ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ) ವಿರುದ್ಧ ಇದೀಗ ಅಸಮಾಧಾನ ಭುಗಿಲೆದ್ದಿದ್ದು, ರೇರಾ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿ ಕರ್ನಾಟಕ ಮನೆ ಗ್ರಾಹಕರ ವೇದಿಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಿದೆ.
ಈ ಮನವಿ ಪತ್ರದಲ್ಲಿ ರೇರಾ ಕುರಿತಾದ ಹಲವು ಆರೋಪಗಳನ್ನು ಪ್ರಸ್ತಾಪಿಸಲಾಗಿದ್ದು, ಮುಖ್ಯವಾಗಿ ದೂರು ವಿಲೇವಾರಿ ಮಾಡದೆ ದೊಡ್ಡ ದೊಡ್ಡ ಬಿಲ್ಡರ್‌ಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ.
2016ರಿಂದ ಜನ ಸಾಮಾನ್ಯರ ಜಮೀನು, ಮನೆಗೆ ಸಂಬಂಧಪಟ್ಟಂತೆ ದೊಡ್ಡ ದೊಡ್ಡ ಬಿಲ್ಡರ್ ಗಳ ಮಾಫಿಯಾದ ಹೊಡೆತದಿಂದ ತಪ್ಪಿಸಿಕೊಳ್ಳುವಂತೆ ಮಾಡುವುದೇ ಇದರ ಉದ್ದೇಶ. ಈಗಾಗಲೇ ರಾಜ್ಯ ಸೇರಿದಂತೆ ದೇಶದಲ್ಲಿ ರಿಯಲ್ ಎಸ್ಟೇಟ್ ಎಂಬುವುದು ಒಂದು ಮಾಫಿಯಾವಾಗಿ ಮಾರ್ಪಾಡು ಹೊಂದಿದೆ. ಇದನ್ನು ನಿಯಂತ್ರಿಸುವಲ್ಲಿ ರೇರಾ ಪಾತ್ರ ದೊಡ್ಡದಿದೆ. ಇಂಥ ರೇರಾ ಮೇಲೆಯೇ ಈಗ ಜನ ಸಾಮಾನ್ಯರ ಆಕ್ರೋಶ ಭುಗಿಲೆದ್ದಿದೆ.
ಎಷ್ಟೇ ದೂರುಗಳ ಬಂದರೂ ರೇರಾ ಪಾರ್ದರ್ಶಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಕರ್ನಾಟಕ ಮನೆ ಗ್ರಾಹಕರ ವೇದಿಕೆ ಎಂಬ ಸಂಘಟನೆಯಿಂದ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ದೂರು ಕೊಡಲಾಗಿದೆ. ದೂರಿನಲ್ಲಿ ಹಲವು ಅಂಶಗಳನ್ನು ಎತ್ತಿ ಹಿಡಿಯಲಾಗಿದೆ.

ಈ ಬಗ್ಗೆ ಅಧಿಕೃತ ಮಾಹಿತಿ ಕೇಳಿದರೆ ಸರ್ಕಾರದ ಸುತ್ತೋಲೆ ತೋರಿಸಿ ಯಾವ ಮಾಹಿತಿಯನ್ನೂ ಕೊಡಲು ಸಾಧ್ಯವಿಲ್ಲ ಎಂದು ರೇರಾ ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ಕರ್ನಾಟಕ ಮನೆ ಗ್ರಾಹಕರ ವೇದಿಕೆ ಸಂಚಾಲಕ ಧನಂಜಯ ಪ್ರತಿಕ್ರಿಯಿಸಿದ್ದು, ವರ್ಷಗಳಿಂದ ಸಾವಿರಾರು ದೂರುಗಳು ವಿಲೇವಾರಿ ಆಗದೆ ಹಾಗೇ ಉಳಿದಿದೆ. ಡಿಸೆಂಬರ್ 6,111 ದೂರುಗಳು ಇನ್ನೂ ಹಾಗೆಯೇ ಇದೆ. ಇದುವರೆಗೂ ವಿಚಾರಣೆ ನಡೆಸಿದ ದೂರುಗಳ ಪೈಕಿ ಕೇವಲ 312 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಇತ್ಯರ್ಥ ಮಾಡಲಾಗಿದೆ. ಇದರ ಜೊತೆಗೆ ತಪ್ಪಿಸ್ಥ ಬಿಲ್ಡರ್‌ಗಳನ್ನು ಶಿಕ್ಷೆಗೆ ಒಳಪಡಿಸಲು ಬೇಕಾದ ರೀತಿಯ ಸೂಕ್ತ ನಿಯಮಗಳೂ ರೇರಾದಲ್ಲಿಲ್ಲ. ಮುಖ್ಯವಾಗಿ ರೇರಾದಲ್ಲಿ ನೂರಕ್ಕೆ ನೂರರಷ್ಟು ಪಾರದರ್ಶಕತೆ ಇಲ್ಲ ಎಂದು ಕರ್ನಾಟಕ ಮನೆ ಗ್ರಾಹಕರ ವೇದಿಕೆ ನೇರಾನೇರಾ ಆರೋಪಿಸಿದೆ.
ಒಟ್ಟಾರೆ ಜನ ಸಾಮಾನ್ಯರ ಪರವಾಗಿ ಇರಬೇಕು ಎಂಬ ಉದ್ದೇಶದಿಂದ ಅಸ್ತಿತ್ವಕ್ಕೆ ತರಲಾದ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಆಥಾರಿಟಿಯ ವಿರುದ್ಧವೇ ಈಗ ಜನ ಸಮಾನ್ಯರು ಹರಿಹಾಯಲು ಶುರುವಿಟ್ಟುಕೊಂಡಿದ್ದಾರೆ. ವರ್ಷಗಳ ಶ್ರಮದಿಂದ ಕನಸಿನ ಮನೆ ಕಟ್ಟಲು ಹೊರಟಿರುವ ಶ್ರೀ ಸಾಮಾನ್ಯನ ಕನಸಿಗೆ ಕಂಟಕವಾಲಾರಂಭಿಸಿರುವ ಈ ಸಮಸ್ಯೆಯನ್ನು ಬೇಗ ಬಗೆಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.













