ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಮುಂದಾಳತ್ವದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಮೊದಲ ದಿನ ರಾಜಕಾರಣದ ಜಾತ್ರೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಬಹುತೇಕ ಜನರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಗೋ.ರು ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಮೂರು ದಿನದ ಸಾಹಿತ್ಯ ಹಬ್ಬ ನಡೆಯುತ್ತಿದ್ದು, ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇವತ್ತು ಮೊದಲ ದಿನ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದರೆ ಇನ್ನುಳಿದ ಎರಡು ದಿನಗಳ ಕಾಲ ಆ ತಪ್ಪುಗಳಾಗದಿದ್ದರೆ ಮಂಡ್ಯದ ಸಾಹಿತ್ಯ ಜಾತ್ರೆಗೆ ಮೆರಗು ಬರುವುದರಲ್ಲಿ ಅನುಮಾನವಿಲ್ಲ.
ಮೊದಲ ತಪ್ಪನ್ನು ಸರಿ ಮಾಡುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಮಂಡ್ಯ ನಗರದಿಂದ ಬರೋಬ್ಬರಿ 6 ಕಿಲೋ ಮೀಟರ್ ದೂರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಬರುವ ಜನರು, ಕಾರ್ಯಕ್ರಮದ ಸ್ಥಳಕ್ಕೆ ತಲುಪುವುದು ಕಷ್ಟ ಸಾಧ್ಯ. ಹೆದ್ದಾರಿಯಲ್ಲಿ ಸಂಚಾರ ಮಾಡುವ ಕೆಎಸ್ಆರ್ಟಿಸಿ ಬಸ್ಗಳು ಅಲ್ಲಿ ಸ್ಟಾಪ್ ಕೊಡುವುದಿಲ್ಲ, ಹೀಗಾಗಿ ಮಂಡ್ಯ ನಿಲ್ದಾಣದಿಂದ ಜನರನ್ನು ಹತ್ತಿಸಿಕೊಳ್ಳುವುದಿಲ್ಲ. ಇನ್ನು ಕಾರ್ಯಕ್ರಮದ ಸ್ಥಳದಲ್ಲಿ ಬಸ್ಗಳು ನಿಲ್ಲಿಸುತ್ತವೆ. ಆದರೆ ಮಂಡ್ಯಕ್ಕೆ ಬರುವ ಬಸ್ಗಳು ಜನರಿಗೆ ಸಿಗ್ತಿಲ್ಲ. ನೇರವಾಗಿ ಮೈಸೂರು, ಮಡಿಕೇರಿಗೆ ಹೋಗುವ ಬಸ್ಗಳು ಜನರನ್ನು ಹತ್ತಿಸಿಕೊಳ್ತಿವೆ.
ಎರಡನೇ ಸಮಸ್ಯೆ ಎಂದರೆ ಊಟದ ಕೌಂಟರ್ಗಳನ್ನು ಸಾಕಷ್ಟು ಮಾಡಲಾಗಿದೆ. ಆದರೆ ಅನ್ನ ಇದ್ದರೆ ಸಾಂಬಾರ್ ಇರಲ್ಲ, ಸಾಂಬಾರ್ ಇರುವ ಕಡೆ ಅನ್ನ ಇರಲ್ಲ. ಜೋಳದ ರೊಟ್ಟಿ ಹಾಕ್ತಾರೆ, ಆದರೆ ಅದಕ್ಕೆ ಬೇಕಾದ ಪಲ್ಯ ಇರುವುದಿಲ್ಲ. ಅಲ್ಲಿರುವ ಬಾಣಸಿಗರು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೇಲ್ವಿಚಾರಕರ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ತಟ್ಟೆಗೆ ಮುದ್ದೆ ಹಾಕಿದ ಬಳಿಕ ಸಾಂಬಾರ್ ಇಲ್ಲದೆ ಜನರು ಹೋಗುತ್ತಿದ್ದನ್ನು ಕಣ್ಣಾರೆ ಕಂಡು ಅಯ್ಯೋ ಎನಿಸಿತು. ಇನ್ನು ಸ್ವೀಟ್ ಏನು ಮಾಡಿಸಿದ್ದರು..? ಯಾರಿಗೆ ಬಡಿಸಿದರು ಅನ್ನೋದು ಗೊತ್ತಾಗಲಿಲ್ಲ. ಒಂದು ಹೋಳಿಗೆ ಸಿಕ್ಕಿತ್ತು. ಆದರೆ ಬೇರೆ ಬೇರೆಯವರ ತಟ್ಟೆಯಲ್ಲಿ ಬಾದುರ್ಷ ಕೂಡ ಕಾಣಿಸಿದಾಗ ಯಾಕೆ ಸರಿಯಾಗಿ ಬಡಿಸ್ತಿಲ್ಲ ಎನಿಸಿತು. ಇನ್ನು ಕೆಲವರ ತಟ್ಟೆಯಲ್ಲಿ ಪಲಾವ್ ಕೂಡ ಕಂಡೆ..
