50 ಕ್ಕೂ ಹೆಚ್ಚು ಐಐಟಿಯನ್ನರು, ವೈದ್ಯರು, ವಿಜ್ಞಾನಿಗಳು ಮತ್ತು ಪೋಷಕರು ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ತಮ್ಮ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲು ತುರ್ತಾಗಿ ಕಾರ್ಯಪಡೆ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ. ವೈಜ್ಞಾನಿಕ ಪುರಾವೆಗಳು ಸುರಕ್ಷತೆಗಳೊಂದಿಗೆ ಶಾಲೆ ಪುನಃ ತೆರೆಯುವುದು ಸಾಧ್ಯ ಎಂದು ಸಾಬೀತುಪಡಿಸಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.
“ಈ ಪತ್ರವನ್ನು ಬರೆಯುವ ಸಮಯದಲ್ಲಿ, ಪ್ರಪಂಚದಾದ್ಯಂತ ಸುಮಾರು 170 ದೇಶಗಳಲ್ಲಿ ಶಾಲೆಗಳು ಭಾಗಶಃ ಅಥವಾ ಪೂರ್ಣವಾಗಿ ತೆರೆದಿರುತ್ತವೆ. ಸಾಂಕ್ರಾಮಿಕ ಸಮಯದಲ್ಲಿ ಫ್ರಾನ್ಸ್ ಮತ್ತು ಸ್ವೀಡನ್ ನಂತಹ ಕೆಲವು ದೇಶಗಳು ಶಾಲೆಯನ್ನು ಮುಚ್ಚಲಿಲ್ಲ “ಎಂದು ಪತ್ರದಲ್ಲಿ ಹೇಳಿದ್ದಾರೆ.
“ಜುಲೈ 2021 ರಲ್ಲಿ, ಯುನಿಸೆಫ್ ಮತ್ತು ಯುನೆಸ್ಕೋ ಶಾಲೆಗಳನ್ನು ಮೊದಲ ಆದ್ಯತೆಯಾಗಿ ತೆರೆಯಬೇಕು ಮತ್ತು ಕೊನೆಯ ಆದ್ಯತೆಯಾಗಿ ಮುಚ್ಚಬೇಕು ಎಂದು ಹೇಳಿದೆ. ಅಲ್ಲದೆ ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಅಪಾಯ ಕಡಿಮೆ ಎಂಬುದಕ್ಕೆ ಪುರಾವೆಗಳಿವೆ” ಎಂದೂ ಹೇಳಿದೆ.
ಎರಡನೇ ಅಲೆಯಲ್ಲಿ ದಿನವಹಿ ಆಕ್ಟಿವ್ ಪ್ರಕರಣಗಳು ಕಡಿಮೆಯಾದ ನಂತರ ಬಿಹಾರ ಮತ್ತು ಹಿಮಾಚಲ ಪ್ರದೇಶದಂತಹ ಅನೇಕ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲು ನಿರ್ಧರಿಸಿವೆ. ಆದರೆ, ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಗೌರವ ಪ್ರೊಫೆಸರ್ ಜೀನ್ ಡ್ರೆಜ್, ಐಐಟಿ ಬಾಂಬೆಯ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಭಾಸ್ಕರನ್ ರಾಮನ್ , ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ನೀತಿ ತಜ್ಞರಾದ ಡಾ. ಚಂದ್ರಕಾಂತ್ ಲಹರಿಯ, ಐಐಟಿ ದೆಹಲಿಯ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಪ್ರೊಫೆಸರ್ ರೀತಿಕಾ ಖೇರಾ, ಅಶೋಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಗೌತಮ್ ಮೆನನ್ ಮುಂತಾದ ಪ್ರಮುಖರು ಪತ್ರಕ್ಕೆ ಸಹಿ ಹಾಕಿದ್ದಾರೆ.
