ಹಿಂದೂ ರಾಷ್ಟ್ರದ (Hindu Nation) ಕಲ್ಪನೆಯ ಬೀಜ ಮೊದಲು ಬಿತ್ತಿದ, ಹಿಂದುತ್ವದ ಪ್ರಬಲ ಪ್ರತಿಪಾದಕ ವಿನಾಯಕ ದಾಮೋದರ ಸಾವರ್ಕರ್ (vinayak damodar savarkar) ಅವರ ಪುಣ್ಯಸ್ಮರಣೆಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಅಧಿಕೃತ ಫೇಸ್‌ಬುಕ್ (FaceBook) ಖಾತೆ ಮೂಲಕ ಹಾಕಿರುವ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ.
“ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ, ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಪುಣ್ಯಸ್ಮರಣೆಯ ದಿನದಂದು ಅವರಿಗೆ ಶತಶತ ನಮನಗಳು. ಅವರ ದೇಶಪ್ರೇಮ, ತ್ಯಾಗ, ಹೋರಾಟಗಳು ಇಂದಿಗೂ ಸ್ಪೂರ್ತಿದಾಯಕವಾಗಿವೆ.” ಎಂದು ಸಿಎಂ ಬೊಮ್ಮಾಯಿ @CMofKarnataka ಫೇಸ್ಬುಕ್ ಖಾತೆ ಮೂಲಕ ಪೋಸ್ಟ್ ಹಂಚಿದ್ದಾರೆ.
ಇದು ಸಾಕಷ್ಟು ವ್ಯಂಗ್ಯಕ್ಕೆ ಕಾರಣವಾಗಿದೆ. ಸಾವರ್ಕರ್ ವೀರ ಅಲ್ಲ ಹೇಡಿ ಎಂದು ಕೆಲವರು ಕರೆದರೆ, ಬ್ರಿಟೀಷರ ಬೂಟು ನೆಕ್ಕುತ್ತಿದ್ದ ಸಾವರ್ಕರ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬ್ರಿಟೀಷರ ಪಿಂಚಣಿ ಪಡೆದು, ಬ್ರಿಟೀಷರ ಪರವಾಗಿ ಕೆಲಸ ಮಾಡಿದ ಒಬ್ಬನನ್ನು ಸ್ವಾತಂತ್ರ್ಯ ವೀರ ಎಂದು ಕರೆಯುತ್ತಿದ್ದೀರ, ನೀವು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಹಾಳು ಮಾಡುತ್ತಿದ್ದೀರ ಎಂದು ನೆಟ್ಟಿಗರು ತರಾಟೆಗೆ ಎಳೆದಿದ್ದಾರೆ.
“ನೀವು ವಯಕ್ತಿಕವಾಗಿ ಸಮರ್ಥಿಸಿಕೊಳ್ಳಿ ಸರ್ ರಾಜ್ಯ ಮುಖ್ಯಮಂತ್ರಿಯಾಗಿ ಇವರನ್ನು ಸಮರ್ಥಿಸಿಕೊಳ್ಳಬೇಡಿ..ಯಾಕಂದ್ರೆ ಹೆಮ್ಮೆಯ ಭಾರತ ಮಾತೆಯ ಪುತ್ರರು ನಮ್ಮ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನವ್ವ (sangolli rayanna, kittur rani chennamma) ಇವರು ಯಾರು ಎಂದು ಬ್ರಿಟಿಶರ (British) ಬಳಿ ಸ್ಖಮೆ ಕೇಳದೆ ವೀರ ವೇಶದಿಂದ ಹೋರಾಡಿ ದೇಶಕ್ಕೆ ಪ್ರಾಣ ಬಿಟ್ಟರು ನಿಮ್ಮ ಸರ್ವಕರ್ ತರ ಬ್ರಿಟಿಷರ ಬಳಿ ಸ್ಖಮೆ ಕೇಳಿ ಪಿಂಚಣಿ ಪಡೆಯಲಿಲ್ಲ” ಎಂದು ಮಧುಸೂಧನ್ ಗೌಡ ಎಂಬವರು ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ಹೆಸರಿನ ಖಾತೆಯಿಂದ ಸಾವರ್ಕರ್ ರನ್ನು ಶ್ಲಾಘಿಸಿ ಹಾಕಿರುವ ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳೆಲ್ಲವೂ ವ್ಯಂಗ್ಯಭರಿತವೂ, ವಿಡಂಬಣಾತ್ಮಕವೂ ಆಗಿರುವುದು ಇದೀಗ ಸಿಎಂ ಮುಜುಗರಕ್ಕೆ ಕಾರಣವಾಗಿದೆ. ಒಟ್ಟಾರೆ, ಸಾವರ್ಕರ್‌ಅನ್ನು ವೀರ ಎಂದು ಸಂಬೋಧಿಸಿದ ಮುಖ್ಯಮಂತ್ರಿಯನ್ನು ನೆಟ್ಟಿಗರು ಹಿಗ್ಗಾಮುಗ್ಗ ಗೇಲಿ ಮಾಡುತ್ತಿದ್ದಾರೆ.
ಸಾವರ್ಕರ್ ಬಗ್ಗೆ ಬಿಜೆಪಿಗರ ವಿಪರೀತ ಪ್ರೀತಿ ರಾಜ್ಯದಲ್ಲಿ ಈ ಹಿಂದೆ ಕನ್ನಡ ಪರ ಸಂಘಟನೆಗಳ ಅಸಮಾಧಾನಕ್ಕೂ ಕಾರಣವಾಗಿತ್ತು. ಕರ್ನಾಟಕದಲ್ಲೇ ಅಪ್ರತಿಮ ಸ್ವಾತಂತ್ರ್ಯ ವೀರರಿರುವಾಗ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಿರುವುದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದವು.
ಮರಾಠಿಗ ಸಾವರ್ಕರ್ (Marata Savarkar) ಬದಲು ಕನ್ನಡಿಗ ಸಂಗೊಳ್ಳಿ ರಾಯಣ್ಣ ಅವರ ಹೆಸರು ಮೇಲ್ಸೇತುವೆಗೆ ಇಡುವಂತೆ ಬೇಡಿಕೆಗಳು ಹೆಚ್ಚಾಗಿದ್ದವು. ಕೊನೆಗೆ ಕನ್ನಡಪರ ಸಂಘಟನೆಗಳ ನಾಯಕರನ್ನು ಬಂಧಿಸಿ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಿ ಉದ್ಘಾಟಿಸಲಾಗಿತ್ತು.
ಸಾವರ್ಕರ್ ಕುರಿತ ತಕರಾರುಗಳು :
ಗಾಂಧಿ ಹತ್ಯೆಯಲ್ಲಿ (Gandhi Kill) ದೋಷಾರೋಪ ಪಟ್ಟಿ ಹೊರಿಸಲ್ಪಟ್ಟಿದ್ದ ಸಾವರ್ಕರ್ ಬಗ್ಗೆ ಅನೇಕ ವಿವಾದಾತ್ಮಕ ವದಂತಿಗಳಿವೆ. ಗಾಂಧೀ ಹಂತಕ ನಾಥೂರಾಮ್ ಗೋಡ್ಸೆ (nathuram godse) ಜೊತೆ ಸಾವರ್ಕರ್‌ಗೆ ಸಲಿಂಗ ಸಂಬಂಧವಿತ್ತು, ನಕಲಿ ಹೆಸರಿನಲ್ಲಿ ತನ್ನ ಬಗ್ಗೆಯೇ ವೈಭವೀಕರಿಸಿ, ಕಲ್ಪಿತ ಶೌರ್ಯ ಕತೆಗಳನ್ನು ಹೆಣೆದು ಪುಸ್ತಕ ಬರೆದಿದ್ದಾರೆ ಎನ್ನುವುದು ಅದರಲ್ಲಿ ಬಹಳ ಪ್ರಮುಖವಾದುದು.
ಅದಾಗ್ಯೂ, ಸಾವರ್ಕರ್ ಅನ್ನು ಬಲಪಂಥೀಯರು ʼವೀರ್ʼ ಎಂದು ಕರೆದರೆ, ಆದರೆ, ಸಾವರ್ಕರ್ ರನ್ನು ವೀರ್ ಅಲ್ಲ ಹೇಡಿ ಎಂದು ಇನ್ನೊಂದು ವರ್ಗ ಕರೆಯುತ್ತದೆ. ಅದಕ್ಕೆ ಕಾರಣ ಬ್ರಿಟೀಷರಿಗೆ ಸಾವರ್ಕರ್ ಕ್ಷಮೆ ಕೋರಿ ಬರೆದಿದ್ದ ಪತ್ರ ಹಾಗೂ ಬ್ರಿಟೀಷರಿಂದ ಅವರು ಪಡೆಯುತ್ತಿದ್ದ ಪಿಂಚಣಿ.