ಜನರು ಮಾತನಾಡಿಕೊಳ್ತಿದ್ದು ಏನಪ್ಪ ಅಂದ್ರೆ ಮಂಡ್ಯ ನಿಲ್ದಾಣದಿಂದ 15 ನಿಮಿಷಕ್ಕೆ ಒಂದು ಬಸ್ ಬರುತ್ತೆ ಎಂದಿದ್ದರು, ಅದು ಪೇಪರ್ನಲ್ಲಿ ಬರಿಯೋದಕ್ಕೆ ಮಾತ್ರ ಎಂದು ಮಾತನಾಡಿಕೊಳ್ತಿದ್ರು. ಕಾರ್ಯಕ್ರಮ ಮುಗಿಸಿ ಸಂಜೆ ಬಸ್ಗಳು ಇಲ್ಲದೆ ಕಾಲ್ನಡಿಗೆಯಲ್ಲಿ ಸಾಗುವಾಗ ನಡೆಯಲಾಗದ ಜನರು ಹಿಡಿಶಾಪ ಹಾಕುತ್ತಿದ್ದರು. ಇನ್ನು ವೇದಿಕೆ ನಿರ್ಮಾಣ, ಮ್ಯೂಸಿಯಂ, ಪುಸ್ತಕ ಮಳಿಗೆ ತಣ್ಣಗಿತ್ತು. ಜರ್ಮನ್ ಟೆಂಟ್ಗಳಲ್ಲಿ ಪ್ಯಾನ್ಗಳನ್ನು ಹಾಕಿದ್ದರು. ಆದರೆ ಊಟದ ಹಾಲ್ನಲ್ಲಿ ಶೀಟ್ಗಳನ್ನು ಹಾಕಿದ್ದರು, ಜನರು ಬಿಸಿಲ ತಾಪದಲ್ಲಿ ನಿಲ್ಲಲಾಗದೆ ಒದ್ದಾಡುತ್ತಿದ್ದರು. ಸೂಕ್ತ ಮಾರ್ಗದರ್ಶನ ಇಲ್ಲದೆ ಮೊದಲ ನಾಲ್ಕೈದು ಕ್ಯೂಗಳಲ್ಲಿ ಜನರ ನೂಕಾಟ.. ತಳ್ಳಾಟ ಮಿತಿಮೀರಿತ್ತು. ಯಾಕಾದ್ರೂ ಸಾಹಿತ್ಯ ಸಮ್ಮೇಳನಕ್ಕೆ ಬಂದೆವು ಎನಿಸುವಂತಿತ್ತು. ನಾಳೆ ಶನಿವಾರ, ನಾಡಿದ್ದು ಭಾನುವಾರ ಜನರು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಕನಿಷ್ಠಪಕ್ಷ ಬರುವ ಸಾಹಿತ್ಯ ಪ್ರಿಯರಿಗೆ ಉತ್ತಮ ಊಟದ ವ್ಯವಸ್ಥೆ, ಮಂಡ್ಯ ಬಸ್ ನಿಲ್ದಾಣದಿಂದ, ರೈಲು ನಿಲ್ದಾಣದಿಂದ ಬಸ್ಗಳ ವ್ಯವಸ್ಥೆ ಮಾಡಿದರೆ ಉತ್ತಮ. ನೀವು ಉಚಿತ ಕೊಡುವ ಅವಶ್ಯಕತೆಯಿಲ್ಲ, ಟಿಕೆಟ್ ಪಡೆದಾದರೂ ಸಾರಿಗೆ ವ್ಯವಸ್ಥೆ ಮಾಡಿ, ಇಲ್ಲದಿದ್ರೆ ಆಟೋ, ಕಾರು, ಟೆಂಪೋಗಳಲ್ಲಿ 50 ರೂಪಾಯಿ ಕೊಟ್ಟರೂ ಜನರು ಅಪಾಯಕಾರಿಯಾಗಿ ಕುಳಿತು ಹೋಗುತ್ತಿದ್ದಾರೆ.