ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ ‘100 ನಾಟ್ ಔಟ್’ ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ ಕೇಂದ್ರದಲ್ಲಿ ಆಂದೋಲನ ನಡೆಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತುಮಕೂರು ಜಿಲ್ಲೆ ತಿಪಟೂರಿನ ಕಿಬ್ಬನಹಳ್ಳಿ ಕ್ರಾಸ್ ಬಳಿ  ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶದ ಜನಸಾಮಾನ್ಯರ ಆದಾಯಕ್ಕೆ ಕುತ್ತು ತಂದಿರುವ ಬಿಜೆಪಿ ಸರ್ಕಾರ, ಇಂಧನ ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಅವರ ಜೀವನಕ್ಕೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂದೆ ಯುಪಿಎ ಸರ್ಕಾರದ ಸಮಯದಲ್ಲಿ ಪೆಟ್ರೋಲ್ ಬೆಲೆ ಏರಿದಾಗ ಯಡಿಯೂರಪ್ಪನವರು, ಶೋಭಾ ಕರಂದ್ಲಾಜೆ ಅವರು ಹಾಗೂ ಇತರ ನಾಯಕರು ಆಡಿದ್ದ ಮಾತು ಏನಾಯ್ತು? ಈಗ ಅವರ ರೋಷ ಎಲ್ಲಿ ಹೋಯ್ತು? ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.

ದಿನೇ, ದಿನೆ ತೈಲ ಬೆಲೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ನಂತರ ಈಗ ದೇಶದ ವಿವಿಧ ಭಾಗಗಳಲ್ಲಿ ಡೀಸೆಲ್ ಬೆಲೆ ಕೂಡ ₹100 ಗಡಿ ಮುಟ್ಟಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ₹65 ರಷ್ಟು ತೆರಿಗೆ ಸಂಗ್ರಹಿಸುತ್ತಿವೆ. ತೈಲ ಬೆಲೆ ಇಳಿಸಬೇಕು ಎಂಬುದು ನಮ್ಮ ಒತ್ತಾಯ.  ಇನ್ನು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನಸಾಮಾನ್ಯರ ವೇತನ ಹೆಚ್ಚಾಗಿದೆಯಾ? ನರೇಗಾ ಕಾರ್ಮಿಕರ ದಿನಗೂಲಿ ಹೆಚ್ಚಾಗಿದೆಯಾ? ಇಲ್ಲ. ಆದರೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಇತರೆ ಪದಾರ್ಥಗಳ ಬೆಲೆಯನ್ನೂ ಹೆಚ್ಚಿಸಿದೆ ಎಂದು ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬಿಣ, ಸೀಮೆಂಟ್ ಬೆಲೆ ಎಷ್ಟಾಗಿದೆ? ಜನಸಾಮಾನ್ಯರು ಮನೆ ಕಟ್ಟುವ ಆಸೆ ದೂರವಾಗಿದೆ. ದಿನಬಳಕೆ ವಸ್ತು ಬೆಲೆ ಏನಾಗಿದೆ? ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಿ ಎಂದರು. ಈಗ ಅಡುಗೆ ಎಣ್ಣೆ ಬೆಲೆಯೂ ಹೆಚ್ಚಾಗಿದೆ. ರಸಗೊಬ್ಬರದ ಬೆಲೆಯೂ ಹೆಚ್ಚಾಗಿದೆ. ವಿದ್ಯುತ್ ದರವನ್ನೂ ಹೆಚ್ಚಿಸಿದ್ದಾರೆ. ಆ ಮೂಲಕ ಬಿಜೆಪಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ.

ಇನ್ನು ಕಾರ್ಪೊರೇಷನ್ ತೆರಿಗೆಯಿಂದ ಆಸ್ತಿ ತೆರಿಗೆವರೆಗೂ ಎಲ್ಲವನ್ನು ಹೆಚ್ಚಿಸಿದೆ. ವ್ಯಾಪಾರಿಗಳ ವ್ಯವಹಾರ ನಿಲ್ಲಿಸಿ, ಈಗ ಅವರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬರಲು, ಯುವಕರಿಂದ ಮತ ಪಡೆಯಲು, ಕಾಂಗ್ರೆಸ್ ನಾಯಕರ ಟೀಕೆ ಮಾಡಲು ಟ್ವಿಟರ್, ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣ ಬೇಕಾಗಿತ್ತು. ಆದರೆ ಈಗ ಜನ ಸರ್ಕಾರವನ್ನು ಪ್ರಶ್ನಿಸಿ ಟೀಕಿಸುತ್ತಿರುವಾಗ ಅದಕ್ಕೆ ಬ್ರೇಕ್ ಹಾಕಲು ಕಾನೂನು ತರುತ್ತಿದ್ದಾರೆ.

ಸರ್ಕಾರ ಕರೋನಾದಿಂದ ಸತ್ತವರ ಲೆಕ್ಕ ಕೊಡಬೇಕಲ್ಲವೇ? ಲಸಿಕೆಗೆ ಕ್ಯೂ ನಿಲ್ಲಿಸಿ, ಕೊಡದೆ ವಾಪಸು ಕಳುಹಿಸಿದರು. ಆದರೆ ಈಗ ಕಾಂಗ್ರೆಸ್ ಒತ್ತಾಯದ ಮೇರೆಗೆ ಅದನ್ನು ಉಚಿತ ಎಂದು ಘೋಷಿಸಿದ್ದಾರೆ. ಲಸಿಕೆ ಸರಿಯಾಗಿ ಸಿಗದೆ ಎಷ್ಟು ಜನ ಸತ್ತಿದ್ದಾರೆ ಎಂಬುದರ ಲೆಕ್ಕವನ್ನೂ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇಂತಹ ದರಿದ್ರ ಹಾಗೂ ಭ್ರಷ್ಟ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ಇಂದು ಒಂದು ವರ್ಗ ಅಲ್ಲ, ರೈತ, ಕಾರ್ಮಿಕ, ವರ್ತಕ, ಸಣ್ಣ ವ್ಯಾಪಾರಿಗಳು ಸೇರಿದಂತೆ ಯಾರಾದರೂ ಸಂತೋಷವಾಗಿದ್ದಾರಾ?  ಈ ಆಂದೋಲನ ಜನರ ಧ್ವನಿಯಾಗುವ ಕಾರ್ಯಕ್ರಮ. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಜನಸಾಮಾನ್ಯರ ಕಾರ್ಯಕ್ರಮ. 130 ಕೋಟಿ ಭಾರತೀಯರ ಹಿತಕ್ಕಾಗಿ ಈ ಕಾರ್ಯಕ್ರಮ. ಹೀಗಾಗಿ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ  ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

Please follow and like us:

Related articles

Share article

Stay connected

Latest articles

Please follow and like us: