~ಡಾ. ಜೆ ಎಸ್ ಪಾಟೀಲ.
ವಿದ್ಯಾ ಭಾರತಿ ಸಂಸ್ಥೆಯು ಆಯೋಜಿಸುವ ಸಂಸ್ಕೃತಿ ಜ್ಞಾನ ಪರೀಕ್ಷೆಗಳ ಮೂಲಕ ೩ˌ೫೦,೦೦೦ ರಾಮಭಕ್ತರು ರಾಮಮಂದಿರವನ್ನು ವಿಮೋಚನೆಗೊಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ನೆನಪಿಸಿಕೊಳ್ಳುವಂತೆ ಮಾಡಲಾಗಿದೆಯಂತೆ. ೧೯೯೩ ರಿಂದ ೨೦೦೫ ರವರೆಗೆ ರಾಜಸ್ಥಾನದ ನಾಗೌರ್‌ನಲ್ಲಿ ಆರ್‌ಎಸ್‌ಎಸ್ ನಡೆಸುತ್ತಿದ್ದ ಶಾರದಾ ಬಾಲ ನಿಕೇತನ ಶಾಲೆಯಲ್ಲಿ ಅಧ್ಯಯನ ಮಾಡಿದ ೩೪ ವರ್ಷದ ಪತ್ರಕರ್ತ ವಿನಯ್ ಸುಲ್ತಾನ್ ‘ದಿ ವೈರ್’ಗೆ ‘ರಾಜಸ್ಥಾನದ ವಿದ್ಯಾಭಾರತಿ ಶಾಲೆಗಳು ಹಿಂದೆ ಸಂಸ್ಕಾರ ಸೌರಬ್ ಎಂಬ ಹೆಸರಿನ ಸರಣಿಯನ್ನು ಹೊಂದಿದ್ದವು. ಅಲ್ಲಿ ನಾವು ರಾಮಜನ್ಮಭೂಮಿ ಚಳುವಳಿ ಮತ್ತು ಕೊಠಾರಿ ಸಹೋದರರ ಬಗ್ಗೆ ಮಾತನಾಡುತ್ತಿದ್ದೆವು. ಕೊಠಾರಿ ಸಹೋದರರು ಕಲ್ಕತ್ತೆಯಿಂದ ೧೯೯೦ ರಲ್ಲಿ ಕರಸೇವೆಗಾಗಿ ಅಯ್ಯೋದ್ಯೆಗೆ ಬಂದಾಗ ಪೋಲೀಸರ ಗುಂಡಿಗೆ ಬಲಿಯಾಗಿದ್ದರು. ಶಾಲೆಯಲ್ಲಿ ರಾಮಜನ್ಮಭೂಮಿ ಚಳವಳಿಯಲ್ಲಿ ಮಡಿದ ರಾಜಸ್ಥಾನದ ಎಲ್ಲಾ ‘ಹುತಾತ್ಮರ’ ಬಗ್ಗೆ ನಮಗೆ ಕಲಿಸುತ್ತಿದ್ದರು. ನಂತರ, ಗೋಧ್ರಾ ಹತ್ಯಾಕಾಂಡದ ಒಂದು ಅಧ್ಯಾಯವನ್ನು ಪುಸ್ತಕಕ್ಕೆ ಸೇರಿಸಲಾಯಿತು. ಸಂಸ್ಕಾರ ಸೌರವ್‌ಗೆ ಪ್ರತ್ಯೇಕ ಪರಿಕ್ಷೆ ಮಾಡಿˌ ಪಡೆದ ಅಂಕಗಳನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸಲಾಗುತ್ತಿತ್ತು’ ಎಂದು ವಿನಯ್ ಹೇಳಿದ್ದಾರೆ.
