯ ಎಂಬಂತೆ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಇದನ್ನು ಪರ್ಯಾಯಪೀಠ, ಶಕ್ತಿಪೀಠ, ಶರಣ ಪೀಠ, ಬಸವ ಪೀಠ ಎಂದೆಲ್ಲ ಉಲ್ಲೇಖಿಸಲಾಗುತ್ತಿದೆ. ಸಮಾನ ಮನಸ್ಕ ಸ್ಬಾಮೀಜಿಗಳು ಒಂದುಗೂಡಿರುವ ಈ ಒಕ್ಕೂಟದಲ್ಲಿ ಸಮಾಜದ ಬಡವರಿಗಾಗಿ ಶ್ರಮಿಸುವ ಉದ್ದೇಶ ಹೊಂದಿದೆ. 80ಕ್ಕೂ ಅಧಿಕ ಸ್ವಾಮೀಜಿಗಳು ಇದಕ್ಕೆ ಕೈ ಜೋಡಿಸಿದ್ದಾರೆ. ಎರಡೂ ಪೀಠಗಳ ಮೇಲೆ ಅಸಮಾಧಾನಗೊಂಡವರು ಒಕ್ಕೂಟದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚಮಸಾಲಿ ಎರಡು ಪೀಠಗಳ ನಡುವೆ ಮುಸುಕಿದ ಗುದ್ದಾಟಗಳು ನಡೆಯುತ್ತಲೇ ಇರುವಾಗ ಇದೀಗ ಈ ಎರಡೂ ಪೀಠಗಳಿಗೆ ಠಕ್ಕರ್ ಕೊಡಲು ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಸಿದ್ಧವಾಗಿದೆ.
ಕಳೆದ ತಿಂಗಳು ಅಥಣಿ ತಾಲೂಕಿನ ಕಕ್ಕಮರಿಯಲ್ಲಿ ಮೊದಲ ಸಭೆ ಹಾಗೂ ಜಮಖಂಡಿಯಲ್ಲಿ 2ನೇ ಸಭೆಯನ್ನು ನಡೆಸಲಾಗಿತ್ತು. ಬಳಿಕ ಒಕ್ಕೂಟದ ಕಾರ್ಯ ಚಟುವಟಿಕೆ ಚುರುಕಾಗಿದ್ದು, ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮೂರನೇ ಸಭೆ ಮಾಡಿದ್ದಾರೆ. ಇಲ್ಲಿನ ಹಿರೇಮಠದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 35ಕ್ಕೂ ಅಧಿಕ ಸ್ವಾಮೀಜಿಗಳು ಆಗಮಿಸಿ ಭಾಗವಹಿಸಿದ್ದರು. ಪಂಚಮಸಾಲಿ ಸಮಾಜದ ಏಳಿಗೆಗಾಗಿ ಶ್ರಮಿಸಲು ಮುಂದಾಗಿರುವ ಈ ಒಕ್ಕೂಟ ಪಂಚಮಸಾಲಿ ಸಮಾಜದ ಮತ್ತೊಂದು ಶಕ್ತಿಪೀಠ ಎಂದೇ ಬಿಂಬಿತವಾಗಿದೆ. ಹೀಗಾಗಿ ಈಗಾಗಲೇ ಇರುವ ಎರಡೂ ಪೀಠಗಳಿಗೆ ಸೆಡ್ಡು ಹೊಡೆಯಲು ನಿರ್ಮಾಣವಾಗಿರುವ ಈ ಒಕ್ಕೂಟದಿಂದ ಪಂಚಮಸಾಲಿ ಒಗ್ಗಟ್ಟಿನಲ್ಲಿ ವಿಭಜನೆ ಆಗುವುದು ಖಂಡಿತ ಎಂಬಂತಾಗಿದೆ.
