ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗದೆ ರಾಜ್ಯ ಬಿಜೆಪಿಯಲ್ಲಿ ಮುಜುಗರದ ಪರಿಸ್ಥಿತಿ ಎದುರಾಗಿದೆ. ಇನ್ನು ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಪುನರ್ ಸಂಘಟಿಸಬೇಕಾಗಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸೋಲುಂಡಿದ್ದು, ಲೋಕಸಭೆಗೆ ನಾಯಕತ್ವ ಬದಲಾವಣೆಗೆ ಒತ್ತಡ ಕೇಳಿಬಂದಿದೆ. ಬಿಜೆಪಿ ಹೈಕಮಾಂಡ್ಗೆ ಈಗಾಗಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೆಲವೊಂದು ಹೆಸರುಗಳನ್ನು ಶಿಫಾರಸು ಮಾಡಿ ಬಂದಿದ್ದಾರೆ. ಆದರೆ ಯಡಿಯೂರಪ್ಪ ಮಾತಿಗೆ ಸೊಪ್ಪು ಹಾಕದ ಹೈಕಮಾಂಡ್ ಯಾವುದೇ ಹುದ್ದೆಗಳಿಗೂ ನೇಮಕ ಮಾಡದೆ ಕಾಲಹರಣ ಮಾಡಿದೆ. ಇದು ರಾಜ್ಯ ಬಿಜೆಪಿಗೆ ಇಕ್ಕಟ್ಟು ತಂದಿಟ್ಟಿದೆ.
ರಾಜ್ಯ ಬಿಜೆಪಿಯಲ್ಲಿ ರಾಜಿ ಸಂಧಾನ ಆಗಿದ್ಯಾ..?
ಹೈಕಮಾಂಡ್ ಸೂಚಿಸುತ್ತಿರುವ ಹೆಸರುಗಳಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಗೆ ಕೊಡ್ತಿಲ್ಲ. ಯಡಿಯೂರಪ್ಪ ಹೇಳುತ್ತಿರುವ ಹೆಸರುಗಳಿಗೆ ಬಿಜೆಪಿ ಹೈಕಮಾಂಡ್ ಮನ್ನಣೆ ಕೊಡುತ್ತಿಲ್ಲ. ಇದೇ ಕಾರಣಕ್ಕೆ ವಿಪಕ್ಷ ನಾಯಕನ ನೇಮಕವನ್ನೂ ಮಾಡದೆ ಹೈಕಮಾಂಡ್ ಆಟವಾಡಿಸುತ್ತಿದೆ ಎನ್ನುವ ಮಾತುಗಳಿದ್ದವು. ಇದೀಗ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದಾಗ ಎರಡೂ ಬಣಗಳ ನಡುವೆ ಸಂಧಾನ ನಡೆದಿದೆಯಾ ಅನ್ನೋ ಅನುಮಾನ ಮೂಡುತ್ತಿದೆ. ಬಿಜೆಪಿ ಹೈಕಮಾಂಡ್ ಸೂಚಿಸಿದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ. ಇನ್ನು ಯಡಿಯೂರಪ್ಪ ಸೂಚಿಸಿದವರನ್ನು ವಿಧಾನಸಭಾ ವಿಪಕ್ಷ ನಾಯಕನನ್ನಾಗಿ ಮಾಡುವುದಕ್ಕೆ ಚಿಂತನೆ ನಡೆದಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಒಪ್ಪಿಗೆ ಪಡೆಯಲು ಸಿ.ಟಿ ರವಿ ಪ್ರಯತ್ನಿಸಿದ್ದಾರೆ.

ಯಡಿಯೂರಪ್ಪ ಕಾಲಿಗೆ ನಮಸ್ಕರಿಸಿದ್ದ ಸಿ.ಟಿ ರವಿ..!
ಬಿ.ಎಲ್ ಸಂತೋಷ್ ಬಣದ ಜೊತೆಗೆ ಗುರುತಿಸಿಕೊಂಡು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಗಿಟ್ಟಿಸಿಕೊಂಡಿದ್ದ ಮಾಜಿ ಸಚಿವ ಸಿ.ಟಿ ರವಿ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪದೇ ಪದೇ ಪರೋಕ್ಷ ವಾಗ್ದಾಳಿ ಮಾಡುತ್ತಲೇ ಇದ್ದರು. ಹೊಂದಾಣಿಕೆ ಬಗ್ಗೆಯೂ ಪದೇ ಪದೇ ಸಮರ ಸಾರಿದ್ದರು. ಆ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ತನ್ನ ಅತ್ಯಾಪ್ತನನ್ನು ಕಾಂಗ್ರೆಸ್ಗೆ ಕಳುಹಿಸಿ ಚುನಾವಣೆ ಮಾಡಿದರು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಮೊನ್ನೆಯಷ್ಟೇ ಯಡಿಯೂರಪ್ಪ ಅವರ ಮನೆಗೆ ತೆರಳಿದ್ದ ಸಿ.ಟಿ ರವಿ, ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ, ಕಾಲಿಗೆ ನಮಸ್ಕರಿಸಿದ್ದರು. ಆ ಬಳಿಕ ಮಾತನಾಡಿದ ರವಿ, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದಿದ್ದರು. ಚರ್ಚೆ ಗುಟ್ಟು ಮಾತ್ರ ರಹಸ್ಯವಾಗಿಯೇ ಉಳಿಸಿಕೊಂಡಿದ್ದರು.
ರವಿ ಭೇಟಿ ಬೆನ್ನಲ್ಲೇ ದೆಹಲಿಯಲ್ಲಿ ವಿಜಯೇಂದ್ರ..!!

ದೆಹಲಿಯಿಂದ ಬಂದ ಸಂದೇಶ ಹೊತ್ತು ಯಡಿಯೂರಪ್ಪ ಮನೆಗೆ ಬಂದಿದ್ದ ಸಿ.ಟಿ ರವಿ ಯಡಿಯೂರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು ಅನ್ನೋ ಮಾಹಿತಿ ಸಿಕ್ಕಿದ್ದು, ಒಂದೇ ದಿನದ ಅಂತರದಲ್ಲಿ ದೆಹಲಿಯಲ್ಲಿ ಬಿ.ವೈ ವಿಜಯೇಂದ್ರ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಹೈಕಮಾಂಡ್ ಹೇಳಿದವರೇ ರಾಜ್ಯ ಬಿಜೆಪಿ ಅಧ್ಯಕ್ಷರಾದರೆ ಯಡಿಯೂರಪ್ಪ ಸೂಚಿಸಿದವರು ವಿಪಕ್ಷ ನಾಯಕನಾಗಬೇಕು. ಒಂದು ವೇಳೆ ವಿಪಕ್ಷ ನಾಯಕ ಸ್ಥಾನ ಹೈಕಮಾಂಡ್ ಸೂಚಿಸಿದವರಿಗೆ ಆಗುವುದಾದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಯಡಿಯೂರಪ್ಪ ಸೂಚಿಸಿದವರಿಗೇ ಆಗಬೇಕು ಎನ್ನುವ ಸಂದೇಶ ಮುಟ್ಟಿಸಿದ್ದಾರೆ ಎನ್ನಲಾಗಿದೆ. ವಿಪಕ್ಷ ನಾಯಕನ ಸ್ಥಾನಕ್ಕೆ ಯತ್ನಾಳ್ ನೇಮಕ ಆಗುವುದಾದರೆ ರಾಜ್ಯಾಧ್ಯಕ್ಷ ಸ್ಥಾನ ವಿಜಯೇಂದ್ರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ.
ಕೃಷ್ಣಮಣಿ