ರಾಜ್ಯ ಸರ್ಕಾರಗಳು ಹೆಚ್ಚಿನ ಜನರಿಗೆ ಲಸಿಕೆ ಹಾಕಿದ ನಂತರ ಶಾಲೆಗಳನ್ನು ತೆರೆಯಲು ಯೋಚಿಸುತ್ತಿದೆ, ಆದರೆ ಈ ಪ್ರಕ್ರಿಯೆಯು ಇನ್ನೂ ಹಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂಬುವುದು ತಜ್ಞರ ಅಭಿಮತ. ಏಕೆಂದರೆ ದೆಹಲಿಯಲ್ಲಿ ಕೇವಲ 13 ಪ್ರತಿಶತ ಜನರು ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ 7 ಪ್ರತಿಶತದಷ್ಟು ಜನರು ಲಸಿಕೆ ಹಾಕಿಸಿದ್ದಾರೆ.
“ಭಾರತದಲ್ಲಿ ಮಕ್ಕಳ ಲಸಿಕೆಗಳು ಪ್ರಗತಿಯಲ್ಲಿವೆ , ಆದರೆ UK ಯಂತಹ ದೇಶಗಳು ಚಿಕ್ಕ ಮಕ್ಕಳಿಗೆ ಸಾರ್ವತ್ರಿಕ ವ್ಯಾಕ್ಸಿನೇಷನ್ ಮಾಡದಿರಲು ನಿರ್ಧರಿಸಿವೆ ಮತ್ತು ಪ್ರಪಂಚದಲ್ಲಿ ಎಲ್ಲಿಯೂ 12 ವರ್ಷದೊಳಗಿನ ಮಕ್ಕಳಿಗೆ ಈಗ ಲಸಿಕೆ ಹಾಕುತ್ತಿಲ್ಲ” ಎಂದು ಪತ್ರದಲ್ಲಿ ಸೂಚಿಸಲಾಗಿದೆ, “ಭಾರತದಲ್ಲಿ ದೀರ್ಘಕಾಲದಿಂದ ಶಾಲೆಗಳು ಮುಚ್ಚಲ್ಪಟ್ಟಿದೆ ಆದ್ದರಿಂದ ಶಾಲೆಗಳನ್ನು ತೆರೆಯಲು ಮಕ್ಕಳಿಗೆ ಲಸಿಕೆ ಹಾಕುವುದು ಮಾನದಂಡವಾಗಬಾರದು” ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾಡಿದ ವಿವಿಧ ಶಿಫಾರಸುಗಳು ಮತ್ತು ಅಧ್ಯಯನಗಳನ್ನು ಉಲ್ಲೇಖಿಸಿ ಈ ತಜ್ಞರು ರಾಜ್ಯ ಸರ್ಕಾರಗಳಿಗೆ ಸ್ಥಳೀಯ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಎಂಟು ಹಂತಗಳ ಕಾರ್ಯ ಯೋಜನೆಯೊಂದನ್ನು ರೂಪಿಸಿದ್ದು ಎಚ್ಚರಿಕೆಯಿಂದ ಪರಿಗಣಿಸುವಂತೆ ಸಲಹೆ ನೀಡಿದ್ದಾರೆ.
೧. ನಿಮ್ಮ ನಿಮ್ಮ ರಾಜ್ಯದಲ್ಲಿ ಶಾಲೆಗಳನ್ನು ಈಗ ಭಾಗಶಃ ಆರಂಭಿಸಲು ಮತ್ತು ಭವಿಷ್ಯದಲ್ಲಿ ಪೂರ್ಣವಾಗಿ ಯೋಜಿಸಲು ಸಂಬಂಧಪಟ್ಟ ತಜ್ಞರೊಂದಿಗೆ ಕಾರ್ಯಪಡೆ ಸ್ಥಾಪಿಸಿ.
೨. ಪಾಸಿಟಿವಿಟಿ ಕಡಿಮೆ ಇರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಿ
೩. ಮಾಧ್ಯಮಿಕ ಶಾಲೆಗಳನ್ನು ತೆರೆಯುವುದಕ್ಕಿಂತ ಮೊದಲು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯನ್ನು ತೆರೆಯುವುದಕ್ಕೆ ಆದ್ಯತೆ ಕೊಡಿ.
