ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಬ್ರಾಹ್ಮಣ ಸಮುದಾಯದ ಪ್ರಬಲ ನಾಯಕರಾದ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅಥವಾ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯನ್ನು ಮುಖ್ಯಮಂತ್ರಿ ಮಾಡಬಹುದು. ಆಗ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ಬಂಡಾಯ ಏಳಲಿದೆ. ಹೇಗಾದರೂ ಮಾಡಿ ಈ ಸಮುದಾಯದ ಸಂಪೂರ್ಣ ಬೆಂಬಲ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಡೆಯಬೇಕು ಎಂದು ಲೆಕ್ಕಚಾರ ಹಾಕಿದ್ದ ಕರ್ನಾಟಕ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗಿದೆ.
ಹೌದು, ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಸಿಎಂ ಪಟ್ಟ ನೀಡೋದಿಲ್ಲ. ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡೋದು ಪಕ್ಕಾ. ಬಿಜೆಪಿಯ ಈ ನಿರ್ಧಾರದಿಂದ ನಮಗೆ ಅನುಕೂಲವಾಗಲಿದೆ. ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಹೇಗೆ ಮೋಸ ಮಾಡಿದೆ ಎಂದು ರಾಜಕೀಯ ಮಾಡಬಹುದು ಎಂದು ಕಾಂಗ್ರೆಸ್ ಭಾವಿಸಿತ್ತು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿ ಗೆಲ್ಲಿಸಿ. ನಿಮ್ಮ ಸಮುದಾಯದ ಬೇಡಿಕೆ ಈಡೇರಿಸುತ್ತೇವೆ ಎಂದು ಪ್ರಮುಖ ಲಿಂಗಾಯತ ಮಠಾಧೀಶರಿಗೆ, ನಾಯಕರಿಗೆ, ಉದ್ಯಮಿಗಳ ಬಳಿ ಹೋಗಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೀಗ, ಬಿಜೆಪಿ ಹೈಕಮಾಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಲೆಕ್ಕಚಾರವನ್ನು ಉಲ್ಟಾ ಮಾಡಿದೆ.
ಪ್ರಮುಖವಾಗಿ ಯಾವುದೇ ಹಗರಣದಲ್ಲೂ ಸಿಲುಕದ ಮತ್ತು ತನ್ನ ಹೆಸರನ್ನು ಎಂದೂ ಕೆಡಿಸಿಕೊಳ್ಳದ ಬಸವರಾಜ್ ಬೊಮ್ಮಾಯಿಗೆ ಸಿಎಂ ಸ್ಥಾನ ಸಿಕ್ಕಿರುವುದು ಕಾಂಗ್ರೆಸ್ಗೆ ಅರಗಿಸಿಕೊಳ್ಳಲಾಗದ ಸತ್ಯ.
ಇನ್ನು, ಲಿಂಗಾಯತ ಸಮುದಾಯಗಳನ್ನು ಕಾಂಗ್ರೆಸ್ನತ್ತ ಸೆಳೆಯಲು ವೀರಶೈವ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರಿಂದ ಬಿ.ಎಸ್ ಯಡಿಯೂರಪ್ಪಗೆ ಪಕ್ಷಾತೀತವಾಗಿ ಬೆಂಬಲ ಕೊಡಿಸಿದ್ದರು. ಕಾಂಗ್ರೆಸ್ನ ಮತ್ತೊಬ್ಬ ಹಿರಿಯ ನಾಯಕ ಲಿಂಗಾಯತ ಸಮುದಾಯದ ಎಂ. ಬಿ. ಪಾಟೀಲ್ ಕೂಡ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದರು. ಹೀಗೆ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದು ಪ್ರೀತಿಯಿಂದೇನೂ ಅಲ್ಲ, ಬದಲಿಗೆ ರಾಜಕೀಯ ಲೆಕ್ಕಚಾರದಿಂದ ಎಂಬುದು ವಾಸ್ತವ.
ಒಂದು ವೇಳೆ ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯದ ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ ಬೇರೆ ಯಾವುದೇ ಸಮುದಾಯದ ನಾಯಕರಿಗೂ ಮುಖ್ಯಮಂತ್ರಿ ಪೋಸ್ಟ್ ನೀಡಿದ್ದರು ಇದು ಕಾಂಗ್ರೆಸ್ಗೆ ಲಾಭವಾಗುತ್ತಿತ್ತು. ಆಗ ಅದು ಕೇವಲ ಯಡಿಯೂರಪ್ಪಗೆ ಮಾಡುವ ದ್ರೋಹವಲ್ಲ, ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ ಆಗುವ ಅನ್ಯಾಯ ಎಂದು ಬಿಂಬಿಸಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು. ವೀರಶೈವ ಲಿಂಗಾಯತರಿಗೆ ಮಾಡಿದ ಅನ್ಯಾಯದ ವಿರುದ್ಧ ಸಿಡಿದೇಳುವ ಮೂಲಕ ಸಮುದಾಯದ ಮತದಾರರು ಕಾಂಗ್ರೆಸ್ನತ್ತ ವಾಲಿಸಿಕೊಳ್ಳಬಹುದು ಎಂಬುದು ಕೈ ನಾಯಕರ ಲೆಕ್ಕಾಚಾರವಾಗಿತ್ತು.