ಅಂಡಮಾನ್ ನಲ್ಲಿ ʼಕಾಲಪಾನಿʼ ಶಿಕ್ಷೆಯಿಂದ ಪಾರಾಗಲು ಸಾವರ್ಕರ್ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರವನ್ನು ಉಲ್ಲೇಖಿಸಿ ಸಾವರ್ಕರ್ ಓರ್ವ ಹೇಡಿ, ಸ್ವಾತಂತ್ರ್ಯ ವೀರ ಅಲ್ಲ ಎಂದು ಹಲವು ಇತಿಹಾಸಕಾರರು ಬರೆಯುತ್ತಾರೆ. ಸ್ವಾತಂತ್ರ್ಯ ಹೋರಾಟ ಚಳುವಳಿಯಿಂದ ದೂರ ನಿಲ್ಲುವುದಾಗಿ ಬ್ರಿಟೀಷರಿಗೆ ಕೊಟ್ಟ ಭರವಸೆಯನ್ನು ಮುರಿದ ಉದಾಹರಣೆ ಮತ್ತೆ ಕಾಣುವುದಿಲ್ಲ.
ಭಾರತದ ಸ್ವಾತಂತ್ರ್ಯ ಸಂಘರ್ಷ ಇತಿಹಾಸದಲ್ಲಿ ಸಾವಿರಾರು ವೀರ ಹೋರಾಟಗಾರರು ಇದ್ದರೂ ಬಿಜೆಪಿ, ಹಾಗೂ ಸಂಘಪರಿವಾರ ಇಂತಹ ವಿವಾದಾತ್ಮಕ ವ್ಯಕ್ತಿಯನ್ನು ತಮ್ಮ ʼಐಕಾನ್ʼ ಆಗಿ ಬಳಸಲು ಹಾಗೂ ಅವರನ್ನು ʼವೀರʼನನ್ನಾಗಿ ಬಿಂಬಿಸಲು ಬಹಳ ಶ್ರಮಿಸುತ್ತಿದೆ.
ಇದಿಕ್ಕೆ ಮುಖ್ಯ ಕಾರಣ, ಹಿಂದೂ ರಾಷ್ಟ್ರದ ಕಲ್ಪನೆಯನ್ನು ಮೊದಲು ಬಿತ್ತಿದ, ಆ ಮೂಲಕ ದೇಶ ವಿಭಜನೆಗೆ ಪರೋಕ್ಷ ಕಾರಣವಾದ ಸಾವರ್ಕರ್ ಹಿಂದುತ್ವದ ಆರಂಭ ಕಾಲದ ಪ್ರತಿಪಾದಕರು. ಅವರಿಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದೇ ಗುರಿಯಾಗಿತ್ತು. ಧ್ವೇಷಗಳಿಂದ ತುಂಬಿದ ಅವರ ವಿಚಾರಧಾರೆಗಳನ್ನು ಪ್ರಚಾರ ಮಾಡಲೇ ಸಾವರ್ಕರ್ ಕುರಿತು ಕಲ್ಪಿತ ಶೌರ್ಯ ಕಥೆಗಳನ್ನು ಹಂಚಲಾಗುತ್ತದೆ. ಅಂಡಮಾನ್ ಜೈಲಿನಿಂದ ಸಮುದ್ರದಲ್ಲಿ ಈಜಿಯೇ ಫ್ರಾನ್ಸ್ ತಲುಪಿದರು ಅನ್ನುವುದು ಇಂತಹ ಕಥೆಗಳಲ್ಲಿ ಒಂದು.
ಆದರೆ, ಬಿಜೆಪಿ, ಸಂಘ ಪರಿವಾರ ಎಷ್ಟೇ ಶ್ರಮಿಸಿದರೂ, ಸಾವರ್ಕರ್ ಅನ್ನು ವೀರ ಎಂದು ಸಾರ್ವತ್ರಿಕಗೊಳಿಸಲು ಸಂಪೂರ್ಣ ಸಾಧ್ಯವಾಗಿಲ್ಲ. ಬ್ರಿಟೀಷರಲ್ಲಿ ಕ್ಷಮೆ ಕೋರಿ, ಸ್ವತಂತ್ರ ಹೋರಾಟ ಚಳುವಳಿಯಿಂದ ದೂರ ನಿಂತ ಸಾವರ್ಕರ್ ಚರಿತ್ರೆ ಇತಿಹಾಸದಲ್ಲಿ ನಿಚ್ಚಳವಾಗಿರುವುದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಬಿಜೆಪಿ ಐಟಿ ಸೆಲ್ ಕಾಳಪಾನಿಯ ಭೀಕರತೆಯನ್ನು ವಿವರಿಸುತ್ತಾ ಸಾವರ್ಕರ್ ಕ್ಷಮೆ ಕೇಳಿದ್ದನ್ನು ಸಮರ್ಥಿಸಿದರೆ, ಸಾವರ್ಕರ್ ಕ್ಷಮೆ ಕೇಳಲು ಗಾಂಧಿಯೇ ಸಲಹೆ ನೀಡಿದ್ದರು ಎಂದು ರಾಜನಾಥ್ ಸಿಂಗ್ ಆಧಾರ ರಹಿತ ಆರೋಪ ಹೊರಿಸಲು ಇದೇ ಕೀಳರಿಮೆ ಕಾರಣ.
