ಭಾರತ ಉಪಖಂಡದಲ್ಲಿ ಅನೇಕ ಪ್ರಗತಿಪರ ಚಳುವಳಿಗಳು ಘಟಿಸಿವೆ. ಚಳುವಳಿಯೊಂದು ರೂಪು ತಾಳಬೇಕಾದರೆ ವರ್ತಮಾನದ ವ್ಯವಸ್ಥೆಯಲ್ಲಿನ ಸಮಗ್ರ ಲೋಪದೋಷಗಳು ಕಾರಣವಾಗಬಲ್ಲವು. ಇಡೀ ಭಾರತೀಯ ಸಮುದಾಯವನ್ನು ಸಾಮಾಜಿಕˌ ಧಾರ್ಮಿಕˌ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿಸಿದ ಬೆರಳೆಣಿಕೆಯ ಸ್ವಾರ್ಥ ಪುರೋಹಿತಶಾಹಿ ವರ್ಗವು ಈ ಉಪಖಂಡವನ್ನು ಗುಲಾಮ ದೇಶವನ್ನಾಗಿ ಮಾರ್ಪಡಿಸಿದ್ದು ಈ ನೆಲದ ದುರಂತ. ಕೇವಲ ತಮ್ಮ ಸ್ವಾರ್ಥ ಸಾಧನೆ ಮತ್ತು ನಿರಾಯಾಸಯುಕ್ತ ಉಪಜೀವನಕ್ಕಾಗಿ ಇಲ್ಲಿನ ಮುಗ್ಧ ಜನಸಮುದಾಯಗಳನ್ನು ಧಾರ್ಮಿಕ ಕಟ್ಟಳೆಗಳ ಮೂಲಕ ಅಮಾನುಷವಾಗಿ ಶೋಷಿಸಿದ ಕರ್ಮಟರು ಕಾಲ ಕಾಲಕ್ಕೂ ಹೊಸ ವೇಷಗಳನ್ನು ಧರಿಸುತ್ತಿದ್ದಾರೆ. ಕಪಟ, ಕುಯುಕ್ತಿಗಳನ್ನು ಹೆಣೆಯುತ್ತಿದ್ದಾರೆ. ಈ ಪುರೋಹಿತಶಾಹಿಗಳ ಪುಂಡಾಟಕ್ಕೆ ಪ್ರತ್ಯುತ್ತರ ರೂಪದಲ್ಲಿ ಈ ನೆಲದಲ್ಲಿ ವೈಚಾರಿಕ ಚಳುವಳಿಗಳು ಘಟಿಸಿವೆ.
ಮೂಲಭೂತವಾದಿಗಳು ಹುಟ್ಟುಹಾಕಿದ ವ್ಯವಸ್ಥೆಯ ನಿಷ್ಕಾರುಣ್ಯ ಚಟುವಟಿಕೆಗಳಿಂದ ರೋಸಿˌ ಜನರ ಸಹನೆಯ ಕಟ್ಟೆಯೊಡೆದಾಗಲೆಲ್ಲ ಈ ನೆಲದಲ್ಲಿ ವೈಚಾರಿಕ ಚಿಂತನೆಗಳು ಚಿಗುರೊಡೆದಿವೆ. ಆ ಎಲ್ಲ ಹೊಸ ವಿಚಾರಗಳು ಜನರ ಮಧ್ಯದಲ್ಲಿಯೇ ಹುಟ್ಟುಪಡೆದಂತವುಗಳು. ಅವನ್ನು ಪ್ರತಿಪಾದಿಸಲು ಒಬ್ಬೊಬ್ಬ ಮೇಧಾವಿಗಳ ನಾಯಕತ್ವ ರೂಪುಗೊಂಡಿದ್ದರೂ ಜನರಿಂದಲೇ ಮುನ್ನೆಲೆಗೆ ಬಂದಂತವುಗಳು. ಆ ಕಾರಣದಿಂದಲೇ ಕೋಮುವಾದಿಗಳ ಮನೋಬಲವನ್ನು ಅಲ್ಲಾಡಿಸಿದ ಬುದ್ಧ ˌ ಬಸವಣ್ಣನವರ ವೈಚಾರಿಕ ಚಳುವಳಿಗಳ ವಿರುದ್ಧ ಕರ್ಮಟರ ಸಾಂಘಿಕ ಪ್ರತಿಭಟನೆ ಮತ್ತು ಅವನ್ನು ವಿಫಲಗೊಳಿಸುವ ಹುನ್ನಾರಗಳು ಅಷ್ಟೇ ಪ್ರಬಲವಾಗಿ ನಡೆದವು. ಇಷ್ಟೆಲ್ಲ ಕುತಂತ್ರಗಳˌ ಷಡ್ಯಂತ್ರಗಳ ನಡುವೆಯೂ ಈ ಉಪಖಂಡದ ಶೋಷಿತ ಜನಕ್ಕೆ ಹೊಸ ವೈಚಾರಿಕ ಚಿಂತನೆಯ ಪರ್ಯಾಯ ಮಾರ್ಗಗಳು ಹುಟ್ಟಿಕೊಳ್ಳುತ್ತಿರುವುದು ಈ ನೆಲದ ಅಂತಃಸತ್ವಕ್ಕೆ ಸಾಕ್ಷಿ.
ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ದೇಶದ ಆಡಳಿತ ಚುಕ್ಕಾಣಿ ಅದೇ ಅಪಾಯಕಾರಿ ಪುರೋಹಿತಶಾಹಿ ಮನಸ್ಥಿತಿಗಳ ಕೈಸೇರಿದೆ. ಅಭಿವೃದ್ಧಿ ಮಂತ್ರದ ಛದ್ಮವೇಷತೊಟ್ಟು ಶೋಷಿತ ವರ್ಗಗಳ ಮನಸ್ಸುಗಳನ್ನು ಗೆದ್ದಂತೆ ನಾಟಕವಾಡುತ್ತಲೇ ಸದ್ದಿಲ್ಲದೆ ಸನಾತನ ಮನುಧರ್ಮವನ್ನು ಅನುಷ್ಠಾನಗೊಳಿಸಿಕೊಳ್ಳುವತ್ತ ನಿರತವಾಗಿವೆ. ಎಲ್ಲ ರಂಗಗಳಲ್ಲೂ ಮುಂದಿನ ಅರ್ಧ ಶತಮಾನಗಳಿಗಾಗುವಷ್ಟು ಸಂಪನ್ಮೂಲ, ಪ್ರಾಬಲ್ಯ ಮತ್ತು ಅಧಿಕಾರದ ಹಿಡಿತವನ್ನು ಬಿಗಿಗೊಳಿಸಿಕೊಳ್ಳುವ ಕಾರ್ಯ ಆರಂಭವಾಗಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಮತ್ತೊಮ್ಮೆ ಕಲ್ಯಾಣದ ಕ್ರಾಂತಿಯ ಪುನರಾವರ್ತನೆಯ ಪ್ರಸ್ತುತತೆಯನ್ನು ವಿಚಾರಶೀಲ ಮನಸ್ಸುಗಳು ಯೋಚಿಸಬೇಕು. ಬುದ್ಧ ಜಗವೆಲ್ಲ ಮಲಗಿದ್ದಾಗ ಅವನೊಬ್ಬನೇ ಎದ್ದ. ಕೆಲವು ಸಾಂಸಾರಿಕ ಘಟನೆಗಳಿಂದ ಲೌಕಿಕದ ಬಗ್ಗೆ ನಿರಾಸಕ್ತಿ ತಾಳಿದ ರಾಜಕುಮಾರ ಸಿದ್ಧಾರ್ಥ ಹೊಸ ವಿಚಾರಗಳ ಮಂಡನೆಯ ಮೂಲಕ ಸ್ಥಾಪಿತ ಮನುವಾದವನ್ನು ತಿರಸ್ಕರಿಸಿ ಗೌತಮ ಬುದ್ಧನಾದ.