ತಮ್ಮ ಲೆಕ್ಕಚಾರ ಉಲ್ಟಾ ಹೊಡೆದರೂ ಕಾಂಗ್ರೆಸ್ ಮತ್ತೊಂದು ಪ್ಲಾನ್ ಮಾಡಿದೆಯಂತೆ. ಇದಕ್ಕಾಗಿ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪ ಆಪ್ತ, ಇವರ ಹಸ್ತಕ್ಷೇಪ ಇಲ್ಲದೇ ಯಾವುದೇ ಕಾರಣಕ್ಕೂ ಆಡಳಿತ ನಡೆಯೋದಿಲ್ಲ ಎಂದು ಜನರ ಮುಂದೆ ಸಾರಲು ಹೊರಟಿದ್ದಾರಂತೆ. ಇದರಿಂದ ಆಗುವ ಪ್ರಯೋಜನ ಪಡೆಯಬೇಕು ಎಂದು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರಂತೆ. ಅದಕ್ಕಾಗಿ ಬಿಜೆಪಿಯ ಹಳೆ ಇತಿಹಾಸವನ್ನು ಜನರ ಮುಂದಿಡಲು ಕಾಂಗ್ರೆಸ್ ನಾಯಕರು ಸ್ಟ್ರಾಟಜಿ ಮಾಡಿದ್ದಾರೆ.
2011ರಲ್ಲೂ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾದಗಲೂ ಯಡಿಯೂರಪ್ಪ ಸುಮ್ಮನೇ ಕೂರಲಿಲ್ಲ. ಎಲ್ಲಾ ಇಲಾಖೆಗಳನ್ನು ಹಸ್ತಕ್ಷೇಪ ಮಾಡಿದ್ದಲ್ಲದೇ ನೌಕರರ ವರ್ಗಾವಣೆ ಮಾಡಿಸಿ ಸಿಕ್ಕಿಬಿದ್ದರು. ಆಗ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರ ಒಂದು ಬಣ ಬಿಎಸ್ವೈ ವಿರುದ್ಧ ಕೆಂಡಕಾರಿತ್ತು. ಅದು ಮತ್ತೆ ಪುನರಾವೃತ್ತಿಯಾಗಬಹುದು ಎಂದು ಕಾಂಗ್ರೆಸ್ ನಾಯಕರು ಪ್ರಚಾರ ಮಾಡಲು ಹೊರಟಿದ್ದಾರಂತೆ.
ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಬಿಎಸ್ವೈ ಪುತ್ರ ಬಿ.ವೈ ವಿಜಯೇಂದ್ರ ಭ್ರಷ್ಟಚಾರ, ಕೇಂದ್ರದ ನಿರ್ಲಕ್ಷ್ಯ, ಪ್ರವಾಹ ಸಂತ್ರಸ್ತರ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಜೊತೆಗೆ ಈ ವಿಚಾರಗಳನ್ನು ಮುಂದಿಟ್ಟು ರಾಜಕೀಯ ಮಾಡೋ ಪ್ಲಾನ್ ಕಾಂಗ್ರೆಸ್ಸಿನದ್ದು. ಜನಸಾಮಾನ್ಯರ ಜತೆಗೆ ಲಿಂಗಾಯತರ ಮತಗಳನ್ನು ಸೆಳೆಯಲು ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ 2 ಎ ಸೇರ್ಪಡೆಗೆ ಮಾಡಿ ಎಂಬ ಮೀಸಲಾತಿ ಹೋರಾಟ ಶುರು ಮಾಡಲು ಕುಮ್ಮಕ್ಕು ನೀಡುವುದು ಸದ್ಯದ ಪ್ಲಾನ್.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಹೆಸರಿಗೆ ಕಳಂಕ ತರುವುದು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು. ಹೇಗಾದರೂ ಈ ಸಮುದಾಯದ ಬೆಂಬಲ ಮುಂದಿನ ಚುನಾವಣೆಗೆ ಪಡೆಯುವುದು ಕಾಂಗ್ರೆಸ್ ಲೆಕ್ಕಚಾರ. ಒಂದು ಪ್ಲಾನ್ ಪ್ಲಾಪ್ ಆದ ಕಾಂಗ್ರೆಸ್ ಮುಂದಿನ ಯೋಜನೆಗಳು ಸಕ್ಸಸ್ ಆಗಲಿವೆಯಾ? ಕಾದು ನೋಡಬೇಕು. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಏನೇ ಪ್ಲಾನ್ ಮಾಡಿದರೂ ಸೀರಿಯಸ್ಸಾಗಿ ಚುನಾವಣೆ ಗೆಲ್ಲುವುದರ ಮೇಲೆ ಫೋಕಸ್ ಮಾಡದೆ ಹೋದರೆ ಗೆಲುವು ಕಷ್ಟಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.