ನಿರೀಕ್ಷೆಯಂತೆ ಸಚಿವ ಈಶ್ವರಪ್ಪ ಯೂ ಟರ್ನ್ ಹೊಡೆದಿದ್ದಾರೆ. ಸಾರ್ವಜನಿಕ ಹೇಳಿಕೆ, ಆಡಳಿತ ನೀತಿಗಳು ಸೇರಿದಂತೆ ಪ್ರತಿ ವಿಷಯದಲ್ಲಿ ಆ ಕ್ಷಣಕ್ಕೆ ತೋಚಿದ್ದನ್ನು ಟಿವಿ ಕ್ಯಾಮರಾಗಳ ಎದುರು ಹೇಳುವುದು, ಆ ಹೇಳಿಕೆ ವಿವಾದವಾಗಿ ತಿರುಗುಬಾಣವಾಗುತ್ತಲೇ ಯೂ ಟರ್ನ್ ಹೊಡೆಯುವುದು ಈಶ್ವರಪ್ಪ ಅವರ ಟ್ರೇಡ್ ಮಾರ್ಕ್ ಎಂಬುದು ಹೊಸತೇನಲ್ಲ.
ಈಗ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಅವರ ಪತ್ರಾಸ್ತ್ರದ ವಿಷಯದಲ್ಲಿ ಕೂಡ ಅದೇ ಆಗಿದೆ. ಮುಖ್ಯಮಂತ್ರಿಗಳು ತಮ್ಮ ಗ್ರಾಮೀಣಾಭಿವೃದ್ಧಿ ಖಾತೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಅವರು ಇಲಾಖೆಗೆ ಹಣಕಾಸು ಅನುದಾನ ಬಿಡುಗಡೆ ಮಾಡದೆ, ತಡೆಯುತ್ತಿರುವುದರಿಂದ ಇಲಾಖೆಯ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಈವರೆಗೆ ಇಲಾಖೆಗೆ ಹಂಚಿಕೆಯಾದ ಅನುದಾನದ ಮೊತ್ತ 3,998 ಕೋಟಿ ರೂ.ಗಳಲ್ಲಿ, ಕೇವಲ 1600 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಸುಮಾರು 2398 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿಲ್ಲ ಎಂಬುದೂ ಸೇರಿದಂತೆ ದೂರುಗಳ ಪಟ್ಟಿಯನ್ನೇ ಮಾಡಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಕಳೆದ ಫೆಬ್ರವರಿಯಲ್ಲೇ ಈಶ್ವರಪ್ಪ ಪತ್ರ ಬರೆದಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ ಕೊನೆಯ ವಾರ ಇದೇ ವಿಷಯವನ್ನು ಮುಂದಿಟ್ಟುಕೊಂಡು ಈಶ್ವರಪ್ಪ ದಿಢೀರನೇ ರಾಜ್ಯಪಾಲರನ್ನು ಭೇಟಿಯಾಗಿ ಅವರಿಗೂ ದೂರು ಸಲ್ಲಿಸಿದ ಬಳಿಕ ಸಚಿವರು ಮತ್ತು ಸಿಎಂ ನಡುವಿನ ಅನುದಾನದ ಮುಸುಕಿನ ಗುದ್ದಾಟ ಬಯಲಿಗೆ ಬಂದಿತ್ತು. ಆ ಬಳಿಕ ಕೇವಲ ಇಲಾಖೆಯ ಅನುದಾನದ ವಿಷಯ ಮಾತ್ರವಲ್ಲ; ಬೆಂಗಳೂರಿನ ಸಿಎಂ ಆಪ್ತರೊಬ್ಬರಿಗೆ ಸಚಿವ ಈಶ್ವರಪ್ಪ ವಿರೋಧದ ಹೊರತಾಗಿಯೂ ರಸ್ತೆ ನಿರ್ಮಾಣ ಯೋಜನೆಯ 65 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂಬುದೇ ಸಚಿವ ಈಶ್ವರಪ್ಪ ಹೀಗೆ ದಿಢೀರನೇ ಪತ್ರಾಸ್ತ್ರ ಪ್ರಯೋಗಿಸಲು ಕಾರಣ.
