ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಚಿತ್ರ ಕಾಂತಾರ ಬಿಡುಗಡೆಗೂ ಮುನ್ನ ಹಾಗೂ ನಂತರ ಚಿತ್ರದಲ್ಲಿನ ವಿಶೇಷತಗಳಿಂದಾಗಿ ಹೆಚ್ಚು ಸದ್ದು ಮಾಡುತ್ತಿದೆ.
ಸೆಪ್ಟೆಂಬರ್ 30ರಂದು ಬಿಡುಗಡೆಯಾದ ಕಾಂತಾರ ಚಿತ್ರವು ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ.
ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷವನ್ನ ಅದ್ಭುತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಯಶ ಕಂಡಿದ್ದಾರೆ. ಚಿತ್ರ ಬಿಡುಗಡೆಯಾಗಿ ತಿಂಗಳಾಗುತ್ತ ಬಂದರೂ ಸಹ ಚಿತ್ರದ ಬಗೆಗಿನ ಕ್ರೇಜ್ ಮಾತ್ರ ಇನ್ನು ಕಡಿಮೆಯಾಗಿಲ್ಲ.

ಇನ್ನು ಚಿತ್ರ ನವೆಂಬರ್ 4ರಂದು ಅಮೆಜಾನ್ ಪ್ರೈಮ್ OTTಯಲ್ಲಿ ಕನ್ನಡ ಅವತರಣಿಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕಾಂತಾರ ಚಿತ್ರದಲ್ಲಿ ರಿಷಭ್ಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು ಇನ್ನುಳಿದಂತೆ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಪ್ರಕಾಶ್ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ.