ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ.
ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ ಪರಿಣಿತ ತಂಡ) ಜೂನ್ 5 ರಂದು ನಡೆಸಿದ ವೆಬಿನಾರ್ ಚರ್ಚೆಯ ಆಧಾರದ ಮೇಲೆ ಈ ಶಿಫಾರಸ್ಸುಗಳನ್ನು ತಯಾರಿಸಲಾಗಿದ್ದು, ಈ ಸಭೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಪ್ರಮುಖ ವೈದ್ಯಶಾಸ್ತ್ರ ಪರಿಣಿತರು, ವಿಜ್ಞಾನಿಗಳು, ಅರ್ಥಶಾಸ್ತ್ರ ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಕಾರ್ಮಿಕ ಮುಂತಾದ ಕ್ಷೇತ್ರಗಳು ವಿವಿಧ ತಜ್ಞರು, ಮತ್ತಿತರ ಗಣ್ಯರು ಭಾಗವಹಿಸಿದ್ದರು ಎಂದು ಸೇಜ್ ಸಂಚಾಲಕ ಡಾ. ಟಿ ಎನ್ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಸರ್ಕಾರದ ಮುಂದೆ ಪರಿಗಣನೆಗಾಗಿ ಪ್ರಮುಖ 10 ಶಿಫಾರಸುಗಳು:
- ವಸ್ತು ಸ್ಥಿತಿ ವರದಿ ಮಂಡನೆ: ರಾಜ್ಯದ ಜನರ ಸಂಪೂರ್ಣ ವಿಶ್ವಾಸಗಳಿಸಲು ಈ ಹಿಂದಿನ ಮತ್ತು ಸದ್ಯದ ಲಾಕ್‌ಡೌನ್ ಗಳು ಕರೋನಾ ಮಹಾಮಾರಿ ಹರಡುವಿಕೆ ನಿಯಂತ್ರಿಸಲು ಎಷ್ಟು ಯಶಸ್ವಿಯಾಗಿದೆ, ಮತ್ತು ಇಡೀ ವ್ಯವಸ್ಥೆಯ ಮೇಲೆ ಇದರ ದುಷ್ಪರಿಣಾಮಗಳೇನು, ಅದನ್ನು ಹೇಗೆ ನಿರ್ವಹಿಸಲಾಗಿದೆ. ಇತ್ಯಾದಿಗಳ ಬಗ್ಗೆ ಸಮಗ್ರವಾಗಿ ವಿಶ್ಲೇಷಿಸಿ, ಒಂದು ವಿವರವಾದ ‘ವಸ್ತು ಸ್ಥಿತಿ ವರದಿ’ (Perspective Report) ಮೂಲಕ ಬಹಿರಂಗ ಗೊಳಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು.
- ಬಹುಮುಖಿ ಸಲಹಾ ವ್ಯವಸ್ಥೆ ಏರ್ಪಡಿಸುವುದು: ಕರೋನಾ ಮಹಾಮಾರಿ ವಿರುದ್ಧ ಯಶಸ್ವಿ ಹೋರಾಟ ನಡೆಸಲು ವೈದ್ಯಕೀಯ ಕ್ಷೇತ್ರದ ವಿವಿಧ ವಿಭಾಗಗಳ ತಜ್ಞರ ಜೊತೆಗೆ ಅರ್ಥವ್ಯವಸ್ಥೆ, ಕೃಷಿ, ಕಾರ್ಮಿಕರು, ಶಿಕ್ಷಣ ಇತ್ಯಾದಿ ವಿಚಾರಗಳ ತಜ್ಞರನ್ನೂ ಒಳಗೊಂಡ ಒಂದು “ಬಹುಮುಖಿ” ಸಲಹಾ ವ್ಯವಸ್ಥೆಯನ್ನು ರೂಪಿಸಬೇಕು. ಸಮರ್ಥ ತಜ್ಞರೊಬ್ಬರನ್ನು ಮುಖ್ಯಸ್ಥರನ್ನಾಗಿ ಮಾಡಿ, ಅವರಿಗೆ ಸಚಿವರ ಸಮಾನ ಸ್ಥಾನಮಾನ ನೀಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು.