ಬೋಧಮಲಾ ೮ ರಲ್ಲಿ ಕೊಠಾರಿ ಸಹೋದರರ ಕುರಿತು ಪ್ರಶ್ನೋತ್ತರವೂ ಇದೆಯಂತೆ. ೯ ನೇ ತರಗತಿಗೆ ಮಣಿಪುರದಲ್ಲಿ ವೈಷ್ಣವ ಧರ್ಮವನ್ನು ಪ್ರಚಾರ ಮಾಡಿದ ಭಾಗ್ಯಚಂದ್ರ ಮತ್ತು ಅವರ ಅಜ್ಜ ಪಮ್ಹಿಬಾ ಅಲ್ಲಿ ಹಿಂದೂ ಧರ್ಮವನ್ನು ರಾಜ್ಯ ಧರ್ಮವನ್ನಾಗಿ ಮಾಡಿದ ಬಗ್ಗೆ ಬರೆಯಲಾಗಿದೆ. ಇಲ್ಲಿ ಕೇರಳದ ನಾರಾಯಣ ಗುರುವಿನ ಹೆಸರು ಕೂಡ ಉಲ್ಲೇಖಿಸಲಾಗಿದೆ. ನಾರಾಯಣ ಗುರುಗಳು ನಿರ್ಮಿಸಿದ ದೇವಾಲಯಗಳು ಹಿಂದೂ ಸಮಾಜದ ಸಂಘಟನೆಯ ಕೇಂದ್ರಗಳಾಗಿವೆ. ಕೇರಳದಲ್ಲಿ ಹಿಂದೂ ಸಮಾಜದಲ್ಲಿ ಮತಾಂತರವನ್ನು ನಿಲ್ಲಿಸುವ ಸ್ಮರಣೀಯ ಕೆಲಸವನ್ನು ನಾರಾಯಣಗುರು ಮಾಡದಿದ್ದರೆ, ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದರು. ಎಂದು ಉಲ್ಲೇಖಿಸಲಾಗಿದೆಯಂತೆ. ವಾಸ್ತವದಲ್ಲಿ ನಾರಾಯಣ ಗುರುಗಳು ಕೇರಳದಲ್ಲಿ ಕರ್ಮಟ ಬ್ರಾಹ್ಮಣರು ಶೂದ್ರ ಈಳವರಿಗೆ ಮಂದಿರಗಳಿಗೆ ಪ್ರವೇಶ ನಿರಾಕರಿಸಿದಾಗ ನಾರಾಯಣ ಗುರುಗಳು ಶೂದ್ರರಿಗಾಗಿಯೆ ಪ್ರತ್ಯೇಕ ಮಂದಿರಗಳನ್ನು ಸ್ಥಾಪಿಸಿದ್ದರು. ಆದರೆ ಈ ಭೋದನಮಾಲಾ ಪುಸ್ತಕಗಳು ವಾಸ್ತವವನ್ನು ಮರೆಮಾಚಿ ನಾರಾಯಣ ಗುರುಗಳನ್ನು ಹಿಂದೂ ಧರ್ಮದ ಸುಧಾರಣವಾದಿಯಂತೆ ಚಿತ್ರಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಹಿಂದೂ ಧರ್ಮಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರರ ಬಗ್ಗೆ ೬ ನೇ ತರಗತಿಯ ಬೋಧಮಾಲಾದಲ್ಲಿ ಸೇರಿಸಲಾಗಿದೆ. ಹಣ ಮತ್ತು ರಾಜ್ಯದ ಆಮೀಷಕ್ಕೆ ಬಲಿಯಾಗಿ ಇಸ್ಲಾಮಿಗೆ ಮತಾಂತರವಾಗುವುದನ್ನು ನಿರಾಕರಿಸಿದ್ದಕ್ಕಾಗಿ ತನ್ನ ಪ್ರಾಣವನ್ನು ಕಳೆದುಕೊಂಡು ಹುತಾತ್ಮನಾದ ಎಂದು ಹಕೀಕತ್ ರಾಯ್ ಪೃಥ್ವಿ ಸಿಂಗ್ ಎಂಬ ಹೆಸರಿನ ಯುವಕನ ಕತೆಯೊಂದು ಪಠ್ಯದಲ್ಲಿ ಸೇರಿಸಲಾಗಿದೆಯಂತೆ. ಈ ಮಾತೃಭೂಮಿಯನ್ನು ಗೌರವಿಸುವವರು ಮಾತ್ರ ಹಿಂದುಗಳುˌ ಉಳಿದವರು ಇತರರು ಎಂದು ಈ ಭೋಧನಮಾಲಾ ವಿವರಿಸುತ್ತದೆ. ಈ ಇತರರು ಯಾರು ಎಂದು ನಿಮಗೆ ಕುತೂಹಲವಾಗಿರಬೇಕು. ಆರ್‌ಎಸ್‌ಎಸ್ ನಡೆಸುತ್ತಿರುವ ಶಾಲೆಗಳಲ್ಲಿ ಕಲಿಸಲಾಗುವ ಸಂಸ್ಕೃತಿ ಜ್ಞಾನ ಸರಣಿಯಲ್ಲಿನ ಹೆಚ್ಚಿನ ವಿಷಯವನ್ನು “ಯುವ ಪೀಳಿಗೆಯಲ್ಲಿ ಸಂಸ್ಕೃತಿಯ ಜ್ಞಾನವನ್ನು ಬೆಳೆಸುವ ಹೆಸರಿನಲ್ಲಿ ಧರ್ಮಾಂಧತೆ ಮತ್ತು ಧಾರ್ಮಿಕ ಮತಾಂಧತೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ” ಎಂದು CABE ಸಮಿತಿಯು ಗಮನಿಸಿದೆಯತೆ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಹಿಂದೂ ಮೂಲಭೂತವಾದವನ್ನು ವಿದ್ಯಾರ್ಥಿಗಳ ಮಿದುಳಿಗೆ ತುರುಕಲಾಗುತ್ತಿದೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ.
ಮುಖರ್ಜಿ- ಮಹಾಜನ್ ಅವರ ಸಂಶೋಧನೆಯು CABE ಸಮಿತಿಗೆ ಸಲ್ಲಿಸಿದ ವರದಿಯ ಕೆಲವು ಸಾರಗಳನ್ನು ಎತ್ತಿ ತೋರಿಸಿದೆ. ಗೌರವ ಗಾಥಾ ಎನ್ನುವ ಸರಸ್ವತಿ ಶಿಶು ಮಂದಿರ ಪ್ರಕಾಶನದಿಂದ ಪ್ರಕಟವಾದ ೪ ನೇ ತರಗತಿಯ ಪುಸ್ತಕದಲ್ಲಿಅಶೋಕನ ಆಳ್ವಿಕೆಯಲ್ಲಿನ ಅಹಿಂಸಾ ತತ್ವವನ್ನು ತಿರುಚಲಾಗಿದೆ. “ಅಶೋಕನ ಆಳ್ವಿಕೆ ಅಹಿಂಸೆಯನ್ನು ಪ್ರತಿಪಾದಿಸುವ ಮೂಲಕ ಪ್ರತಿಯೊಂದು ರೀತಿಯ ಹಿಂಸೆಯನ್ನು ಅಪರಾಧವೆಂದು ಪರಿಗಣಿಸಿತು. ಬೇಟೆಯಾಡುವುದು, ಯಜ್ಞಗಳಲ್ಲಿನ ಪ್ರಾಣಿಬಲಿ ಮತ್ತು ಶಸ್ತ್ರಾಸ್ತ್ರಗಳ ಬಳಕೆ ಸಹ ಹಿಂಸೆ ಅಂತಾಯ್ತು. ಇದು ದೇಶ ರಕ್ಷಣೆ ಮಾಡುವ ಸೇನೆಯ ಮೇಲೆ ಕೆಟ್ಟ ಪರಿಣಾಮ ಬೀರಿತು. ಹೇಡಿತನ ನಿಧಾನವಾಗಿ ಸಾಮ್ರಾಜ್ಯದಾದ್ಯಂತ ಹರಡಿತು. ಬೌದ್ಧ ಸನ್ಯಾಸಿಗಳಿಗೆ ಆಹಾರ ಒದಗಿಸುವ ಹೊಣೆ ರಾಜ್ಯವು ಹೊತ್ತಿತ್ತು. ಆದ್ದರಿಂದ ಜನರು ಸನ್ಯಾಸಿಗಳಾದರು. ಶಸ್ತ್ರಾಸ್ತ್ರಗಳ ಮೂಲಕ ವಿಜಯ ಸಾಧಿಸುವುದನ್ನು ಬೌದ್ಧರು ಕೆಟ್ಟದಾಗಿ ನೋಡಿದರು. ಗಡಿಯಲ್ಲಿ ಕಾವಲು ಕಾಯುತ್ತಿದ್ದ ಸೈನಿಕರು ಇದರಿಂದ ಅತ್ಯಂತ ಹತಾಶರಾದರು. ಬೌದ್ಧ ಧರ್ಮದ ಅಹಿಂಸಾ ತತ್ವವು ಅಶೋಕನ ಆಳ್ವಿಕೆಯಲ್ಲಿ ಉತ್ತರ ಭಾರತವನ್ನು ದುರ್ಬಲಗೊಳಿಸಿತು ಎಂಬ ಸುಳ್ಳು ನೇರೇಷನ್ ಗಳನ್ನು ಪುಸ್ತಕಗಳಲ್ಲಿ ತುರುಕಲಾಗಿದೆ.
ಇಸ್ಲಾಂ ಧರ್ಮದ ಉದಯದ ಬಗ್ಗೆ, ಅದೇ ಪುಸ್ತಕದಲ್ಲಿ, ಮುಸ್ಲಿಮರು ಎಲ್ಲಿಗೆ ಹೋದರೂ ಅವರ ಕೈಯಲ್ಲಿ ಖಡ್ಗವಿರುತ್ತಿತ್ತು. ಅವರ ಸೈನ್ಯವು ಚಂಡಮಾರುತದಂತೆ ನಾಲ್ಕು ದಿಕ್ಕುಗಳಲ್ಲಿಯೂ ಚಲಿಸುತ್ತಿತ್ತು. ಅವರ ದಾರಿಯಲ್ಲಿ ಬಂದ ಎಲ್ಲಾ ದೇಶಗಳು ನಾಶವಾದವು. ಪ್ರಾರ್ಥನಾ ಮಂದಿರಗಳು ನಾಶಗೊಳಿಸಲಾಯಿತು. ಈ ದೇಶದ ಪ್ರಾಚೀನ ವಿಶ್ವವಿದ್ಯಾಲಯಗಳು ನಾಶಮಾಡಿˌ ಗ್ರಂಥಾಲಯಗಳಿಗೆ ಬೆಂಕಿ ಹಚ್ಚಲಾಯಿತು. ಧಾರ್ಮಿಕ ಪುಸ್ತಕಗಳು ನಾಶವಾದವು. ತಾಯಂದಿರು ಮತ್ತು ಸಹೋದರಿಯರನ್ನು ಅವಮಾನಿಸಲಾಯಿತು. ಕರುಣೆ ಮತ್ತು ನ್ಯಾಯ ಅವರಿಗೆ ತಿಳಿದಿರಲಿಲ್ಲ. ಹೀಗೆ ಈ ಪುಸ್ತಕಗಳು ಹಿಂದುತ್ವದ ಪ್ರಚಾರದ ಜೊತೆಗೆ ಇತಿಹಾಸ ಮರೆಮಾಚುವ ಕೆಲಸ ಮಾಡುತ್ತಿವೆ. ದಿಲ್ಲಿಯ ಕುತುಬ್ ಮಿನಾರ್ ಇಂದಿಗೂ ಕುತುಬುದ್ದೀನ್ ಐಬಕ್ ನ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಇದು ಕುತುಬುದ್ದೀನ್ ನಿರ್ಮಿಸಿಲ್ಲ. ಇದನ್ನು ವಾಸ್ತವವಾಗಿ ಚಕ್ರವರ್ತಿ ಸಮುದ್ರಗುಪ್ತ ನಿರ್ಮಿಸಿದ್ದಾನೆ. ಇದರ ನಿಜವಾದ ಹೆಸರು ವಿಷ್ಣು ಸ್ತಂಭ. ಈ ಸುಲ್ತಾನ್ ವಾಸ್ತವವಾಗಿ ಅದರ ಕೆಲವು ಭಾಗಗಳನ್ನು ಕೆಡವಿ ಅದರ ಹೆಸರನ್ನು ಬದಲಾಯಿಸಿದ್ದಾನೆ ಎಂದು ಸುಳ್ಳು ಇತಿಹಾಸವನ್ನು ಈ ಪುಸ್ತಕಗಳಲ್ಲಿ ತುಂಬಲಾಗಿದೆ.
