![](https://pratidhvani.com/wp-content/uploads/2024/05/IMG_7556.jpeg)
ಹಾಸನ ಅಶ್ಲೀಲ ವಿಡಿಯೋ ಕೇಸ್ ಬಗೆದಷ್ಟು ಬಯಲಾಗ್ತಿದೆ. ವಿಚಾರಣೆ ಚುರುಕುಗೊಂಡಿದೆ. SIT ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಮಾಡ್ತಿದ್ದಾರೆ .
ರೇವಣ್ಣ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆ ಭಾಗವಾಗಿ ರೇವಣ್ಣ ಅವರ ಬಸವನಗುಡಿಯ ನಿವಾಸದಲ್ಲಿ ಎಸ್ಐಟಿ 2ನೇ ಬಾರಿ ಸ್ಥಳ ಮಹಜರು ನಡೆಸಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರು, ಇದೀಗ 2ನೇ ಬಾರಿ ಸಂತ್ರಸ್ತೆ ಸಮ್ಮುಖದಲ್ಲಿ ಎಸ್ಐಟಿ ತಂಡ ಮಹಜರು ಕೈಗೊಂಡಿದೆ.
ರೇವಣ್ಣ ಅವರ ಬಸವನಗುಡಿಯ ಶಿವಸ್ಮಿತ ನಿವಾಸಕ್ಕೆ ಎರಡು ಜೀಪ್ಗಳಲ್ಲಿ ಎಸ್ಐಟಿ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆ ಸಮ್ಮುಖದಲ್ಲಿ ವಿಡಿಯೊ ರೆಕಾರ್ಡ್ ಸಹಿತ ಅಧಿಕಾರಿಗಳು ಮಹಜರು ನಡೆಸಿದ್ದಾರೆ.
ಮನೆಯ ಹಾಲ್, ಪಾರ್ಕಿಂಗ್, ಅಡುಗೆಮನೆ, ಬಾಲ್ಕನಿ ಸೇರಿ ಹಲವು ಕಡೆ ಪರಿಶೀಲನೆ ನಡೆಸಿ, ಸಂತ್ರಸ್ತೆಯಿಂದ ಮಾಹಿತಿ ಪಡೆದಿದ್ದಾರೆ.
ಸಿಐಡಿ ಸೈಬರ್ಸೆಲ್ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸ್ಥಳವನ್ನು ಎಸ್ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ. ಈಗಾಗಲೇ ನ್ಯಾಯಾಧೀಶರ ಎದುರು ಕಳೆದ ಶುಕ್ರವಾರ (ಮೇ 3) ಸಿಎಆರ್ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಹಾಸನದ ಎಂಪಿ ಕ್ವಾರ್ಟರ್ಸ್ ಮಾತ್ರವಲ್ಲದೆ ಬೆಂಗಳೂರಿನ ನಿವಾಸದಲ್ಲಿ ಸಹ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಅತ್ಯಾಚಾರ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿರುವ ಎಚ್.ಡಿ. ರೇವಣ್ಣ ಅವರ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಮಹಜರು ಮಾಡಲಾಗಿದೆ.