- ಸಮಗ್ರ ಯೋಜನೆ, ಸಹಮತ ಮತ್ತು ಸಹಯೋಗ ಪಡೆಯುವುದು. ಲಾಕ್‌ಡೌನ್, ವಿಚಾರವೂ ಸೇರಿದಂತೆ ರಾಜ್ಯದಲ್ಲಿ ಕರೋನಾ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸಲು ಸರ್ಕಾರ ತನ್ನ “ಸಮಗ್ರ ಕಾರ್ಯ ಯೋಜನೆ”ಯನ್ನು ಸಿದ್ಧಪಡಿಸಿ ವಿರೋಧ ಪಕ್ಷವು ಸೇರಿದಂತೆ ವಿವಿಧ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರೊಡನೆ ಚರ್ಚಿಸಿ, ಸಹಮತ ಪಡೆದು ಮುಂದುವರಿಯಬೇಕು. ಈ ಕಾರ್ಯಯೋಜನೆಯು ವಿಕೇಂದ್ರಿಕೃತವಾಗಿದ್ದು, ಗ್ರಾಮ ಪಂಚಾಯಿತಿಯಿಂದ ಹಿಡಿದು ವಿವಿಧ ಹಂತದ ಆಡಳಿತ ವ್ಯವಸ್ಥೆಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಹಾಗಿರಬೇಕು. ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಮಾರ್ಪಾಡು, ಸೂಕ್ತ ಪುನರ್ ಪರಿಶೀಲನೆ ಕೈಗೊಳ್ಳಬೇಕು, ಸಂಪನ್ಮೂಲ ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿರುವ “ಕಾರ್ಪೊರೇಟ್ / ಖಾಸಗಿ ವಲಯ”ವನ್ನು ಈ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ದಾರಿಯನ್ನು ವಿಶೇಷವಾಗಿ ಪರಿಗಣಿಸಬೇಕು. ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿ, ಅಂಕಿ-ಅಂಶಗಳನ್ನು ಕಲೆಹಾಕಿ, ಸಂಸ್ಕರಿಸಿ ನೃಷ್ಟ ದಿಕ್ಕೂಚಿ ಪಡೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣಿತರು, ಸಂಸ್ಥೆಗಳು ಮತ್ತು ಕಂಪನಿಗಳ ಸಹಾಯ ಪಡೆಯಬೇಕು,
4 “ಕೋವಿಡ್ ಕದನ ಕೊಠಡಿ (Cavid War Room) ಸ್ಥಾಪಿಸುವುದು:
ವಿವಿಧ ಹಂತದಲ್ಲಿ ಕೋವಿಡ್ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಕೈಜೋಡಿಸಿದವರಿಗೆ ಜೊತೆಗೆ ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲಾ ಅಂಕಿ ಅಂಶ, ಮಾಹಿತಿ, ತಿಳುವಳಿಕೆ, ಮುಂಜಾಗ್ರತೆ ಕ್ರಮಗಳು ರಾಜ್ಯದ ಮೂಲೆ ಮೂಲೆಯಲ್ಲಿ ಸದಾ ದೊರಕುವ ವ್ಯವಸ್ಥೆ ಏರ್ಪಾಡಾಗಬೇಕು, ದಿನಪತ್ರಿಕೆ, ರೇಡಿಯೋ, ದೂರದರ್ಶನಗಳ ಸಮರ್ಥ ಉಪಯೋಗದ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳಿಹಳ್ಳಿಗಳಲ್ಲೂ ತಕ್ಷಣ ಕೈಗೆಟುಕುವ ‘ಡಿಜಿಟಲ್ ಮಾಹಿತಿ ಫಲಕ (Dashboard) ಗಳನ್ನೂ ತಕ್ಷಣ ರೂಪಿಸಬೇಕು. ಈ ನಿಟ್ಟಿನಲ್ಲಿ ಚೆನ್ನೈ ನಗರದ ಮಾದರಿಯನ್ನು ಅನುಸರಿಸಿ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಹಾಗೂ ರಾಜ್ಯದ ಎಲ್ಲಾ ಹೋಬಳಿಗಳಲ್ಲಿ “ಕೋವಿಡ್ ಕದನ ಕೊಠಡಿ (Covid War Room) ಗಳನ್ನು ತಡಮಾಡದೆ ಪ್ರಾರಂಭಿಸಬೇಕು. ಇವುಗಳ ಯಶಸ್ವಿ ನಿರ್ವಹಣೆಗೆ ಸ್ಥಳೀಯ ವಿದ್ಯಾವಂತ ಯುವಕರು, ಸ್ವಯಂ ಸೇವಾ ಸಂಸ್ಥೆ ಮತ್ತು ಇತರ ಸಂಘಟನೆಗಳ ನೆರವನ್ನು ಧಾರಾಳವಾಗಿ ಪಡೆಯಬೇಕು.