ವಾಸ್ತವವಾಗಿ ಪತ್ರ ಬರೆದಿರುವುದು ಸಚಿವ ಈಶ್ವರಪ್ಪ ಅವರೇ ಆದರೂ, ಅವರ ಹಿಂದೆ ಬಿಜೆಪಿಯ ಸಿಎಂ ಯಡಿಯೂರಪ್ಪ ವಿರೋಧಿ ಬಣದ ಕಾರ್ಯತಂತ್ರವಿದೆ. ಮುಖ್ಯವಾಗಿ ಸಿಎಂ ಪುತ್ರ ವಿಜಯೇಂದ್ರ ಅವರ ಆಡಳಿತ ಹಸ್ತಕ್ಷೇಪ ಮತ್ತು ಹಿರಿಯ-ಕಿರಿಯರೆನ್ನದೆ ಸಚಿವರು, ಶಾಸಕರ ಮೇಲೆ ಸವಾರಿ ಮಾಡುವ ಪ್ರವೃತ್ತಿಯಿಂದ ರೋಸಿಹೋದ ಆರ್ ಎಸ್ ಎಸ್ ನಿಷ್ಠರ ಗುಂಪು ಈ ಪತ್ರದ ಮೂಲಕ ವಿಷಯವನ್ನು ಏಕ ಕಾಲಕ್ಕೆ ಪಕ್ಷದ ವರಿಷ್ಠರ ಗಮನಕ್ಕೂ ಮತ್ತು ರಾಜ್ಯದ ಸಾರ್ವಜನಿಕರ ಗಮನಕ್ಕೂ ತಂದು, ಸಿಎಂ ಮತ್ತು ಅವರ ಪುತ್ರರ ಮೇಲೆ, ಉಪ ಚುನಾವಣೆಯ ಹೊತ್ತಲ್ಲೇ ಸಾರ್ವಜನಿಕ ಒತ್ತಡ ಸೃಷ್ಟಿಸಿ, ಅವರನ್ನು ಹದ್ದುಬಸ್ತಿನಲ್ಲಿಡಲು ನಡೆಸಿದ ಕಾರ್ಯತಂತ್ರ ಇದು ಎಂಬ ಮಾತೂ ಕೇಳಿಬಂದಿತ್ತು.
ಇದೀಗ ಸ್ವತಃ ಈಶ್ವರಪ್ಪ ತಾವು ಸಿಎಂ ವಿರುದ್ಧ ದೂರು ನೀಡಿಲ್ಲ, ಮುಂದೆಯೂ ನೀಡುವುದಿಲ್ಲ. ರಾಜ್ಯಪಾಲರೊಂದಿಗೆ ಹಣಕಾಸು ಖಾತೆಗೆ ಸಂಬಂಧಿಸಿದ ಕೆಲವು ವಿಷಯ ಚರ್ಚಿಸಲು ಅವರನ್ನು ಭೇಟಿ ಮಾಡಿದ್ದನ್ನೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಥೆ ಕಟ್ಟಿ ಹೇಳುತ್ತಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಅದೇ ಹೊತ್ತಿಗೆ ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ, ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ವೈಮನಸ್ಸು ಬಗೆಹರಿದಿದೆ. ಅವರಿಬ್ಬರೂ ಒಂದೇ ತಟ್ಟೆಯಲ್ಲಿ ಉಣ್ಣುವಷ್ಟು ಆತ್ಮೀಯರು. ಅವರ ನಡುವೆ ಎದ್ದಿದ್ದ ಸಣ್ಣ ಗೊಂದಲವನ್ನು ಪಕ್ಷದ ಹಿರಿಯರು ಬಗೆಹರಿಸಿದ್ದಾರೆ. ಈಗ ಎಲ್ಲವೂ ಸುಸೂತ್ರವಾಗಿದೆ ಎಂದಿದ್ದಾರೆ.
