ಬೆಂಗಳೂರು: ಮಾ; 21: ಸದಾ ವಿವಾದಗಳಿಂದಲೇ ಸುದ್ದಿಯಾಗೋ ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾರನ್ನ ಅರೆಸ್ಟ್ ಮಾಡಲಾಗಿದೆ. ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ ಶೇಷಾದ್ರಿಪುರಂ ಪೊಲೀಸರು ಇಂದು ಮುಂಜಾನೆ ಚೇತನ್ರನ್ನ ಬಂಧಿಸಿದ್ದಾರೆ. ನಟ ಚೇತನ್ ಈ ಹಿಂದೆ ತಮ್ಮ ಫೇಸ್ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಉರೀಗೌಡ, ನಂಜೇಗೌಡ ಬಗ್ಗೆ ಪೋಸ್ವೊಂದನ್ನ ಶೇರ್ ಮಾಡಿದ್ರು. ಅದರಲ್ಲಿ ʼಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ, ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯ್ತು ಎನ್ನುವುದು ಒಂದು ಸುಳ್ಳು. 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮಭೂಮಿ ಕುರಿತು ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನ ಕೊಂದರು ಎನ್ನುವುದು ಕೂಡ ಒಂದು ಸುಳ್ಳು.


ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು, ಸತ್ಯವೇ ಸಮಾನತೆʼ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ನಟ ಚೇತನ್ ಪೋಸ್ಟ್ ಮಾಡಿದ್ರು. . ಈ ಹಿನ್ನೆಲೆ ನಟ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ಧರ್ಮಕ್ಕೆ ಅಪಮಾನವಾಗುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ, ಶಿವಕುಮಾರ್ ಎಂಬುವವರು ಚೇತನ್ ವಿರುದ್ಧ ದೂರು ನೀಡಿದ್ದು, ನಟ ಚೇತನ್ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ದೂರು ದಾಖಲಿಸಿದ್ದರು. ದೂರಿನನ್ವಯ ಚೇತನ್ ಅಹಿಂಸಾ ವಿರುದ್ಧ ಐಪಿಸಿ ಸೆಕ್ಷನ್ 295ಎ, 505ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ.