- ಕರೋನಾ ಕಲಿಗಳಿಗೆ ಬೆಂಬಲ: ಈ ಸಮಯದಲ್ಲಿ ಕರೋನ ಮಹಾಮಾರಿ ವಿರುದ್ಧ ಜೀವದ ಹಂಗುತೊರೆದು ಹೋರಾಟ ನಡೆಸುತ್ತಿರುವ ನಮ್ಮ ವೈದ್ಯರು, ನರ್ಸ್, ಮತ್ತಿತರ ವೈದ್ಯಕೀಯ ಸಿಬ್ಬಂದಿಗಳಿಗೆ ಕೃತಜ್ಞತಾಪೂರ್ವಕವಾಗಿ ಸಂಪೂರ್ಣ ‘ನೈತಿಕ ಬೆಂಬಲ’ ನೀಡುವುದು ಮಾತ್ರವಲ್ಲ ಅವರಿಗೆ ಅಗತ್ಯವಿರುವ ಎಲ್ಲಾ ಸಹಾಯ, ಸೌಲಭ್ಯಗಳನ್ನು ತಕ್ಷಣ ನೀಡಬೇಕು, ಈ ಮಹಾಮಾರಿ ನಿಯಂತ್ರಿಸುವ ಅಗತ್ಯವಿರುವ ತರಬೇತಿ, ಸವಲತ್ತುಗಳ ಜೊತೆಗೆ ಈ ಕರೋನಾ ಕಲಿ (Corona Warriors)ಗಳಿಗೆ ವೇತನ ಮತ್ತಿತರ ಅತ್ಯಗತ್ಯ ಸೌಕರ್ಯಗಳ ವಿಚಾರದಲ್ಲಿ ಕೊರತೆ, ಲೋಪ ಬರದ ರೀತಿಯಲ್ಲಿ ಕ್ರಮವಹಿಸುವ ಜವಾಬ್ದಾರಿ ಇಂದು ಸರ್ಕಾರದ ಮೇಲಿದೆ.
- ಸಂಪೂರ್ಣ ರಿಯಾಯಿತಿಯಲ್ಲಿ ಸಾರ್ವತ್ರಿಕವಾಗಿ ಲಸಿಕೆ ನೀಡುವುದು: ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೋವಿಡ್ ವಿರುದ್ಧ ಲಸಿಕೆಯನ್ನು ಪೂರೈಸುವ ಭರವಸೆ ನೀಡಿರುತ್ತದೆ. ಕರ್ನಾಟಕ ಸರ್ಕಾರ ಕೇಂದ್ರದೊಡನೆ ಸಮರ್ಥವಾಗಿ ವ್ಯವಹರಿಸಿ, ಲಸಿಕೆಯನ್ನು ಸಂಪೂರ್ಣ ರಿಯಾಯಿತಿ ದರದಲ್ಲಿ ಪಡೆದು, ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ರಾಜ್ಯದ ಎಲ್ಲಾ ಜನರಿಗೂ ಪೂರೈಸುವ ಸ್ಪಷ್ಟ ಕಾರ್ಯಯೋಜನೆ ರೂಪಿಸಿ ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕು. ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಕೋವಿಡ್ ತಗಲುವ ಅಪಾಯ ಅಧಿಕವಾಗಿರುವ ವ್ಯಕ್ತಿಗಳಿಗೆ ಮತ್ತು ಪ್ರದೇಶಕ್ಕೆ ಪ್ರಥಮ ಆದ್ಯತೆ ನೀಡಬೇಕು.
- ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಬಲೀಕರಣ: ಕರ್ನಾಟಕದಲ್ಲಿ 2380 ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHS) ಹಾಗೂ 42,000 ‘ಆಶಾ’ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿರುವುದಾಗಿ ತಿಳಿದುಬಂದಿದೆ. ಈ ಆರೋಗ್ಯ ಕೇಂದ್ರಗಳನ್ನು ಮತ್ತಷ್ಟು ಸದೃಢಗೊಳಿಸಿ ‘ಆಶಾ’ ಕಾರ್ಯಕರ್ತರಿಗೆ ಅಗತ್ಯ ತರಬೇತಿ, ತಿಳುವಳಿಕೆ ನೀಡಿದರ ಕೋವಿಡ್ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಬಹುದು. ಕರ್ನಾಟಕದಲ್ಲಿ ಕೋವಿಡ್ ಸೋಂಕಿತ ಯಾವ ರೋಗಿಯೂ ಚಿಕಿತ್ಸೆ, ಹಾಸಿಗೆ, ಆಮ್ಲಜನಕ, ‘ತೀವ್ರ ನಿಗಾ ಘಟಕ’ (ICU) ಇತ್ಯಾದಿಗಳ ನೆರವಿಲ್ಲದೆ ಪರಿತಪಿಸಿ ಮರಣಹೊಂದುವ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಸದ್ಯಕ್ಕೆ ಸರ್ಕಾರದ ಗಮನ ಈ ನಿಟ್ಟಿನಲ್ಲಿ ಇರಬೇಕೆ ಹೊರತು ಹೊಸದಾಗಿ ದುಬಾರಿ ವೆಚ್ಚದ ಉಪಕರಣಗಳ ಖರೀದಿ, ಹೊಸ ನೇಮಕಾತಿಗಳ ಕಡೆಗಲ್ಲ.
- 9- ಅಪೌಷ್ಟಿಕತೆಯನ್ನು ಮೊದಲು ನಿವಾರಿಸುವುದು: ಕರೋನಾದಂತಹ ಸೋಂಕುರೋಗ ಎದುರಿಸಲು ಜನರಲ್ಲಿ ‘ಪ್ರತಿರೋಧ ಶಕ್ತಿ’ (Immunity) ಅಧಿಕಗೊಳಿಸುವುದು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರದ ಮಹತ್ವ ಒತ್ತಿ ಹೇಳಬೇಕಾಗಿಲ್ಲ. ‘ನೀತಿ’ (NITE) ಆಯೋಗದ ಇತ್ತೀಚಿಗಿನ ವರದಿಯ ಮೂಲಕ ಕರ್ನಾಟಕದಲ್ಲಿ ಶೇಕಡಾ 33ರಷ್ಟು ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಹಾಗು ಶೇ 46ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇರುವ ಆಘಾತಕಾರಿ ವಿಚಾರ ತಿಳಿದುಬಂದಿದೆ. ಆದರೆ ಇನ್ನೊಂದೆಡೆ ನಮ್ಮ ರೈತರು ಬೆಳೆದಿರುವ ಆಹಾರ, ತರಕಾರಿ, ಹಣ್ಣು, ಹಾಲು ಕೊಳ್ಳುವವರೇ ಇಲ್ಲದ ರಸ್ತೆಗೆ ಚೆಲ್ಲುವಂತಾಗಿದೆ. ಈ ಕ್ರೂರ ವೈರುಧ್ಯ ಖಂಡಿತಾ ಸಮ್ಮತವಲ್ಲ. ಸರ್ಕಾರ ರೈತರು ಬೆಳೆದಿರುವ ಈ ಎಲ್ಲಾ ಪೌಷ್ಟಿಕ ಆಹಾರ ಸ್ವಲ್ಪವೂ ಹಾಳಾಗದಂತೆ ಖರೀದಿಸಿ ಕಡುಬಡವರಿಗೆ ಹಂಚಿ, ರಾಜ್ಯದಲ್ಲಿ ಅಪೌಷ್ಟಿಕತೆಯನ್ನು ಹೊಡೆದೋಡಿಸಬೇಕು. ಈ ಮೂಲಕ ರೈತಾಪಿ ವರ್ಗದ ಹಿತವನ್ನೂ ರಕ್ಷಿಸಿದಂತಾಗುತ್ತದೆ.