ಬುದ್ಧನ ವಿಚಾರಗಳು ಭಾರತದ ಮೊದಲ ಪ್ರಗತಿಪರ ಚಿಂತನೆಗಳಾಗಿ ಮೂತಭೂತವಾದಿಗಳ ಕೆಂಗಣ್ಣಿಗೆ ಗುರಿಯಾದವು, ಶೋಷಿತರಲ್ಲಿ ಮನುವಾದಕ್ಕೆ ಪರ್ಯಾಯ ವ್ಯವಸ್ಥೆಯೊಂದರ ಅವಕಾಶವನ್ನು ತೆರೆದಿಟ್ಟವು. ತದನಂತರದಲ್ಲಿ ಘಟಿಸಿದ್ದೇ ಶರಣರ ವಚನ ಚಳುವಳಿ. ಕಾಲಾನುಕ್ರಮದಲ್ಲಿ ಭಾರತದಲ್ಲಿ ಅಲ್ಲಲ್ಲಿ ಸಣ್ಣಮಟ್ಟದ ವೈಚಾರಿಕ ಕ್ರಾಂತಿಗಳು ಘಟಿಸಿಹೋಗಿವೆ. ಕೇರಳದಲ್ಲಿ ನಾರಾಯಣ ಗುರುಗಳ ದೇವಾಲಯ ನಿರ್ಮಾಣ ಮತ್ತು ಶೂದ್ರರನ್ನು ಅರ್ಚಕರಾಗಿ ನೇಮಿಸುವುದರಿಂದ ಹಿಡಿದು ಅನೇಕ ಪ್ರಗತಿಪರ ಸುಧಾರಣೆಗಳು ನಡೆದಿವೆ. ತಮಿಳುನಾಡಿನಲ್ಲಿ ಪೆರಿಯಾರರಂತೂ ವಿನೂತನವಾದ ವೈಚಾರಿಕ ಚಿಂತನೆ ಪ್ರತಿಪಾದಿಸುವ ಮೂಲಕ ಭಾರತದ ಬಲಪಂಥೀಯವಾದಕ್ಕೆ ತೀವ್ರ ಪೆಟ್ಟು ನೀಡಿದರು. ಆನಂತರದಲ್ಲಿ ವಿವೇಕಾನಂದರು ತಮ್ಮ ಕ್ರಾಂತಿಕಾರಕ ವಿಚಾರಗಳನ್ನು ಪ್ರತಿಪಾದಿಸುತ್ತಾ ಸಂಪ್ರದಾಯವಾದಿಗಳ ಬೆವರಿಳಿಸಿದರು. ದುರಂತವೆಂದರೆ ಅದೇ ವಿವೇಕಾನಂದರನ್ನು ಬಲಪಂಥೀಯ ಸಂಘಟನೆಗಳು ಹಿಂದೂ ಸನ್ಯಾಸಿ ಎಂದು ತಪ್ಪಾಗಿ ಬಿಂಬಿಸಿ ಅವರ ಕ್ರಾಂತಿಕಾರಕ ವಿಚಾರಗಳನ್ನು ಮರೆಮಾಚಿ, ತಮ್ಮ ರಾಜಕೀಯ ಉನ್ನತಿಗಾಗಿ ದೇಶದ ಯುವಶಕ್ತಿಯನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ.
ಅನೇಕ ಮೌಢ್ಯಾಚರಣೆಗಳನ್ನು ದಯಾನಂದ ಸರಸ್ವತಿ, ರಾಜಾರಾಮ ಮೋಹನ ರಾಯ್ ಮುಂತಾದವರು ವಿರೋಧಿಸಿದರು. ಮಹತ್ಮಾ ಫುಲೆ, ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಅರಸ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದವರು ಸಮಾಜ ಸುಧಾರಣೆಯ ವಿವಿಧ ಹಂತಗಳಲ್ಲಿ ತಮ್ಮ ಕಾರ್ಯಗಳನ್ನು ಮುಂದುವರಿಸಿದ್ದರು. ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ಮಹಾತ್ಮಾ ಗಾಂಧೀಜಿಯವರು ಅದರ ನ್ಯೂನ್ಯತೆಗಳಾದ ಅಸ್ಪೃಶ್ಯತೆˌ ಅಸಮಾನತೆಗಳ ವಿರುದ್ಧ ಸಮರವನ್ನೇ ಸಾರಿದರು. ಧರ್ಮದ ಹೆಸರಲ್ಲಿ ದೇಶದ ಏಕತೆಗೆ ಕುತ್ತು ಬಂದಾಗ ಪ್ರಾಣ ಲೆಕ್ಕಿಸದೇ ನಂಬಿದ ತತ್ವಗಳಿಗಾಗಿ ತಾವೇ ಬಲಿಯಾದರು. ಬ್ರಿಟೀಷರು ಕೂಡಾ ತಮ್ಮ ಆಳ್ವಿಕೆಯ ಅವಧಿಯಲ್ಲಿ ಇಲ್ಲಿನ ಶ್ರೇಣೀಕೃತ ವರ್ಣವ್ಯವಸ್ಥೆಯಿಂದ ಶೋಷಣೆಗೊಳಗಾದವರ ಪರವಾಗಿ ಹಲವಾರು ಸುಧಾರಣಾ ಕಾರ್ಯಗಳನ್ನು ಮಾಡಿದರು. ಕೆಲವು ಮನುಸಂತಾನಗಳು ನೆಟ್ಟಿದ ಮೌಢ್ಯಾಚರಣೆಗಳನ್ನು ನಿಷೇಧಿಸಿದರು.