ಪಂಚಮಸಾಲಿ ಪರ್ಯಾಯ ಒಕ್ಕೂಟದ ಬಗ್ಗೆ ಮಾತನಾಡಿದ ಮನಗೂಳಿಯ ಹಿರೇಮಠದ ಸಂಗನಬಸವ ಶ್ರೀಗಳು, “ಸಮಾಜದಲ್ಲಿನ ಬಡವರಿಗೆ ಹಿಂದುಳಿದವರಿಗೆ ಸಹಾಯಹಸ್ತ ಚಾಚಲು ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಹೊರತಾಗಿ ಇದರಲ್ಲಿ ಯಾವುದೇ ರಾಜಕೀಯವಾಗಲಿ ಅಥವಾ ಕೂಡಲಸಂಗಮ ಮತ್ತು ಹರಿಹರ ಪೀಠಗಳಿಗೆ ಸೆಡ್ಡು ಹೊಡೆಯುವುದಾಗಲಿ ಇಲ್ಲ ಎಂದಿದ್ದಾರೆ. ಆದರೆ ಇದೇ ಮನಗೂಳಿಯ ಸಂಗನ ಬಸವ ಶ್ರೀಗಳು, ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಾನೇ ಶ್ರೇಷ್ಠ ಎನ್ನುವುದು ಸರಿಯಲ್ಲ. ರಾಜಕೀಯ ಮಾಡುವುದನ್ನು ಬಿಟ್ಟು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಮೊದಲು ಪಂಚಮಸಾಲಿ ಸಮುದಾಯದವರಿಗಾಗಿ ಹರಿಹರ ಪೀಠದ ಒಬ್ಬರೇ ಜಗದ್ಗುರುಗಳು ಇದ್ದರು, ನಂತರದಲ್ಲಿ ಕೂಡಲ ಸಂಗಮದಲ್ಲಿ ಮತ್ತೊಂದು ಪೀಠ ರಚಿತವಾಗಿ ಇಬ್ಬರು ಜಗದ್ಗುರುಗಳು ಇದ್ದಾರೆ. ಈ ಎರಡೂ ಪೀಠಗಳ ನಡುವೆ ಸಮನ್ವಯತೆ ಸಾಧಿಸಿ ದೊಡ್ಡ ಪಂಚಮಸಾಲಿ ಜನಾಂಗವನ್ನೂ ಒಂದುಗೂಡಿಸಿಕೊಂಡು ಹೋಗಬೇಕು ಎಂದು ಹಲವರು ಶತಪ್ರಯತ್ನ ನಡೆಸಿದರು ಆಗಿಲ್ಲ. ಇದೀಗ ಈ ಪೀಠಗಳಿಗೆ ಸವಾಲಾಗಿ ಮತ್ತೊಂದು ಒಕ್ಕೂಟ ಜನ್ಮ ತಾಳಿದ್ದು, ಸಮಾಜವನ್ನು ಮತ್ತಷ್ಟು ಒಡೆಯಲಿದೆಯಾ ಎಂಬ ಆತಂಕ ಆ ಸಮುದಾಯದ ಜನರಲ್ಲಿ ಕಾಡುತ್ತಿದೆ.
ಇದರ ಜೊತೆಗೆ ಪಂಚಮಸಾಲಿ ಎರಡೂ ಪೀಠಗಳ ಜಗದ್ಗುರುಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಸಮಾಧಾನವಿದ್ದ ಸ್ವಾಮೀಜಿಗಳೆಲ್ಲ ಒಂದುಗೂಡಿ ಹೀಗೆ ಒಕ್ಕೂಟ ರಚಿಸಿ ಪೀಠಗಳಿಗೆ ಪಾಠ ಕಲಿಸಲು ಹೊರಟಿದ್ದಾರೆ. ಇದರ ಭಾಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ಪೀಠ ಸ್ಥಾಪನೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಪಂಚಮಸಾಲಿ ಮಠಾಧೀಶರ ಒಕ್ಕೂಟ ಅಧ್ಯಕ್ಷರಾಗಿರುವ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮತ್ತು ಹಲವು ಮುಖಂಡರಿಂದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಅದು ಈ ಬಗ್ಗೆ ಅಧಿಕೃತವಾದ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.
ರಾಜಕೀಯ ನಾಯಕರ ಪರವಾಗಿ ಪೀಠಗಳ ವಾದ
ಪಂಚಮಸಾಲಿ ಸಮುದಾಯದ ಪ್ರಬಲ ನಾಯಕರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಸಚಿವ ಮುರುಗೇಶ್ ನಿರಾಣಿ ಪರವಾಗಿ ಒಬ್ಬಬ್ಬ ಸ್ವಾಮೀಜಿ ಬೆಂಬಲ ಸೂಚಿಸುತ್ತಿದ್ದಾರೆ. ಹರಿಹರ ಪೀಠದ ವಚನಾನಂದ ಸ್ವಾಮೀಜಿ ನೇರವಾಗಿ ಮುರುಗೇಶ್ ನಿರಾಣಿ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಅಂದಿನ ಸಿಎಂ ಯಡಿಯೂರಪ್ಪ ಅವರಿಗೆ ವೇದಿಕೆ ಮೇಲೆಯೇ ಬಹಿರಂಗವಾಗಿ ಆಗ್ರಹಿಸಿದ್ದರು. ಕೂಡಲ ಸಂಗಮ ಪೀಠದ ಜಯ ಮೃತುಂಜಯ ಸ್ವಾಮೀಜಿಗಳ ಶಾಸಕ ಬಸನಗೌಡ ಪಾಟೀಲ್ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಎರಡು ಪೀಠಗಳು ರಾಜಕಾರಣಿಗಳ ಜೊತೆ ಗುರುತಿಸಿಕೊಂಡ ಕಾರಣ ಅವುಗಳಿಂದ ದೂರವಿರಲು ಮೂರನೇ ಪೀಠ ಸ್ಥಾಪನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಇಬ್ಬರೂ ನಾಯಕರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಉಳಿದ ನಾಯಕರು ಈ ಮೂರನೇ ಪೀಠಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ ಎನ್ನಲಾಗಿದೆ.
ಇದೀಗ ಮೂರನೇ ಪೀಠ ಸ್ಥಾಪನೆಯಾದರೆ ಪಂಚಮಸಾಲಿ ಸಮಾಜದಲ್ಲಿ ಮತಷ್ಟು ಒಡಕು ಮೂಡುವ ಆತಂಕ ಹಲವರಲ್ಲಿ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.