- ಪರ್ಯಾಯ ಔಷಧಿ ಪದ್ಧತಿಗಳ ಕಡೆಗೂ ಗಮನಹರಿಸುವುದು: ರಾಜ್ಯ ಕರೋನಾ ಮಹಾಮಾರಿ ರೋಗ ಎದುರಿಸಲು ಅಲೋಪತಿ ವೈದ್ಯ ಶಾಸ್ತ್ರದ ಮೇಲೆ ಸಂಪೂರ್ಣ ಅವಲಂಬಿತವಾಗಿದೆ, ಆದರೆ, ನೆರೆಯ ಕೇರಳ, ತಮಿಳುನಾಡು ರಾಜ್ಯಗಳು ಆಯುರ್ವೇದ, ಸಿದ್ದಿ, ಹೋಮಿಯೋಪಥಿಯಂತಹ ದೇಶೀಯ ಪದ್ಧತಿಗಳನ್ನು ಕೂಡ ಸೂಕ್ತ ರೀತಿಯಲ್ಲಿ ಬಳಸುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕವೂ ಅವಶ್ಯಕವಾಗಿ ಚಿಂತಿಸಬೇಕು. ಜನರಲ್ಲಿ ಮನೋಧೈರ್ಯ ಹೆಚ್ಚಿಸಲು ಸೂಕ್ತ ನೆರವು, ಸಮಾಲೋಚನೆ (Counselling) ಯೋಗಾಭ್ಯಾಸ, ಇತ್ಯಾದಿಗಳ ಅವಶ್ಯಕತೆ ಕೂಡ ಖಂಡಿತ ಇದೆ.
10: ದೊಡ್ಡ ಪ್ರಮಾಣದ ಪ್ರಚಾರ ಮತ್ತು ಜಾಗೃತಿ ಮೂಡಿಸುವುದು:
ಅತಿ ಭಯಂಕರ ಸಾಂಕ್ರಾಮಿಕ ರೋಗ ಕರೋನಾ ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸಲು ವ್ಯಕ್ತಿಗಳು ಒಟ್ಟು ಸೇರದೇ ಭೌತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆ ನೈರ್ಮಲ್ಯ ಕಾಪಾಡುವುದು ಮತ್ತಿತರ ಸರಳ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಅತ್ಯವಶ್ಯಕ. ಇದನ್ನು ಬರಿದೆ ಕಾನೂನು ಕಟ್ಟಳೆಗಳ ಮೂಲಕ ಪೊಲೀಸರಿಂದ ಮಾತ್ರ ನಿರ್ವಹಿಸಲು ಸಾಧ್ಯವಿಲ್ಲ, ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸಿ, ಮನಃಪೂರ್ವಕವಾಗಿ ಅಳವಡಿಸಿಕೊಳ್ಳಲು ಆಟಗಾರರು, ಚಲನಚಿತ್ರ ನಟರು, ಪ್ರಸಿದ್ಧ ಕಲಾವಿದರು ಮುಂತಾದ ‘ಜನಪ್ರಿಯ ವ್ಯಕ್ತಿಗಳ ಮೂಲಕ ವ್ಯವಸ್ಥಿತ ಪ್ರಚಾರ ಅಗತ್ಯ, ಹಾಗೇ, ಜಾಗೃತಿ ಪ್ರಚಾರದ ಜೊತೆಗೆ ಲಸಿಕೆ ಅಭಿಯಾನವನ್ನು ಸಮರೋಪಾದಿಯಲ್ಲಿ ರಾಜ್ಯದಾದ್ಯಂತ ಕೈಗೊಳ್ಳಲು ಮಠ, ಚರ್ಚು, ಮಸೀದಿ, ಗಳಂತಹ ಧಾರ್ಮಿಕ ಸಂಸ್ಥೆಗಳು, ಜನವರ ಸಂಘಟನೆಗಳು, ಸ್ವಯಂಸೇವಾ ಸಂಘಗಳು ಇತ್ಯಾದಿಗಳ ಸಹಾಯ ಪಡೆಯುವುದೂ ಅಗತ್ಯವಾಗಿದ್ದು ಇವೆಲ್ಲವುಗಳ ಪ್ರತಿನಿಧಿಗಳ ಜೊತೆ ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಮಾತುಕತೆ ನಡೆಸಬೇಕು.