ಸ್ವಾತಂತ್ರ್ಯಾ ನಂತರದಲ್ಲಿ ಸಂವಿಧಾನವನ್ನು ಅಂಗೀಕರಿಸಿದ ಮೇಲೂ ಭಾರತದ ಆಡಳಿತದ ಮೇಲಿದ್ದ ಸಂಪ್ರದಾಯವಾದಿಗಳ ಹಿಡಿತದ ಅನೇಕ ಸಮಾಜವಾದಿ ಹಾಗು ಸರ್ವೋದಯ ಮಾದರಿಯ ಚಳುವಳಿಗಳು ಭಾರತದ ವೈಚಾರಿಕ ಚಿಂತನೆಯ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು ಗಮನಾರ್ಹ. ಅದರ ನಂತರದಲ್ಲಿ ಭಾರತದಲ್ಲಿ ಅಷ್ಟೊಂದು ಪ್ರಭಾವಶಾಲಿ ವೈಚಾರಿಕ ಚಳುವಳಿಗಳು ಘಟಿಸಲೇ ಇಲ್ಲ. ಈಗ ಮತ್ತೆ ಹೊಸ ಅವತಾರಗಳಲ್ಲಿ ಹಳೆಯ ಕಡತಗಳು ಬಿಚ್ಚಿಕೊಳ್ಳುತ್ತಿರುವ ಈ ವಿಷಮ ಘಳಿಗೆಯಲ್ಲಿ ವೈಚಾರಿಕ ಚಳುವಳಿಯ ಅಗತ್ಯ ತಲೆದೋರಿದೆ. ಶರಣ ಚಳುವಳಿಯ ಮಾದರಿ
ಹನ್ನೆರಡನೇ ಶತಮಾನ ಭಾರತದ, ಅದರಲ್ಲೂ ಕರ್ನಾಟಕದ ಇತಿಹಾಸದಲ್ಲಿ ಹೊಸ ಮನ್ವಂತರ ಬರೆದ ಅಪೂರ್ವ ಕಾಲಘಟ್ಟ. ಕರ್ಮಟರ ಅಟ್ಟಹಾಸವನ್ನು ಹೆಡೆಮುರಿ ಕಟ್ಟಿದ ಅಸಂಖ್ಯಾತ ಶರಣ ಸಂಕುಲವು ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ದೊಡ್ಡ ಕಾಂತ್ರಿಯನ್ನೇ ಮಾಡಿತು.
ರಾಜಸತ್ತೆಯಲ್ಲಿದ್ದುಕೊಂಡು, ಶ್ರೇಷ್ಠಕುಲದ ಅಗ್ರಹಾರವನ್ನು, ಕುಲ ಮದದ ಅಹಮ್ಮಿಕೆಯನ್ನು, ಶೋಷಣೆ ಆಧಾರಿತ ವೈದಿಕ ವ್ಯವಸ್ಥೆಯನ್ನು ಧಿಕ್ಕರಿಸಿದ ಬಸವಣ್ಣನವರು ಈ ನೆಲದ ನೈಜ ವಾರಸುದಾರರಾದ ಬಹುಜನರ ನೋವಿಗೆ ಧ್ವನಿಯಾಗಿ ನಿಂತು ಸಂಪೂರ್ಣ ಹೊಸ ವಿಚಾರಗಳ ಆಧಾರಿತ ನವೀನ ಧರ್ಮವೊಂದರ ಹುಟ್ಟಿಗೆ ಕಾರಣೀಭೂತರಾದರು. ಎಲ್ಲ ಜಾತಿಗಳ, ಎಲ್ಲ ಕಸುಬುಗಳ, ಎಲ್ಲಾ ವರ್ಗಗಳ ಸಮಾನ ಮನಸ್ಕರು ಈ ಚಳುವಳಿಯಲ್ಲಿ ಕಾಯಾ, ವಾಚಾ, ಮನಸಾ ತಮ್ಮನ್ನು ತೊಡಗಿಸಿಕೊಂಡಿದ್ದರು. ಕರ್ಮಟರ ಕೆಂಗಣ್ಣಿಗೆ ಗುರಿಯಾದ ಆ ಮಹತ್ತರ ಶರಣ ಧರ್ಮದ ವಿಚಾರಗಳು ಅಂದು ಘಟಿಸಿದ ಕಲ್ಯಾಣ ಪ್ರತಿಕ್ರಾಂತಿಯ ಧೂಳಿನಲ್ಲಿ ಮಸುಕಾಗಿ ಹೋದವು. ಪಟ್ಟಭದ್ರ ಹಿತಾಸಕ್ತಿಗಳು ಎಲ್ಲ ಆಳರಸರ ದಿವಾನಗಿರಿ ಗಿಟ್ಟಿಸಿಕೊಳ್ಳುವ ಮೂಲಕ ಪರೋಕ್ಷ ರಾಜಸತ್ತೆಯನ್ನು ಕೈಯಲ್ಲಿಟ್ಟುಕೊಂಡು ತಮಗೆ ಬೇಕಾದ ಹಾಗೆ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಿ, ಕಾಯ್ದುಕೊಂಡು ಬಂದಿರುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದು.
ಮುಖ್ಯವಾಗಿ ಇಂದು ಭಾರತದ ಧಾರ್ಮಿಕ ಕ್ಷೇತ್ರದಲ್ಲಿ ಅತ್ಯಂತ ಗೊಂದಲ ಸೃಷ್ಟಿಸಿದ ಪದ ‘ಹಿಂದೂ’. ಹಾಗೆ ನೋಡಿದರೆ ಹಿಂದೂ ಎನ್ನುವುದು ಒಂದು ಧರ್ಮವನ್ನು ಸೂಚಿಸುವ ಪದವಲ್ಲ. ಯಾವುದೇ ಒಂದು ಧರ್ಮಕ್ಕಿರುವ ಮುಖ್ಯ ಲಕ್ಷಣಗಳೆಂದರೆ ಧರ್ಮ ಸ್ಥಾಪಿಸಿದ ಒಬ್ಬ ಧರ್ಮಗುರು, ಎಲ್ಲರೂ ಒಪ್ಪಿಕೊಂಡು ಗೌರವಿಸುವ ಒಂದು ಧರ್ಮಗ್ರಂಥ ಮತ್ತು ಎಲ್ಲರೂ ಅನುಸರಿಸುವ ಧರ್ಮದ ರೀತಿ-ರಿವಾಜುಗಳು. ಆದರೆ ಈಗ ಭಾರತದಲ್ಲಿ ಹಿಂದೂ ಎಂದು ಗುರುತಿಸಿರುವ ಧರ್ಮಕ್ಕೆ ಇವಾವವೂ ಇಲ್ಲ. ಬೆರಳೆಣಿಕೆಯಷ್ಟು ಗುಂಪಿನವರು ಅನುಸರಿಸುವ ಕಟ್ಟಳೆಗಳು ಇಡೀ ಹಿಂದೂಗಳೆಂದು ಗುರುತಿಸಿರುವ ಬೃಹತ್ ಜನ ಸಮುದಾಯ ಅನುಸರಿಸುವುದಿಲ್ಲ. ಅಂದರೆ ಅವು ಭಾರತೀಯರ ರೀತಿ-ರಿವಾಜುಗಳಾಗಿರದೆ, ಒತ್ತಾಯಪೂರ್ವಕವಾಗಿ ಉಳಿದವರ ಮೇಲೆ ಹೇರಿರುವ ಬ್ರಾಹ್ಮಣ ಮತದ ಆಚರಣೆಗಳಾಗಿದ್ದು ˌ ಅಲ್ಲಿ ತಮ್ಮ ಹಿತಾಸಕ್ತಿಗಾಗಿ ಭಾರತೀಯರೆಲ್ಲರನ್ನು ಹಿಂದೂಗಳೆಂದು ತಪ್ಪಾಗಿ ಗುರುತಿಸಲಾಗುತ್ತಿದೆ.