ಅಂದರೆ; ಬಿಜೆಪಿಯ ಸಿದ್ಧಾಂತನಿಷ್ಠರ ಗುಂಪು ಸಿಎಂ ಮೇಲೆ ಹಿಡಿತ ಹೊಂದಲು ನಡೆಸಿದ ಪ್ರಯತ್ನ ಸಫಲವಾಗಿದೆ ಎಂದರ್ಥವೇ? ಅಥವಾ ಸಿಎಂ ಪ್ರಭಾವದ ಎದುರು ಈಶ್ವರಪ್ಪ ನೇತೃತ್ವದಲ್ಲಿ ನಡೆದ ಬಂಡಾಯ ಸದ್ದಿಲ್ಲದೆ ಬಾಲ ಮುದುರಿಕೊಂಡು ಹೋಯಿತು ಎಂದೇ? ಎಂಬುದನ್ನು ಮುಂದಿನ ದಿನಗಳೇ ಹೇಳಬೇಕಿದೆ. ಸದ್ಯಕ್ಕಂತೂ ಈಶ್ವರಪ್ಪ ಎಂದಿನ ತಮ್ಮ ಶೈಲಿಯಲ್ಲೇ ದಿಢೀರ್ ಯೂ ಟರ್ನ್ ಹೊಡೆದಿದ್ದಾರೆ.
ಆದರೆ, ಪ್ರಶ್ನೆ ಇರುವುದು; ಈಶ್ವರಪ್ಪ ಬರೆದಿದ್ದ ಪತ್ರ ಈಗ ಸಾರ್ವಜನಿಕ ವಲಯದಲ್ಲಿದೆ. ಆ ಪತ್ರದಲ್ಲಿ ಅವರು ಮುಖ್ಯಮಂತ್ರಿಗಳ ವಿರುದ್ಧ ಮಾಡಿರುವ ಗಂಭೀರ ಆರೋಪಗಳು ಸಚಿವ ಈಶ್ವರಪ್ಪ ಅವರ ಖಾಸಗೀ ವಿಷಯಕ್ಕಾಗಲೀ, ಬಿಜೆಪಿ ಪಕ್ಷದ ಆಂತರಿಕ ವಿಷಯಕ್ಕಾಗಲೀ ಸಂಬಂಧಿಸಿಲ್ಲ. ಬದಲಾಗಿ ಆ ಪತ್ರದಲ್ಲಿ ಪ್ರಸ್ತಾಪವಾಗಿರುವ ‘ಗ್ರಾಮೀಣ ಸುಮಾರ್ಗ’ ಯೋಜನೆ ಸೇರಿದಂತೆ ಹಲವು ಅನುದಾನ ಹಂಚಿಕೆ ಮತ್ತು ಹಣ ಬಿಡುಗಡೆ ಸಂಗತಿಗಳು ರಾಜ್ಯದ ಜನಸಾಮಾನ್ಯರ ತೆರಿಗೆ ಹಣಕ್ಕೆ ಸಂಬಂಧಿಸಿದ್ದು, ಬೊಕ್ಕಸಕ್ಕೆ ಸಂಬಂಧಿಸಿದ್ದು. ಅಂದರೆ ಬಹುಕೋಟಿ ಸಾರ್ವಜನಿಕ ಹಣದ ದುರ್ಬಳಕೆ, ಸ್ವಜನಪಕ್ಷಪಾತಕ್ಕೆ ಅಧಿಕಾರ ಮತ್ತು ಜನರ ಹಣ ಬಳಸಿಕೊಂಡ ಗಂಭೀರ ಸಂಗತಿ ಈ ಪತ್ರದಲ್ಲಿದೆ. ಹಾಗಿರುವಾಗ, ಸಚಿವರು ಮತ್ತು ಮುಖ್ಯಮಂತ್ರಿಗಳ ನಡುವಿನ ವೈಯಕ್ತಿಕ ವಿಷಯದಂತೆ ಈ ವಿಷಯವನ್ನು ಪರಿಗಣಿಸಲಾಗದು.
ಅಷ್ಟಕ್ಕೂ ಸಚಿವ ಈಶ್ವರಪ್ಪ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವ ಯಾವ ಸಂಗತಿಯೂ, ‘ಈಗ ಜಗಳವಾಡಿ, ಮರುಕ್ಷಣ ಎಲ್ಲಾ ಮರೆತು ಒಂದೇ ಚಡ್ಡಿ ಹಾಕಿಕೊಂಡು ಕುಣಿಯುವಂತಹ’ ಮಕ್ಕಳಾಟವಲ್ಲ. ಅದು ರಾಜ್ಯದ ಹಣಕಾಸು ನಿರ್ವಹಣೆ, ಅನುದಾನ ಹಂಚಿಕೆ, ಸಾರ್ವಜನಿಕ ತೆರಿಗೆ ಹಣದ ಸದ್ಬಳಕೆ, ದುರ್ಬಳಕೆಗೆ ಸಂಬಂಧಿಸಿದ ಘನ ಗಂಭೀರ ಸಂಗತಿ. ಹಾಗಾಗಿ ಆಡಳಿತ ಪಕ್ಷವಾಗಿ ಬಿಜೆಪಿಯಾಗಲೀ, ಪ್ರತಿಪಕ್ಷಗಳಾಗಲೀ ಈ ವಿಷಯವನ್ನು ತಮ್ಮ ತಮ್ಮ ನಡುವಿನ ಸಂಗತಿ ಎಂಬಂತೆ ತಿಪ್ಪೆಸಾರಿಸಲಾಗದು.
ಹಾಗಾಗಿ, “ಎಲ್ಲವೂ ಸರಿಯಾಗಿದೆ. ಸಚಿವರು, ಸಿಎಂ ನಡುವಿನ ಮುನಿಸು ಮುಗಿದುಹೋಯಿತು” ಎಂದು ಬಿಜೆಪಿ ಉಸ್ತುವಾರಿ ಕಾರ್ಯದರ್ಶಿಗಳು ಇಡೀ ವಿಷಯವನ್ನು ಮರೆಮಾಚಲು ಅಥವಾ “ಇಲಾಖೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ಸರಿಪಡಿಸಿಕೊಂಡಿದ್ದೇವೆ. ಅಮಿತ್ ಶಾ, ಸಿ ಟಿ ರವಿ, ಅರುಣ್ ಸಿಂಗ್ ಎಲ್ಲರೂ ನಮ್ಮ ಕುಟುಂಬದವರೇ. ಹಾಗಾಗಿ ನಾವು ನಮ್ಮ ವಿಷಯವನ್ನು ಬಗೆಹರಿಸಿಕೊಂಡಿದ್ದೇವೆ” ಎಂದು ಸಚಿವ ಈಶ್ವರಪ್ಪ ತಿಪ್ಪೆಸಾರಿಸಲು, ಅವರು ತಾವೇ ಪತ್ರದಲ್ಲಿ ಪ್ರಸ್ತಾಪಮಾಡಿರುವ ಪ್ರತಿ ಪೈಸೆಯೂ ರಾಜ್ಯದ ಜನರ ತೆರಿಗೆ ದುಡ್ಡು ಎಂಬ ಕನಿಷ್ಟ ಪ್ರಜ್ಞೆಯನ್ನು ಮರೆತರು ಏಕೆ?.
ಹಾಗಾಗಿ, ಇದು ‘ತಮ್ಮ ಆಂತರಿಕ ವಿಷಯ, ಕುಟುಂಬದ ವಿಷಯ, ನಾವೇ ಬಗೆಹರಿಸಿಕೊಂಡಿದ್ದೇವೆ’ ಎಂಬ ರಮ್ಯ ಹೇಳಿಕೆಗಳನ್ನು ನೀಡುವ ಮುನ್ನ ಸಚಿವ ಈಶ್ವರಪ್ಪ, ತಾವು ಪತ್ರದ ಮೂಲಕ ಎತ್ತಿರುವ ವಿಷಯ ರಾಜ್ಯದ ಖಜಾನೆಗೆ ಸಂಬಂಧಿಸಿದ್ದು, ಆಡಳಿತಕ್ಕೆ ಸಂಬಂಧಿಸಿದ್ದು ವಿನಃ ತಮ್ಮ ಮತ್ತು ಸಿಎಂ ಕುಟುಂಬದ ಸ್ವಂತ ಆಸ್ತಿಗೆ ಸಂಬಂಧಿಸಿದ ವಿಷಯವಲ್ಲ ಎಂಬ ಎಚ್ಚರಿಕೆ ವಹಿಸಬೇಕಿದೆ. ಆ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಯಬೇಕು ಮತ್ತು ಸಿಎಂ ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ವಾದದಲ್ಲಿ ಹುರುಳಿಲ್ಲದೇ ಇಲ್ಲ.