ಬೆಂಗಳೂರು: 12ನೇ ಶತಮಾನದಲ್ಲಿ ಆಡುನುಡಿಯಲ್ಲಿ ಸೃಷ್ಟಿಯಾದ ವಚನ ಸಾಹಿತ್ಯದಲ್ಲಿ ಖೊಟ್ಟಿ (ನಕಲಿ) ವಚನಗಳೂ ಸೇರಿಕೊಂಡಿವೆ. ಇವುಗಳನ್ನು ಇಟ್ಟುಕೊಂಡು ಕೆಲವರು ವೀರಶೈವ ಲಿಂಗಾಯತ ಸಮುದಾಯದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ನೈಜ ವಚನಗಳ ಶೋಧ ಮತ್ತು ವರ್ಗೀಕರಣ ನಡೆಯುತ್ತಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಭಾನುವಾರ ಇಲ್ಲಿ ನಡೆದ ಶ್ರೀ ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಮತ್ತು ತೋಂಟದ ಸಿದ್ಧಲಿಂಗೇಶ್ವರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕನಕಪುರದ ದೇಗುಲಮಠದ ಮುಖ್ಯಸ್ಥರಾದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಚನಗಳ ಅಧ್ಯಯನಕ್ಕೆ ಸುತ್ತೂರು ಶ್ರೀಗಳ ಪ್ರೇರಣೆಯೇ ಕಾರಣವಾಗಿದೆ. ಜೊತೆಗೆ ವಿದ್ವಾಂಸರಾದ ವೀರಣ್ಣ ರಾಜೂರ, ಅಶೋಕ ದೊಮ್ಮಲೂರು ಇದರ ಭಾಗವಾಗಿದ್ದಾರೆ. ಇದಕ್ಕೆಂದೇ ಬೆಂಗಳೂರಿನಲ್ಲಿ ಕೂಡ ಫ ಗು ಹಳಕಟ್ಟಿ ವಚನ ಸಂಶೋಧನಾ ಕೇಂದ್ರದ ಕಚೇರಿಯನ್ನು ತೆರೆಯಲಾಗಿದೆ. ಹಿಂದೆ ಎಂ ಎಂ ಕಲಬುರ್ಗಿ ಕೂಡ ವಚನಗಳ ಅಧ್ಯಯನಕ್ಕೆ ಶ್ರಮಿಸಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಶರಣ ಚಳವಳಿ ನಡೆದು ಸಮಾಜದಲ್ಲಿ ಸಮಾನತೆ ನೆಲೆಸಿತು. ಆದರೆ ಅದಾದ ಬಳಿಕ 400 ವರ್ಷಗಳ ಕಾಲ ನಮಗೆ ಹಿನ್ನಡೆ ಆಯಿತು. 16ನೇ ಶತಮಾನದಲ್ಲಿಶರಣ ಚಳವಳಿಗೆ ಮರುಹುಟ್ಟು ನೀಡಿದ ಕೀರ್ತಿ ಶ್ರೀ ಸಿದ್ಧಲಿಂಗೇಶ್ವರರಿಗೆ ಸಲ್ಲುತ್ತದೆ. ಹೀಗಾಗಿ ಅವರನ್ನು ಅಭಿನವ ಬಸವಣ್ಣ ಎಂದು ಕರೆಯಬಹುದು ಎಂದು ಅವರು ನುಡಿದರು.
ವಿರಕ್ತ ಮಠಗಳ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಕೂಡ ಸಿದ್ಧಲಿಂಗೇಶ್ವರ ಸ್ವಾಮಿಗಳಿಗೇ ಸಲ್ಲುತ್ತದೆ. ಈ ಮಠಗಳಿಂದಾಗಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರವರ ಹಕ್ಕುಗಳ ಅರಿವು ಮೂಡಿತು. ಈಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸೂಕ್ತ ಮೀಸಲಾತಿ ಸಿಗಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬೇಲಿಮಠದ ಶ್ರೀ ಶಿವಮೂರ್ತಿ ಶಿವರುದ್ರ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತಿನ ಸಿ ಸೋಮಶೇಖರ್, ಗಂಗಾಂಬಿಕೆ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.