‘ಹಿಂದೂ’ ಎನ್ನುವುದು ಅಸಲಿಗೆ ಒಂದು ಪ್ರದೇಶದ ಪ್ರಾದೇಶಿಕ ಗುರುತಿಸುವಿಕೆ ಮತ್ತು ಆ ಪ್ರದೇಶದಲ್ಲಿ ವಾಸಿಸುವ ಜನರ ಜೀವನ ಮಾರ್ಗವೇ ಹೊರತು ಅದೊಂದು ಧರ್ಮವಲ್ಲ. ರಾಜಕೀಯ ಅಧಿಕಾರ ಪಡೆಯಲು ಮತ್ತು ತಮ್ಮ ಜೀವನೋಪಾಯದ ಸ್ವಾರ್ಥಕ್ಕಾಗಿ ಹಿಂದೂ ಒಂದು ಧರ್ಮವೆಂದು ಉಳಿದ ಭಾರತೀಯರ ತಲೆಯ ಮೇಲೆ ಹೇರಿದ ಭಾರವು ಇಂದು ಎಲ್ಲಾ ಗೊಂದಲಗಳಿಗೆ ಮೂಲವಾಗಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ದಮನಿತ ಜನಾಂಗವು, ಬಾಬಾಸಾಹೇಬರ ತತ್ವಗಳಿಂದ ಪ್ರಭಾವಿತಗೊಂಡು ಹಿಂದೂ ಎನ್ನುವ ಶಾಪಗ್ರಸ್ತ ಹಣೆಪಟ್ಟಿಯನ್ನು ಕಿತ್ತೆಸೆದು ಬೌದ್ಧ ಧರ್ಮದೊಂದಿಗೆ ಗುರುತಿಸಿಕೊಳ್ಳುವಷ್ಟು ಪ್ರಭುದ್ಧತೆಯನ್ನು ಪಡೆದುಕೊಂಡಿತು. ಬಹುಶಃ ಬಸವಣ್ಣನವರ ಹೆಸರನ್ನು ಬಾಯಿಯಲ್ಲಿ ಹೇಳುತ್ತಲೇ ದೊಡ್ಡಮಟ್ಟದಲ್ಲಿ ಬೆಳೆದುನಿಂತ ಮಠಾಧೀಶರುಗಳು ಉದಾತ್ತ ಬಸವ ತತ್ವವನ್ನು ಬೆಳೆಸಿದ್ದೇ ಆದಲ್ಲಿ ಬಾಬಾಸಾಹೇಬರು ಬೌದ್ಧ ಧರ್ಮದ ಬದಲಿಗೆ ಲಿಂಗಾಯತ ಧರ್ಮವನ್ನು ಪುರಸ್ಕರಿಸುತ್ತಿದ್ದರೇನೊ?
ಆದರೆ ಲಿಂಗಾಯತ ಧರ್ಮದ ಹಲವಾರು ಮಠದಯ್ಯಗಳು ಒಳಗೊಳಗೆ ಪುರೋಹಿತಶಾಹಿ ಮನಸ್ಥಿತಿಯನ್ನಿಟ್ಟುಕೊಂಡು ಕರ್ಮಟರ ಚಟುವಟಿಕೆಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಗಾವಲಾಗಿ ನಿಂತಿರುವುದು ಶರಣ ಚಳುವಳಿಯ ಇಂದಿನ ಹಿನ್ನಡೆಗೆ ಮೂಲ ಕಾರಣ. ಏಕೆಂದರೆ ಇಂತವರೇ ಎಲ್ಲಾ ಸಮುದಾಯದ ಮುಗ್ಧ ಯುವಜನತೆಯನ್ನು ಫ್ಯಾಸಿಸ್ಟ್ ಶಕ್ತಿಗಳ ಕರಾಳ ಬಿಗಿಹಿಡಿತಕ್ಕೆ ದೂಡುತ್ತಿರುವುದು. ಭಾರತದಾದ್ಯಂತ ಕೋಮು ವಿಷಯಗಳ ಅನುಷ್ಠಾನ ಸದ್ದಿಲ್ಲದೆ ಸಾಗುತ್ತಿದ್ದು, ಎಲ್ಲ ಆಯಕಟ್ಟಿನ ಸ್ಥಾನಗಳನ್ನು