ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಕಾಂತಾರದ ರಿಷಬ್ ಶೆಟ್ಟಿ ಅವರ ವಿರುದ್ಧ ಕನ್ನಡಿಗರು ಾಮಾಜಿಕ ಮಾಧ್ಯಮದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಮೇಲೆ ದಾಳಿ ನಡೆಸಿದವರ ಚಿತ್ರದಲ್ಲಿ ಯಾಕೆ ನಟಿಸುತ್ತೀರ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಿರಣ್ ಕೊಡ್ಲಾಡಿ ಎಂಬವರು, “ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರರನ್ನು, ಕುಮಟಾವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು, ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ. ನಮ್ಮೂರಿನ ಭೂತ, ಕೋಲವನ್ನು ಜಗತ್ಪ್ರಸಿದ್ದ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ.” ಎಂದಿದ್ದಾರೆ.
“ಬಸ್ರೂರಿನ ಮೇಲೆ ದಾಳಿ ಮಾಡಿದ್ದು, ಲೂಟಿ ಮಾಡಲು. ಧನ, ಸಂಪತ್ತನ್ನು ತನ್ನೂರಿಗೆ ಕೊಂಡೊಯ್ಯಲು. ಪೋರ್ಚಿಗೀಸರ ಜೊತೆ ಕಾದಾಡಲು ಬಂದಿದ್ದರೆ, ಹಬ್ಬದ ದಿನ ರಾತ್ರಿದಾಳಿ ಮಾಡಿ, ಸ್ಥಳೀಯ ವ್ಯಾಪಾರಸ್ಥರನ್ನು ಕೊಳ್ಳೆ ಹೊಡೆಯುವ ಉದ್ದೇಶ ಇರುತ್ತಿರಲಿಲ್ಲ. ಪೋರ್ಚುಗೀಸರ ಬದಲು ಕೆಳದಿ ನಾಯಕರ ಹಿಡಿತದಲ್ಲಿ ಬಸ್ರೂರು ಇದ್ದಿದ್ದರೂ, ಆ ದಿನ ಶಿವಾಜಿ ಸೇನೆ ಅದನ್ನೇ ಮಾಡುತ್ತಿತ್ತು. ಬಲಿಯಾದವರು ಮಾತ್ರ ನಮ್ಮೂರಿನ ಹಿರಿಯರು. ಅದು ವಾಸ್ತವ.” ಎಂದು ಕೊಡ್ಲಾಡಿ ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ಕೆಲವರು ರಿಷಭ್ ಶೆಟ್ಟಿ ಅವರನ್ನು ಬಹಿಷ್ಕರಿಸಬೇಕೆಂದು ಟ್ವಿಟರಲ್ಲಿ ಕರೆ ನೀಡಿದ್ದಾರೆ. “ಕನ್ನಡ ನಾಡನ್ನು ಮುಸ್ಲಿಂ ರಾಜರ ಜೊತೆ ಲೂಟಿ ಮಾಡೋದಕ್ಕೆ ಬಂದ ಲೂಟಿಕೋರ ಶಿವಾಜಿಗೆ ಯುದ್ಧದಲ್ಲಿ ಪ್ರಾಣ ಭಿಕ್ಷೆ ಕೊಟ್ಟ ರಾಣಿ ಬೆಳವಡಿ ಮಲ್ಲಮ್ಮ ಅವರಿಗೆ ಜಯವಾಗಲಿ” ಎಂದು ಟ್ವೀಟ್ ಮಾಡಿರುವ ನೆಟ್ಟಿಗರೊಬ್ಬರು, ರಿಷಬ್ ಶೆಟ್ಟಿ ಅವರನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆ.
https://twitter.com/kodlady/status/1863947324210438554
“ಎಂಟು ಹೆಂಡಿರ ಗಂಡ ಅದು ಹೇಗೆ ಆದರ್ಶ ಪ್ರಾಯ ಅಂತ ರಿಷಭ್ ಅವರೇ ಹೇಳಬೇಕು! ಅವನೇನು ರಾಮನೇ? ಕನ್ನಡಿಗರನ್ನು ಲೂಟಿ ಹೊಡೆದ ರಾಜ. ಬೆಳವಡಿ ಮಲ್ಲಮ್ಮನ ಮುಂದೆ ಸೋತು ಶರಣಾದ ರಾಜ ಯಾವ ರೀತಿಯ ಶೂರನೋ ತಿಳಿಯದು! ಇನ್ನೂ ಈತನ ಸೈನ್ಯದ ಮುಖಂಡರು ಮುಸಲ್ಮಾನರು ಆಗಿದ್ದರು ಆದರೆ ಈತ ಹೇಗೆ ಹಿಂದೂಗಳ ಹೆಮ್ಮಯೋ ಕಾಣೆ” ಎಂದು ಮತ್ತೊಬ್ಬ ನೆಟ್ಟಿಗರು ಬರೆದಿದ್ದಾರೆ.
ಇನ್ನು ಕೆಲವರು ರಿಷಬ್ ಪರ ನಿಂತಿದ್ದು, ಭಾಷೆಯನ್ನು ಮೀರಿ ಧರಮದ ಪರ ನಿಂತಿರುವ ರಿಷಬ್ ರಿಗೆ ತಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.