ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಮಾನ್ಯ CP ಯೋಗೀಶ್ವರ ಅವರ ಮೂರು ಹಂತದ ಶುದ್ಧೀಕರಿಸಬೇಕೆಂಬ ನಿಲುವನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಸ್ವಾಗತಿಸುತ್ತಾ ಈ ಕುರಿತು ತನ್ನ ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿದೆ.
ಸಚಿವರು ನಿನ್ನೆಯಷ್ಠೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು , ಸದಸ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ತೆಗೆದುಕೊಂಡಿರುವ ವೈಜ್ಞಾನಿಕ ನಿಲುವು ನಿರಾಸೆಯಲ್ಲಿದ್ದ ನಮ್ಮ ಜಿಲ್ಲೆಗಳ ಪಾಲಿಗೆ ಸಂಜೀವಿನಿಯಾಗಲಿದೆ. ಕೇಂದ್ರ ಸರ್ಕಾರದ ಮಾನದಂಡಗಳು ಮತ್ತು ನ್ಯಾಯಾಲಯದ ಶಿಫಾರಸ್ಸು ಆಧರಿಸಿ, ಸಚಿವರ ಮೂರುಹಂತದ ಸಂಸ್ಕರಣೆಯ ಪ್ರಸ್ತಾಪಕ್ಕೆ ನಮ್ಮ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರುಗ್ರಾಮಾಂತರ ಜಿಲ್ಲೆಗಳ ಚುನಾಯಿತ ಶಾಸಕರು ತಮ್ಮ ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು, ಪಕ್ಷಭೇದ ಮರೆತು ಕೈಜೋಡಿಸಬೇಕಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಬೇಕಾಗಿದೆ.
ಅಂತರ್ಜಲ ಪಾತಾಳಕ್ಕೆ ಕುಸಿದು, ವ್ಯವಸಾಯಕ್ಕಿರಲಿ, ಕನಿಷ್ಠ ಕುಡಿಯಲೂ ನೀರಿಲ್ಲದೆ ತತ್ತರಿಸಿ ಹೋಗಿದ್ದ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರು ನಗರದ ಕೇವಲ ಎರಡನೇ ಹಂತಕ್ಕೆ ಸಂಸ್ಕರಿಸಿದ ತ್ಯಾಜ್ಯ ನೀರಿನ ಗುಣಮಟ್ಟ ಮತ್ತು ಮುಂದಿನ ಪರಿಣಾಮಗಳ ಬಗ್ಗೆ ಆತಂಕದಲ್ಲಿದ್ದ ನಮ್ಮ ಜನಸಾಮಾನ್ಯರಿಗೆ, ಮಂತ್ರಿಗಳ ವೈಜ್ಞಾನಿಕವಾದ ನಿಲುವು ಜೀವದಾನ ಮಾಡಿದಂತಾಗಿದೆ.
ಕೆರೆಯಂಗಳದಲ್ಲೇ ಕುಡಿಯುವ ನೀರನ್ನು ಪೂರೈಸುವ ಕೊಳವೆಬಾವಿಗಳನ್ನು ಕೊರೆಸಿದ್ದು , ಅಂತರ್ಜಲ ವೃದ್ಧಿಯಾದರೆ ನಮ್ಮ ಜನ – ಜಾನುವಾರುಗಳಿಗೆ ಕುಡಿಯುವ ನೀರು, ಈ ಭಾಗದಲ್ಲಿ ಯಥೇಚ್ಛವಾಗಿ ಹಾಲು, ಹಣ್ಣು , ಸೊಪ್ಪು , ತರಕಾರಿ ಬೆಳೆಯುತ್ತಿರುವ ರೈತರ ಕೃಷಿಗೆ ನೀರೊದಗಿಸುವ ಕೊಳವೆಬಾವಿಗಳ ಅಂತರ್ಜಲ ಮರುಪೂರಣ ಮಾಡುವ ಘನ ಉದ್ದೇಶದ KC ಮತ್ತು HN ವ್ಯಾಲಿ ಯೋಜನೆಗಳಿಂದ ನಮ್ಮ ಜೀವನಾಡಿಗಳಾದ ಕೆರೆಗಳಿಗೆ ಮೂರನೇ ಹಂತದಲ್ಲಿ ಸಂಸ್ಕರಿಸಿದ ಸುರಕ್ಷಿತ ಶುದ್ಧ ನೀರನ್ನು ಹರಿಸಬೇಕಾಗಿದೆ.
ಸರ್ಕಾರವು ಮೊಂಡುತನದಿಂದ ನಮ್ಮ ಕೆರೆಗಳಿಗೆ ಅರೆಸಂಸ್ಕರಿಸಿದ ವಿಷಯುಕ್ತ ನೀರನ್ನು ಹರಿಸಿದರೆ, ನಮಗೆ ಅನಾಹುತ ತಪ್ಪಿದ್ದಲ್ಲ , ಇದರೊಂದಿಗೆ ಬೆಂಗಳೂರು ಜನತೆಗೂ ವಿಷಪ್ರಾಶನ ಮಾಡಿದಂತಾಗುತ್ತದೆ, ದಿನನಿತ್ಯ ನಾವು ಬೆಂಗಳೂರು ಮಹಾನಗರಕ್ಕೆ ಪೂರೈಸುವ ಹಾಲು, ಹಣ್ಣು , ಸೊಪ್ಪು, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳೂ ವಿಷವಾಗುವ ಸಾಧ್ಯತೆಯ ಬಗ್ಗೆ ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಜವಾಬ್ದಾರಿ ಸಚಿವರಾಗಿ, ಪರಿಸರ ಕಾನೂನುಗಳನ್ನು ಎತ್ತಿ ಹಿಡಿಯುವ ಮತ್ತು ಜಾರಿಗೊಳಿಸುವ ನಿಟ್ಟಿನಲ್ಲಿ , ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದ ಒಬ್ಬ ಸೈನಿಕನಂತೆ, ಉದ್ದೇಶಿತ ಆಶಯ ಶೀಘ್ರವಾಗಿ ಈಡೇರಿಸುವಲ್ಲಿ , ತುರ್ತು ಕ್ರಮ ವಹಿಸುವಂತೆ ಮಾನ್ಯ ಕಳಕಳಿಯಿಂದ ವಿನಂತಿಸುತ್ತೇವೆ.
ನಮ್ಮ ಮುಂದಿನ ಪೀಳಿಗೆಗಳ ರಕ್ಷಣೆಯಾಗಲಿ ಎಂಬ ಸದಾಶಯದೊಂದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ನಿಮ್ಮೊಂದಿಗಿರುತ್ತದೆ ಎಂಬ ಭರವಸೆ ಕೊಡುತ್ತಿದ್ದೇವೆ.