ಕರ್ಮಟ ಮನಸ್ಸುಗಳು ಆಕ್ರಮಿಸುತ್ತಾ ದಮನಿತ ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯದ ಪ್ರಹಾರ ಮುಂದುವರೆದಿವೆ. ಪ್ರತಿಷ್ಠಿತ ಪ್ರಶಸ್ತಿಗಳು, ಸ್ಥಾನಮಾನಗಳು ಈ ಕರಾಳ ದೈತ್ಯ ಶಕ್ತಿಗಳ ಪಾಲಾಗುತ್ತಿವೆ. ರಾಜಭವನಗಳು, ಅಧಿಕಾರದ ಆಯಕಟ್ಟಿನ ಸ್ಥಾನಮಾನಗಳು ಇಂತವರ ಕೈಸೇರಿವೆ. ಇಂತಹ ಸಂದಿಗ್ಧ ಮತ್ತು ಸಂಕೀರ್ಣ ಪರಿಸ್ಥಿತಿಯಲ್ಲಿ ಭಾರತದಲ್ಲಿ ಶರಣರ ವೈಚಾರಿಕ ಚಿಂತನೆಯ ಚಳುವಳಿಯಂತಹ ಒಂದು ಸಮಗ್ರ ಆಂದೋಲನದ ತುರ್ತು ಅಗತ್ಯ ಮತ್ತು ಅನಿವಾರ್ಯತೆ ಇದೆ.
ಶತಮಾನಗಳ ಇತಿಹಾಸವುಳ್ಳ ಶರಣ ಚಳುವಳಿಯು ಇಂದು ತನ್ನದೇ ಆದ ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡಿದೆ. ಇವತ್ತು ಲಿಂಗಾಯತ ಧರ್ಮವು ತನ್ನ ಮೂಲಭೂತ ವೈಚಾರಿಕ ಮನಸ್ಸನ್ನು ಉಳಿಸಿಕೊಂಡಿಲ್ಲ. ಅದೀಗ ಮೊದಲು ತಾನು ಸ್ವತಂತ್ರ, ಪ್ರಗತಿಪರ, ಜ್ಯಾತ್ಯಾತೀತ ವಿಶ್ವಮಾನವ ಪ್ರಜ್ಞೆಯ ಧರ್ಮವೆಂದು ಸಾಬೀತು ಪಡಿಸಿಕೊಳ್ಳಬೇಕಿದೆ. ಶಾಸನಾತ್ಮಕ ಸ್ಥಾನ ಪಡೆಯುವುದರೊಂದಿಗೆ ಅದರ ಎಲ್ಲ ಪ್ರಗತಿಪರ ಆಚರಣೆಗಳು ಜಾರಿಗೆ ಬರಬೇಕಿವೆ. ಆದರೆ ಅದಕ್ಕೆ ಎರಡು ದೊಡ್ಡ ತೊಡಕುಗಳಿವೆ. ಒಂದು, ಮಠದಯ್ಯರುಗಳ ಆಂತರಿಕ ಸವಾಲುˌ ಎರಡನೆಯದು ಬಾಹ್ಯ ಕರ್ಮಟರ ವಿರೋಧ. ನಮ್ಮ ಹಿರಿಯರು ಹೇಳಿದಂತೆ, “ಪಂಚಾಚಾರ್ಯರು ಬಸವತತ್ವದ ಬಹಿರಂಗ ವಿರೋಧಿಗಳಾದರೆ ವಿರಕ್ತರು ಅಂತರಂಗದ ವಿರೋಧಿಗಳು.” ಬಸವಣ್ಣನವರ ವಿಶ್ವಮಾನವ ಪ್ರಜ್ಞೆಯ ಸ್ವತಂತ್ರ ಧರ್ಮದಲ್ಲಿ ಜಾತಿ ಜಂಗಮ ಮಠಾಧೀಶರಿಗೆ ಯಾವುದೇ ವಿಶೇಷ ಪ್ರಾಶಸ್ಥ್ಯವಾಗಲಿ, ಸ್ಥಾನಮಾನಗಳಾಗಲಿ ಇಲ್ಲದಿರುವುದು ಕರ್ಮಟ ಮನಸ್ಸುಗಳ ನಿದ್ದೆಗೆಡಿಸಿದೆ.