ಈ ಶಿಶು ಮಂದಿರ ಶಾಲೆಗಳಲ್ಲಿ ಕಲಿಸುವ ಮತ್ತೊಂದು ಪೂರಕ ಸರಣಿ, ಇತಿಹಾಸ್ ಗಾ ರಹಾ ಹೈ’ (IGRH)ನ ೫ ನೇ ತರಗತಿಯ ಪುಸ್ತಕದಲ್ಲಿ ಹಿಂದೂಗಳ ಬಲವಂತದ ಮತಾಂತರ ಕುರಿತು ಬರೆಯಲಾಗಿದೆ. ಅಸಂಖ್ಯಾತ ಹಿಂದೂಗಳನ್ನು ಕತ್ತಿ ತೋರಿಸಿˌ ಹೆದರಿಸಿ ಬಲವಂತವಾಗಿ ಮುಸಲ್ಮಾನರನ್ನಾಗಿ ಮಾಡಲಾಯಿತು. ನಮ್ಮ ಸ್ವಾತಂತ್ರ್ಯಕ್ಕಾಗಿನ ಹೋರಾಟವು ಧಾರ್ಮಿಕ ಯುದ್ಧವಾಯಿತು, ಧರ್ಮಕ್ಕಾಗಿ ಅಸಂಖ್ಯಾತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ನಾವು ಒಂದರ ನಂತರ ಒಂದರಂತೆ ಯುದ್ಧವನ್ನು ಗೆದ್ದಿದ್ದೇವೆ, ನಾವು ಎಂದಿಗೂ ವಿದೇಶಿ ಆಡಳಿತಗಾರರನ್ನು ಇಲ್ಲಿ ಶಾಸ್ವತವಾಗಿ ನೆಲೆಸಲು ಅವಕಾಶ ನೀಡಲಿಲ್ಲ ಆದರೆ ನಾವು ನಮ್ಮ ಬೇರ್ಪಟ್ಟ ಸಹೋದರರನ್ನು ಹಿಂದೂ ಧರ್ಮಕ್ಕೆ ಮರು ಮತಾಂತರಿಸಲು ಸಾಧ್ಯವಾಗಲಿಲ್ಲ ಎನ್ನುವ ಸುಳ್ಳುಗಳನ್ನು ಈ ಧರ್ಮಾಂಧರು ಮಕ್ಕಳಿಗೆ ಕಲಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಹಿಂದುತ್ವವಾದಿಗಳ ಪೂರ್ವಜರೆ ಮುಸ್ಲಿಮ್ ಆಡಳಿತಗಾರರಲ್ಲಿ ದಿವಾನಗಿರಿ ಮಾಡಿ ಈ ದೇಶ ಮುಸ್ಲಿಮರ ಆಳ್ವಿಕೆಗೆ ಒಳಪಡುವಂತೆ ಮಾಡಿದ್ದು ಸುಳ್ಳಲ್ಲ.
ಮುಂದುವರೆಯುವುದು….