ಕಾಂಗ್ರೆಸ್ ವಿರುದ್ಧ ಮಚ್ಚು ಮಸೆಯುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಹಾಗು ಜೆಡಿಎಸ್ ಪಕ್ಷಕ್ಕೆ ಇಂದು ಆಪರೇಷನ್ ಅಸ್ತ್ರ ಬಿಡುತ್ತಿದೆ. ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಹಾಗು ಬೆಂಗಳೂರಿನ ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಗೌರಿಶಂಕರ್ ಹಾಗು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇದು ಹಳಸಲು ವಿಚಾರ. ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪಕ್ಷಾಂತರ ಪ್ರಕ್ರಿಯೆ ಶುರುವಾಗಿತ್ತು. ಹಲವಾರು ಭಾರಿ ನಾನೇ ಅವರನ್ನು ಕರೆದು ಮಾತನಾಡಿದ್ದೇನೆ. ಈ ವಿಚಾರದಿಂದ ನನಗೇನು ಶಾಕ್ ಆಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ಗೌರಿಶಂಕರ್ ಸೇರ್ಪಡೆಗೆ ವಿರೋಧ..!?
ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಸಚಿವ ಕೆ.ಎನ್ ರಾಜಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದರೂ ಸಚಿವ ಕೆ.ಎನ್ ರಾಜಣ್ಣ ಅವರ ಮನವೊಲಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಗೌರಿಶಂಕರ್ ಬಲ ಬಂದ್ರೆ ಕಾಂಗ್ರೆಸ್‌ಗೆ ಲಾಭ ಆಗಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಅಭ್ಯರ್ಥಿ ಮಾಡಬೇಕು ಎಂದು ಕೆ.ಎನ್ ರಾಜಣ್ಣ ಕಾಂಗ್ರೆಸ್ ನಾಯಕರ ಜೊತೆಗೆ ಪ್ರಸ್ತಾಪ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಜಿ.ಟಿ ದೇವೇಗೌಡರಿಗೂ ಆಹ್ವಾನ ಕೊಟ್ಟ ಸಚಿವ ಮಧು..
ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಜಿ.ಟಿ ದೇವೆಗೌಡ ಕೂಡ ಕಾಂಗ್ರೆಸ್ ಸೇರ್ಪಡೆ ಆಗ್ತಾರಾ..? ಈ ಅನುಮಾನ ಮಾಧ್ಯಮದವರನ್ನು ಕಾಡುವುದಕ್ಕೆ ಶುರುವಾಗಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ತಾರೆ ಅನ್ನೋ ರೀತಿಯಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಜಿ.ಟಿ ದೇವೆಗೌಡರು ನಮಗೆ ಬಹಳ ಹಳಬರು. ಸ್ವಲ್ಪ ದಿನದಿಂದ ದೂರವಾಗಿದ್ದರು. ಈಗ ಮತ್ತೆ ಹತ್ತಿರ ಆಗಲಿದ್ದಾರೆ. ನಾವೂ ಕೂಡ ನಮ್ಮ ಹತ್ತಿರವೇ ಇರುವ ಹಾಗೆ ನೋಡಿಕೊಳ್ಳುತ್ತಿದ್ದೇವೆ. ಶಾಸಕ ಚನ್ನಬಸಪ್ಪ ಅವರು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವುದು ಬೇಡ. ಅವರು ಈಗಾಗಲೇ ನಮಗೆ ಹತ್ತಿರದಲ್ಲಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಸೋಮಣ್ಣ ಕಾಂಗ್ರೆಸ್ ಸೇರುವುದು ಪಕ್ಕಾನಾ..?
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಸಿಡಿದೆದ್ದ ವಿ.ಸೋಮಣ್ಣ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರಾ ಅನ್ನೋ ಅನುಮಾನಗಳು ಕಾಣಿಸಿಕೊಂಡಿವೆ. ಡಿಸೆಂಬರ್ 6 ರಂದು ಸಿದ್ದಗಂಗಾ ಮಠದಲ್ಲಿ ಸೋಮಣ್ಣ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎನ್ನಲಾಗ್ತಿದ್ದು, ಮಠದಲ್ಲಿ ಕಟ್ಟಿಸಿರುವ ಯಾತ್ರಿ ನಿವಾಸ ಉದ್ಘಾಟನೆ ಹೆಸ್ರಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗ್ತಿದೆ. ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ, ಕಾಂಗ್ರೆಸ್‌ನ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಸೋಮಣ್ಣ ‘ಕೈ’ ಹಿಡಿದು ಕಾಂಗ್ರೆಸ್ ಸೇರ್ಪಡೆ ಆದರೆ ತುಮಕೂರು ಟಿಕೆಟ್ ಫಿಕ್ಸ್ ಎನ್ನಲಾಗ್ತಿದೆ. ಈಗಾಗಲೇ ಹಾಲಿ ಸಂಸದ ಜಿ.ಎಸ್ ಬಸವರಾಜು ರಾಜಕೀಯ ನಿವೃತ್ತಿ ಘೋಷಿಸಿದ್ದು, ಸೋಮಣ್ಣ ಪಕ್ಷ ಸೇರ್ಪಡೆ ಆದರೆ ಲಿಂಗಾಯತ ಮತಗಳನ್ನು ಸೆಳೆಯುವ ಜೊತೆಗೆ ಗೆಲುವು ಸಾಧಿಸಬಹುದು ಅನ್ನೋದು ಸಚಿವ ಕೆ.ಎನ್.ರಾಜಣ್ಣ ಲೆಕ್ಕಾಚಾರ. ಗೌರಿಶಂಕರ್ ಕೂಡ ಕಾಂಗ್ರೆಸ್ ಸೇರ್ಪಡೆ ಆಗ್ತಿದ್ದು, ಕಾಂಗ್ರೆಸ್‌ನಲ್ಲಿ ಯಾವ ಲೆಕ್ಕಾಚಾರ ಅಂತಿಮ ಆಗಲಿದೆ ಅನ್ನೋದನ್ನು ಕಾದು ನೋಡ್ಬೇಕು.