ಶರಣ ಧರ್ಮದ ಮುಖ್ಯ ಲಕ್ಷಣವೇ ವೈಚಾರಿಕತೆ, ಜಾತ್ಯಾತೀತತೆ, ಸಹಬಾಳ್ವೆ, ಏಕದೇವೋಪಾಸನೆ, ಮೌಢ್ಯಗಳ ನಿರಾಕರಣೆ, ಪುರೋಹಿತಶಾಹಿ ವ್ಯವಸ್ಥೆಯ ಖಂಡನೆ ಮತ್ತು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಸಮಾನತೆಯ ಪ್ರತಿಪಾದನೆ. ಇಂಥ ಉದಾತ್ತ ತತ್ವಗಳನ್ನು ಮೈಗೂಡಿಸಿಕೊಳ್ಳದ ಯಾವೊಬ್ಬ ವ್ಯಕ್ತಿಯೂ ಕೇವಲ ಹುಟ್ಟಿನಿಂದ ಲಿಂಗಾಯತನಾಗಲಾರ, ಶರಣನೆಂದು ಕರೆಯಿಸಿಕೊಳ್ಳಲಾರ. ದೇಶದಲ್ಲಿ ಜಾತ್ಯಾತೀತತೆ, ಸಹಿಷ್ಣತೆ, ಸಹೋದರತೆ ಮತ್ತು ಶಾಂತಿಯುತ ವಾತಾವರಣ ಗಟ್ಟಿಗೊಳಿಸಲು ವೈಚಾರಿಕ ಚಿಂತನೆಗಳ ಮರುಸ್ಥಾಪನೆಯ ಅಗತ್ಯ ಹೆಚ್ಚಿದೆ. ಭಾರತವನ್ನು ಬಲಪಂಥೀಯ ಅಡ್ಡಪರಿಣಾಮಗಳಿಂದ ಮತ್ತು ಎಡಪಂಥೀಯ ಶುಷ್ಕತೆಯಿಂದ ಬಿಡುಗಡೆಗೊಳಿಸಬೇಕು. ಧರ್ಮ ಎನ್ನುವುದು ಕಗ್ಗಂಟಾಗದೆ ಸಹಜ ಬದುಕಿನ ಮಾರ್ಗವಾಗಲು ಇಂದು ನಮ್ಮ ನಾಡಿಗೆ ಶರಣರ ಚಳುವಳಿಯ ಮರುಸ್ಥಾಪನೆಯ ಅಗತ್ಯವಿದೆ.
ಕಾಯಕ ಜೀವಿಗಳಾದ ಶರಣರ ಚಿಂತನೆಗಳು ವೈಚಾರಿಕ ಚಳುವಳಿಯ ಪರ್ಯಾಯ ಮಾರ್ಗವಾಗಿ ಕಾರ್ಯರೂಪಕ್ಕೆ ಬರುವುದಾದರೆ ನಿಜಕ್ಕೂ ಅನೇಕ ಬದಲಾವಣೆಗಳನ್ನು ದೇಶದಲ್ಲಿ ನಿರೀಕ್ಷಿಸಬಹುದು. ಶ್ರಮಸಂಸ್ಕೃತಿಯಲ್ಲಿ ಹೊಸ ಆಲೋಚನೆಗಳು ಇಂದಿನ ಕಾಲಕ್ಕೆ ತಕ್ಕಂತೆ ರೂಪುಗೊಂಡರೆ ಮತ್ತೊಮ್ಮೆ ಕಲ್ಯಾಣ ರಾಜ್ಯದ ಕನಸು ನನಸಾಗಿಸಬಹುದು. ಹಾಗಾಗಿˌ ಇಂದು ಬಹುಜನರೆಲ್ಲರೂ ತಮ್ಮ ನದುವಿನ ಅನೇಕ ಗೊಂದಲಗಳು ಹಾಗು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮತ್ತೊಮ್ಮೆ ಶರಣ ಚಳುವಳಿಯನ್ನು ಮರುಸ್ಥಾಪಿಸುವ ಮೂಲಕ ಮನುವಾದಿಗಳಿ ಅಟ್ಟಹಾಸಕ್ಕೆ ತಡೆಯೊಡ್ದಬೇಕಿದೆ.
-ಡಾ. ಜೆ.ಎಸ್.ಪಾಟೀಲ