೪. ಶಾಲಾ ಸಿಬ್ಬಂದಿಗಳಿಗೆ ಆದ್ಯತೆಯ ಮೇಲೆ ಲಸಿಕೆಗಳನ್ನು ನೀಡಿ ಮತ್ತು ಡೋಸ್ ನಡುವಿನ ಅಂತರವನ್ನು ಕಡಿಮೆ ಮಾಡಿ.
೫. ವಿದ್ಯಾರ್ಥಿಗಳನ್ನು ಸಣ್ಣ ಗುಂಪುಗಳನ್ನಾಗಿ ಮಾಡಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಶಾಲೆಗೆ ಹಾಜರಾಗುವಂತೆ ಮಾಡಿ.
೬. ಆನ್‌ಲೈನ್‌ನಿಂದ ಹೈಬ್ರಿಡ್ ಮಾದರಿಗೆ ಪರಿವರ್ತನೆ ಮಾಡಿಕೊಳ್ಳಲು ಶಾಲಾ ಮೂಲಸೌಕರ್ಯವನ್ನು ಅಪ್‌ಗ್ರೇಡ್ ಮಾಡಿ.
೭. ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆಗಾಗಿ ಮಾರ್ಗದರ್ಶನ ನೀಡಿ
೮. ಸೂಕ್ತ ಗಾಳಿಯಾಡುವಿಕೆಯನ್ನು ಖಚಿತಪಡಿಸಿಕೊಳ್ಳಿ.
ಆನ್‌ಲೈನ್ ಶಿಕ್ಷಣವು ಎಲ್ಲರಿಗೂ ಲಭ್ಯವಿಲ್ಲ ಎಂಬ ಸಮಸ್ಯೆ ಮಾತ್ರವಲ್ಲದೆ ಈ ರೀತಿಯ ಶಿಕ್ಷಣದಿಂದಾಗಿ ಪ್ರಾಥಮಿಕ ಶಾಲಾ ಮಕ್ಕಳ ಭಾಷೆ ಮತ್ತು ಗಣಿತದ ಸಾಮರ್ಥ್ಯಗಳು ಕುಗ್ಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಲಿಕೆಯ ನಷ್ಟ ಮಾತ್ರವಲ್ಲದೆ ಮಕ್ಕಳು ಆತ್ಮವಿಶ್ವಾಸ, ಮಾನಸಿಕ ಯಾತನೆ, ಹಿಂಸೆ ಮತ್ತು ನಿಂದನೆ ಮತ್ತು ಸಾಮಾಜಿಕ ಕೌಶಲ್ಯಗಳ ಬೆಳವಣಿಗೆಯನ್ನು ಕಳೆದುಕೊಳ್ಳುತ್ತಾರೆ. ಮಕ್ಕಳ ಶೈಕ್ಷಣಿಕ ಸಾಧನೆ, ಸಾಮಾಜಿಕ ಕೊಡುಕೊಳ್ಳುವಿಕೆ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ”ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಸಂಭವನೀಯ ಮೂರನೇ ಅಲೆಯ ಹೊರತಾಗಿಯೂ, ಮಕ್ಕಳು ಕೋವಿಡ್ -19 ನಿಂದ ಕಡಿಮೆ ಅಪಾಯದಲ್ಲಿದ್ದಾರೆ ಮತ್ತು ಕೋವಿಡ್ -19 ಹರಡುವಿಕೆಗೆ ಶಾಲೆಗಳು ಗಣನೀಯ ಕೊಡುಗೆ ನೀಡುವುದಿಲ್ಲ ಎಂಬುದಕ್ಕೆ ಬಲವಾದ ವೈಜ್ಞಾನಿಕ ಪುರಾವೆಗಳಿವೆ “ಎಂದೂ ಅವರು ಪ್ರತಿಪಾದಿಸಿದ್ದಾರೆ.