ಬ್ರಿಟೀಷರೊಂದಿಗೆ ಕ್ಷಮೆ ಕೇಳಿರುವುದು, ಸ್ವತಂತ್ರ ಚಳುವಳಿಯಿಂದ ದೂರ ಸರಿದು ಬದುಕಿದ್ದು ಎಲ್ಲವೂ ಒಂದು ಕಡೆಯಾದರೆ, ಸಾವರ್ಕರ್ ಚಿಂತನೆಗಳು ಎಷ್ಟು ವಿಷಕಾರಿಯಾಗಿತ್ತು ಎನ್ನುವುದು ಅವರ ಕುರಿತು ಇರುವ ಇನ್ನೊಂದು ತಕರಾರು. ರಾಜಕೀಯ ಕಾರಣಗಳಿಗಾಗಿ ಮಹಿಳೆಯರ ಮೇಲಿನ ಸಮರ್ಥನೆ ಅವರ ತಣ್ಣಗಿನ ಕ್ರೌರ್ಯವನ್ನು ಬಯಲು ಮಾಡಿದೆ.
ವಿನಾಯಕ ದಾಮೋದರ ಸಾವರ್ಕರ್ ತನ್ನ ಪುಸ್ತಕಗಳಲ್ಲಿ ಒಂದಾದ “ಸಿಕ್ಸ್ ಗ್ಲೋರಿಯಸ್ ಎಪೋಕ್ಸ್ ಆಫ್ ಇಂಡಿಯನ್ ಹಿಸ್ಟರಿ” (ಭಾರತದ ಇತಿಹಾಸದ ಆರು ಮಹತ್ವದ ಪರ್ವಗಳು) ಎಂಬ ಪುಸ್ತಕದಲ್ಲಿ ಮುಸ್ಲಿಂ ಮಹಿಳೆಯನ್ನು ಅತ್ಯಾಚಾರ ಮಾಡುವುದು ಯಾಕೆ ಸಮರ್ಥನೀಯ ಎಂಬುದರ ಬಗ್ಗೆ ಚರ್ಚಿಸುತ್ತಾರೆ ಹಾಗೂ ಅವಕಾಶ ಸಿಕ್ಕಾಗ ಅದನ್ನು(ಅತ್ಯಾಚಾರವನ್ನು) ಮಾಡದೇ ಇರುವುದು ಸದ್ಗುಣವಾಗಲೀ, ಶೌರ್ಯವಾಗಲೀ ಅಲ್ಲ; ಬದಲಾಗಿ ಹೇಡಿತನ ಎಂದು ಪ್ರತಿಪಾದಿಸುತ್ತಾರೆ. (ಆಕರ: ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ್’ ಬಿಡುಗಡೆ ಮಾಡಿರುವ ಆನ್ಲೈನ್ ಆವೃತ್ತಿಯ ಅಧ್ಯಾಯ VIII)
ಮಹಿಳೆಯರ ಮೇಲಿನ ಅತ್ಯಾಚಾರಗಳು ಜನಸಂಖ್ಯೆಯನ್ನು ವಿಸ್ತರಿಸುವ ತಂತ್ರವಾಗಿದ್ದು, ಹಿಂದೂ ರಾಜರುಗಳು ಮುಸ್ಲಿಂ ಮಹಿಳೆಯರ ಮೇಲೆ ಈ ತಂತ್ರ ಬಳಸಲಿಲ್ಲವೆಂದು ಅವರು ತಮ್ಮ ಪುಸ್ತಕದಲ್ಲಿ ಸುದೀರ್ಘವಾಗಿ ಚರ್ಚಿಸುತ್ತಾರೆ. ಹಾಗೂ, ಈ ತಂತ್ರ ಬಳಸದೆ ಇರುವುದು ಹೇಡಿತನ ಎಂದು ಬಣ್ಣಿಸುತ್ತಾರೆ. ಇಂತಹ ಒಬ್ಬ ವ್ಯಕ್ತಿಯನ್ನು ಬಹುಸಂಸ್ಕೃತಿ ಸಹಿಷ್ಣು ಭಾರತದಲ್ಲಿ ಅನಗತ್ಯವಾಗಿ ವಿಜೃಂಭಿಸುವುದು ಎಷ್ಟು ಅಪಾಯಕಾರಿ ಎಂಬುವುದು ಕೂಡಾ, ಸಾವರ್ಕರ್ ರನ್ನು ವಿರೋಧಿಸಲು ಇರುವ ಮುಖ್ಯವಾದ ಕಾರಣ.