ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮಾಡಿದ ಪೊಲೀಸ್ರು, ಸಾಕಷ್ಟು ಲೋಪ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸಿಎಂ ಸಿದ್ದರಾಮುಯ್ಯ ವಿರುದ್ಧ ಮುಡಾ ಹಗರಣದ ದೂರುದಾರ ಸ್ನೇಹಮಹಿ ಕೃಷ್ಣ ತನಿಖಾಧಿಕಾರಿ ಆಗಿದ್ದ ACP ಚಂದನ್ ಕುಮಾರ್ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಸ್ನೇಹಮಯಿ ಕೃಷ್ಣ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ದರ್ಶನ್ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಸಲ್ಲಿಸಿರುವ ಸಂಪೂರ್ಣ ಚಾರ್ಜ್ಶೀಟ್ ಓದಿದ್ದೇನೆ. ಆದರೆ ಚಾರ್ಜ್ಶೀಟ್ನಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಾನು 3,991 ಪುಟಗಳ ಚಾರ್ಜ್ಶೀಟ್ ಓದಿದ್ದೇನೆ. ಐಪಿಸಿ 102ರ ಪ್ರಕಾರ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ 104 A ಪ್ರಕಾರ ದರ್ಶನ್ ಸೇರಿ ಎಲ್ಲರೂ ತಪ್ಪು ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ನಂತರ ಶವ ಸಾಗಿಸೋಕೆ, ಯಾವ ಜಾಗದಲ್ಲಿ ಶವ ಹಾಕ್ಬೇಕು..? ಏನೇನು ಮಾಡ್ಬೇಕು..? ಅಂತ ಹೇಳಿ ಕೊಡೋದು ಕಾಮಾಕ್ಷಿಪಾಳ್ಯದ ಉಪ ನಿರೀಕ್ಷಕ ವಿನಯ್. ವಿನಯ್ಗೆ ಪೊಲೀಸ್ ನಿರೀಕ್ಷಕ ಗಿರೀಶ್ ನಾಯ್ಕ್ ಸಾಥ್ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.
ಕೊಲೆ ಆರೋಪಿಗಳಿಗೆ ಸಹಕಾರ ನೀಡಿದ್ದ ಈ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಆರೋಪಿ ಪಟ್ಟಿಯಲ್ಲಿ ಸೇರಿಸಿಲ್ಲ. ಅವರನ್ನು ಬೇಕು ಅಂತಲೇ ಕೈ ಬಿಡಲಾಗಿದೆ. ಅಲ್ಲದೆ ಎಸಿಪಿ ಚಂದನ್ ಸೇರಿ ಈ ಮೂವರಿಗೆ ಶಿಕ್ಷೆ ಆಗೇ ಆಗುತ್ತದೆ. ಈಗಾಗಲೇ ನಾನು ಈ ಮೂವರು ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಕೊಟ್ಟಿದ್ದೇನೆ. ಆದ್ರೆ ಇಲ್ಲಿವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದಿದ್ದಾರೆ.
ದರ್ಶನ್ ಅಂಡ್ ಗ್ಯಾಂಗ್ ಮಾಡಿರೋದು ತಪ್ಪು. ಆದ್ರೆ ಅವರು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲ. ಕೊಲೆ ಮಾಡುವ ಉದ್ದೇಶ ಇದ್ದಿದ್ರೆ ಚಿತ್ರದುರ್ಗದಲ್ಲೇ ಮಾಡ್ತಿದ್ರು. ಬೆಂಗಳೂರಿಗೆ ಕರೆತಂದು ಮಾಡುವ ಅವಶ್ಯಕತೆ ಇರಲಿಲ್ಲ. ಆದರೂ ತಪ್ಪು ತಪ್ಪೇ ಆದ್ರೆ ಇಲ್ಲಿ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲ. ರೇಣುಕಾಸ್ವಾಮಿಗೆ ಥಳಿಸಿದ ಬಳಿಕ ಊಟ ಕೊಟ್ಟು, ಚಿಕಿತ್ಸೆ ನೀಡಿ ಕಳುಹಿಸಿ ಎಂದು ಹೇಳುತ್ತಿರಲಿಲ್ಲ. ದುಡುಕಿನಿಂದ ಕೊಲೆ ಆಗಿದೆ ಎಂದಿದ್ದಾರೆ.
ಈ ಕೇಸ್ನಲ್ಲಿ ಕೆಲವು ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿದ್ದಾರೆ. ಬೇಕು ಅಂತಲೇ 302 ಸೆಕ್ಷನ್ ಹಾಕಿದ್ದಾರೆ. ಪೊಲೀಸ್ ಅಧಿಕಾರಿಗಳಾದ ವಿನಯ್ ಮತ್ತು ಗಿರೀಶ್ ನಾಯ್ಕ್ ಅವರನ್ನು ಬಚಾವ್ ಮಾಡಲು ಕೆಲವು ಸಾಕ್ಷಿಗಳನ್ನು ಮುಚ್ಚಿ ಹಾಕಿದ್ದಾರೆ. ನಾನು ಕೋರ್ಟ್ ಮೂಲಕ ಈ ವಿಚಾರವಾಗಿ ಹೋರಾಟ ಮಾಡ್ತೀನಿ ಅಂತಾನು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.